ಬ್ಯಾಡಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅ. 6ರಂದು ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ನಿವೃತ್ತ ಉಪನ್ಯಾಸಕ ಡಾ. ಪ್ರೇಮಾನಂದ ಲಕ್ಕಣ್ಣನವರ ತಿಳಿಸಿದರು.
ಈ ಕುರಿತು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂ. ಹಾನಗಲ್ಲ ಕುಮಾರೇಶ್ವರ ಶ್ರೀಗಳು 1903ರಲ್ಲಿ ಸ್ಥಾಪಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸ್ಥಾಪಿಸಿದ್ದರು. ಆದರೆ, ಒಳ ಪಂಗಡಗಳಲ್ಲಿನ ಭಿನ್ನಾಭಿಪ್ರಾಯದಿಂದ ಲಿಂಗಾಯತ ಸಮಾಜ ಅಪಾಯದ ಅಂಚಿನಲ್ಲಿದೆ. ಸಮುದಾಯದಲ್ಲಿ ಸಾಮರಸ್ಯ ಮೂಡದಿದ್ದಲ್ಲಿ ನಾವು ಲಿಂಗಾಯತರು ಎಂದು ಹೇಳಿಕೊಳ್ಳುವುದು ಕಷ್ಟವಾಗಲಿದೆ ಎಂದರು.ತುಳಿದು ಬದುಕುವರಿದ್ದಾರೆ: ವೀರಶೈವ ಪಂಗಡಗಳು ಛಿದ್ರವಾಗಿವೆ, ಸಮುದಾಯ ಒಗ್ಗಟ್ಟಾಗಬೇಕಾಗಿದೆ. ಸಮುದಾಯದಲ್ಲಿ ರೈತರ ಸಂಖ್ಯೆ ಹೆಚ್ಚಿದೆ. ಲಿಂಗ ಸಾಮರಸ್ಯ ಮೂಡಿಸಬೇಕಾಗಿದೆ, ಸಮುದಾಯ ತುಳಿದು ಬದುಕುವರಿದ್ದಾರೆ. ಹೀಗಾಗಿ ಅವರೆಲ್ಲರನ್ನು ಮೆಟ್ಟಿ ನಿಲ್ಲಬೇಕಾಗಿದೆ. ರಾಜ್ಯದಲ್ಲಿರುವ ಎಲ್ಲ ಘಟಕಗಳನ್ನು ಮುಖ್ಯವಾಹಿನಿಗೆ ತರಬೇಕಾಗಿದ್ದು ಇದಕ್ಕಾಗಿ ನಿರಂತರವಾಗಿ ಸಂಘಟನಾತ್ಮಕ ಚಟುವಟಿಕೆಗಳು ನಡೆಸಬೇಕಾಗಿದೆ ಎಂದರು.
ರಾಜ್ಯಾಧ್ಯಕ್ಷ ಶಂಕರ ಬಿದರಿ ಆಗಮನ: ನೂತನ ಅಧ್ಯಕ್ಷ ವಿಶ್ವನಾಥ ಅಂಕಲಕೋಟಿ ಮಾತನಾಡಿ, ನೂತನ ರಾಜ್ಯಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ರಾಜ್ಯದ ಎಲ್ಲ ತಾಲೂಕು ಘಟಕಗಳ ಪದಾಧಿಕಾರಿಗಳು ಅಗಮಿಸಲಿದ್ದಾರೆ. ರಾಜಕೀಯೇತರ ಸಂಸ್ಥೆ ಇದಾಗಿದ್ದು, ಸಮಾಜದ ಜನರು ಒಗ್ಗಟ್ಟಾಗಿ ಕೆಲಸ ಮಾಡಿದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ ಎಂದರು.ಈ ಸಂದರ್ಭದಲ್ಲಿ ಎಸ್.ಎಲ್. ತೆಂಬದ, ಚಂದ್ರಣ್ಣ ಶೆಟ್ಟರ, ಶಂಭು ಮಠದ, ಉಮಾ ಮಠದ, ವಿ.ವಿ. ಹುಣಸೀಕಟ್ಟಿ, ಎ.ಟಿ. ಪೀಠದ ಹಾಗೂ ಇನ್ನಿತರರಿದ್ದರು.