ಈ ಬಾರಿಯ ಬಜೆಟ್‌ನಲ್ಲಿ ಟೈಲರ್ಸ್‌ ಕಲ್ಯಾಣ ಮಂಡಳಿ ಘೋಷಿಸಿ; ಮುಖ್ಯಮಂತ್ರಿಗೆ ಆಗ್ರಹ

KannadaprabhaNewsNetwork | Published : Jan 30, 2024 2:01 AM

ಸಾರಾಂಶ

ಟೈಲರ್ ವೃತ್ತಿ ಮಾಡುವವರಲ್ಲಿ ಹೈಸ್ಕೂಲ್‌, ಪದವಿ ಶಿಕ್ಷಣ ಪಡೆದವರೂ ಇದ್ದು, ಸರ್ಕಾರಿ ಕೆಲಸಕ್ಕೆ ನೆಚ್ಚಿ ಕೂಡದೇ ಸ್ವಯಂ ಉದ್ಯೋಗ ಕಂಡುಕೊಂಡಿದ್ದಾೆ. ಕೆಲವರು ಸಣ್ಣಪುಟ್ಟ ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುತ್ತಿದ್ದರೂ, ಅಲ್ಲಿನ ಕೆಲಸಗಾರರು 20 ಸಂಖ್ಯೆ ಒಳಗಿರುವುದರಿಂದ ಅಲ್ಲಿ ಅಂತಹವರಿಗೆ ಕಾರ್ಮಿಕ ಕಾಯ್ದೆ ಅನ್ವಯಿಸುತ್ತಿಲ್ಲ. ಇದರಿಂದಾಗಿ ಸರ್ಕಾರಿ ಸೌಲಭ್ಯ ವಂಚಿತರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿಯಲ್ಲಿ ಟೈಲರ್ಸ್‌ ಕಲ್ಯಾಣ ಮಂಡಳಿಯನ್ನು 2024ರ ಬಜೆಟ್‌ನಲ್ಲಿ ಘೋಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಒತ್ತಾಯಿಸಿ ರಾಜ್ಯ ಟೈಲರ್ಸ್‌ ಮತ್ತು ಸಹಾಯಕರ ಫೆಡರೇಷನ್ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.

ನಗರದ ಶ್ರೀ ಜಯದೇವ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ತಮ್ಮ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಘೋಷಣೆ ಕೂಗುತ್ತಾ ಸಾಗಿದ ಪ್ರತಿಭಟನಾಕಾರರು ನಂತರ ಉಪ ವಿಭಾಗಾಧಿಕಾರಿ ಕಚೇರಿ ಮುಖಾಂತರ ಮುಖ್ಯಮಂತ್ರಿ, ಕಾರ್ಮಿಕರ ಸಚಿವ, ಜವಳಿ ಖಾತೆ ಸಚಿವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ರಾಜ್ಯಾದ್ಯಂತ ಟೈಲರಿಂಗ ವೃತ್ತಿ ಮಾಡುವ ಜನರು ಅಸಂಘಟಿತ ವಲಯದಲ್ಲಿದ್ದಾರೆ. ಯಾವುದೇ ಸೌಲಭ್ಯವಿಲ್ಲದೇ ಬಳಲುತ್ತಿದ್ದಾರೆ. ಟೈಲರ್ ವೃತ್ತಿಯಲ್ಲಿ ತೊಡಗಿರುವವರೂ ಹೆಚ್ಚಾಗಿ ಮಹಿಳೆಯರಾಗಿದ್ದಾರೆ. ಮನೆ, ಅಂಗಡಿಗಳಲ್ಲಿ ಬಟ್ಟೆ ಹೊಲಿಯುವ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆ ಅನ್ವಯಿಸದಿರುವ ಸಣ್ಣ ಸಣ್ಣ ಗಾರ್ಮೆಂಟ್ಸ್‌ ಘಟಕಗಳಲ್ಲಿರುವ ಟೈಲರ್‌ಗಳು ಸೇರಿ ರಾಜ್ಯದಲ್ಲಿ ಸುಮಾರು 20 ಲಕ್ಷದಷ್ಟಿದ್ದಾರೆ ಎಂದರು.

ಟೈಲರ್ ವೃತ್ತಿ ಮಾಡುವವರಲ್ಲಿ ಹೈಸ್ಕೂಲ್‌, ಪದವಿ ಶಿಕ್ಷಣ ಪಡೆದವರೂ ಇದ್ದು, ಸರ್ಕಾರಿ ಕೆಲಸಕ್ಕೆ ನೆಚ್ಚಿ ಕೂಡದೇ ಸ್ವಯಂ ಉದ್ಯೋಗ ಕಂಡುಕೊಂಡಿದ್ದಾೆ. ಕೆಲವರು ಸಣ್ಣಪುಟ್ಟ ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುತ್ತಿದ್ದರೂ, ಅಲ್ಲಿನ ಕೆಲಸಗಾರರು 20 ಸಂಖ್ಯೆ ಒಳಗಿರುವುದರಿಂದ ಅಲ್ಲಿ ಅಂತಹವರಿಗೆ ಕಾರ್ಮಿಕ ಕಾಯ್ದೆ ಅನ್ವಯಿಸುತ್ತಿಲ್ಲ. ಇದರಿಂದಾಗಿ ಸರ್ಕಾರಿ ಸೌಲಭ್ಯ ವಂಚಿತರಾಗಿದ್ದಾರೆ. ಟೈಲರ್ ವೃತ್ತಿ ಮಾಡುವವರಲ್ಲಿ ಬಹುತೇಕ ಮಹಿಳೆಯರು ಈ ವೃತ್ತಿಯಲ್ಲಿ ತೊಡಗಿದ್ದು, ಪುರುಷ-ಮಹಿಳೆಯರು ಟೈಲರಿಂಗ್ ವೃತ್ತಿಯಲ್ಲಿ ನೈಪುಣ್ಯತೆ ಕಂಡು ಬದುಕು ಸಾಗಿಸುತ್ತಿದ್ದಾರೆ ಎಂದು ತಿಳಿಸಿದರು.

ಸಾಮಾಜಿಕ ನ್ಯಾಯ ವಂಚಿತ ಟೈಲರಿಂಗ್ ವೃತ್ತಿ ಬಾಂಧವರಿಗೆ ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ. 2007ರಲ್ಲಿ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಸ್ಥಾಪಿಸಿ, ಸ್ಪಂದಿಸುತ್ತಿದೆ. ಈಗಾಗಲೇ ನೆರೆಯ ಕೇರಳ, ತಮಿಳುನಾಡು ಇತರೆ ರಾಜ್ಯಗಳಲ್ಲಿ ಟೈಲರ್‌ಗಳ ಕಲ್ಯಾಣ ಮಂಡಳಿ ಜಾರಿಯಲ್ಲಿವೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಮಂಡಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಆರೋಗ್ಯ ಸುಧಾರಣೆಗೆ ಧನಸಹಾಯ, ಟೈಲರ್ ಮತ್ತು ಮಕ್ಕಳ ಮದುವೆಗೆ ಧನ ಸಹಾಯ, ಮಕ್ಕಳಿಗೆ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ, ಅಪಘಾತ ಪರಿಹಾರ, ಪಿಂಚಣಿ, ಮಹಿಳಾ ಟೈಲರ್‌ಗಳಿಗೆ ಎರಡು ಮಕ್ಕಳಿಗೆ ಹೆರಿಗೆ ಭತ್ಯೆ ಧನಸಹಾಯ, ಸಹಜ ಸಾವು, ಅಪಘಾತ ಸಾವಿಗೆ ಪರಿಹಾರ ಇತರೆ ಸೌಲಭ್ಯ ನೀಡಬೇಕು. ಟೈಲರ್ಸ್ ಮಂಡಳಿಗೆ ಹಣಕಾಸು ನೆರವು ಒದಗಿಸುವುದು ಸರ್ಕಾರಕ್ಕೆ ಕಷ್ಟವಾಗದು. ಟೆಕ್ಸ್‌ಟೈಲ್ಸ್‌, ಮಿಲ್ಸ್‌, ಗಾರ್ಮೆಂಟ್ಸ್, ಬಟ್ಟೆ ಅಂಗಡಿ, ಬಟ್ಟೆ ಹೊಲಿಗೆಯ ಯಂತ್ರ ಮತ್ತಿತರೆ ಪೂರಕ ಉತ್ಪನ್ನ ಸರಕುದಾರರು, ಉತ್ಪಾದಕರಿಂದ ಶೇ.2 ಸೆಸ್ ಸಂಗ್ರಹಿಸಿ ಬಂದ ಹಣ ಟೈಲರ್‌ ಕಲ್ಯಾಣ ಮಂಡಳಿ ಮೂಲಕ ಟೈಲರ್‌ಗಳಿಗೆ ನೆರವಾಗಬೇಕು ಎಂದು ಆವರಗೆರೆ ಚಂದ್ರು ಒತ್ತಾಯಿಸಿದರು.

ಸಂಘಟನೆ ಮುಖಂಡರಾದ ಸರೋಜ, ಸ್ಮಿತಾ, ಯಶೋಧಾ, ಎಂ.ಬಿ.ಶಾರದಮ್ಮ, ಗದಿಗೇಶ ಪಿ.ಪಾಳೇದ, ಎಸ್.ಎಸ್‌.ನಾಗೇಂದ್ರಪ್ಪ, ಎ.ಎನ್.ಅಶೋಕ, ಕೆಂಪಮ್ಮ, ಎಸ್.ವಿಜಯ, ರಾಮು, ಶೈಲಜಾ, ಬೊಮ್ಮಕ್ಕ ಇತರರಿದ್ದರು.

Share this article