ಯಲ್ಲಾಪುರ: ತಾಲೂಕಿನ ಚಿಕ್ಕಮಾವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೭೫ನೆಯ ವರ್ಷದ ಸಂಭ್ರಮದ ನಿಮಿತ್ತ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅವರು ಶಾಲೆಯಲ್ಲಿ ಏರ್ಪಡಿಸಿದ್ದ ವಿಜ್ಞಾನ ವಸ್ತುಪ್ರದರ್ಶನ ಮತ್ತು ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದರು.ಆನಂತರ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ‍್ಯ ದೊರಕಿದ ಸಂದರ್ಭದಲ್ಲಿ ಆರಂಭಗೊಂಡ ಈ ಶಾಲೆಯು ಇದೀಗ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಅತೀವ ಸಂತಸದ ಸಂಗತಿ. ಸಂಸ್ಕಾರಪೂರ್ಣ ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಬಹುದೆಂಬುದನ್ನು ಅರಿತ ಹಿರಿಯರು ಈ ಶಾಲೆಯ ಅಭಿವೃದ್ಧಿಗಾಗಿ ಅಪಾರ ಪ್ರಮಾಣದಲ್ಲಿ ಶ್ರಮಿಸಿದ್ದಾರೆ ಎಂದು ಹಿರಿಯರನ್ನು ಸ್ಮರಿಸಿದರು. ಮಕ್ಕಳ ಕೈಬರಹದ ಪತ್ರಿಕೆ "ಅಮೃತ ದೀವಿಗೆ "ಯನ್ನು ಬಿಡುಗಡೆಗೊಳಿಸಿದ ಅವರು, ''''''''ವಿದ್ಯೆ ಇಲ್ಲದವನು ಹದ್ದಿಗಿಂತ ಕಡೆ'''''''' ಎಂಬ ಸರ್ವಜ್ಞನ ತ್ರಿಪದಿಯನ್ನು ಪುನರುಚ್ಚರಿಸಿದರು. ಈ ಸಂದರ್ಭದಲ್ಲಿ ಮಾಜಿ ಯೋಧರು, ಶಾಲೆಯಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕರು, ಊರಿನ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.ಕಣ್ಣೀಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದ ಮರಾಠಿ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ ವಿರಕ್ತಮಠ, ಸಿಆರ್‌ಪಿ ಶ್ರೀನಿವಾಸಪ್ರಸಾದ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್. ಭಟ್ಟ ಮೊದಲಾದವರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕರಾದ ಲಕ್ಷ್ಮಣ ಕೋಟದಮಕ್ಕಿ, ವಿಜಯ ನಾಯಕ, ಹೊನ್ನಮ್ಮ ನಾಯಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ದಿನಗಳನ್ನು ಮೆಲುಕು ಹಾಕಿ, ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಶ್ರುತಿ ಭಟ್ಟ ಹಾಗೂ ಸಂಗಡಿಗರ ಸ್ವಾಗತ ಗೀತೆ ಹಾಡಿದರು. ಶಿಕ್ಷಕರಾದ ಶಂಕರಾನಂದ ದೇವದಾಸ್ ಕಾರ್ಯಕ್ರಮ ನಿರ್ವಹಿಸಿದರು. ಶೋಭಾ ನಾಯಕ ಅವರು ವರದಿ ವಾಚಿಸಿದರು. ಮುಖ್ಯಾಧ್ಯಾಪಕ ಮಧುಕರ ಹೆಗಡೆ ಅವರು ವಂದಿಸಿದರು.