ರಸಗೊಬ್ಬರ ಮಾರಾಟಗಾರರಿಗೆ ಸಮಗ್ರ ಪೋಷಕಾಂಶಗಳ ನಿರ್ವಹಣೆ ತರಬೇತಿ ಉದ್ಘಾಟನೆ

KannadaprabhaNewsNetwork | Published : Aug 17, 2024 12:48 AM

ಸಾರಾಂಶ

ಕೆವಿಕೆಯಲ್ಲಿ ನೀಡುವ ಸಮಗ್ರ ಪೋಷಕಾಂಶಗಳ ನಿರ್ವಹಣೆಯ ತರಬೇತಿ ಪಡೆದು ತಮ್ಮ ಜಿಲ್ಲೆಗಳಲ್ಲಿ ತಾವುಗಳು ಟೆಕ್ನೋ ಎಜೆಂಟ್‌ ಆಗಿ ಕಾರ್ಯನಿರ್ವಹಿಸಿ, ರೈತರಿಗೆ ಮಾಹಿತಿ ನೀಡಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಸಹಕಾರ ನೀಡಬೇಕು.

ಕನ್ನಡಪ್ರಭ ವಾರ್ತೆ ಸುತ್ತೂರು

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ಹೈದರಾಬಾದ್‌ ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ ಮತ್ತು ಬೆಂಗಳೂರಿನ ಸಿಬ್ಬಂದಿ ತರಬೇತಿ ಘಟಕ-ಸಮೇತಿ (ದಕ್ಷಿಣ), ವಿಸ್ತರಣಾ ನಿರ್ದೇಶನಾಲಯ ಸಂಯುಕ್ತಾಶ್ರಯದಲ್ಲಿ ಸಿಬ್ಬಂದಿ ತರಬೇತಿ ಘಟಕದ ಸರ್ಟಿಫಿಕೇಟ್ ಕೋರ್ಸ್ (ಸಿಸಿಐಎನ್‌ಎಂ) ಹಾಗೂ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತ 15 ದಿನಗಳ ತರಬೇತಿಯನ್ನು ಐಸಿಎಆರ್- ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಡಾ.ಜಿ. ಜನಾರ್ಧನ್‌ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ಸ್ವಾತಂತ್ರ್ಯ ನಂತರದಲ್ಲಿ ಆಹಾರ ಧಾನ್ಯಗಳ ಕೊರೆತೆಯ ಕಾರಣ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಿಸಲು ರಸಗೊಬ್ಬರವನ್ನು ಡಾ.ಎಂ.ಎಸ್. ಸ್ವಾಮಿನಾಥನ್ ಪರಿಚಯಿಸಿದರು. ಆದರೆ, ಇತ್ತೀಚಿನ ದಿನಗಳಲ್ಲಿ ರಸಗೊಬ್ಬರವನ್ನು ಅವಶ್ಯಕತೆಗಿಂತ ಹೆಚ್ಚಾಗಿ ಬಳಸುವ ಕಾರಣ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಇಳುವರಿ ಕುಂಠಿತವಾಗುತ್ತಿದೆ. ಆದ್ದರಿಂದ ಮಣ್ಣಿನಲ್ಲಿ ಸಾವಯವ ಅಂಶವನ್ನು ಹೆಚ್ಚಿಸಲು ಜೀವಾಮೃತ, ಬೀಜಾಮೃತ ಇನ್ನೀತರ ಸಾವಯವ ಪದ್ಧತಿಯನ್ನು ಅನುಸರಿಸಬೇಕೆಂದು ತಿಳಿಸಿದರು.

ಕೆವಿಕೆಯಲ್ಲಿ ನೀಡುವ ಸಮಗ್ರ ಪೋಷಕಾಂಶಗಳ ನಿರ್ವಹಣೆಯ ತರಬೇತಿ ಪಡೆದು ತಮ್ಮ ಜಿಲ್ಲೆಗಳಲ್ಲಿ ತಾವುಗಳು ಟೆಕ್ನೋ ಎಜೆಂಟ್‌ ಆಗಿ ಕಾರ್ಯನಿರ್ವಹಿಸಿ, ರೈತರಿಗೆ ಮಾಹಿತಿ ನೀಡಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಸಹಕಾರ ನೀಡಬೇಕೆಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಬಿ.ಎನ್. ಜ್ಞಾನೇಶ್‌ ಮಾತನಾಡಿ, ಮಣ್ಣಿಗೆ ಒಂದೇ ತರಹದ ಗೊಬ್ಬರವನ್ನು ಬಳಸಿದರೆ, ಭೂಮಿ ಬಂಜರಾಗುತ್ತದೆ. ಇತ್ತೀಚಿನ ದಿನಗಳಲ್ಲಿ ದಿನಗೂಲಿ ನೌಕರ ವರ್ಗದವರ ಕೊರತೆಯಿಂದ ಕಳೆ ನಾಶಕವನ್ನು ಹೆಚ್ಚಿನ ಪ್ರಮಾಣದಲ್ಲಿ ರೈತರು ಬಳಸುತ್ತಿದ್ದಾರೆ. ಇದರಿಂದಾಗಿ ಭೂಮಿಯು ಬಂಜರಾಗುವುದಲ್ಲದೇ, ಮುಂದಿನ ದಿನಗಳಲ್ಲಿ ಭೂಮಿಯಲ್ಲಿ ಬೆಳೆ ಬೆಳೆಯುವುದನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ ಎಂದರು.

ನಂಜನಗೂಡಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಕೆ. ರವಿ, ಜೆ.ಜಿ. ರಾಜಣ್ಣ ಮಾತನಾಡಿದರು.

ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರಾದ ಶಾಮರಾಜ್‌ ಸ್ವಾಗತಿಸಿದರು, ಎಚ್.ವಿ. ದಿವ್ಯಾ ನಿರೂಪಿಸಿದರು. ಡಾ. ದೀಪಕ್‌ ವಂದಿಸಿದರು.

Share this article