ಹಳೆ ತಾಲೂಕು ಅಂಗನವಾಡಿ ಕೇಂದ್ರದಲ್ಲಿ ಉದ್ಘಾಟನಾ ಕಾರ್ಯಕ್ರಮ

KannadaprabhaNewsNetwork | Published : Feb 9, 2025 1:33 AM

ಸಾರಾಂಶ

ನೂತನವಾಗಿ ಅಳವಡಿಸಲಾದ ಇಂಟರ್ಲಾಕ್‌ ಆವರಣದ ಉದ್ಘಾಟನಾ ಕಾರ್ಯಕ್ರಮ ಸಡಗರದಿಂದ ಜರುಗಿತು. ಪುಟಾಣಿ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಮೀಪದ ಹಳೆ ತಾಲೂಕು ಅಂಗನವಾಡಿ ಕೇಂದ್ರಕ್ಕೆ ದಾನಿಗಳ ಸಹಕಾರದಿಂದ ನೂತನವಾಗಿ ಅಳವಡಿಸಲಾದ ಇಂಟರ್ಲಾಕ್ ಆವರಣದ ಉದ್ಘಾಟನಾ ಕಾರ್ಯಕ್ರಮವು ಸಡಗರ ಸಂಭ್ರಮದಿಂದ ಜರುಗಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳ ದಾನಿಗಳೂ ಆಗಿರುವ ಕುಲ್ಲೇಟಿರ ಅರುಣ್ ಬೇಬಾ ಹಾಗೂ ಸ್ಥಳೀಯ ಪುನರ್ ಚೇತನ ಸಂಸ್ಥೆಯ ಅಧ್ಯಕ್ಷೆ ಬಾಳೆಯಡ ದಿವ್ಯ ಮಂದಪ್ಪ ಅಂಗನವಾಡಿ ಪರಿಸರಕ್ಕೆ ಅಳವಡಿಸಿದ ಇಂಟರ್ಲಾಕ್ ಆವರಣವನ್ನು ಟೇಪು ಕತ್ತರಿಸುವುದರ ಮೂಲಕ ಉದ್ಘಾಟಿಸಿ ಅಂಗನವಾಡಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮೊಮ್ಮಕ್ಕಡ ಕೂಟದ ಸದಸ್ಯ ಪಾಲಚಂಡ ಶೀಮಾ ವಹಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿದರು.

ಅಂಗನವಾಡಿ ಕಾರ್ಯಕರ್ತೆ ಭಾಗ್ಯವತಿಯವರು ದಾನಿಗಳ ಬಗ್ಗೆ ಗುಣಗಾನ ಮಾಡಿ ಅವರ ಸೇವೆಯನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸುವುದರ ಮೂಲಕ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಈ ಸಂದರ್ಭ ದಾನಿಗಳು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕಾರ್ಯಕರ್ತರು, ಪೋಷಕರು, ಮಕ್ಕಳು ಉಪಸ್ಥಿತರಿದ್ದರು.

ಬಳಿಕ ಪುಟಾಣಿ ವಿದ್ಯಾರ್ಥಿಗಳಿಂದ ಮನೋರಂಜನ ಕಾರ್ಯಕ್ರಮಗಳು ಅತ್ಯಾಕರ್ಷಕವಾಗಿ ಮೂಡಿಬಂದು ಸಭಿಕರ ಮನಸಳೆಯಿತು.

ಅಂಗನವಾಡಿ ಕೇಂದ್ರಕ್ಕೆ ಕೊಡುಗೆ ನೀಡಿದ ದಾನಿಗಳು:

ಪುನರ್ ಚೇತನ ಸಂಸ್ಥೆಯ ಬೊಪ್ಪಂಡ ಸೂರಜ್ ಧ್ವಜಸ್ತಂಬ ಹಾಗೂ ಇಂಟರ್ಲಾಕ್, ಬೊಪ್ಪಂಡ ಯಶೋಧ ರೆಫ್ರಿಜರೇಟರ್, ಭರತ್ ಪ್ರಿಯದರ್ಶಿನಿ ಟಿವಿ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಅಶ್ರಫ್, ಪವನ್ ಸೋನಿ ಚಯರ್ಗಳು, ನವೀನ (ಶೃತಿ) ಧ್ವಜದ ಕಂಬ, ಕೊಂಬಂಡ ಸೀತಾರಾಮ, ಅಬ್ದುಲ್ ಖಾದರ್ ಅಂಗನವಾಡಿ ಕೇಂದ್ರ ಹಾಗೂ ಕಂಪೌಂಡಿಗೆ ಪೈಂಟಿಂಗ್, ಮುಸ್ತಫ ಸಮೀರಾ ಮಕ್ಕಳಿಗೆ ಯುನಿಫಾರ್ಮ್, ವಿಜು ರತ್ನ ಮಕ್ಕಳಿಗೆ ಆಟಿಕೆ ಆಟದ ಸಾಮಾನುಗಳು, ಜೈಲುಲ್ಲ ಹಮೀದ್ ಅಂಗನವಾಡಿ ರೂಮ್ ಒಂದಕ್ಕೆ ಟೈಲ್ಸ್ ಹಾಕಿ ಕೊಟ್ಟು ಸಹಕರಿಸಿದ್ದು ಸೇರಿದಂತೆ ವಿವಿಧ ದಾನಿಗಳು ಅಂಗನವಾಡಿಯ ಅಭಿವೃದ್ಧಿಗೆ ಸಹಕರಿಸಿರುವುದಾಗಿ ಅಂಗನವಾಡಿ ಕಾರ್ಯಕರ್ತೆ ಭಾಗ್ಯವತಿ ಸಭೆಗೆ ಮಾಹಿತಿ ನೀಡಿದರು.

Share this article