ಬಿಸಿಲ ನಾಡಿನಲ್ಲಿ ಬರದ ಜೊತೆ ಬೇಸಿಗೆ ಬವಣೆ

KannadaprabhaNewsNetwork | Published : Feb 29, 2024 2:07 AM

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ಬಿಸಿಲ ನಾಡಿನಲ್ಲಿ ಬರದ ಜೊತೆಗೆ ಬೇಸಿಗೆ ಬವಣೆ ಖಾತರತೆಯ ಲಕ್ಷಣಗಳು ಎಲ್ಲೆಡೆ ಗೋಚರಿಸುತ್ತಿದೆ. ಕೈಕೊಟ್ಟ ಹಿಂಗಾರು-ಮುಂಗಾರು, ಕುಸಿತ ಕಂಡ ಅಂತರ್ಜಲ, ಬತ್ತುತ್ತಿರುವ ಕೃಷ್ಣಾ-ತುಂಗಭದ್ರಾ ನದಿಗಳು ಪರಿಣಾಮ ಕುಡಿಯುವ ನೀರಿಗಾಗಿ ಅಲೆದಾಟ ನಿಧಾನವಾಗಿ ವೇಗಪಡೆದುಕೊಳ್ಳುತ್ತಿದೆ.

ರಾಮಕೃಷ್ಣ ದಾಸರಿ

ರಾಯಚೂರು: ಪ್ರಸಕ್ತ ಸಾಲಿನಲ್ಲಿ ಬಿಸಿಲ ನಾಡಿನಲ್ಲಿ ಬರದ ಜೊತೆಗೆ ಬೇಸಿಗೆ ಬವಣೆ ಖಾತರತೆಯ ಲಕ್ಷಣಗಳು ಎಲ್ಲೆಡೆ ಗೋಚರಿಸುತ್ತಿದೆ. ಕೈಕೊಟ್ಟ ಹಿಂಗಾರು-ಮುಂಗಾರು, ಕುಸಿತ ಕಂಡ ಅಂತರ್ಜಲ, ಬತ್ತುತ್ತಿರುವ ಕೃಷ್ಣಾ-ತುಂಗಭದ್ರಾ ನದಿಗಳು ಪರಿಣಾಮ ಕುಡಿಯುವ ನೀರಿಗಾಗಿ ಅಲೆದಾಟ ನಿಧಾನವಾಗಿ ವೇಗಪಡೆದುಕೊಳ್ಳುತ್ತಿದೆ.

ಬೇಸಿಗೆ ಆರಂಭದಲ್ಲಿಯೇ ಜಿಲ್ಲೆಯ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಒಂದೊಂದಾಗಿ ತಲೆ ಎತ್ತುತ್ತಿದ್ದು, ಅದಕ್ಕೆ ತಕ್ಕಂತೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಗಳು ಸಹ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನುವಹಿಸಿಕೊಂಡು ಕ್ರಮವಾಗಿ ಅನುಷ್ಠಾನಕ್ಕೆ ತರುತ್ತಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 1074 ಕಂದಾಯ ಗ್ರಾಮಗಳಿದ್ದು, 374 ಗ್ರಾಮಗಳಲ್ಲಿ ನೀರಿನ ಅಭಾವ ಉಂಟಾಗುವ ಸಾಧ್ಯತೆಯನ್ನು ಜಿಲ್ಲಾಡಳಿತ ಗುರುತಿಸಿದೆ. ಇದರಲ್ಲಿ ರಾಯಚೂರು ತಾಲೂಕಿನಲ್ಲಿ -78, ಮಾನ್ವಿಯಲ್ಲಿ 47, ದೇವದುರ್ಗದಲ್ಲಿ 52, ಲಿಂಗಸೂಗೂರಿನಲ್ಲಿ 72, ಸಿಂಧನೂರಿನಲ್ಲಿ 53, ಸಿರವಾರದಲ್ಲಿ 31, ಮಸ್ಕಿಯಲ್ಲಿ 41 ಗ್ರಾಮಗಳಿವೆ. ಈಗಾಗಲೇ ಕಾಲುವೆ ಅವಲಂಬಿತ ತಾಲೂಕುಗಳಲ್ಲಿ ಒಂದು ಹಂತದಲ್ಲಿ ಜಲಾಶಯದ ಮುಖಾಂತರ ಕುಡಿಯುವ ನೀರಿನ ಸರಬರಾಜಿನ ಮೂಲಗಳನ್ನು ಭರ್ತಿ ಮಾಡಲಾಗಿದೆ.

850ರ ಪೈಕಿ 279 ಗ್ರಾಮಗಳು ಜಲಾಶಯ ಅಲಂಬಿತವಾಗಿದ್ದು, ಉಳಿದ ಹಳ್ಳಿಗಳಿಗೆ ಕೊಳವೆ ಬಾವಿಗಳ ಮುಖಾಂತರ ನೀರು ಕಲ್ಪಿಸಲಾಗುತಿದೆ. ಶಾಲಾ-ಕಾಲೇಜುಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿ ಹಾಗೂ ವಸತಿ ನಿಲಯಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆವಹಿಸಲು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.

ಬೇಸಿಗೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಉತ್ತಮ ಅಂತರ್ಜಲ ಹೊಂದಿರುವ 269 ಬೋರ್‌ವೆಲ್‌ಗಳನ್ನು ಗುರುತಿಸಲಾಗಿದೆ. ಅದರಲ್ಲಿ 59 ಬೋರ್‌ವೆಲ್‌ಗಳಿಗೆ ಈಗಾಗಲೇ ಮುಂಗಡ ಹಣ ಕೂಡ ನೀಡಿ ಬಾಡಿಗೆ ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ. ನಿರಂತರವಾಗಿ ಬೋರ್‌ವೆಲ್‌ಗಳ ನಿರ್ವಹಣೆಗೆ ಅಗತ್ಯ ದುರಸ್ತಿ ಕೈಗೊಂಡಿದ್ದು, ಅಗತ್ಯವಿರುವ ಕಡೆ ಹೊಸ ಬೋರ್‌ವೆಲ್‌ ಕೊರೆಯಲು ಸಹ ಜಿಪಂ ಮುಂದಾಗಿದೆ. ಈಗಾಗಲೇ ಸಿಂಧನೂರ, ಮಾನ್ವಿ ಸೇರಿ ಇತರೆ ತಾಲೂಕುಗಳಲ್ಲಿ ಟಾಸ್ಕ್‌ಫೋರ್ಸ್‌ ಸಮಿತಿಯ ಸಭೆಗಳನ್ನು ನಡೆಸಲಾಗಿದೆ ಸದ್ಯಕ್ಕೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 30.06 ಕೋಟಿ ರು. ಹಣ ಇದ್ದರೆ, ತಹಸೀಲ್ದಾರ್ ಖಾತೆಯಲ್ಲಿ 4.74 ಕೋಟಿ ರು. ಲಭ್ಯವಿದ್ದು, ಕುಡಿಯುವ ನೀರಿನ ಜರೂರಿತನ್ನಾಧರಿಸಿ ಅನುದಾನ ಬಳಕೆಗೆ ಅಧಿಕಾರಿಗಳಿಗೆ ಸೂಚನೆಯನ್ನು ಸಹ ನೀಡಲಾಗಿದೆ.

ಈಗಾಗಲೇ ಗಣೇಕಲ್ ಜಲಾಶಯದಿಂದ ಸಿರವಾರ ಹಾಗೂ ರಾಯಚೂರು ತಾಲೂಕುಗಳ ಗ್ರಾಮೀಣ ಭಾಗಕ್ಕೆ ಅಗತ್ಯವಾದ ನೀರನ್ನು ಸಂಗ್ರಹಿಸಿಡಲಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮಾ.5ರಿಂದ ತುಂಗಭದ್ರಾ ಎಡದಂಡೆ ಕಾಲುವೆಯಿಂದ ಸಮಾನಾಂತರ ಜಲಾಶಯವನ್ನು ಭರ್ತಿ ಮಾಡಲಾಗುತ್ತಿದೆ. ಇದರ ಜೊತೆಗೆ ಬೋರ್‌ವೆಲ್‌ ಹಾಗೂ ಖಾಸಗಿ ಬೋರ್‌ವೆಲ್‌ಗಳ ಮುಖಾಂತರ ನೀರು ಸರಬರಾಜಿಗೆ ಅಗತ್ಯವಾದ ಕ್ರಮ ಕೈಗೊಳ್ಳಲು ಯೋಜನೆ ರೂಪಿಸಿದ್ದು, ಬೇಸಿಗೆ ಆರಂಭದಲ್ಲಿಯೇ ಕುಡಿಯುವ ನೀರಿನ ತಾತ್ವರ ಶುರುವಾಗಿರುವುದು ದಿನೇ ದಿನೆ ಸಮಸ್ಯೆ ಗಂಭೀರತೆ ಪಡೆದುಕೊಳ್ಳುವ ಲಕ್ಷಣಗಳು ಗೋಚರಿಸಿದ್ದರಿಂದ ಮುಂದೆ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸುತ್ತಾರೆಯೋ ಎನ್ನುವ ಆತಂಕ ಕಾಡಲಾರಂಭಿಸಿದೆ.

ಜಿಲ್ಲೆ ಗ್ರಾಮೀಣ ಭಾಗದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಈಗಾಗಲೇ ಬಿಆರ್ ನಿಂದ ನೀರನ್ನು ಪಡೆಯಲಾಗಿದೆ. ಮಾ.5ರಿಂದ ಟಿಎಲ್‌ಬಿಸಿಯಿಂದ ನೀರು ಹರಿಸಲಾಗುತ್ತಿದೆ. ಇದರ ಜೊತೆಗೆ ಬೋರ್‌ವೆಲ್‌ ಆಧಾರಿತ ಗ್ರಾಮಗಳಲ್ಲಿ ನೀರಿನ ತೊಂದರೆಯಾಗದಂತೆ ಎಚ್ಚರಿಕೆವಹಿಸಿದ್ದು, ಖಾಸಗಿ ಬೋರ್‌ವೆಲ್‌ಗಳಿಂದಲೂ ನೀರು ಪಡೆಯಲಾಗುತ್ತಿದೆ. ಎಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಸ್ಪಂದಿಸಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ ಎಂದು ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ತಿಳಿಸಿದರು.

Share this article