ಕನ್ನಡಪ್ರಭ ವಾರ್ತೆ ಮಂಗಳೂರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಜೈನ ಕಾಶಿ ಮೂಡುಬಿದಿರೆಯ ಪುತ್ತಿಗೆ ಗ್ರಾಮದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗ ಮಂದಿರದಲ್ಲಿ ಸಪ್ತ ಮೇಳಗಳ ಮೆರುಗಿನೊಂದಿಗೆ 29ನೇ ವರ್ಷದ ‘ಆಳ್ವಾಸ್ ವಿರಾಸತ್’ಗೆ ನಾಡಿನ ಭವ್ಯ ಕಲಾ ವೈಭವ ಅನಾರಣದೊಂದಿಗೆ ಗುರುವಾರ ಸಂಜೆ ವರ್ಣರಂಜಿತ ಚಾಲನೆ ದೊರೆಯಿತು. ರಾಜ್ಯಪಾಲ ಡಾ. ಥಾವರ್ ಚಂದ್ ಗೆಹ್ಲೋಟ್ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಅದ್ಧೂರಿ ಚಾಲನೆ ನೀಡಿದರು.
ಗಣ್ಯರ ಶುಭ ಹಾರೈಕೆಗಳ ಬಳಿಕ ಕರಾವಳಿ ಸೇರಿದಂತೆ ರಾಜ್ಯ, ದೇಶದ ವಿವಿಧೆಡೆಗಳ ನೂರಕ್ಕೂ ಅಧಿಕ ವೈವಿಧ್ಯಮಯ ಕಲಾ ತಂಡಗಳು ವೇದಿಕೆ ಎದುರು ಸಾಲಾಗಿ ಸಾಗುತ್ತಾ ತಮ್ಮ ಕಲಾ ಚತುರತೆಯನ್ನು ಪ್ರದರ್ಶಿಸಿದ್ದು ಸಾವಿರಾರು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ನಾಲ್ಕು ದಿನಗಳ ವೈಭವದ ವಿರಾಸತ್‌ಗೆ ಉದ್ಘಾಟನಾ ಕಾರ್ಯಕ್ರಮದಲ್ಲೇ ಕಲಾತ್ಮಕ ಟಚ್ ನೀಡುವ ಮೂಲಕ ವಿರಾಸತ್‌ನ ಅದ್ಧೂರಿ ಆರಂಭಕ್ಕೆ ಮುನ್ನುಡಿ ಬರೆಯಲಾಯಿತು. ಈ ಭವ್ಯ ಸಾಂಸ್ಕೃತಿಕ ಮೆರವಣಿಗೆಯಲ್ಲಿ 3 ಸಾವಿರಕ್ಕೂ ಅಧಿಕ ಕಲಾವಿದರು ಭಾಗವಹಿಸಿದ್ದು ವಿಶೇಷವಾಗಿತ್ತು.ಆಳ್ವರಿಂದ ದೊಡ್ಡ ಯಾಗ- ಡಾ.ಹೆಗ್ಗಡೆ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಮೋಹನ್ ಆಳ್ವರು ವಿರಾಸತ್ ಆಯೋಜಿಸುವ ಮೂಲಕ ಮೂಡುಬಿದಿರೆಯಲ್ಲಿ ದೊಡ್ಡ ಯಾಗ ಮಾಡುತ್ತಿದ್ದಾರೆ. ಇದು ಜ್ಞಾನ ಜಾತ್ರೆ ಮತ್ತು ಜ್ಞಾನ ಯಾತ್ರೆ. ಮುಂದಿನ ಜನಾಂಗಕ್ಕೆ ಸಂಸ್ಕಾರ, ಸಂಸ್ಕೃತಿ ಕಲಿಸುವ ದೊಡ್ಡ ಕೆಲಸ ಇದು. ಯುವ ಜನಾಂಗದಲ್ಲಿ ವಿಜ್ಞಾನ, ಜ್ಞಾನದೊಂದಿಗೆ ಸಂಸ್ಕಾರ, ಸಂಸ್ಕೃತಿಯನ್ನೂ ಬೆಳೆಸಬೇಕಿದೆ. ಅದು ವಿರಾಸತ್ ಮೂಲಕ ಸಾಕಾರವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಸ್ತುತ ಭಾರತವು ಬಡ ರಾಷ್ಟ್ರವಾಗಿ ಉಳಿದಿಲ್ಲ. ಹಿಂದಿಯ ‘ಬಡಾ’ ರಾಷ್ಟ್ರ ಆಗುತ್ತಿದೆ. ಮೋಹನ್ ಆಳ್ವರಂಥ ಅನೇಕರ ತ್ಯಾಗ, ಪರಿಶ್ರಮದಿಂದ ದೇಶ ದೊಡ್ಡದಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶವು ವಿಶ್ವದಲ್ಲಿ ಗುರುತಿಸಲ್ಪಟ್ಟಿದೆ ಎಂದು ಹೇಳಿದ ಡಾ. ಹೆಗ್ಗಡೆ, ಆಳ್ವಾಸ್ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕೃತಿ, ಸಂಸ್ಕಾರ ಮಕ್ಕಳಿಗೆ ಸಿಗುತ್ತಿದೆ. ಮುಂದೆಯೂ ಇದು ಮುಂದುವರಿಯಲಿ. ನಾವೆಲ್ಲರೂ ಆಳ್ವರ ಜತೆಗಿದ್ದೇವೆ ಎಂದು ಹೇಳಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ ಸ್ವಾಗತಿಸಿದರು. ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಭಾರತ್ ಸ್ಕೌಟ್ಸ್ ಗೈಡ್ಸ್‌ನ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ , ಅದಾನಿ ಗ್ರೂಪ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಉದ್ಯಮಿಗಳಾದ ಮೋಹನ್ ದೇವ್, ಶಶಿಧರ ಶೆಟ್ಟಿ, ಪ್ರಸನ್ನ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ಮುಸ್ತಫಾ ಎಸ್.ಎಂ., ಪ್ರವೀಣ್ ಕುಮಾರ್, ಪುತ್ತಿಗೆ ಗ್ರಾ.ಪಂ. ಅಧ್ಯಕ್ಷೆ ರಾಧಾ, ವಿಧಾನ ಪರಿಷತ್ ಸದಸ್ಯ ಭೋಜೆಗೌಡ, ಸುರೇಂದ್ರ ಕುಮಾರ್, ಗಣೇಶ್ ಕಾರ್ಣಿಕ್, ಪ್ರದೀಪ್ ಕುಮಾರ್ ಕಲ್ಕೂರ, ನಾಮ ನಿಷ್ಟದಾಸ್, ಪ್ರೇಮದಾಸ ಮೊದಲಾದವರು ಇದ್ದರು.
ಮಾತೃಭಾಷೆ ಶಿಕ್ಷಣದಿಂದ ವಿಕಾಸ: ರಾಜ್ಯಪಾಲಮಾತೃಭಾಷೆ ಶಿಕ್ಷಣವು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ. ವಿಶ್ವದ ಐದು ವಿಕಸಿತ ರಾಷ್ಟ್ರಗಳಾದ ಜರ್ಮನಿ, ಜಪಾನ್, ಫ್ರಾನ್ಸ್ ಇತ್ಯಾದಿ ದೇಶಗಳ ಜನರು ಮಾತೃಭಾಷೆಯಲ್ಲೇ ಶಿಕ್ಷಣ ಕಲಿತು ವಿಶ್ವದಲ್ಲಿ ವಿಕಾಸಗೊಂಡಿವೆ. ನಮ್ಮ ದೇಶದಲ್ಲೂ ಮಾತೃಭಾಷೆ ಶಿಕ್ಷಣಕ್ಕೆ ಇನ್ನೂ ಹೆಚ್ಚು ಉತ್ತೇಜನ ನೀಡಬೇಕಾಗಿದೆ ಎಂದು ರಾಜ್ಯಪಾಲ ಡಾ.ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.
ಮೋಹನ್ ಆಳ್ವರು ತಮ್ಮ ಶಿಕ್ಷಣ ಸಂಸ್ಥೆಗಳ ಮೂಲಕ ಯುವ ಜನಾಂಗವನ್ನು ವಿಭಿನ್ನವಾಗಿ ರೂಪಿಸುತ್ತಿದ್ದಾರೆ, ಭಾರತೀಯ ಸಂಸ್ಕೃತಿ ಮತ್ತು ‘ಸೋಚ್’ ಇಲ್ಲಿ ಪ್ರಕಟವಾಗುತ್ತಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಕನ್ನಡ ಮಾಧ್ಯಮದಲ್ಲೂ ಉಚಿತವಾಗಿ ಮಾದರಿ ಶಿಕ್ಷಣ ನೀಡುತ್ತಿರುವುದು ಪ್ರಶಂಸನೀಯ ಕಾರ್ಯ. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯನ್ನು ಈಗಾಗಲೇ ಸರ್ವಶ್ರೇಷ್ಠ ಶಾಲೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಮಾತೃಭಾಷೆಯ ಶಿಕ್ಷಣದ ಅಗತ್ಯ ಪ್ರಸ್ತುತ ಹೆಚ್ಚಾಗಿದ್ದು, ಈ ಕಾರ್ಯ ಮುಂದುವರಿಯಬೇಕಿದೆ ಎಂದು ಆಶಿಸಿದರು.ಹಿಂದೆಯೂ ಆಳ್ವಾಸ್ ವಿರಾಸತ್ ಕಾರ್ಯಕ್ರಮಕ್ಕೆ ಆಗಮಿಸಿದ್ದೆ. ಇಷ್ಟು ಉತ್ತಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತೋಷವಾಗಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಗಳಿಗೆ ದೇಶದೆಲ್ಲೆಡೆಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಸಾವಿರಾರು ಮಂದಿ ಎಲ್‌ಕೆಜಿಯಿಂದ ಪಿಎಚ್.ಡಿವರೆಗೆ ಕಲಿಯುತ್ತಿದ್ದಾರೆ. ಶಿಕ್ಷಣದ ಜತೆ ಸಾಹಿತ್ಯ, ಸಾಂಸ್ಕೃತಿಕ ಜ್ಞಾನವನ್ನೂ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಅಭಿನಂದನೀಯ. ಕ್ರೀಡೆಯಲ್ಲೂ ಇಲ್ಲಿನ ವಿದ್ಯಾರ್ಥಿಗಳು ಛಾಪು ಮೂಡಿಸಿದ್ದಾರೆ ಎಂದು ಹೇಳಿದ ರಾಜ್ಯಪಾಲರು, ವಿರಾಸತ್ ಕಾರ್ಯಕ್ರಮವು ಕಲಾವಿದರನ್ನು ಉತ್ತೇಜಿಸುವ ಮೂಲಕ ಯುವ ಜನಾಂಗವನ್ನು ಸಾಂಸ್ಕೃತಿಕ ಲೋಕಕ್ಕೆ ತೆರೆದುಕೊಳ್ಳಲು ಪ್ರೇರಣೆ ನೀಡುತ್ತಿದೆ. ದೇಶವು ಧರ್ಮ, ಸಂಸ್ಕೃತಿ ದಾರಿಯಲ್ಲಿ ಸಾಗಲು ಇಂಥ ಕಾರ್ಯಕ್ರಮಗಳು ಅಗತ್ಯ ಎಂದು ಶ್ಲಾಘಿಸಿದರು.
ದೇಶದ ಭವ್ಯ ಸಂಸ್ಕೃತಿ ಅನಾವರಣಆಳ್ವಾಸ್ ವಿರಾಸತ್ ವಿಧ್ಯುಕ್ತ ಉದ್ಘಾಟನೆಯ ಬಳಿಕ ಕೊಂಬು, ರಣ ಕಹಳೆ, ಕೊರಗರ ಡೋಲು, ನಂದಿಧ್ವಜ, ಊರಿನ ಚಂಡೆ, ತಟ್ಟೀರಾಯ, ಸ್ಯಾಕ್ಸೋಫೋನ್, ಬಣ್ಣದ ಕೊಡೆಗಳು, ಡೋಲು, ಪೂರ್ಣ ಕುಂಭ, ನಾದಸ್ವರ, ಯಕ್ಷಗಾನದ ವಿವಿಧ ವೇಶಗಳು, ಮರಗಾಲು, ಕಂಬಳ ವೇಷ, ಹನುಮಂತ, ಮಹಾಕಾಳೇಶ್ವರ, ಆಂಜನೇಯ, ಕಲ್ಲಡ್ಕ ಗೊಂಬೆ, ಗೊರವರ ಕುಣಿತ, ಸುಗ್ಗಿ ಕುಣಿತ, ಹುಲಿ ಕುಣಿತ ಸೇರಿದಂತೆ ಕರ್ನಾಟಕದ ವಿವಿಧೆಡೆಯ ಜಾನಪದ, ಸಾಂಸ್ಕೃತಿಕ ಲೋಕ ಅನಾವರಣಗೊಂಡಿತು.
ಬಳಿಕ ವೇದಘೋಷಗಳು, ಭಜನ್‌ಗಳು, ಪುಷ್ಪ ಪಲ್ಲಕ್ಕಿಗಳು, ಮಂಗಳ ವಾದ್ಯಗಳೊಂದಿಗೆ ವಿಘ್ನ ನಿವಾರಕ ವಿನಾಯಕ, ಸರಸ್ವತಿ, ಶ್ರೀ ಲಕ್ಷ್ಮೀ, ಹನುಮಂತ, ಶ್ರೀರಾಮ, ಶ್ರೀಕೃಷ್ಣಾದಿ ಆರೂಢ ದೇವರ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ ನೋಡುಗರನ್ನು ಮಂತ್ರಮುಗ್ಧಗೊಳಿಸಿತು.ಜನರ ಪ್ರೀತಿ, ವಿಶ್ವಾಸಕ್ಕೆ ಆಭಾರಿ: ಮೋಹನ್ ಆಳ್ವ
ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’ ಇದೀಗ 29ನೇ ವರ್ಷಕ್ಕೆ ಕಾಲಿರಿಸಿದೆ. ಆರಂಭದಲ್ಲಿ ಜಿಲ್ಲೆಗೆ ಸೀಮಿತವಾಗಿದ್ದ ವಿರಾಸತ್ ಇಂದು ಜಾಗತಿಕ ಮಟ್ಟಕ್ಕೇರಿದೆ, ಇದು ಸುಖಾನುಭವ. ಜನರ ಪ್ರೀತಿ, ವಿಶ್ವಾಸದಿಂದ ಇದೆಲ್ಲ ಸಾಧ್ಯವಾಗುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ ಹೇಳಿದರು.ಕ್ಯಾ. ಪ್ರಾಂಜಲ್‌ಗೆ ಅರ್ಪಣೆ: ಈ ವರ್ಷದ ಆಳ್ವಾಸ್ ವಿರಾಸತ್‌ನ್ನು ಇತ್ತೀಚೆಗೆ ಸೇನಾ ಕಾರ್ಯಾಚರಣೆಯಲ್ಲಿ ವೀರ ಮರಣವನ್ನಪ್ಪಿದ ಕ್ಯಾ.ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಿಸುತ್ತಿದ್ದೇವೆ. ಕ್ಯಾ. ಪ್ರಾಂಜಲ್ ಅವರು ಈ ಹಿಂದೆ ನುಡಿಸಿರಿ ಮತ್ತಿತರ ಕಾರ್ಯಕ್ರಮಗಳಿಗೆ ಹಲವು ಬಾರಿ ಬಂದಿದ್ದರು ಎಂದು ಆಳ್ವ ಸ್ಮರಿಸಿದರು.