ಸಿದ್ದರಾಮಯ್ಯ ಬಜೆಟ್‌ನಲ್ಲಿ ಗದಗ ಜಿಲ್ಲೆಗೆ ಸಿಹಿ, ಕಹಿ ಸಮಪಾಲು

KannadaprabhaNewsNetwork | Published : Feb 17, 2024 1:16 AM

ಸಾರಾಂಶ

ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಗದಗ ಜಿಲ್ಲೆಯ ಪಾಲಿಗೆ ಸಿಹಿ, ಕಹಿ ಒಟ್ಟಿಗೆ ನೀಡಿದ್ದು, ನಿರೀಕ್ಷೆಗಳನ್ನು ಹೊಂದಿದ್ದ ಯೋಜನೆಗಳಿಗೆ ಮುಖ್ಯಮಂತ್ರಿಗಳು ಆದ್ಯತೆ ನೀಡಿಲ್ಲ.

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತ ಗದಗರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಗದಗ ಜಿಲ್ಲೆಯ ಪಾಲಿಗೆ ಸಿಹಿ, ಕಹಿ ಒಟ್ಟಿಗೆ ನೀಡಿದ್ದು, ನಿರೀಕ್ಷೆಗಳನ್ನು ಹೊಂದಿದ್ದ ಯೋಜನೆಗಳಿಗೆ ಮುಖ್ಯಮಂತ್ರಿಗಳು ಆದ್ಯತೆ ನೀಡಿಲ್ಲ. ಜಿಲ್ಲೆಯ ಪ್ರಮುಖ ನೀರಾವರಿ ಹಾಗೂ ರೈಲ್ವೆ ಯೋಜನೆಗಳಿಗೆ ಯಾವುದೇ ಅನುದಾನ ನಿಗದಿ ಮಾಡಿಲ್ಲ. ಆದರೆ ಜಿಲ್ಲೆಯ ಆರೋಗ್ಯ ಸೇವೆಯನ್ನು ಉನ್ನತೀಕರಿಸುವಲ್ಲಿ, ಮೂಲ ಸೌಕರ್ಯ ಅಭಿವೃದ್ಧಿಗೆ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.ರಾಜ್ಯದಲ್ಲಿ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯ ನಡುವೆ, ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಎಚ್.ಕೆ. ಪಾಟೀಲ ಪ್ರವಾಸೋದ್ಯಮ ಸಚಿವರಾಗಿರುವ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುದಾನ ಸಿಗಬಹುದು ಎನ್ನುವ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. ಕಪ್ಪತಗುಡ್ಡದಲ್ಲಿ ಪ್ರವಾಸೋದ್ಯಮ ಪೂರಕ ಪರಿಸರ ಅಭಿವೃದ್ಧಿ ಪಡಿಸುವುದು ಎಂದು ಉಲ್ಲೇಖಿಸಿದನ್ನು ಹೊರತು ಪಡಿಸಿದಲ್ಲಿ ಬಜೆಟ್ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ನಿರೀಕ್ಷೆಗಳೇನಿದ್ದವು?: ಉತ್ತರ ಕರ್ನಾಟಕ ಸಹ್ಯಾದ್ರಿ, ವಿಶೇಷ ಔಷಧಿ ಗುಣಗಳನ್ನು ಹೊಂದಿರುವ ಕಪ್ಪತಗುಡ್ಡವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಪರಿವರ್ತಿಸುವ ಕಾರ್ಯವಾಗಬೇಕಿತ್ತು. ಪ್ರತಿ ಬಜೆಟ್ ನಲ್ಲೂ ಕಪ್ಪತಗುಡ್ಡಕ್ಕೆ ಅನ್ಯಾಯ ಆಗುತ್ತಲೇ ಇದೆ. ಈ ಭಾಗದಲ್ಲಿ (ಡಂಬಳದಲ್ಲಿ) ಆಯುರ್ವೇದ, ಔಷಧಿ ಸಸ್ಯಗಳ ಸಂಶೊಧನೆಗೆ ಸಂಶೋಧನಾ ಕೇಂದ್ರ ಮತ್ತು ಇರುವ ಅತ್ಯಮೂಲ್ಯ ಔಷಧಿ ಸಸ್ಯಗಳನ್ನು ಉಳಿಸುವ ಕೆಲಸ ಕಾರ್ಯವಾಗಬೇಕಿದೆ. ಆದರೆ ಅದು ಇದುವರೆಗೂ ಅರಣ್ಯ ರೋದನವಾಗಿಯೇ ಉಳಿದಿದೆ. ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿ ಲಕ್ಕುಂಡಿ ಪ್ರಾಧಿಕಾರ ರಚನೆ ಮಾಡಿ, ಗದಗ ಜಿಲ್ಲೆಯ ಸಮಗ್ರ ಪವಾಸೋದ್ಯಮ ಅಭಿವೃದ್ಧಿ ವಿಷಯವಾಗಿ ವಿಶೇಷ ತಜ್ಞರ ತಂಡದಿಂದ ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷೆಯನ್ನು ನಡೆಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರು. 850 ಕೋಟಿಗಳ ನೀಲ ನಕ್ಷೆಯನ್ನು ತಯಾರಿಸಿ ಅನುದಾನ ಒದಗಿಸಲು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಇದರ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾವನೆ ಮಾಡಿಲ್ಲ.

ಗದಗ ಜಿಲ್ಲೆ ಸೇರಿದಂತೆ ಮಧ್ಯ ಕರ್ನಾಟಕಕ್ಕೆ ಅತ್ಯಂತ ಪ್ರಮುಖ ಸಂಪರ್ಕ ಪ್ರಮುಖ ರೈಲು ಯೋಜನೆಗಳಿಗೆ ಗದಗ-ಹರಪನಹಳ್ಳಿ, ಗದಗ-ಕೃಷ್ಣಾನಗರ ಯೋಜನೆ ಸೇರಿದಂತೆ ಹಲವಾರು ರೈಲ್ವೆ ಯೋಜನೆಗೆ ಅನುದಾನ ನೀಡಿಲ್ಲ, ಗದಗ-ಯಲವಗಿ ಯೋಜನೆಗೆ ಈ ಹಿಂದಿನ ಬಿಜೆಪಿ ಸರ್ಕಾರ 600 ಕೋಟಿ ಅನುದಾನ ಮೀಸಲಿಟ್ಟಿತ್ತು. ಆದರೆ ಸಿದ್ದರಾಮಯ್ಯ ಮಂಡಿಸಿದ ಈ ಬಜೆಟ್ ಜಿಲ್ಲೆಯ ಯಾವುದೇ ರೈಲ್ವೆ ಯೋಜನೆಗಳ ಬಗ್ಗೆ ಚಕಾರವೆತ್ತಿಲ್ಲ. ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಮಾಡಿಲ್ಲ, ಜಿಲ್ಲೆಯ ಕ್ರೀಡಾ ಉತ್ತೇಜನಕ್ಕಾಗಿ ರೂಪಿಸಿದ್ದ ಯೋಜನೆಗಳಿಗೆ ಅನುದಾನ ನೀಡಿಲ್ಲ, ಜಿಲ್ಲೆಯ ರಸ್ತೆಗಳ ಅಭಿವೃದ್ಧಿ ವಿಶೇಷ ಅನುದಾನ ನಿರೀಕ್ಷೆಯೂ ಹುಸಿಯಾಗಿದೆ. ಹಾಗಾದರೆ ಗದಗ ಜಿಲ್ಲೆಗೆ ಸಿಕ್ಕಿದ್ದೇನು?:ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಪ್ರಾಧಾನ್ಯತೆ ದೊರೆತಿದೆ. ಶಿಕ್ಷಣ ಕ್ಷೇತ್ರ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗಳ ವ್ಯಾಪ್ತಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ಯೋಜನೆಗಳಿಗೆ ಗಮನ ನೀಡಿದ್ದಾರೆ. ಮುಖ್ಯವಾಗಿ ಗದಗನಲ್ಲಿ ನೂತನವಾಗಿ ನಿರ್ಮಿಸಿದ 450 ಹಾಸಿಗೆಗಳ ಆಸ್ಪತ್ರೆಗೆ ವೈದ್ಯಕಿಯ ಉಪಕರಣ ಮತ್ತು ಪೀಠೋಪಕರಣ ಖರೀದಿಗೆ ಅನುದಾನ ನೀಡಲಾಗಿದೆ. ಶಿರಹಟ್ಟಿ ಪಟ್ಟಣದಲ್ಲಿ ಪ್ರಸಕ್ತ ಸಾಲಿನಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆ ನಿರ್ಮಿಸುವುದು. ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕ್ಯಾಥಲ್ಯಾಬ್ ಸೌಲಭ್ಯದೊಂದಿಗೆ ಸೂಪರ್ ಸ್ಪೆಷಾಲಿಟಿ ಕಾರ್ಡಿಯಾಕ್ ಯುನಿಟ್ ಅನ್ನುರು. 10 ಕೋಟಿ ವೆಚ್ಚದಲ್ಲಿ ಪ್ರಾರಂಭಿಸುವುದು.

2025-26ನೇ ಸಾಲಿನಲ್ಲಿ ಗದಗ ಜಿಲ್ಲಾಸ್ಪತ್ರೆಯಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ (IPHL) ಸ್ಥಾಪಿಸುವುದು. ಜಿಲ್ಲೆಯ ರೋಣದಲ್ಲಿ ನಬಾರ್ಡ್ ಸಹಯೋಗದೊಂದಿಗೆ ಒಟ್ಟು 150 ಕೋಟಿ ವೆಚ್ಚದಲ್ಲಿ ಹೊಸ ಜಿ.ಟಿ.ಟಿ.ಸಿ ಗಳನ್ನು ಪ್ರಾರಂಭಿಸುವುವುದು. ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಶೀತಲಗೃಹಗಳನ್ನು ನಿರ್ಮಿಸಿ ರೈತರ ಬೆಳೆಗಳಿಗೆ ಬೆಲೆ ಕುಸಿತವಾದಾಗ ಸಂಗ್ರಹಿಸಲು ಅನುಕೂಲ ಕಲ್ಪಿಸಲಾಗಿದೆ. ಜಿಲ್ಲೆಯ ರೋಣದ ಮಲ್ಲಾಪುರ ಬಳಿ ರೈಲ್ವೆ ಮೇಲು ಹಾಗೂ ಕೆಳಸೇತುವೆಗಳ ನಿರ್ಮಾಣವನ್ನು ಕೈಗೊಳ್ಳುವುದನ್ನು ಘೋಷಣೆ ಮಾಡಲಾಗಿದೆ. ಈ ಯೋಜನೆಯನ್ನು ಹಿಂದಿನ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಪ್ರಯತ್ನದಿಂದಾಗಿ ಕೇಂದ್ರ ಸರ್ಕಾರ ಈಗಾಗಲೇ 80 ಕೋಟಿ ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಬಿಡುಗಡೆ ಮಾಡಿ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿದೆ. ಈಗಾಗಲೇ ಅನುಮೋದನೆಗೊಂಡಿರುವ ವಿಜ್ಞಾನ ಕೇಂದ್ರ, ತಾರಾಲಯಗಳನ್ನು ಕಾರ್ಯಾರಂಭಗೊಳಿಸುವುದು. ಗದಗ ಜಿಲ್ಲೆಯ ಕಪ್ಪತಗುಡ್ಡ ಪರಿಸರದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಎಂದಷ್ಟೇ ತಿಳಿಸಿದ್ದಾರೆ.

Share this article