ಕೊಪ್ಪದಲ್ಲಿ ಕೊಪ್ಪರಿಗೆ ನೀರಿಗೂ ಪರದಾಟ

KannadaprabhaNewsNetwork | Published : May 6, 2024 12:33 AM

ಸಾರಾಂಶ

ಶಾಸಕರ ಕೆಡಿಪಿಯಲ್ಲಿಯೂ ಈ ಕೊಳಕು ನೀರನ್ನು ಪ್ರದರ್ಶಿಸ ಲಾಗಿತ್ತಾದರೂ ಪರಿಹಾರ ಶೂನ್ಯವಾಗಿದೆ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.

ಹಮೀದ್‌ ಕೊಪ್ಪ

ಕನ್ನಡಪ್ರಭ ವಾರ್ತೆ ಕೊಪ್ಪ

ಕಳೆದ ವರ್ಷ ಮಳೆ ಪ್ರಮಾಣ ಕಡಿಮೆಯಾದ ಕಾರಣ ತಾಲೂಕು ಸೇರಿ ರಾಜ್ಯದ ಹಲವೆಡೆ ಬರಪ್ರದೇಶವೆಂದು ಘೋಷಣೆಯಾಗಿದ್ದು ಕೊಪ್ಪ ತಾಲೂಕು ಸಾಧಾರಣ ಪ್ರದೇಶವೆಂದು ಗುರುತಿಸಲಾಗಿದೆ. ಅತೀ ಹೆಚ್ಚು ನೀರಿನ ಮೂಲವಿರುವ ಮಲೆನಾಡು ಪ್ರದೇಶವಾದ ಕೊಪ್ಪದಲ್ಲಿ ಹಿಂದೆಂದೂ ಇಲ್ಲದಂತೆ ಈ ವರ್ಷ ಅತಿಯಾದ ನೀರಿನ ಸಮಸ್ಯೆ ಎದುರಿಸುತ್ತಿದೆ.

ತಾಲೂಕು ವ್ಯಾಪ್ತಿ 44 ಗ್ರಾಪಂ ವ್ಯಾಪ್ತಿ ಹಾಗೂ ಕೊಪ್ಪ ಪಪಂ ಗ್ರಾಮಸ್ಥರು ಹಾಗೂ ನಾಗರಿಕರಿಗೆ ಕುಡಿಯುವ ನೀರೊದಗಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಕೊಪ್ಪ ಪಪಂಯ ತುಂಗಾನದಿಯಿಂದ ಸಿಗದಾಳು ಘಾಟಿ ಪಂಪ್‌ಹೌಸ್ ಹಾಗೂ ನೀರು ಶುದ್ಧೀಕರಣ ಘಟಕದ ಮುಖೇನ ಕೊಪ್ಪ ಪಟ್ಟಣ ಮತ್ತು ಗ್ರಾಮಾಂತರ ಪಂಚಾಯಿತಿ ಕೆಲವು ಪ್ರದೇಶಗಳಿಗೆ ದಿನನಿತ್ಯ ಕುಡಿಯುವ ನೀರು ಒದಗಿಸುತ್ತಿತ್ತು. ಈ ಬಾರಿ ನೀರಿನ ಕೊರತೆ ಇರುವುದರಿಂದ ಪ್ರತಿ 3 ದಿನ ಕ್ಕೊಮ್ಮೆ ಒಂದರಿಂದ ಒಂದೂವರೆ ಗಂಟೆ ಕಾಲ ಪೈಪ್ ಮುಖೇನ ನೀರನ್ನು ಒದಗಿಸುತ್ತಿದೆ.

ಭಂಡಿಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತುಂಗಾನದಿ ನೀರನ್ನು ಪಂಚಾಯಿತಿಯವರು ಟ್ಯಾಂಕರ್ ಮೂಲಕ ಒದಗಿಸುತ್ತಿದ್ದಾರೆ. ಇನ್ನುಳಿದ ಪಂಚಾಯಿತಿಗಳಲ್ಲೂ ಎರಡು ದಿನಕ್ಕೊಮ್ಮೆ ನೀರು ನೀಡುತ್ತಿದ್ದರೂ ಮೊದಲಿನ ಪ್ರಮಾಣಕ್ಕಿಂತ ಶೇ.60 ರಷ್ಟು ಕಡಿಮೆ ಪ್ರಮಾಣದ ನೀರು ಒದಗಿಸುತ್ತಿರುವುದರಿಂದ ಗ್ರಾಮಸ್ಥರು ನೀರಿನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ವಿಫಲ:

ತಾಲೂಕಿನಾದ್ಯಂತ ಜಲ್ ಜೀವನ ಮಿಷನ್ ವತಿಯಿಂದ ತೆಗೆಸಿರುವ ಬೋರ್‌ವೆಲ್‌ಗಳಲ್ಲಿ ಬಹುತೇಕ ವಿಫಲ ಆಗಿದೆ. ಕೆಲವೆಡೆ ಮನೆಗೆ ಪೈಪ್ ಲೈನ್ ಮಾಡಿದರೂ ಈವರೆಗೂ ನೀರಿನ ಸಂಪರ್ಕ ನೀಡಲಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಹೇರೂರು ಗ್ರಾಪಂ ಭಾಗದಲ್ಲಿ ಜಲ ಜೀವನ ಮಿಷನ್ ಯೋಜನೆ ಸಂಪೂರ್ಣ ವಿಫಲವಾಗಿದ್ದು ಯೋಜನಾ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಆಗಾಗ ವಾಗ್ವಾದಗಳು ನಡೆಯುತ್ತಿರುತ್ತವೆ.

ಕೊಪ್ಪ ಗ್ರಾಮಾಂತರ ಗ್ರಾಪಂ ಯ ಕೌರಿ ಭಾಗದಲ್ಲಿ ಬಾವಿ ಮೂಲದಿಂದ ಕುಡಿಯುವ ನೀರೊದಗಿಸಲಾಗುತ್ತಿದ್ದು ವರ್ಷ ಪೂರ್ತಿ ಕೊಳಕು ನೀರೇ ಬರುತ್ತಿರುವುದರಿಂದ ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಶುದ್ಧ ನೀರಿಗೆ ಪರಿಹಾರ ಹುಡುಕುವಲ್ಲಿ ವಿಫಲರಾಗಿದ್ದಾರೆ. ಶಾಸಕರ ಕೆಡಿಪಿಯಲ್ಲಿಯೂ ಈ ಕೊಳಕು ನೀರನ್ನು ಪ್ರದರ್ಶಿಸ ಲಾಗಿತ್ತಾದರೂ ಪರಿಹಾರ ಶೂನ್ಯವಾಗಿದೆ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.

ಮರಿತೊಟ್ಲು ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು ಕಡಿಮೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದ್ದು ಪಂಚಾಯಿತಿಯವರು ಬಾವಿಯಲ್ಲಿ ನೀರಿಲ್ಲ ಎನ್ನುವ ಉತ್ತರ ನೀಡುತ್ತಾರೆ. ಆದರೆ ಮುಸುರೆಹಳ್ಳದ ದಡದಲ್ಲಿರುವ ಪಂಚಾಯಿತಿಯವರು ನೀರು ಪೂರೈಸುವ ಬಾವಿಯಲ್ಲಿ ಸಾಕಷ್ಟು ನೀರಿದ್ದರೂ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಅನೇಕ ಗ್ರಾಮಸ್ಥರು ಕುಡಿಯುವ ನೀರನ್ನು ಖಾಸಗಿ ಟ್ಯಾಂಕರ್‌ಗಳಲ್ಲಿ ಹಣಕೊಟ್ಟು ತರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ನುಗ್ಗಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 700ಕ್ಕಿಂತಲೂ ಹೆಚ್ಚು ಕುಟುಂಬಗಳಿದ್ದು ಬೋರ್‌ವೆಲ್ ಮತ್ತು ಬಾವಿ ಮೂಲಗಳಿಂದ ಗ್ರಾಮಸ್ಥರಿಗೆ ತೊಂದರೆಯಾಗದಂತೆ ನೀರನ್ನು ಪೈಪ್ ಮುಖೇನ ಒದಗಿಸಲಾಗುತ್ತಿದೆ. ಇನ್ನೊಂದು ತಿಂಗಳು ಮಳೆ ಬಾರದೆ ಇದ್ದಲ್ಲಿ ಜನ, ಜಾನುವಾರು ಮತ್ತು ಪ್ರಾಣಿಪಕ್ಷಿಗಳಿಗೂ ನೀರಿನ ಕೊರತೆ ಉಂಟಾಗುತ್ತದೆ.

- ಎಚ್.ಆರ್. ಜಗದೀಶ್

ಸದಸ್ಯರು, ನುಗ್ಗಿ ಗ್ರಾಪಂ

ಕೊಪ್ಪ ತಾಲೂಕಿನ ಚಾವಲ್ಮನೆ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಬಾವಿಗಳಲ್ಲಿ ನೀರು ಬತ್ತಿ ಹೋಗಿದೆ. ಬೋರ್‌ವೆಲ್ ತೆಗೆದರೆ ನೀರು ಬರುತ್ತಿಲ್ಲ. ಗ್ರಾಪಂ ಕುಡಿಯುವ ನೀರಿನ ಘಟಕಗಳಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಕೇಂದ್ರ ಸರ್ಕಾರದ ಜಲ ಜೀವನ್ ಯೋಜನೆಯಿಂದ ಅಲ್ಲಲ್ಲಿ ಪೈಪ್‌ಲೈನ್‌ ಮಾಡಲಾಗಿದೆಯೇ ಹೊರತು ನೀರಿನ ಮೂಲ ಗುರುತಿಸದೇ ಆ ಯೋಜನೆ ವಿಫಲವಾಗಿದೆ. ಗ್ರಾಮ ಪಂಚಾಯತಿಯವರು ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲು ಮೀನ-ಮೇಷ ಎಣಿಸುತ್ತಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಜರೂರಾಗಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

- ಚಾವಲ್ಮನೆ ಸುರೇಶ್ ನಾಯಕ್‌

ಗ್ರಾಮಸ್ಥರು

Share this article