ಇಂದು ಗೋಡಂಬಿ ಸಂಸ್ಕರಣೆ ಘಟಕದ ಲೋಕಾರ್ಪಣೆ

KannadaprabhaNewsNetwork | Published : Jul 7, 2024 1:23 AM

ಸಾರಾಂಶ

ಕಳೆದ ಒಂದೆರಡು ವರ್ಷಗಳಲ್ಲಿ ಗದಗ ಜಿಲ್ಲೆಯ ಗೋಡಂಬಿ ಬೆಳೆಗಾರರು ಅಂದಾಜು 100 ಟನ್ ಗೋಡಂಬಿ ಉತ್ಪಾದಿಸಿ, ಅಂದಾಜು 1.10ಕೋಟಿ ಮೊತ್ತದ ಮೌಲ್ಯವನ್ನು ಜಿಲ್ಲೆಯ ಆರ್ಥಿಕತೆಗೆ ರೈತರು ಕೊಡುಗೆ ನೀಡಿದ್ದಾರೆ

ಗದಗ: ಜಿಪಂ, ತೋಟಗಾರಿಕೆ ಇಲಾಖೆ, ಗ್ರಾಪಂ ಹುಲಕೋಟಿ, ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹಾಗೂ ಹುಲಕೋಟಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಗಳ ಸಹಯೋಗದಲ್ಲಿ ರೂರ್ಬನ್ ಯೋಜನೆ ಅಡಿ ಗದಗ ಜಿಲ್ಲೆಯ ಗೋಡಂಬಿ ಬೆಳೆಗಾರರ ಅನುಕೂಲಕ್ಕಾಗಿ ಗೋಡಂಬಿ ಸಂಸ್ಕರಣಾ ಘಟಕದ ಲೋಕಾರ್ಪಣೆ ಭಾನುವಾರ ಜು.7ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ. ಪಾಟೀಲ ನೆರವೇರಿಸುವರು.

ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಹಿಡುವಳಿ ಹೊಂದಿರುವ ರೈತರು ಅಂದಾಜು 1600 ಎಕರೆ ಕ್ಷೇತ್ರದಲ್ಲಿ ಗೋಡಂಬಿ ಬೆಳೆಯನ್ನು ಕಳೆದ ಒಂದು ದಶಕದಿಂದ ಬೆಳೆಯುತ್ತಿದ್ದಾರೆ. ಜಿಲ್ಲೆಯ ಮಣ್ಣು ಮತ್ತು ಹವಾಮಾನವು ಗೋಡಂಬಿ ಬೆಳೆಯನ್ನು ಯಶಸ್ವಿಯಾಗಿ ಬೆಳೆಯಲು ಸೂಕ್ತವಾಗಿದೆ. ಇದರ ಅನ್ವಯ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಇಲಾಖೆ ಹಾಗೂ ಗೋಡಂಬಿ ಬೆಳೆ ನಿರ್ದೇಶನಾಲಯದ ಸಹಕಾರದೊಂದಿಗೆ ಜಿಲ್ಲೆಯ 5 ತಾಲೂಕುಗಳಲ್ಲಿ ರೈತರನ್ನು ಪ್ರೇರೇಪಿಸಿ ಗೋಡಂಬಿ ಬೆಳೆ ಬೆಳೆಯಲು ಪ್ರೋತ್ಸಾಹಿಸಿದೆ.

ಕಳೆದ 8 ವರ್ಷಗಳಿಂದ ರೈತರು ಗೋಡಂಬಿ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.ಕಳೆದ ಒಂದೆರಡು ವರ್ಷಗಳಲ್ಲಿ ಗದಗ ಜಿಲ್ಲೆಯ ಗೋಡಂಬಿ ಬೆಳೆಗಾರರು ಅಂದಾಜು 100 ಟನ್ ಗೋಡಂಬಿ ಉತ್ಪಾದಿಸಿ, ಅಂದಾಜು 1.10ಕೋಟಿ ಮೊತ್ತದ ಮೌಲ್ಯವನ್ನು ಜಿಲ್ಲೆಯ ಆರ್ಥಿಕತೆಗೆ ರೈತರು ಕೊಡುಗೆ ನೀಡಿದ್ದಾರೆ.

ಗದಗ ಜಿಲ್ಲೆಯ ಗೋಡಂಬಿ ಬೆಳೆಗಾರರು ತಮ್ಮ ಉತ್ಪನ್ನ ಮಾರಾಟ ಮಾಡಲು ದೂರದ ಪ್ರದೇಶಗಳಿಗೆ ಅಥವಾ ಕರಾವಳಿಗೆ ಹೋಗಬೇಕಾಗಿತ್ತು.ಈ ಹಿನ್ನೆಲೆಯಲ್ಲಿ ಗೋಡಂಬಿ ಬೆಳೆಗಾರರು ಗದಗ ಜಿಲ್ಲೆಯ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರನ್ನು ಭೇಟಿ ಆಗಿ ತಮ್ಮ ಗೋಡಂಬಿ ಮಾರಾಟದ ಸಮಸ್ಯೆ ಅವರೊಂದಿಗೆ ಮಂಡಿಸಿದರು. ಅಲ್ಲದೇ ತಾವೇ ತಮ್ಮ ಕಚ್ಚಾ ಗೋಡಂಬಿ ಸಂಸ್ಕರಿಸಿ ಮಾರಾಟ ಮಾಡಿದರೆ 2-3 ಪಟ್ಟು ಹೆಚ್ಚು ಲಾಭ ತಮಗೆ ಸಿಗುತ್ತದೆ ಎಂದು ತಿಳಿಸಿದರು. ಆದ್ದರಿಂದ ಜಿಲ್ಲೆಯಲ್ಲಿ ಗೋಡಂಬಿ ಸಂಸ್ಕರಣೆ ಘಟಕ ಸ್ಥಾಪಿಸುವಂತೆ ಮನವಿ ಮಾಡಿದರು.

ರೈತರ ಮನವಿಗೆ ಸ್ಪಂದಿಸಿದ ಸಚಿವರು ರೂರ್ಬನ್ ಯೋಜನೆ ಅಡಿ ಗೋಡಂಬಿ ಸಂಸ್ಕರಣಾ ಘಟಕ ಸ್ಥಾಪನೆಗೆ ಒಪ್ಪಿಗೆ ನೀಡಿದರು ಹಾಗೂ ಈ ಘಟಕಕ್ಕೆ ಬೇಕಾದ 2 ಎಕರೆ ಜಮೀನನ್ನು ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಿಂದ ಕೊಡಿಸಿದರು.

ಈಗ ಅಂದಾಜು 1 ಕೋಟಿ ವೆಚ್ಚದಲ್ಲಿ ಸ್ಥಾಪನೆಯಾಗಿರುವ ಗೋಡಂಬಿ ಸಂಸ್ಕರಣಾ ಘಟಕದ ಉದ್ಘಾಟನೆಯನ್ನು ಜು. 7ರಂದು ಭಾನುವಾರ ಬೆಳಗ್ಗೆ 10ಕ್ಕೆ ಹುಲಕೋಟಿಯ ಬಿಸಿಎಂ ಹಾಸ್ಟೆಲ್ ಪಕ್ಕದಲ್ಲಿರುವ ಗೋಡಂಬಿ ಸಂಸ್ಕರಣಾ ಘಟಕದ ಆವರಣದಲ್ಲಿ ನೆರವೇರಿಸಲಾಗುವುದು.

ಈ ಘಟಕದ ಸ್ಥಾಪನೆಯಿಂದ ಗೋಡಂಬಿ ಬೆಳೆಯುವ ರೈತರಿಗೆ ಒಂದು ಸುವರ್ಣ ಅವಕಾಶ ದೊರೆತಿದೆ. ಸದ್ಯ ಕಚ್ಚಾ ಗೋಡಂಬಿಯ ಮಾರುಕಟ್ಟೆಯ ಬೆಲೆ ಪ್ರತಿ ಕಿಲೋಗೆ ₹110 ಇದ್ದು, ಈ ಘಟಕದಲ್ಲಿ ಪ್ರತಿ ಕಿಲೋಗೆ ₹ 25 ಶುಲ್ಕ ಕೊಟ್ಟು ಸಂಸ್ಕರಣೆ ಮಾಡಿಸಿದರೆ, ₹110ರ ಬದಲು ಅವರಿಗೆ ಪ್ರತಿ ಕಿಲೋಗೆ ₹ 250ರ ವರೆಗೆ ಆದಾಯ ಸಿಗುತ್ತದೆ. ಈ ಘಟಕದ ಸ್ಥಾಪನೆಯಿಂದ ಗೋಡಂಬಿ ಬೆಳೆಯುವ ರೈತರು ತಮ್ಮ ಆದಾಯವನ್ನು ಸುಲಭವಾಗಿ 2 ರಿಂದ 3 ಪಟ್ಟು ಹೆಚ್ಚಿಸಿಕೊಳ್ಳಬಹುದು.

ಈ ಘಟಕದಲ್ಲಿ ಪ್ರತಿ ನಿತ್ಯ 2 ಟನ್‌ಗಳವರೆಗೆ ಕಚ್ಚಾ ಗೋಡಂಬಿ ಸಂಸ್ಕರಿಸಲು ಅವಕಾಶ ಇರುತ್ತದೆ. ತನ್ಮೂಲಕ ಗದಗ ಜಿಲ್ಲೆಯ 500 ಕ್ಕೂ ಹೆಚ್ಚಿನ ಗೋಡಂಬಿ ಬೆಳೆಗಾರರು ಈ ಗೋಡಂಬಿ ಸಂಸ್ಕರಣ ಘಟಕದ ಸದುಪಯೋಗ ಮಾಡಿಕೊಂಡು ತಾವು ಲಾಭ ಗಳಿಸುವದಲ್ಲದೇ, ಗದಗ ಜಿಲ್ಲೆಯ ಆರ್ಥಿಕತೆ ಹೆಚ್ಚಿಸಲು ಸಹಕಾರ ನೀಡಿದಂತಾಗುತ್ತದೆ.

ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲಿ ಬೆಳೆಯುವ ಗೋಡಂಬಿಗಿಂತ ಗದಗ ಜಿಲ್ಲೆಯಲ್ಲಿ ಬೆಳೆಯುವ ಗೋಡಂಬಿಯ ಗುಣಮಟ್ಟವು ಉತ್ಕೃಷ್ಟವಾಗಿದೆ. ಹೀಗಾಗಿ ಗದಗ ಜಿಲ್ಲೆಯ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಗೋಡಂಬಿ ಪೂರೈಸಲು ಈ ಘಟಕದ ಸ್ಥಾಪನೆಯಿಂದ ಅನುಕೂಲವಾಗುವುದು ಎಂದು ಕೆವಿಕೆ ಮುಖ್ಯಸ್ಥ ಡಾ. ಸುಧಾ.ವಿ. ಮಂಕಣಿ ಹೇಳಿದರು.

Share this article