ಶಂಕರ ಭಟ್ಟ ತಾರೀಮಕ್ಕಿ
ಯಲ್ಲಾಪುರ: ತಾಲೂಕಿನ ಹಿತ್ತಲಕಾರಗದ್ದೆ ಗ್ರಾಮದ ಹುಲ್ಲೋರಮನೆಯಲ್ಲಿ ಪ್ರಸಾದ ಮಾರುತಿ ದೇಗುಲದ ಪಕ್ಕ ನಿರ್ಮಿಸಲಾಗಿರುವ ಶಿಲಾಮಯ ಗಣಪತಿ ಮಂದಿರದ ಪ್ರತಿಷ್ಠಾಪನೆ ಮೇ ೩ರಿಂದ ೭ರ ವರೆಗೆ ೫ ದಿನಗಳ ಕಾಲ ವಿಶೇಷ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಶಾಸ್ತ್ರೋಕ್ತ ವೇದವಿದ್ವಾಂಸರ ನೇತೃತ್ವದಲ್ಲಿ ವಿಶೇಷವಾಗಿ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಅಮೃತ ಹಸ್ತದಲ್ಲಿ ಪ್ರತಿಷ್ಠಾಪನೆ ಸಂಪನ್ನಗೊಳ್ಳಲಿದೆ.ಸುಂದರ ಪ್ರಕೃತಿಯ ಮಡಿಲಿನ ಈ ಪ್ರದೇಶದಲ್ಲಿ ಸುಮಾರು ಎರಡೂವರೆ ಕೋಟಿಗೂ ಅಧಿಕ ವೆಚ್ಚದಲ್ಲಿ ಶಿಲಾಮಯ ಗಣೇಶ ಮಂದಿರವನ್ನು ನೂತನವಾಗಿ ನಿರ್ಮಿಸಲಾಗಿದೆ.
ಈ ಮಂದಿರ ನಿರ್ಮಾಣಕ್ಕೆ ಭಕ್ತರಿಂದ ದೇಣಿಗೆ ರೂಪದಲ್ಲಿ ಹಣ ಸಂಗ್ರಹಿಸಲಾಗಿದೆ. ತೀರ್ಥಹಳ್ಳಿಯಿಂದ ತಂದ ಶಿಲೆಯನ್ನು ಬಳಸಿ, ದೇವಾಲಯವನ್ನು ನಿರ್ಮಿಸಲಾಗಿದ್ದು, ಪುತ್ತೂರಿನ ಎಂಜಿನಿಯರ್, ವಾಸ್ತುಶಾಸ್ತ್ರಜ್ಞ, ಶಿಲ್ಪಕಲಾ ತಜ್ಞ ಜಗನ್ನಿವಾಸ ರಾವ್ ಮಾರ್ಗದರ್ಶನದಲ್ಲಿ; ಕಟ್ಟಡ ನಿರ್ಮಾಣ ಶಿಲ್ಪಿ ಮಂಜುನಾಥ ನಾಯಕ ಮುರ್ಡೇಶ್ವರ ಅವರ ನೇತೃತ್ವದಲ್ಲಿ ಸುಮಾರು ಒಂದು ವರ್ಷದ ಪರಿಶ್ರಮದಿಂದ ಸುಂದರ ಮಂದಿರ ನಿರ್ಮಾಣಗೊಂಡಿದೆ. ಮಂದಿರದ ಮೇಲ್ಭಾಗದ ಹೊದಿಕೆ ಮತ್ತು ಶಿಖರಗಳಿಗೆ ದ್ರಾವಿಡ ಶೈಲಿಯನ್ನು ಅಳವಡಿಸಲಾಗಿದ್ದರೆ, ಗುಡಿಯ ಒಳಭಾಗದಲ್ಲಿ ಕೇರಳ ಶೈಲಿಯ ಚಿತ್ರಗಳನ್ನು ಕೆತ್ತಲಾಗಿದೆ.ಸುಮಾರು ಆರೇಳು ತಲೆಮಾರಿನಿಂದಲೂ ದೇವಸ್ಥಾನದ ಅರ್ಚಕರಾಗಿ ಜೋಗನಜಡ್ಡಿಯ ನಾರಾಯಣ ಗಣಪತಿ ಭಟ್ಟರ ಕುಟುಂಬ ಕಾರ್ಯ ನಿರ್ವಹಿಸುತ್ತ ಬಂದಿದ್ದಾರೆ. ಇವರ ತಂದೆ ಗಣಪತಿ ಭಟ್ಟರು ಆ ಕಾಲದಲ್ಲಿ ೨ ಕಿಮೀ ದೂರದಿಂದ ಕೊಡದಲ್ಲಿ ನೀರು ತಂದು ದೇವರಿಗೆ ಅಭಿಷೇಕ ಮಾಡುತ್ತಿರುವುದನ್ನು ಭಕ್ತರು ಸ್ಮರಿಸಿಕೊಳ್ಳುತ್ತಾರೆ. ಇದು ಹಿತ್ತಲಕಾರಗದ್ದೆಯ ಗ್ರಾಮ ದೇವಸ್ಥಾನವಾಗಿದ್ದು, ೧೯೫೨ರಲ್ಲಿ ನೋಂದಾವಣಿಗೊಂಡಂತೆ ಹನುಮಂತಗುಡಿಯ ಸಿಂಗಲ್ ಟ್ರಸ್ಟಿಯಾಗಿ ನರಸಿಂಹ ಭಟ್ಟ ಹೊನ್ನಸೀಗೆಪಾಲ(ಕುಂಟೇಜಡ್ಡಿ) ಹಾಗೂ ಗಣಪತಿ ಗುಡಿಯ ಟ್ರಸ್ಟಿಯಾಗಿ ರಾಮಕೃಷ್ಣ ಭಟ್ಟ ಬಾಳಗೀಮನೆ ಕಾರ್ಯನಿರ್ವಹಿಸುತ್ತಿದ್ದಾರೆ.ಮಾರುತಿ ದೇವಾಲಯಕ್ಕೆ ''''''''ಪ್ರಸಾದ ಮಾರುತಿ''''''''ಯೆಂದೇ ಕರೆಯಲಾಗುತ್ತದೆ. ಕಾರಣ ಪ್ರತಿ ಶನಿವಾರ ಅರ್ಚಕರು ಭಕ್ತರ ಮನೋಭಿಲಾಷೆಯಂತೆ ಪ್ರಾರ್ಥಿಸಿ ದೇವರಲ್ಲಿ ಪ್ರಸಾದ ಕೇಳುತ್ತಾರೆ. ಅಲ್ಲದೇ ಈ ಎರಡೂ ಮಂದಿರಗಳು ಸೇರಿ ''''''''ಗಜಾನನ ಮಾರುತಿ ದೇವಸ್ಥಾನ'''''''' ಎಂದು ನಾಮಧೇಯ ಹೊಂದಿದೆ.
ಈ ನೂತನ ಶಿಲಾಮಯ ಗಣಪತಿ ಮಂದಿರದ ಗೌರವಾಧ್ಯಕ್ಷ ವೆಂಕಟರಮಣ ಭಟ್ಟ ಮುಂಡಗೋಡಿಮನೆ, ಕಾರ್ಯಾಧ್ಯಕ್ಷ ದತ್ತಾತ್ರೇಯ ಭಟ್ಟ ಮುಂಡಗೋಡಿಮನೆ, ಅಧ್ಯಕ್ಷ ಶ್ರೀಧರ ಭಟ್ಟ(ಕಪಿಲಾ ಟ್ರೇಡರ್ಸ್), ಉಪಾಧ್ಯಕ್ಷ ನಾರಾಯಣ ಭಟ್ಟ ತಮ್ಮ ಸದಸ್ಯರ ನೆರವಿನಲ್ಲಿ ದೇವಸ್ಥಾನವನ್ನು ಸುಂದರವಾಗಿ ನಿರ್ಮಿಸಿದ್ದಾರೆ.ಐತಿಹಾಸಿಕ ಹಿನ್ನೆಲೆ
ಇಲ್ಲಿನ ಮಾರುತಿ ದೇವರ ದೇವಸ್ಥಾನವನ್ನು ಚೋಳರ ಕಾಲದಲ್ಲಿ (೯೦೭- ೧೨೧೫ ನೇ ಶತಮಾನ) ಯಲ್ಲಾಪುರ ತಾಲೂಕಿನ ಹಿತ್ತಲಕಾರಗದ್ದೆ ಗ್ರಾಮದ ಹುಲ್ಲೋರಮನೆಯಲ್ಲಿ ನಿರ್ಮಿಸಲಾಗಿದೆ. ಪಕ್ಕದಲ್ಲೇ ಸುಮಾರು ೩೦೦ ವರ್ಷಗಳ ಪೂರ್ವದಲ್ಲಿ ಗಣಪತಿ ದೇವಸ್ಥಾನವನ್ನೂ ಆ ಭಾಗದ ಹಿರಿಯರು ಪ್ರತಿಷ್ಠಾಪಿಸಿದ್ದರು ಎಂಬುದನ್ನು ಇತಿಹಾಸಕಾರರು ಹೇಳುತ್ತಾರೆ.