ವಿರಾಜಪೇಟೆ: ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಸಮಾರಂಭ

KannadaprabhaNewsNetwork | Published : Apr 14, 2024 1:52 AM

ಸಾರಾಂಶ

ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಶಕ್ತಿ ಶಿಕ್ಷಕರಿಗೆ ಇದೆ. ಶಿಕ್ಷಕರ ವೃತ್ತಿಯಲ್ಲಿ ಸಮಾಜಕ್ಕೆ ನೀಡುವ ಕೊಡುಗೆ ಅಪಾರವಾಗಿದೆ.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಯಾವುದೇ ನಿರೀಕ್ಷೆ ಮತ್ತು ಪ್ರತಿಫಲಾಪೇಕ್ಷೆಗಳಿಲ್ಲದೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾ, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಶಕ್ತಿ ಶಿಕ್ಷಕರಿಗೆ ಇದೆ ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಜ಼ಮೀರ್ ಅಹಮದ್ ಅಭಿಪ್ರಾಯಿಸಿದರು.

ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಿಸುವ ಮೂಲಕ ಡಾ. ಜ಼ಮೀರ್ ಅಹಮದ್ ಅವರು, ಭವಿಷ್ಯದ ಶಿಕ್ಷಕರಾದ ಪ್ರಶಿಕ್ಷಣಾರ್ಥಿಗಳು ತಮ್ಮ ವಿದ್ಯಾರ್ಥಿದೆಸೆಯಲ್ಲಿ ಶಿಸ್ತು, ಸಂಯಮ, ಕೃತಜ್ಞತಾ ಮತ್ತು ಸಮರ್ಪಣಾ ಸೇವಾ ಮನೋಭಾವದ ಗುಣಗಳನ್ನು ಬೆಳೆಸಿಕೊಂಡಲ್ಲಿ ತಮ್ಮ ಭವಿಷ್ಯ ಉಜ್ವಲವಾಗಿರುತ್ತದೆ. ಶಿಕ್ಷಕರ ವೃತ್ತಿಯಲ್ಲಿ ಸಮಾಜಕ್ಕೆ ನೀಡುವ ಕೊಡುಗೆ ಅಪಾರವಾಗಿದೆ. ಶಿಕ್ಷಣದ ಮೂಲಕ ಪರಿಪೂರ್ಣತೆಯನ್ನು ಕಂಡುಕೊಳ್ಳಲು ಸಾಧ್ಯ. ಇದು ಮಾನವೀಯತೆಯ ವಿಕಾಸದ ಜೊತೆಗೆ ಬದುಕನ್ನು ಮುನ್ನಡೆಸುವ ಸಚ್ಛಾರಿತ್ರ್ಯದ ಸಾಮರ್ಥ್ಯವನ್ನು ಬೆಳೆಸುತ್ತದೆ. ತಾನು ಕಲಿಯುವುದರ ಜೊತೆಗೆ ಇತರರಿಗೆ ಕಲಿಸುವ ಒಂದು ವಿಶೇಷ ರೀತಿಯ ಗುಣವನ್ನು ಶಿಕ್ಷಕ ಹೊಂದಿರುತ್ತಾನೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಗತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಎಂ.ಪಿ. ತಿಮ್ಮಯ್ಯ ಅವರು ಮಾತನಾಡುತ್ತಾ, ಪ್ರಶಿಕ್ಷಣಾರ್ಥಿಗಳು ತಮ್ಮ ಆಲೋಚನೆಗಳನ್ನು ವಿಭಿನ್ನವಾಗಿ ಮತ್ತು ವಿಶೇಷವಾಗಿ ಮೈಗೂಡಿಸಿಕೊಳ್ಳಬೇಕು. ಶೈಕ್ಷಣಿಕ ಕೌಶಲ್ಯಾಭಿವೃದ್ಧಿಯನ್ನು ಉತ್ತೇಜಿಸುವ ಮತ್ತು ವರ್ತಮಾನಕ್ಕೆ ಪೂರಕವಾದಂತಹ ಬೋಧನಾ ವಿಧಾನಗಳ ಬದಲಾವಣೆಗಳ ಕಡೆಗೆ ಹೆಚ್ಚು ಒತ್ತು ನೀಡಬೇಕು. ವಿದ್ಯೆಯೊಂದಿಗೆ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ಶಿಕ್ಷಕರಾಗಬೇಕು ಎಂದು ನುಡಿದರು.

ಇದೇ ಸಂದರ್ಭದಲ್ಲಿ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಾಣಿ ಎಂ. ಅವರು 2023-24ನೇ ಶೈಕ್ಷಣಿಕ ಸಾಲಿನ ವರದಿಯನ್ನು ಓದಿದರು.

ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿ.ಜಿ. ಸೂರ್ಯಕುಮಾರಿ, ಕೋಶಾಧಿಕಾರಿ ಕೆ. ವಾಸಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಧ್ಯಾಪಕರ ವೃಂದ, ಆಡಳಿತ ವೃಂದ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.

Share this article