ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರದಿಂದ ಜನರ ಬದುಕಿಗೆ ಕೊಳ್ಳಿ: ಎಚ್ .ಟಿ.ಮಂಜು

KannadaprabhaNewsNetwork | Published : Apr 13, 2024 1:04 AM

ಸಾರಾಂಶ

ದೇವೇಗೌಡರು ಜಿಲ್ಲೆಯ ಹಳ್ಳಿ ಹಳ್ಳಿಯಲ್ಲಿಯೂ ರಸ್ತೆ, ಸೇತುವೆಗಳನ್ನು ನಿರ್ಮಿಸಿ ಜಿಲ್ಲೆಯಲ್ಲಿ ಸಂಪರ್ಕ ಕ್ರಾಂತಿ ಮಾಡಿದರು. ಮಂಡ್ಯಕ್ಕೆ ಮೆಡಿಕಲ್ ಕಾಲೇಜು ಕೊಟ್ಟವರು ಕುಮಾರಣ್ಣ, ಕೆ.ಆರ್.ಪೇಟೆಗೆ ನೀರಾವರಿ ಯೋಜನೆಗಳು, ವಿದ್ಯುತ್ ಸಂಬಂಧಿಸಿದ ಅಭಿವೃದ್ಧಿ ಕೆಲಸಗಳು, ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ನುಡಿದಂತೆ ನಡೆದು ರಾಜ್ಯದ ರೈತರ 25 ಸಾವಿರ ಕೋಟಿ ಕೃಷಿ ಸಾಲ ಮನ್ನಾ ಮಾಡಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಬದುಕಿಗೆ ಕೊಳ್ಳಿಯಿಡುತ್ತಿದೆ ಎಂದು ಶಾಸಕ ಎಚ್.ಟಿ.ಮಂಜು ವಾಗ್ದಾಳಿ ನಡೆಸಿದರು.

ತಾಲೂಕಿನ ಶೀಳನೆರೆ ಮತ್ತು ಬೂಕನಕೆರೆ ಹೋಬಳಿಯ ವ್ಯಾಪ್ತಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಮತಯಾಚನೆ ನಡೆಸಿ ಮಾತನಾಡಿ, ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಗೆಲುವು ನಿಶ್ಚಿತ. ಸೋಲಿನ ಭೀತಿಯಿಂದ ಕಾಂಗ್ರೆಸ್ಸಿಗರು ಎಚ್ ಡಿಕೆ ಬಗ್ಗೆ ಲಘು ಮಾತುಗಳನ್ನಾಡಲು ಆರಂಭಿಸಿದ್ದಾರೆ. ಜಿಲ್ಲೆಗೆ ಕುಮಾರಣ್ಣನ ಕೊಡುಗೆ ಏನು ಎಂದು ಪ್ರಶ್ನಿಸುವ ಕಾಂಗ್ರೆಸ್ಸಿಗರೇ ನಿಮ್ಮ ಅಭ್ಯರ್ಥಿ ಸ್ಟಾರ್ ಚಂದ್ರು ಕೊಡುಗೆ ಏನು ಎಂಬುದನ್ನು ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.

ಬರಡಾಗಿದ್ದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ, ಮಂಡ್ಯ ತಾಲೂಕಿನ ದುದ್ದ ಮತ್ತು ಬಸರಾಳು ಹೋಬಳಿಗಳಿಗೆ ಹೇಮಾವತಿ ನೀರು ಹರಿಸಿದವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು. ಇಳಿವಯಸ್ಸಿನಲ್ಲಿಯೂ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಧ್ವನಿಯೆತ್ತುತ್ತಿದ್ದಾರೆ ಎಂದು ಹೇಳಿದರು.

ದೇವೇಗೌಡರು ಜಿಲ್ಲೆಯ ಹಳ್ಳಿ ಹಳ್ಳಿಯಲ್ಲಿಯೂ ರಸ್ತೆ, ಸೇತುವೆಗಳನ್ನು ನಿರ್ಮಿಸಿ ಜಿಲ್ಲೆಯಲ್ಲಿ ಸಂಪರ್ಕ ಕ್ರಾಂತಿ ಮಾಡಿದರು. ಮಂಡ್ಯಕ್ಕೆ ಮೆಡಿಕಲ್ ಕಾಲೇಜು ಕೊಟ್ಟವರು ಕುಮಾರಣ್ಣ, ಕೆ.ಆರ್.ಪೇಟೆಗೆ ನೀರಾವರಿ ಯೋಜನೆಗಳು, ವಿದ್ಯುತ್ ಸಂಬಂಧಿಸಿದ ಅಭಿವೃದ್ಧಿ ಕೆಲಸಗಳು, ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ನುಡಿದಂತೆ ನಡೆದು ರಾಜ್ಯದ ರೈತರ 25 ಸಾವಿರ ಕೋಟಿ ಕೃಷಿ ಸಾಲ ಮನ್ನಾ ಮಾಡಿದರು ಎಂದರು.

ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಪ್ರಾಣಿ - ಪಕ್ಷಗಳಿಗೂ ಕುಡಿಯಲು ನೀರಿಲ್ಲ . ರಾಜ್ಯ ಸರ್ಕಾರ ಹೇಮಾವತಿ ಜಲಾಶಯದಿಂದ ಒಂದಷ್ಟು ನೀರು ಹರಿಸಿ ರೈತರ ಹಿತಾಸಕ್ತಿ ಕಾಪಾಡಲು ವಿಫಲವಾಗಿದೆ. ನೆರೆಯ ತುಮಕೂರು ಜಿಲ್ಲೆಗೆ ಹೇಮೆ ನೀರು ಹರಿಸಿ ಮಂಡ್ಯ ಜಿಲ್ಲೆಯ ರೈತರ ಬಗ್ಗೆ ತಾರತಮ್ಯ ಮಾಡಿದೆ ಎಂದು ದೂರಿದರು.

ಕುಮಾರಣ್ಣನ ಬಗ್ಗೆ ಟೀಕಿಸುವ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಸರ್ಕಾರ ಜಿಲ್ಲೆಯ ರೈತರಿಗೆ ಮೋಸ ಮಾಡುತ್ತಿದ್ದರೂ ಅದನ್ನು ಪ್ರಶ್ನಿಸುವ ಎದೆಗಾರಿಕೆ ಇಲ್ಲ. ಹಲವೆಡೆ ಕಾಂಗ್ರೆಸ್ ಪಕ್ಷದ ಶಾಸಕರಿದ್ದರೂ ಅವರಿಗೆ ಸಿದ್ದರಾಮಯ್ಯರ ತಾರತಮ್ಯ ನೀತಿ ಪ್ರಶ್ನಿಸುವ ತಾಕತ್ತಿಲ್ಲ ಎಂದು ಟೀಕಿಸಿದರು.

ಹಿಂದೂಗಳ ವಿರುದ್ಧ ಮುಸ್ಲಿಂ ಸಮುದಾಯವನ್ನು ಎತ್ತಿಕಟ್ಟುತ್ತಿರುವ ಕಾಂಗ್ರೆಸ್ ನಿಜವಾದ ಕೋಮುವಾದಿ ಪಕ್ಷ. ಎಸ್ ಡಿಪಿಐ ನಂತಹ ದೇಶ ವಿರೋಧಿ ಸಂಘಟನೆಗಳ ಬೆಂಬಲ ಪಡೆದು ಮತ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್, ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸಿ ದೇಶವನ್ನು ದುರ್ಬಲಗೊಳಿಸುತ್ತಿದೆ. ಭಾರತೀಯ ಸಮಾಜದ ಏಕತೆಗಾಗಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಶ್ರಮಿಸುತ್ತಿದೆ ಎಂದು ತಿಳಿಸಿದರು.

ತಾಲೂಕಿನ ಶೀಳನೆರೆ ಸೇರಿ ಹೋಬಳಿಯ ಅಗ್ರಹಾರಬಾಚಹಳ್ಳಿ, ಸಿಂಧುಘಟ್ಟ, ಹರಳಹಳ್ಳಿ, ಮುರುಕನಹಳ್ಳಿ, ತೆಂಡೇಕೆರೆ, ಐಚನಹಳ್ಳಿ, ಬಲ್ಲೇನಹಳ್ಳಿ, ಗಂಜೀಗೆರೆ, ವಿಠಲಾಪುರ, ಬಳ್ಳೇಕೆರೆ, ಮತ್ತು ಬೂಕನಕೆರೆಗಳಲ್ಲಿ ಪ್ರಚಾರ ನಡೆಸಿದರು.

ಈ ವೇಳೆ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಶೀಳನೆರೆ ಮೋಹನ್, ಮನ್ಮುಲ್ ನಿರ್ದೇಶಕ ಡಾಲು ರವಿ, ಗ್ರಾಪಂ ಅಧ್ಯಕ್ಷೆ ಗಾಯಿತ್ರಿ, ಬಿಜೆಪಿ ಉಸ್ತುವಾರಿ ಸಿದ್ದರಾಜು, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗರಾಜು, ಟಿಎಪಿಸಿಎಂಎಸ್ ನಿರ್ದೇಶಕ ಟಿ.ಬಲದೇವ್, ಮುಖಂಡರಾದ ಸ್ವಾಮೀಗೌಡ, ಟಿ.ಲೋಕೇಶ್, ಅಗ್ರಹಾರಬಾಚಹಳ್ಳಿ ನಾಗೇಶ್, ಭೈರಾಪುರ ಹರೀಶ್, ಶೀಳನೆರೆ ಭರತ್ , ಸಿದ್ದೇಶ್, ಮರಡಹಳ್ಳಿ ಪ್ರದೀಪ್, ರಾಜಘಟ್ಟ ರೇವಣ್ಣ, ಜಯದೇವ, ಚಟ್ಟೇನಹಳ್ಳಿ ನಾಗರಜು, ಬ್ಯಾಲದಕೆರೆ ನಂಜಪ್ಪ, ನವೀನ್, ತಾಲೂಕು ವೀರಶೈವ ಸಮಾಜದ ಮುಖಂಡ ತೋಂಟಪ್ಪ ಶೆಟ್ಟಿ ಸೇರಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಇದ್ದರು.

Share this article