ತರೀಕೆರೆಯಲ್ಲಿ ಬಿಸಲಿನ ಝಳಕ್ಕೆ ಜನ ತಳಮಳ

KannadaprabhaNewsNetwork | Published : Feb 28, 2024 2:34 AM

ಸಾರಾಂಶ

ಬೆಳಿಗ್ಗೆ ಏಳು ಗಂಟೆಗೇ ಪ್ರಾರಂಭವಾಗುವ ಬಿಸಲಿನ ತಾಪ ಮಧ್ಯಾಹ್ನದ ವೇಳೆಗೆ ಗರಿಷ್ಠ ಮಿತಿ ತಲುಪಿರುತ್ತದೆ. ಇನ್ನು, ಬೆಳಿಗ್ಗೆ 10 ಗಂಟೆಯ ನಂತರ ತರೀಕೆರೆಯ ರಸ್ತೆಗಳಲ್ಲಿ ಜನಸಂಚಾರವೇ ವಿರಳ!

ಅನಂತ ನಾಡಿಗ್

ಕನ್ನಡಪ್ರಭ ವಾರ್ತೆ ತರೀಕೆರೆ

ಸಂಕ್ರಮಣ, ರಥಸಪ್ತಮಿ ಮುಗಿಯುತ್ತಿದ್ದ ಹಾಗೆ ದಿನದಿಂದ ದಿನಕ್ಕೆ ತರೀಕೆರೆ ಪಟ್ಟಣದಲ್ಲಿ ಬಿಸಿಲಿನ ತಾಪ ಮತ್ತು ಬಿಸಿಲಿನ ಧಗೆ ಏರುಮುಖವಾಗಿ ಸೂರ್ಯನ ಶಾಖಕ್ಕೆ ನಗರದ ಜನ ತಳಮಳಗೊಳ್ಳುತ್ತಿದ್ದು, ಎದೆಗುದಿಯ ತಾಪಕ್ಕೆ ತಂಪೆರೆಯೋ ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಬೆಳಿಗ್ಗೆ ಏಳು ಗಂಟೆಯಿಂದಲೇ ಪ್ರಾರಂಭವಾಗುವ ಬಿಸಲಿನ ತಾಪ ಮಧ್ಯಾಹ್ನದ ವೇಳೆಗೆ ಗರಿಷ್ಠ ಮಿತಿಯನ್ನು ತಲುಪಿರುತ್ತದೆ, ಹೆಚ್ಚಿದ ಬಿಸಿಲಿನ ಶಾಖದಿಂದಾಗಿ ಬೆಳಿಗ್ಗೆ 10 ಗಂಟೆಯ ನಂತರ

ರಸ್ತೆಗಳಲ್ಲಿ ಜನಸಂಚಾರ ಗಣನೀಯವಾಗಿ ವಿರಳವಾಗಿರುತ್ತದೆ. ಬಿಸಿಲಿನ ಝಳಕ್ಕೆ ಜನರು ಕೊಡೆಯ ಆಶ್ರಯ ಪಡೆದು ಸಂಚರಿಸಿದರೂ ಕ್ಷಣಾರ್ಧದಲ್ಲೇ ಇಡೀ ಕೊಡೆ ಕಾದು ಹೋಗುತ್ತದೆ. ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಿದ್ದರೆ, ಅಕಸ್ಮಾತ್ ರಸ್ತೆಯಲ್ಲಿರುವ ಮರಗಳಿಂದ ನೆರಳು ಸಿಕ್ಕರೆ ನಿಧಾನಕ್ಕೆ ಹೆಜ್ಜೆ ಹಾಕೋಣ ಎಂದು ಅನಿಸುತ್ತದೆ ಅಷ್ಟು ಬಿಸಿಲಿನ ತಾಪಮಾನ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ಟಾರ್ ಅಥವಾ ಸೀಮೆಂಟ್ ರಸ್ತೆಗಳೂ ಕೂಡ ವಿಪರೀತ ಕಾದುಹೋಗುತ್ತಿದ್ದು ಬಿಸಿಯಾದ ಒಣ ಹವೆಯಲ್ಲೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ.

ಬೆಳಗಿನ ಹತ್ತು ಗಂಟೆಯ ಹೊತ್ತಿಗೇ ರಸ್ತೆಗಳಲ್ಲಿ ಸಂಚರಿಸಲು ತ್ರಾಸ, ಅದಾಗಲೇ ಸೂರ್ಯನ ತಾಪ ತೀವ್ರವಾಗುತ್ತಿದ್ದಂತೆ ಬೇಗನೆ ನೆರಳಿನ ಆಶ್ರಯಕ್ಕೆ ಹೋಗೋಣ ಎಂದೆನಿಸುತ್ತದೆ. ಇಡೀ ದಿನ ಸೂರ್ಯನ ಹಚ್ಚಿದ ತಾಪಮಾನದಿಂದಾಗಿ ಮನೆಗಳು ಕೂಡ ಕಾದ ಕಬ್ಬಿಣದಂತಾಗಿರುತ್ತಿವೆ. ಎಲ್ಲ ಕಡೆಯೂ ಒಣ ಮತ್ತು ಬಿಸಿ ಹವೆ ಸುಳಿದಾಡುತ್ತಿದ್ದು, ತಂಪಾದ ಗಾಳಿಗಾಗಿ ಹುಡುಕಾಟ ನಡೆಸಬೇಕಾಗುತ್ತಿದೆ. ಅಷ್ಟು ವಾತಾವರಣ ಬಿರುಬಿಸಿಲಿನ ತಾಪಮಾನದಿಂದ ಕೂಡಿದೆ.

ಮನೆ, ಅಂಗಡಿ, ಹೋಟೆಲ್, ಕ್ಯಾಂಟೀನ್, ಬ್ಯಾಂಕು, ಸರ್ಕಾರಿ ಮತ್ತು ಖಾಸಗಿ ಕಚೇರಿ ಇತ್ಯಾದಿ ಕಡೆಗಳಲ್ಲಿ ದಿನದ 24 ಗಂಟೆಗಳ ಕಾಲವು ಫ್ಯಾನ್ ತಿರುಗುತ್ತಲೇ ಇರಬೇಕು. ಇಲ್ಲಿಯೂ ವಾತಾವರಣ ಹೆಚ್ಚು ಬಿಸಿಯಾದುದರಿಂದ ತಂಪಾದ ಗಾಳಿಯನ್ನು ನಿರೀಕ್ಷಿಸುವಂತಿಲ್ಲ. ಹಗಲಲ್ಲಾಗಲಿ ನಡುರಾತ್ರಿಯಲ್ಲಾಗಲಿ ಪವರ್ ಕಟ್ ಆಗಿ ತಿರುಗುತ್ತಿದ್ದ ವಿದ್ಯುತ್ ಫಂಕಗಳು ನಿಂತು ಹೋದರೆ, ಬಿಸಿಯಾದ ತಾಪಮಾನ ದಿಂದಾಗಿ ಚಡಪಡಿಸುವಂತಾಗುತ್ತದೆ.

ಎಳನೀರು, ಕಬ್ಬಿನ ಹಾಲಿಗೆ ಹೆಚ್ಚಾದ ಬೇಡಿಕೆ: ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದಾಗಿ ಬಾಯಾರಿಕೆ ಸಹಜ, ಎಷ್ಟು ನೀರು ಕುಡಿದರೂ ಬಾಯಾರಿಕೆ ತಣಿಯುವುದಿಲ್ಲ, ತಾಪಮಾನ ಕಡಿಮೆ ಮಾಡಿ ಕೊಳ್ಳಲು ಜನರು ಎಳನೀರು, ಕಬ್ಬಿನ ಹಾಲು, ಐಸ್ ಕ್ರೀಂ ಇತ್ಯಾದಿ ತಂಪಾದ ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಅಲ್ಲದೆ ಕಲ್ಲಂಗಡಿ, ಕಿತ್ತಲೆಹಣ್ಣು, ಕರಬೂಜ, ದ್ರಾಕ್ಷಿ ಇತ್ಯಾದಿ ಹಣ್ಣುಗಳ ಬೇಡಿಕೆಯೂ ಹೆಚ್ಚಾಗಿದೆ.

ಮಳೆಯ ನಿರೀಕ್ಷೆಯಲ್ಲಿ ಜನ-ಜಾನುವಾರು!: ಹೋದ ವರ್ಷ ಮಳೆಯ ತೀವ್ರ ಕೊರತೆಯಿಂದಾಗಿ ಈ ಭಾಗದ ಭೂಮಿಯ ಅಂತರ್ಜಲ ಕೂಡ ಕಡಿಮೆಯಾಗುತ್ತಿದೆ. ಜಲಾಶಯ, ಕೆರೆ ಹಳ್ಳ-ಕೊಳ್ಳಗಳ ನೀರು ಖಾಲಿಯಾಗುತ್ತಿದೆ. ಈ ಬಾರಿಯಾದರೂ ಬೇಗನೆ ಮಳೆಗಾಲ ಪ್ರಾರಂಭವಾಗಲಿ ಎಂಬ ಆಶಯದೊಂದಿಗೆ ಜನರು ಮಳೆಯ ನಿರೀಕ್ಷೆಯಲ್ಲಿದ್ದಾರೆ.ಕಾಣೆಯಾದವೇ ಪಕ್ಷಿಗಳು!: ಫೆಬ್ರವರಿ ಮಾಹೆಯ ಕಡೆಯ ದಿನಗಳಲ್ಲಿ ಬಿಸಿಲಿನ ತಾಪ ದಿನೇದಿನೇ ಹೆಚ್ಚಾಗುತ್ತಿದೆ. ಪರಿಣಾಮ, ಈ ಮುಂಚೆ ಗಿಜಿಗುಡುತ್ತ ಸ್ವಚ್ಚಂದವಾಗಿ ಹಾರಾಡುತ್ತಿದ್ದ ಪಕ್ಷಿಗಳು ಇದೀಗ ಕಾಣೆಯಾದಂತೆ ಭಾಸವಾಗುತ್ತಿದೆ. ಅವು ಹನಿ ನೀರಿಗಾಗಿ ಹುಡುಕಾಟ ನಡೆಸುವಂತಾಗಿದೆ. ಹೀಗೆ ನೀರಿಗಾಗಿ ಅರಸಿ ಬರುವ ಪಕ್ಷಿಗಳಿಗಾಗಿ ಧಯೆಯಿರಿಸಿ ತಾರಸಿ ಮನೆಯ ಮೇಲೆ ಪಕ್ಷಿಗಳಿಗಾಗಿ ಕುಡಿಯಲು ನೀರು ಸಂಗ್ರಹಿಸಿಡಬೇಕಿದೆ. ಇನ್ನು, ಜಾನುವಾರುಗಳ ಪರಿಸ್ಥಿತಿ ಇದಕ್ಕೆ ಹೊರತಲ್ಲ.

Share this article