ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಸರ್ಕ್ಯೂಟ್ ಹೌಸ್ ಬಳಿಯಿಂದ ಬಿಜೈ ಸರ್ಕಲ್‌ವರೆಗಿನ ರಸ್ತೆಗೆ ‘ಜಾರ್ಜ್ ಫರ್ನಾಂಡಿಸ್ ರಸ್ತೆ’ ಎಂದು ಶನಿವಾರ ಅಧಿಕೃತವಾಗಿ ನಾಮಕರಣಗೊಳಿಸಲಾಯಿತು.ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ದಕ್ಷಿಣ ಭಾರತದಲ್ಲಿ ಜನಿಸಿ ಉತ್ತರ ಭಾರತದಲ್ಲಿ ರಾಜಕೀಯವಾಗಿ ಬಹು ಎತ್ತರಕ್ಕೆ ಬೆಳೆದವರು ಜಾರ್ಜ್ ಫರ್ನಾಂಡಿಸ್. ಚಿಕ್ಕಂದಿನಲ್ಲೇ ಅನ್ಯಾಯದ ವಿರುದ್ಧ ಸಿಡಿದೇಳುವ ಸ್ವಭಾವದ ಅವರು ಕ್ರಿಶ್ಚಿಯನ್ ಪಾದ್ರಿಯಾಗಬೇಕೆಂದು ಬಯಸಿದ್ದರು. ಆದರೆ ಅವರು ದೇಶದ ಅಮೂಲ್ಯ ಆಸ್ತಿಯಾದರು. ಉದ್ಯೋಗವನ್ನು ಅರಸಿ ಮುಂಬೈಗೆ ಹೋದ ಅವರು ಅಲ್ಲಿ ಕಾರ್ಮಿಕ ನಾಯಕನಾಗಿ ಕೊನೆಗೆ ದೇಶವೇ ಮೆಚ್ಚುವಂತಹ ರಾಜಕಾರಣಿಯಾದರು. ಅವರ ಬದುಕು ರಾಜಕೀಯ ಇತಿಹಾಸದಲ್ಲೇ ಅತ್ಯಂತ ರೋಚಕ ಎಂದರು.
ದೇಶದ ತುರ್ತು ಪರಿಸ್ಥಿಯ ವೇಳೆ ಭೂಗತರಾಗಿ ಹೋರಾಟ ಸಂಘಟಿಸಿದರು ಜಾರ್ಜ್ ಫರ್ನಾಂಡಿಸ್. ಕೊನೆಗೆ ಜೈಲು ಸೇರಿದರೂ ಜೈಲಿನಲ್ಲೇ ಇದ್ದು ದಾಖಲೆಯ ಮಟ್ಟದಲ್ಲಿ ಗೆದ್ದು ಕೇಂದ್ರ ಮಂತ್ರಿಯೂ ಆದರು. ವಾಜಪೇಯಿ ಜತೆ ಎನ್‌ಡಿಎ ಸೇರಿ ರೈಲ್ವೆ ಸಚಿವರಾಗಿ ಅಭೂತ ಪೂರ್ವ ಅಭಿವೃದ್ಧಿ ಕೆಲಸಗಳನ್ನು ಮಾಡಿದರು. ಸಿಯಾಚಿನ್‌ನಂತಹ ಪ್ರದೇಶಕ್ಕೆ 18 ಸಲ ಭೇಟಿ ನೀಡಿದ ಏಕಮಾತ್ರ ರಕ್ಷಣಾ ಸಚಿವ ಅವರಾಗಿದ್ದು, ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದರು. ಇಂತಹ ಶ್ರೇಷ್ಠ ವ್ಯಕ್ತಿತ್ವದ ಹೆಸರನ್ನು ಮಂಗಳೂರಿನ ಈ ರಸ್ತೆಗೆ ಇಡುತ್ತಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದರು.ಈ ಸಂದರ್ಭ ಕ್ಯಾ. ಬ್ರಿಜೇಶ್ ಚೌಟ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಬಿಜೈ ಚರ್ಚ್ ಧರ್ಮಗುರು ಜೆ ಬಿ ಸಾಲ್ದಾನ, ವಿಶೇಷ ಅತಿಥಿಗಳಾಗಿ ಜಾರ್ಜ್ ಫೆರ್ನಾಂಡಿಸ್ ಸಹೋದರ ಮೈಕಲ್ ಫೆರ್ನಾಂಡಿಸ್, ಪಾಲಿಕೆ ಸದಸ್ಯರು ಸೇರಿದಂತೆ ಅನೇಕ ಪ್ರಮುಖರು ಇದ್ದರು.