ಕನ್ನಡಪ್ರಭ ವಾರ್ತೆ ಚಾಮರಾಜನಗರ
ಷಷ್ಠಿ ಬಂದರೆ ಹಾಲು, ಬೆಣ್ಣೆ, ಪಂಚಾಮೃತವನ್ನು ಹುತ್ತಕ್ಕೆ ಎರೆಯುವುದು ಸಾಮಾನ್ಯ. ಆದರೆ, ಜಿಲ್ಲೆಯ ಕೆಲವೆಡೆ ಕೋಳಿ ತಲೆ, ಮೊಟ್ಟೆಯನ್ನು ಎರೆಯುವ ಪರಿಪಾಠ ತಲೆತಲಾಂತರದಿಂದ ನಡೆದು ಬಂದಿದೆ.ಚಾಮರಾಜನಗರದ ರಾಮಸಮುದ್ರ, ಮಲ್ಲಯ್ಯನಪುರ, ಉತ್ತುವಳ್ಳಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಹುತ್ತಕ್ಕೆ ಕೋಳಿ ಬಲಿ ಕೊಟ್ಟು ನಾಗಪ್ಪನಿಗೆ ನಮಿಸಿ, ಇಷ್ಟಾರ್ಥ ಈಡೇರಿಕೆಗೆ ಬೇಡಿದ್ದಾರೆ. ಶನಿವಾರವಾದ್ದರಿಂದ ಕೋಳಿ ತಲೆ, ಮೊಟ್ಟೆಯನ್ನು ಎರೆಯುವುದು ಕಡಿಮೆಯಾಗಿತ್ತು, ರವಿವಾರ ಸಹ ಬೆಳಗ್ಗೆ ಕೋಳಿ ತಲೆ, ಮೊಟ್ಟೆ ಎರೆಯಲಿದ್ದಾರೆ. ಬಹುಪಾಲು ಮಂದಿ ಕೃಷಿ ಚಟುವಟಿಕೆಯನ್ನೇ ನಂಬಿರುವುದರಿಂದ ಸರ್ಪಗಳು ತಮಗೆ ತೊಂದರೆ ಕೊಡದಿರಲೆಂದು ಕೋಳಿ ಬಲಿ ಕೊಟ್ಟು ಕೋಳಿ ತಲೆ, ಮೊಟ್ಟೆಯನ್ನು ಹುತ್ತದ ಕೋವಿಗೆ ಹಾಕಿದ್ದಾರೆ.ಭಯ ಭಕ್ತಿಯಿಂದ ಈ ಹಬ್ಬ ಆಚರಿಸಲಿದ್ದು ಪೂಜೆಯಾಗುವರರೆಗೂ ಒಂದು ಹನಿ ನೀರನ್ನು ಕುಡಿಯುವುದಿಲ್ಲ. ಈ ರೀತಿ ಕೋಳಿ ಬಲಿಕೊಟ್ಟರೇ ಸರ್ಪ ಸಂಬಂಧದ ತೊಂದರೆ ನಿವಾರಣೆ ಜೊತೆಗೆ ತಮ್ಮ ಇಷ್ಟಾರ್ಥವೂ ಒಂದು ವರ್ಷದೊಳಗೆ ಈಡೇರಲಿದೆ. ಇಷ್ಟಾರ್ಥ ಈಡೇರಿದ ಬಳಿಕ ನಾಗಪ್ಪನಿಗೆ ಕೋಳಿ ಬಲಿ ಕೊಟ್ಟು ಹರಕೆ ತೀರಿಸುತ್ತೇವೆ ಎಂಬುದು ಇಲ್ಲಿನ ಭಕ್ತರ ನಂಬಿಕೆ.ಒಟ್ಟಿನಲ್ಲಿ, ನಾಗಪ್ಪನಿಗೆ ಕೋಳಿ ಬಲಿ ಎಂಬುದು ವಿಲಕ್ಷಣವಾಗಿ ಕಂಡರೂ ಭಯ-ಭಕ್ತಿ ಹಾಗೂ ನಂಬಿಕೆಯಿಂದ ಜನರು ಷಷ್ಠಿಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಹನೂರಿನಲ್ಲಿ ಷಷ್ಠಿ ಆಚರಣೆಹನೂರು: ಸುಬ್ರಹ್ಮಣ್ಯ ಷಷ್ಠಿಯ ಆಚರಣೆ ಹಿನ್ನೆಲೆಯಲ್ಲಿ ಹನೂರು ತಾಲೂಕು ವ್ಯಾಪ್ತಿಯಲ್ಲಿ ಭಕ್ತರು ಹುತ್ತಗಳ ಬಳಿ ತೆರಳಿ ಹಾಲು, ಹಣ್ಣು ಇಟ್ಟು ಪೂಜೆ ಸಲ್ಲಿಸಿದರು. ಷಷ್ಠಿ ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ನಾನಾ ಕಡೆಗಳಲ್ಲಿ ಜನರು ಹುತ್ತಗಳಿಗೆ ಕೋಳಿ ಬಲಿ ಕೊಟ್ಟು ಅದರ ರಕ್ತವನ್ನು ನೈವೇದ್ಯವಾಗಿ ಅರ್ಪಿಸಿದರೆ ಇನ್ನೂ ಕೆಲವಡೆ ನಾಗದೋಷ ಕಂಡು ಬರದಿರಲಿ ಎಂದು ಬೆಳಗ್ಗೆಯಿಂದಲೇ ಉಪವಾಸ ಇದ್ದು, ಕುಟುಂಬದ ಸದಸ್ಯರೊಂದಿಗೆ ಹುತ್ತ ಇರುವ ಕಡೆ ಪೂಜಾ ಸಾಮಗ್ರಿಗಳೊಂದಿಗೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಬೆಣ್ಣೆ, ಹಾಲು, ಬಾಳೆಹಣ್ಣು ಇಟ್ಟು ಅರಿಶಿನ, ಕುಂಕುಮ ಹಾಕಿ ಹುತ್ತಗಳಿಗೆ ಪೂಜೆ ಸಲ್ಲಿಸಿದರು.