ವಾರಕ್ಕೆ 2 ದಿನ ನೀರು ಬಿಟ್ಟರೆ ಹೇಗೆ?: ಜನರು

KannadaprabhaNewsNetwork | Updated : Feb 18 2024, 03:11 PM IST

ಸಾರಾಂಶ

ಯಶವಂತಪುರ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ, ಶಾಸಕ ಎಸ್‌.ಟಿ.ಸೋಮಶೇಖರ್‌ ಸಮ್ಮುಖದಲ್ಲಿ ಜನರು ನೀರಿನ ಬವಣೆ ಬಗ್ಗೆ ಅವಲತ್ತುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೆಂಗೇರಿ

ವಾರಕ್ಕೆ ಎರಡು ದಿನ ಮಾತ್ರ ನೀರು ಬಿಡಲಾಗುತ್ತದೆ. ಅದೂ ಕೂಡಾ ಕೇವಲ 500 ಲೀಟರ್‌ ಮಾತ್ರ. ಇದರಲ್ಲಿ ಜೀವನ ನಡೆಸುವುದು ಏನು ಹೇಗೆ? ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಟಿ.ಸೋಮಶೇಖರ್‌ ಮುಂದೆ ಜನರು ಅಳಲು ತೋಡಿಕೊಂಡರು.

ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಹೇರೋಹಳ್ಳಿ ಕಚೇರಿಯಲ್ಲಿ ಶಾಸಕ ಸೋಮಶೇಖರ್‌ ಅಧ್ಯಕ್ಷತೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ಈ ವೇಳೆ ವಿವಿಧ ಬಡಾವಣೆಯ ನಾಗರಿಕರು, ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಅಪಾರ್ಟ್ ಮೆಂಟ್ ನಿವಾಸಿಗಳು ನೀರು ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಕೆಂಗೇರಿ ವಾರ್ಡ್ ವ್ಯಾಪ್ತಿಯಲ್ಲಿ 14 ಕೊಳವೆ ಬಾವಿಗಳಿವೆ. ಆದರೆ, ಕೊಳವೆ ಬಾವಿಗಳಲ್ಲಿ ನೀರಿಲ್ಲ. ಕೇವಲ ಒಂದು ಕೊಳವೆ ಬಾವಿಯಲ್ಲಿ ನೀರು ಬರುತ್ತಿದೆ. ಹೀಗಾಗಿ, ನಾಲ್ಕು ದಿನಕ್ಕೆ ಒಂದು ಬಾರಿ ನೀರು ಪೂರೈಕೆ ಮಾಡಲಾಗಿತ್ತಿದೆ. ಕೇವಲ 20 ನಿಮಿಷ ಕಾವೇರಿ ನೀರು ಬಿಡಲಾಗುತ್ತದೆ. ಒಂದು ಟ್ಯಾಂಕರ್‌ ನೀರಿಗೆ ₹1 ಸಾವಿರ ಕೊಡಬೇಕಾದ ಪರಿಸ್ಥಿತಿ ಇದೆ ಎಂದು ಸ್ಥಳೀಯ ಮುಖಂಡ ಹರೀಶ್‌ ಬೇಸರ ವ್ಯಕ್ತಪಡಿಸಿದರು.

ಹೆಮ್ಮಿಗೆಪುರದ ಅಪಾರ್ಟ್‌ಮೆಂಟ್‌ನಲ್ಲಿ 900 ಮನೆಗಳಿವೆ. ಕಾವೇರಿ ನೀರು ಪೂರೈಕೆಗೆ ₹12 ಕೋಟಿ ಜಲಮಂಡಳಿಗೆ ಪಾವತಿಸಲಾಗಿದ್ದು, ಹಾಗಿದ್ದರೂ ನೀರು ಸರಬರಾಜು ಮಾಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದರು.

ನಾಗದೇವನಹಳ್ಳಿ ನಿವಾಸಿ ಮಹದೇವಪ್ಪ ಮಾತನಾಡಿ, ಕಳೆದ 3 ದಶಕಗಳಿಂದ ನೀರಿಗೆ ಇಷ್ಟೊಂದು ಸಮಸ್ಯೆ ಆಗಿರಲಿಲ್ಲ. ಶಾಸಕರು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಉಲ್ಲಾಳು ವಾರ್ಡ್ ವ್ಯಾಪ್ತಿಯಲ್ಲಿ ಮೊದಲಿನಿಂದಲೂ ಕಾವೇರಿ ನೀರು ಹಂಚಿಕೆ ಸರಿಯಾಗಿ ಆಗುತ್ತಿಲ್ಲ. ಸ್ಥಳೀಯ ನಿವಾಸಿಗಳು ವಾರಕ್ಕೆ ₹5-6 ಸಾವಿರ ಕೊಟ್ಟು ನೀರು ಖರೀದಿ ಮಾಡುವಂತಾಗಿದೆ ಎಂದು ಮುಖಂಡ ಅನಿಲ್ ಬೇಸರ ವ್ಯಕ್ತ ಪಡಿಸಿದರು.

ಸಭೆಯಲ್ಲಿ ಬೆಂಗಳೂರು ಜಲಮಂಡಳಿಯ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ , ಆರ್ಯ ಶ್ರೀನಿವಾಸ್, ರಾಜಣ್ಣ, ಶಿವಮಾದಯ್ಯ, ಅನಿಲ್ ಕುಮಾರ್, ಮಹೇಂದ್ರ ಕುಮಾರ್, ರೇಣುಕಪ್ಪ, ಡಾ। ಅನುಪಮಾ ಪಂಚಾಕ್ಷರಿ, ಸಬೀಹಾ ಬಾನು ಇದ್ದರು.

ನೀರಿನ ಸಮಸ್ಯೆಗೆ ಮೂಲ ಕಾರಣ ಹುಡುಕಬೇಕಿದೆ. ಜಲ ಮೂಲಗಳನ್ನು ಹಾಳು ಮಾಡಿ, ನೀರಿಗಾಗಿ ಪರಿತಪಿಸಿದರೆ ಪ್ರಯೋಜನವಿಲ್ಲ. ಕೆರೆ ಕಟ್ಟೆಗಳು ಮೊದಲು ಅಭಿವೃದ್ದಿಗೊಳ್ಳಲಿ. ನೀರಿನ ಸಮಸ್ಯೆ ತಂತಾನೆ ಪರಿಹಾರವಾಗಲಿದೆ.

-ಹರೀಶ್, ಕೆಂಗೇರಿ ನಿವಾಸಿ.

Share this article