ಮುಂದೆ ಜ್ಞಾನ, ಸಿದ್ಧಾಂತಗಳ ಕಳವಿನ ‍ಪ್ರಕರಣ ಹೆಚ್ಚಲಿದೆ: ಎಂ. ರಾಮ್‌ ಜವಹಾರ್‌

KannadaprabhaNewsNetwork |  
Published : Dec 03, 2024, 12:31 AM IST
13 | Kannada Prabha

ಸಾರಾಂಶ

ಸೈಬರ್ ಭದ್ರತೆಯು ಪ್ರಸ್ತುತ ಜಗತ್ತಿನ ಪ್ರಮುಖ ಬೆಳವಣಿಗೆಯಾಗಿದ್ದು, ಈ ಬಗ್ಗೆ ಪ್ರತಿನಿತ್ಯ ಅನೇಕ ಘಟನೆಗಳು ನಡೆಯುತ್ತಿವೆ. ವಿದ್ಯಾವಂತರನ್ನೇ ಗುರಿಯಾಗಿಸಿಕೊಂಡು ಸೈಬರ್‌ ವಂಚನೆ ನಡೆಯುತ್ತಿದ್ದು, ಈ ಬಗ್ಗೆ ಜಾಗೃತಿ ಅಗತ್ಯ. ಹಾಗೆಯೇ, ಪ್ರಪಂಚದಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಯ ಬಗ್ಗೆ ನಿಗಾ ಇರಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಮುಂದೆ ಜ್ಞಾನ ಮತ್ತು ಸಿದ್ಧಾಂತಗಳ ಕಳವಿನ ‍ಪ್ರಕರಣ ಹೆಚ್ಚಲಿದೆ ಎಂದು ಚೆನ್ನೈನ ಭಾರತೀಯ ಪೇಟೆಂಟ್‌ ಕಚೇರಿಯ ಉಪ ನಿಯಂತ್ರಣಾಧಿಕಾರಿ ಎಂ. ರಾಮ್‌ ಜವಹಾರ್‌ ಎಚ್ಚರಿಸಿದರು.

ನಗರದ ಜೆಎಸ್ಎಸ್‌ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ, ಎಸ್ ಜೆಸಿಇ ಸೋಮವಾರ ಆಯೋಜಿಸಿದ್ದ ಸೈಬರ್ ಭದ್ರತೆ ಹಾಗೂ ಬೌದ್ಧಿಕ ಆಸ್ತಿ ಹಕ್ಕು ಕುರಿತು ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಮೆರಿಕಾದಲ್ಲಿ ಪೇಟೆಂಟ್‌ ಭಯೋತ್ಪಾದನೆ ಆರಂಭವಾಗಿದೆ. ಮುಂದೆ ಅದೂ ಭಾರತದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಿದರು.

ಸೈಬರ್ ಭದ್ರತೆಯು ಪ್ರಸ್ತುತ ಜಗತ್ತಿನ ಪ್ರಮುಖ ಬೆಳವಣಿಗೆಯಾಗಿದ್ದು, ಈ ಬಗ್ಗೆ ಪ್ರತಿನಿತ್ಯ ಅನೇಕ ಘಟನೆಗಳು ನಡೆಯುತ್ತಿವೆ. ವಿದ್ಯಾವಂತರನ್ನೇ ಗುರಿಯಾಗಿಸಿಕೊಂಡು ಸೈಬರ್‌ ವಂಚನೆ ನಡೆಯುತ್ತಿದ್ದು, ಈ ಬಗ್ಗೆ ಜಾಗೃತಿ ಅಗತ್ಯ. ಹಾಗೆಯೇ, ಪ್ರಪಂಚದಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಯ ಬಗ್ಗೆ ನಿಗಾ ಇರಿಸಬೇಕು ಎಂದರು.

ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಕುಲಪತಿ ಡಾ.ಎ.ಎನ್‌. ಸಂತೋಷ್‌ ಕುಮಾರ್‌ ಮಾತನಾಡಿ, ನಾವು ಡಿಜಿಟಲ್‌ ಯುಗದಲ್ಲಿ ಬದುಕುತ್ತಿದ್ದು, ತರಕಾರಿ ಮಾರುವ ರೈತನೂ ವ್ಯವಹಾರಕ್ಕಾಗಿ ತಂತ್ರಜ್ಞಾನ ಬಳಸುತ್ತಿದ್ದಾನೆ. ಈ ತ್ವರಿತ ಬೆಳವಣಿಗೆಯ ನಡುವೆ ಸೈಬರ್‌ ವಂಚಕರು ತಮ್ಮ ಜಾಲ ವಿಸ್ತರಿಸಿಕೊಂಡಿದ್ದು, ಅವರಿಂದ ರಕ್ಷಣೆ ಪಡೆಯಬೇಕಿದೆ ಎಂದರು.

ಪೇಟೆಂಟ್‌ ಬಗ್ಗೆ ಭಾರತೀಯರಲ್ಲಿ ನಿರ್ಲಕ್ಷ್ಯ ಧೋರಣೆಯಿದೆ. ಹೀಗಾಗಿಯೇ ದೇಶದ ಪ್ರಾಚೀನ ಔಷಧ ಕ್ರಮಗಳು, ಜೋತಿಷ್ಯ ಶಾಸ್ತ್ರ, ಆಹಾರ ಕ್ರಮಗಳು ನಮ್ಮದೆಂದು ವಾದ ಮಾಡಲು ಸಾಧ್ಯವಾಗುತ್ತಿಲ್ಲ. ಪರಸ್ಪರ ಜ್ಞಾನವನ್ನು ಹಂಚಿಕೊಂಡು ಬೆಳೆಯೋಣ ಎಂದು ಅವರು ಹೇಳಿದರು.

ವಿವಿ ಕುಲಸಚಿವ ಡಾ.ಎಸ್‌.ಎ. ಧನರಾಜ್‌, ಎಸ್ ಜೆಸಿಇ ಪ್ರಭಾರ ಪ್ರಾಂಶುಪಾಲ ಡಾ.ಸಿ. ನಟರಾಜು, ಕಾರ್ಯಕ್ರಮದ ಸಂಚಾಲಕರಾದ ಡಾ.ಆರ್‌.ಕೆ. ಭಾರತಿ, ಡಾ.ವಿ. ಬಾಲಮುರಳೀಧರ, ಡಾ.ಎಚ್‌.ಆರ್‌. ಚೆನ್ನಮ್ಮ, ಡಾ.ಕೆ.ಎನ್. ಸೌಮ್ಯಾ ಮೊದಲಾದವರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ