ಎಂ.ಅಫ್ರೋಜ್ ಖಾನ್
ರಾಮನಗರ : ತೀವ್ರ ಕುತೂಹಲ ಮೂಡಿಸಿರುವ ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ ರಾಜ್ಯದ ಗಮನ ಸೆಳೆದಿದೆ. ಅಷ್ಟಕ್ಕೂ ಈ ಕ್ಷೇತ್ರದ ರಾಜಕೀಯ ಇತಿಹಾಸ ಅವಲೋಕಿಸಿದರೆ ಇಲ್ಲಿ ರಾಜಕೀಯ ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯ ಎನ್ನುವ ಅಚ್ಚರಿಯ ಫಲಿತಾಂಶಗಳು ಹೊರ ಬಿದ್ದಿವೆ.
ಬೊಂಬೆನಾಡು ಎಂದೇ ಪ್ರಸಿದ್ಧಿಯಾಗಿರುವ ಚನ್ನಪಟ್ಟಣ ಕ್ಷೇತ್ರದ ಜನರು ರಾಜಕೀಯವಾಗಿಯೂ ಪ್ರಬುದ್ಧರು. ಪಕ್ಷ, ಜಾತಿಗಿಂತ ಮುಖ್ಯವಾಗಿ ಕ್ಷೇತ್ರದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅನುಭವಿ ರಾಜಕಾರಣಿ ಹಾಗೂ ಉತ್ತಮ ಕೆಲಸಗಾರನಿಗೆ ಮತದಾರರು ಆಶೀರ್ವಾದ ಮಾಡುತ್ತಾ ಬಂದಿದ್ದಾರೆ. ಹೀಗಾಗಿ ಇಲ್ಲಿ ರಾಜಕೀಯ ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯ ಎನ್ನುವಂತಾಗಿದೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಿರುವ ಸಿ.ಪಿ.ಯೋಗೇಶ್ವರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಎನ್ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ರಣ ರೋಚಕ ಏರ್ಪಟ್ಟಿದೆ. ಜೋಡೆತ್ತುಗಳಾಗಿರುವ ಡಿ.ಕೆ.ಶಿವಕುಮಾರ್ - ಸಿ.ಪಿ.ಯೋಗೇಶ್ವರ್ ಹಾಗೂ ಎಚ್‌ಡಿಕೆ ಮಧ್ಯೆ ವೈಯ್ಯಕ್ತಿಕ ಮಾತ್ರವಲ್ಲದೆ ರಾಜಕೀಯ ಪ್ರತಿಷ್ಠೆಯ ಕಣವಾಗಿಯೂ ಮಾರ್ಪಟ್ಟಿರುವುದರಿಂದ ಚನ್ನಪಟ್ಟಣ ಕ್ಷೇತ್ರದ ಮೇಲೆ ರಾಜ್ಯದ ಜನರ ಚಿತ್ತ ನೆಟ್ಟಿದೆ.
ಈ ಕ್ಷೇತ್ರದಲ್ಲಿ ರಾಜಕೀಯ ನಾಯಕರ ವ್ಯಕ್ತಿಗತ ಪ್ರಾಬಲ್ಯ ಉಪಚುನಾವಣೆಯಲ್ಲಿ ಸಾಕಷ್ಟು ಕೆಲಸ ಮಾಡಲಿದೆ. ಒಕ್ಕಲಿಗ ಸಮುದಾಯದಲ್ಲಿ ಪ್ರಬಲ ನಾಯಕರಾಗಿ ಬೆಳೆದಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಶಿವಕುಮಾರ್ ಹಾಗೂ ಮಾಜಿ ಸಚಿವ ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರದಲ್ಲಿಯೂ ತಮ್ಮದೇ ಆದ ಪ್ರಾಬಲ್ಯ ಹೊಂದಿದ್ದಾರೆ. ಅದು ಉಪಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಎಂಬುದೇ ಕುತೂಹಲ.
ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಅಷ್ಟಕಷ್ಟೆಯಾದರೆ, ಕಾಂಗ್ರೆಸ್ ಬಲ ಸುಧಾರಣೆ ಕಾಣುತ್ತಿದೆ. ಜೆಡಿಎಸ್ ಪ್ರಬಲವಾಗಿದ್ದರು, ಸಿ.ಪಿ.ಯೋಗೇಶ್ವರ್ ವೈಯಕ್ತಿಕ ವರ್ಚಿಸ್ಸಿನೊಂದಿಗೆ ತಮ್ಮದೇ ಆದ ಪ್ರಾಬಲ್ಯ ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ಬೊಂಬೆ ನಗರಿ ಜೆಡಿಎಸ್ ಮತ್ತು ಸಿ.ಪಿ.ಯೋಗೇಶ್ವರ್ ನಡುವಣ ಜಿದ್ದಾಜಿದ್ದಿನ ರಣಕಣವಾಗಿ ರೂಪುಗೊಂಡಿದೆ. ಕುಮಾರಸ್ವಾಮಿ ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳುವ ಕಸರತ್ತಿನಲ್ಲಿದ್ದರೆ, ಡಿಕೆ ಬ್ರದರ್ಸ್ ಮತ್ತು ಸಿಪಿವೈ ಕಸಿದುಕೊಳ್ಳುವ ತವಕದಲ್ಲಿದ್ದಾರೆ.
ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣದಿಂದ ಐದು ಬಾರಿ ಶಾಸಕರಾಗಿ ಚುನಾಯಿತರಾಗಿದ್ದಾರೆ. ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್ ತಮ್ಮದೇ ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ತಮ್ಮದೇ ಮತ ಬ್ಯಾಂಕ್ ಹೊಂದಿರುವ ಅವರು ಚನ್ನಪಟ್ಟಣ ಕ್ಷೇತ್ರದಲ್ಲಿ ಯಾವತ್ತೂ ಬಲಾಢ್ಯರಾಗಿದ್ದಾರೆ. ಚನ್ನಪಟ್ಟಣ ಕ್ಷೇತ್ರ ಸದ್ಯ ಜೆಡಿಎಸ್‌ನ ಭದ್ರಕೋಟೆ. ಕುಮಾರಸ್ವಾಮಿ ಚನ್ನಪಟ್ಟಣ ಎಂಟ್ರಿ ಬಳಿಕ ಯೋಗೇಶ್ವರ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಆಪರೇಷನ್ ಹಸ್ತಕ್ಕೆ ಕೈ ಹಾಕಿದ ಮೇಲೆ ಈಗ ಪಕ್ಷ ಬಲಗೊಳ್ಳುತ್ತಿದೆ. ಈ ಮೊದಲು ಸಿ.ಪಿ.ಯೋಗೇಶ್ವರ್ ಇದ್ದಾಗ ಕ್ಷೇತ್ರವನ್ನು ತನ್ನ ಕೈವಶದಲ್ಲಿರಿಸಿಕೊಂಡಿತ್ತು. ಇನ್ನು ಬಿಜೆಪಿಯ ಬಲವೂ ಅಷ್ಟಕಷ್ಟೇ ಆಗಿದೆ. ಸಿ.ಪಿ.ಯೋಗೇಶ್ವರ್ ಬಿಜೆಪಿ ಸೇರ್ಪಡೆಯಾದ ಬಳಿಕ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ತೋರಿದೆ. ಅಂದರೆ ಸಿ.ಪಿ.ಯೋಗೇಶ್ವರ್ ವರ್ಚಸ್ಸು ಬಿಜೆಪಿಗೆ ಮತ ನೀಡುತ್ತಿತ್ತು. ಸಿ.ಪಿ.ಯೋಗೇಶ್ವರ್ ರಹಿತ ಕ್ಷೇತ್ರದಲ್ಲಿ ಬಿಜೆಪಿ ಮತಗಳಿಕೆ ಅತ್ಯಲ್ಪವಾಗಿದೆ.
ಕಳೆದ ಎರಡು ದಶಕಗಳಿಂದ ಚನ್ನಪಟ್ಟಣ ಕ್ಷೇತ್ರ ಚುನಾವಣೆಗಳಲ್ಲಿ ಪಕ್ಷವಾರು ಮತಗಳ ಗಳಿಕೆ ಪ್ರಮಾಣ ಹಾಗೂ ಫಲಿತಾಂಶ ಗಮನಿಸಿದರೆ ಯಾವ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಯ ಪ್ರಾಬಲ್ಯ ಎಷ್ಟಿದೆ ಎಂಬುದನ್ನು ಸಾಬೀತು ಪಡಿಸುತ್ತದೆ.
ಸಿ.ಪಿ.ಯೋಗೇಶ್ವರ್ ಪ್ರಾಬಲ್ಯ ಹೇಗಿದೆ:
1999ರಲ್ಲಿ ಮೊದಲ ಬಾರಿಗೆ ಸಿ.ಪಿ.ಯೋಗೇಶ್ವರ್ ಪಕ್ಷೇತರರಾಗಿ ಗೆದ್ದು, ರಾಜಕೀಯ ಪ್ರವೇಶಿಸಿದ್ದರು. 50,716 ಮತಗಳಿಸಿ 18,828 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಅವರು ಶೇ 46.01ರಷ್ಟು ಮತ ಪಡೆದುಕೊಂಡಿದ್ದರು. 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದ ಯೋಗೇಶ್ವರ್ 64,162 ಮತಗಳಿಸಿ 16,169 ಅಂತರದಲ್ಲಿ ಮತ್ತೆ ಗೆಲುವು ಸಾಧಿಸಿದರು. ಆಗ ಕ್ಷೇತ್ರದಲ್ಲಿ ಸುಮಾರು ಶೇ 53.25ರಷ್ಟು ಮತ ಪಡೆದಿದ್ದರು.
2008ರ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ 69,356 ಮತಗಳಿಸಿ ಹ್ಯಾಟ್ರಿಕ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಸುಮಾರು ಶೇ 48.31ರಷ್ಟು ಮತಪ್ರಮಾಣ ಪಡೆದಿದ್ದರು. 2009ರಲ್ಲಿ ಆಪರೇಷನ್ ಕಮಲದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಯೋಗೇಶ್ವರ್, ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎದುರು 2,282 ಮತಗಳ ಅಂತರದಿಂದ ಸೋತರು. 2011ರಲ್ಲಿ ಆಪರೇಷನ್ ಕಮಲದಿಂದ ಜೆಡಿಎಸ್ ಶಾಸಕ ರಾಜೀನಾಮೆ ನೀಡಿದ ಬಳಿಕ 2011ರಲ್ಲಿ ಮತ್ತೆ ಉಪ ಚುನಾವಣೆ ನಡೆಯುತ್ತದೆ. ಆಗ ಸಿ.ಪಿ.ಯೋಗೇಶ್ವರ್ ಬಿಜೆಪಿ ಅಭ್ಯರ್ಥಿಯಾಗಿ 75,275 ಮತಗಳಿಂದ ಗೆಲುವು ಸಾಧಿಸಿದರು. 2013ರ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸಿ 80,099 ಮತಗಳಿಸಿ ಜೆಡಿಎಸ್ ನ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದರು. ಆಗ ಅವರು ಕ್ಷೇತ್ರದಲ್ಲಿ ಶೇ 47.53ರಷ್ಟು ಮತ ಗಳಿಸಿದ್ದರು.ಆದರೆ, 2018ರಲ್ಲಿ ಸಿ.ಪಿ.ಯೋಗೇಶ್ವರ್ ಬಿಜೆಪಿಗೆ ಮರು ಸೇರ್ಪಡೆಯಾಗಿ ಎದುರಿಸಿದ 2018ರ ಚುನಾವಣೆಯಲ್ಲಿ 21,530 ಮತ ಹಾಗೂ 2023ರಲ್ಲಿ 15,915 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು.
ಕ್ಷೇತ್ರದಲ್ಲಿ ದಳಪತಿಗಳ ಪಾರುಪತ್ಯ:
2018ರ ಚುನಾವಣೆಯಲ್ಲಿ ಕುಮಾರಸ್ವಾಮಿ (87,995 ಮತ) ಶೇ 46.83ರಷ್ಟು ಮತ ಪಾಲು ಪಡೆದು ಸಿ.ಪಿ.ಯೋಗೇಶ್ವರ್ ರನ್ನು ಪರಭಾವಗೊಳಿಸಿದ್ದರು. 2023ರಲ್ಲೂ ಸಿ.ಪಿ.ಯೋಗೇಶ್ವರ್ ವಿರುದ್ಧ 96,592 ಮತಗಳಿಸಿ ಗೆಲುವು ಸಾಧಿಸಿದ ಕುಮಾರಸ್ವಾಮಿ, ಒಟ್ಟು ಶೇ.49.11ರಷ್ಟು ಮತ ಪಡೆದಿದ್ದರು. 1999ರಲ್ಲಿ ಜೆಡಿಎಸ್ 16,269 ಮತಗಳಿಸಿ 3ನೇ ಸ್ಥಾನ ಗಳಿಸಿದಾಗ ಒಟ್ಟು ಶೇ 14.76ರಷ್ಟು ಮತ ಪ್ರಮಾಣ ಹೊಂದಿತ್ತು. 2004ರ ಚುನಾವಣೆಯಲ್ಲಿ ಜೆಡಿಎಸ್ ಕ್ಷೇತ್ರದಲ್ಲಿ ತನ್ನ ಬಲವನ್ನು ವೃದ್ಧಿಸಿಕೊಂಡಿತು. ಜೆಡಿಎಸ್ ಎಂ.ಸಿ.ಅಶ್ವಥ್ 47,993 ಮತಗಳಿಸಿ, 2ನೇ ಅತಿ ಹೆಚ್ಚು ಮತ ಗಳಿಸಿದ ಅಭ್ಯರ್ಥಿಯಾಗಿ ಹೊರಹೊಮ್ಮಿದರು. 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಿ.ಪಿ.ಯೋಗೇಶ್ವರ್‌ಗೆ ಪ್ರಬಲ ಪೈಪೋಟಿ ನೀಡಿದ ಜೆಡಿಎಸ್‌ನ ಎಂ.ಸಿ.ಅಶ್ವತ್ಥ್ (64,426 ಮತ) ಶೇ.44.88ರ ಮತ ಪ್ರಮಾಣ ಪಡೆದುಕೊಂಡಿದ್ದರು. 2009ರ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಮೊದಲ ಗೆಲುವು ಸಾಧಿಸಿತ್ತು. ಸಿ.ಪಿ.ಯೋಗೇಶ್ವರ್ ಅವರನ್ನು 2,282 ಅಂತರದಲ್ಲಿ ಸೋಲಿಸಿದ್ದ ಅಶ್ವತ್ಥ್ ರವರು, 2011ರಲ್ಲಿ ಆಪರೇಷನ್ ಕಮಲಕ್ಕೊಳಗಾದರು. ಉಪಚುನಾವಣೆಯಲ್ಲಿ ಜೆಡಿಎಸ್ ಎಸ್.ಐ ನಾಗರಾಜು (57,472 ಮತ) ಶೇ.38.63ರಷ್ಟು ಮತ ಪ್ರಮಾಣ ಪಡೆಯಿತು.
2013ರಲ್ಲಿ 73,635 ಮತಗಳಿಸಿ ಸೋತ ಅನಿತಾ ಕುಮಾರಸ್ವಾಮಿ ಶೇ.43.70ರಷ್ಟು ಮತಗಳನ್ನು ಪಡೆಯುವ ಮೂಲಕ ಮತಗಳ ಪ್ರಮಾಣವನ್ನು ಹೆಚ್ಚಿಸಿಕೊಂಡಿತ್ತು. 2018ರ ಬಳಿಕ ಕುಮಾರಸ್ವಾಮಿ ಎಂಟ್ರಿಯೊಂದಿಗೆ ಚನ್ನಪಟ್ಟಣ ಜೆಡಿಎಸ್ ಭದ್ರಕೋಟೆಯಾಗಿ ಉಳಿದಿದೆ.
ಚುನಾವಣೆಯಿಂದ ಚುನಾವಣೆಗೆ ಕೈ ಬಲ ವೃದ್ಧಿ
2004ರ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಅಭ್ಯರ್ಥಿಯಾಗಿ 64,162 ಮತಗಳೊಂದಿಗೆ ಹಾಗೂ 2008ರಲ್ಲಿ 69,356 ಮತ ಪಡೆದು ಗೆಲುವು ಸಾಧಿಸಿದ್ದರು. ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ತೊರೆದ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಕುಸಿಯುತ್ತಾ ಬಂದಿತು. 2011ರ ಉಪ ಚುನಾವಣೆಯ ಬಳಿಕ ನಡೆದ ಎಲ್ಲಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಷೇತ್ರದಲ್ಲಿ 3ನೇ ಸ್ಥಾನಕ್ಕೆ ತೃಪ್ತಿಪಡುತ್ತಿದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 8,134 ಮತಗಳೊಂದಿಗೆ ಶೇ.4.83ರಷ್ಟು ವೋಟ್ಗಳನ್ನಷ್ಟೇ ಪಡೆದುಕೊಂಡಿತ್ತು.2018ರಲ್ಲಿ ಎಚ್.ಎಂ.ರೇವಣ್ಣ ಮತ ಪ್ರಮಾಣ ಶೇ.15.98ರಷ್ಟು ಹೆಚ್ಚಿಸಿದರೆ, 2023ರಲ್ಲಿ ಕಾಂಗ್ರೆಸ್ 15,374 ಮತಗಳಿಸಿ ಶೇ. 7.77ಕ್ಕೆ ಕುಸಿತ ಕಂಡಿತ್ತು. ಆದರೆ, ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ಆಶಾದಾಯಕ ಫಲಿತಾಂಶ ಸಿಗುತ್ತಿದೆ. 2014ರ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರಿಗೆ ಕ್ಷೇತ್ರದಲ್ಲಿ 81,224 ಮತಗಳು ಲಭಿಸಿತ್ತು. 2019ರಲ್ಲಿ 98,350 ಮತ ಹಾಗೂ 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಷೇತ್ರದಲ್ಲಿ 85,357 ಮತ ಗಳಿಸಿತ್ತು.
ಕ್ಷೇತ್ರದಲ್ಲಿ ಕಮರಿದ ಕಮಲ :
1999ರ ಚುನಾವಣೆಯಲ್ಲಿ ಬಿಜೆಪಿ ಕ್ಷೇತ್ರದಲ್ಲಿ 11,350 ಮತಗಳೊಂದಿಗೆ ಒಟ್ಟು ಶೇ 10.30ರಷ್ಟು ಮತ ಪಾಲು ಹೊಂದಿತ್ತು. 2004ರಲ್ಲಿ ಬಿಜೆಪಿ ಕೇವಲ 5,698 ಮತಗಳನ್ನು ಪಡೆದುಕೊಂಡಿತ್ತು. 2008ರ ಚುನಾವಣೆಯಲ್ಲಿ ಬಿಜೆಪಿ ಕೇವಲ 3434 ಮತ ಗಳಿಸಿತ್ತು. ಅಂದರೆ ಕೇವಲ ಶೇ 2.39 ಮತ ಪ್ರಮಾಣ ಹೊಂದಿತ್ತು.2011ರಲ್ಲಿ ನಡೆದ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಬಿಜೆಪಿ ಅಭ್ಯರ್ಥಿಯಾದ ಕಾರಣ ಬಿಜೆಪಿ ಮೊದಲ ಗೆಲುವು ಸಾಧಿಸಿತ್ತು. 2013ರಲ್ಲಿ ಬಿಜೆಪಿ ಕ್ಷೇತ್ರದಲ್ಲಿ ಕೇವಲ 1,609 ಮತಗಳಿಸಿ, 0.95ರಷ್ಟು ಮತ ಪಾಲು ಹೊಂದುವಂತಾಯಿತು. 2018ರ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಬಿಜೆಪಿ ಅಭ್ಯರ್ಥಿಯಾದ ಕಾರಣ ಕ್ಷೇತ್ರದಲ್ಲಿ ಬಿಜೆಪಿ ತನ್ನ ಮತಗಳಿಕೆಯನ್ನು ಹೆಚ್ಚಿಸಿಕೊಂಡಿತ್ತು. 2018ರಲ್ಲಿ 66,465 ( ಶೇ 35.16) ಹಾಗೂ 2023ರಲ್ಲಿ 80,677 (ಶೇ 40.79 ) ಮತಗಳನ್ನು ಬಿಜೆಪಿ ಪಡೆದುಕೊಂಡಿತ್ತು. ಈಗ ಯೋಗೇಶ್ವರ್ ಪಕ್ಷ ತೊರೆದಿರುವುದು ಕ್ಷೇತ್ರದಲ್ಲಿ ಬಿಜೆಪಿ ಸ್ಥಿತಿ ಡೋಲಾಯಮಾನವಾಗಿದೆ.
ಚನ್ನಪಟ್ಟಣಕ್ಕೆ ಎಚ್‌ಡಿಕೆ ಕೊಡುಗೆ ಏನು: ಸುರೇಶ್
ಚನ್ನಪಟ್ಟಣ : ಕ್ಷೇತ್ರಕ್ಕೆ ಕುಮಾರಸ್ವಾಮಿ ಏನೋ ಮಾಡಿಬಿಡುತ್ತಾರೆ ಎಂದು ಜನ ಅವರನ್ನು ಎರಡು ಬಾರಿ ಗೆಲ್ಲಿಸಿದರು. ಆದರೆ ಅವರು ಗೆದ್ದ ನಂತರ ಕ್ಷೇತ್ರಕ್ಕೆ ಎಷ್ಟು ಬಾರಿ ಬಂದಿದ್ದಾರೆ. ಕ್ಷೇತ್ರ ರೈತರ ಸಮಸ್ಯೆಯನ್ನು ಎಷ್ಟು ಬಾರಿ ಕೇಳಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರಶ್ನಿಸಿದರು.
ತಾಲೂಕಿನ ತಿಟ್ಟಮಾರನಹಳ್ಳಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಚನ್ನಪಟ್ಟಣಕ್ಕೆ ನೀಡಿದ ಕೊಡುಗೆ ಏನು? ಸಿಎಂ ಆಗಿ ಚನ್ನಪಟ್ಟಣಕ್ಕೆ ಎಷ್ಟು ಕೋಟಿ ಅನುದಾನ ಕೊಟ್ಟಿದ್ದಾರೆ ಲೆಕ್ಕ ಕೊಡಲಿ ಎಂದು ಆಗ್ರಹಿಸಿದ ಅವರು, ಸತ್ತೇಗಾಲ ಯೋಜನೆ ಬಗ್ಗೆ ಮಾತನಾಡ್ತಾರೆ. ಆದರೆ, ಕುಮಾರಸ್ವಾಮಿಗೆ ಸತ್ತೇಗಾಲ ಎಲ್ಲಿದೆ ಅಂತ ಗೊತ್ತಿಲ್ಲ. ಎದೆಮೇಲೆ ಕೈ ಇಟ್ಕೊಂಡು ಸುಳ್ಳು ಹೇಳ್ತಾರೆ. ನಾವು ಬದುಕಿರೋದೆ ನಿಮಗೊಸ್ಕರ ಅಂತಾರೆ. ನಾವು, ಯೋಗೇಶ್ವರ್ ಬದುಕಿರೋದು ನಿಮಗೊಸ್ಕರವೇ! ನಿಮ್ಮ ಎಲ್ಲಾ ಕಷ್ಟ-ಸುಖಕ್ಕೆ ಯೋಗೇಶ್ವರ್ ಬಂದಿದ್ದಾರೆ. ಕುಮಾರಸ್ವಾಮಿ ಬಂದಿದ್ದಾರಾ? ಅವರ ಕಣ್ಣೀರು ನಿಮಗೆ ಊಟ ಕೊಡಲ್ಲ. ನಿಮ್ಮ ಮಕ್ಕಳಿಗೆ ಉದ್ಯೋಗ ಕೊಡಲ್ಲ ಎಂದರು.
ಅನುಕಂಪ ತರ್ತಿದ್ದಾರೆ: ಇದೀಗ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ ಅನ್ನೋ ಅನುಕಂಪ ತರ್ತಿದ್ದಾರೆ. ಆದರೆ ನೀವು ಅವರನ್ನ ಸೋಲಿಸಿಲ್ಲ. ನೀವು ಸೋಲಿಸಿದ್ದು ಯೋಗೇಶ್ವರ್ ಅವರನ್ನು. ಕ್ಷೇತ್ರವನ್ನ ಹಸಿರು ಮಾಡಿದವರನ್ನ ಸೋಲಿಸಿದ್ದೀರಿ. ಕೆರೆಗಳನ್ನ ತುಂಬಿಸಿದವರನ್ನ ಸೋಲಿಸಿದ್ದೀರಾ ಎಂದು ಬೇಸ ವ್ಯಕ್ತಪಡಿಸಿದರು.
ಮೊಮ್ಮಗನ ಪಟ್ಟಾಭಿಷೇಕಕ್ಕೆ ಬರುತ್ತಿದ್ದಾರೆ: ಈಗ ತಾಲೂಕಿಗೆ ದೇವೇಗೌಡರು ಬರ್ತಿದ್ದಾರಂತೆ. ಅವರು ರೈತರ ಕಷ್ಟ ಕೇಳಲು ಬರ್ತಿಲ್ಲ, ಮೊಮ್ಮಗನ ಪಟ್ಟಾಭಿಷೇಕ ನೋಡೋಕೆ ಬರ್ತಾರಂತೆ. ಚನ್ನಪಟ್ಟಣದ ಭವಿಷ್ಯಕ್ಕಲ್ಲ, ಮೊಮ್ಮಗನ ಭವಿಷ್ಯಕ್ಕಾಗಿ ಬರ್ತಿದ್ದಾರೆ. ದೇವೇಗೌಡರು ಮಾಜಿ ಪ್ರಧಾನಿಗಳು ಎನ್ನಿಸಿಕೊಳ್ಳಲು ಕಾಂಗ್ರೆಸ್ ಕೂಡಾ ಕಾರಣ ಎಂದು ಹೇಳಿದರು.
ನಮ್ಮ ಮೇಲೆ ಏನೋ ಷಡ್ಯಂತ್ರ ಮಾಡ್ತಾರೆ ಅಂತ್ತಾರೆ. ಯಾರು ಷಡ್ಯಂತ್ರ ಮಾಡ್ತಿರುವವರು? ಯೋಗೇಶ್ವರ್‌ಗೆ ಯಾಕೆ ಟಿಕೆಟ್ ಘೋಷಣೆ ಮಾಡದೇ ಚದುರಂಗದಾಟ ಆಡಿದ್ದು ಯಾರು, ಚಕ್ರವ್ಯೂಹ ರಚನೆ ಮಾಡಿ ಆಚೆ ಕಳಿಸಿದ್ದು ಯಾರು? ನಿಮ್ಮ ರಾಜಕೀಯ ನಾಟಕ ಮಾಡಿ ನಿಮ್ಮ ಬೇಳೆ ಬೇಯಿಸಿಕೊಂಡಿದ್ದೀರಿ. ನೀವು ಯೋಗೇಶ್ವರ್‌ರನ್ನ ಆಚೆ ಕಳುಹಿಸಿದ್ದೀರಿ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ಮಗನನ್ನು ನಿಲ್ಲಿಸಿಲು ಡ್ರಾಮಾ: ಯೋಗೇಶ್ವರ್ ಅವತ್ತು ಬೆಳಿಗ್ಗೆ ಬಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಮನೆಯಲ್ಲಿ ಮೀಟ್ ಮಾಡಿದರು. ಪರಿಸ್ಥಿತಿ ಅರ್ಥ ಮಾಡಿಸಿ ಕಾಂಗ್ರೆಸ್ ಸೇರ್ತಿದ್ದೇನೆ ಅಂದರು. ಆದರೆ ಒಂದೂವರೆ ತಿಂಗಳಿನಿಂದಲೇ ಸ್ಕೆಚ್ ಹಾಕಿದ್ರು ಅಂತ ಕುಮಾರಸ್ವಾಮಿ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದರು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜನಪರ ಆಡಳಿತ ಕೊಡ್ತಿದೆ. ನಾವು ಯಾವುದೇ ಬೇದಭಾವ ಇಲ್ಲದೇ ಐದು ಗ್ಯಾರಂಟಿ ಹಂಚಿದ್ದೇವೆ. ಗ್ಯಾರಂಟಿಯಿಂದ ಜನರ ಆರ್ಥಿಕತೆ ಬದಲಾಗಿದೆ. ಕರ್ನಾಟಕ ದೇಶದಲ್ಲಿ ಪ್ರಗತಿ ಸಾಧಿಸುತ್ತಿದೆ. ಇದಕ್ಕೆ ಸರ್ಕಾರದ ಐದು ಗ್ಯಾರಂಟಿ ಕಾರಣ. ನಮ್ಮ ಕಾರ್ಯಕರ್ತರು ಇದರ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಿ ಎಂದರು.
500 ಕೋಟಿ ಅನುದಾನ: ನಮ್ಮ ಸರ್ಕಾರ ಕ್ಷೇತ್ರಕ್ಕೆ ಈಗಾಗಲೇ ೫೦೦ ಕೋಟಿ ಹಣ ಕೊಟ್ಟಿದೆ. ಯಾರೋ ಚರ್ಚೆ ಮಾಡ್ತೀವಿ ಅಂತಿದ್ದಾರೆ. ಚರ್ಚೆ ಮಾಡಲು ನಾನು ಸಿದ್ದವಾಗಿದ್ದೇನೆ ಬನ್ನಿ. ಯೋಗೇಶ್ವರ್ ಹಿಂದೆ ಬಸವರಾಜ ಬೊಮ್ಮಯಿ ಬಳಿ ಹಣ ತಂದು ಅಭಿವೃದ್ಧಿಗೆ ಮುಂದಾಗಿದ್ರು. ಅದಕ್ಕೆ ಜೆಡಿಎಸ್‌ನವರು ಬಿಡಲಿಲ್ಲ ಎಂದು ಆರೋಪಿಸಿದರು.
ಮಾತೃಪಕ್ಷಕ್ಕೆ ಸಿಪಿವೈ: ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿ ಯೋಗೇಶ್ವರ್ ಸ್ಪರ್ಧೆ ಮಾಡಿದ್ದಾರೆ. ಅನಿರೀಕ್ಷಿತ ಬೆಳವಣಿಗೆ ಮಧ್ಯೆ ಯೋಗೇಶ್ವರ್ ಮಾತೃ ಪಕ್ಷಕ್ಕೆ ಸೇರಿದ್ದಾರೆ. ನಿಮ್ಮನ್ನೆಲ್ಲಾ ಕೇಳಿ, ಚರ್ಚೆ ಮಾಡಬೇಕಿತ್ತು ಎಂಬುದು ನನ್ನ ಭಾವನೆ. ಆದರೆ ಸಮಯಾವಕಾಶದ ಕೊರತೆಯಿಂದ ಯೋಗೇಶ್ವರ್ ಕಾಂಗ್ರೆಸ್ ಸೇರಿದರು ಎಂದರು.
ನಾವೆಲ್ಲ ಒಂದೇ ಆಲದ ಮರದ ಕೆಳಗೆ ಬೆಳೆದವರು. ಸಂದರ್ಭದ ಕಾರಣಕ್ಕೆ ಬೇರೆಯಾದವರು, ವೈಯಕ್ತಿಕವಾಗಿ ಬೇರೆಯಾದವರಲ್ಲ. ಬದಲಾದ ಪರಿಸ್ಥಿತಿಯಲ್ಲಿ ಯೋಗೇಶ್ವರ್ ಬೇರೆ ಪಕ್ಷಕ್ಕೆ ಹೋದರು. ಈಗ ಮತ್ತೆ ಯೋಗೇಶ್ವರ್ ಅವರ ಮನೆಗೆ ಅವರು ಬಂದಿದ್ದಾರೆ. ಯಾರೂ ಅನ್ಯತಾ ಭಾವಿಸೋದು ಬೇಡ. ಯೋಗೇಶ್ವರ್ ನಿಮ್ಮವರು ಅನ್ನೋ ಭಾವನೆಯಲ್ಲಿ ಕೆಲಸ ಮಾಡಿ ಎಂದು ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಪಕ್ಷವನ್ನ ಸದೃಢಗೊಳಿಸುವ ಜವಾಬ್ದಾರಿ ಡಿಕೆಶಿ ಮೇಲಿದೆ. ಹಾಗಾಗಿ ಜಿಲ್ಲೆಯಲ್ಲಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಆಗಬೇಕು. ಅದಕ್ಕೆ ಬದ್ಧವಾಗಿ ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದಾರೆ. ಯೋಗೇಶ್ವರ್‌ಗೂ 61 ವರ್ಷ ಆಯ್ತು. ಸಾಕಷ್ಟು ಜನರನ್ನ ಸಿಎಂ ಮಾಡುವಲ್ಲಿ ಅವರ ಪಾತ್ರ ಇತ್ತು. ಆದರೆ ಅವರ ರಾಜಕೀಯ ಅತಂತ್ರ ಸ್ಥಿತಿ ಬಗ್ಗೆ ಸಿಎಂಗೆ ತಿಳಿಸಿ ನಮ್ಮ ಜೊತೆ ಕೈ ಜೋಡಿಸಿದ್ದಾರೆ. ಹಾಗಾಗಿ ಯಾವುದೇ ಭಿನ್ನಾಭಿಪ್ರಾಯ ಇಟ್ಟುಕೊಳ್ಳಬೇಡಿ. ಅವರನ್ನು ಗೆಲ್ಲಿಸಲು ಶ್ರಮಿಸಿ ಎಂದು ಮನವಿ ಸುರೇಶ್ ಮಾಡಿದರು.