ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ ಕೆಎಸ್ಸಾರ್ಟಿಸಿ ಮುಖ್ಯ ಬಸ್ಸು ನಿಲ್ದಾಣ, ಬೇತೂರು ರಸ್ತೆಯ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಲವಾರು ಆಧುನಿಕ ಸೌಕರ್ಯ ಹೊಂದಿರುವ, ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್‌ಗಳ ಜೊತೆಗೆ ಪ್ರಯಾಣಿಕರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿರುವ ರಾಜ್ಯದ ಮೊಟ್ಟ ಮೊದಲ ಬಸ್ಸು ನಿಲ್ದಾಣ ಇದಾಗಿದೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಧಾನ ಬಸ್ಸು ನಿಲ್ದಾಣ, ಬೇತೂರು ರಸ್ತೆಯ ಜಗಳೂರು ಬಸ್ಸು ನಿಲ್ದಾಣ ನಿರ್ಮಿಸಲಾಗಿದೆ. 6.07 ಎಕರೆ ಜಾಗದಲ್ಲಿ ಸುಮಾರು 120 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ಸ್ಮಾರ್ಟ್ ಸಿಟಿ ಶೇ.75, ನಿಗಮದಿಂದ ಶೇ.25 ಅನುಪಾತದಲ್ಲಿ ಅನುದಾನ ಬಳಸಲಾಗಿದೆ. ಬೇತೂರು ರಸ್ತೆಯ ಬಸ್ಸು ನಿಲ್ದಾಣ ವನ್ನು 1.20 ಎಕರೆ ಜಾಗದಲ್ಲಿ 8.96 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ದಾವಣಗೆರೆಯಿಂದ ನಿತ್ಯವೂ 1400ಕ್ಕೂ ಹೆಚ್ಚು ಬಸ್ಸು ಸಂಚರಿಸುತ್ತಿವೆ. ಇಲ್ಲಿಗೆ ಬಂದು, ಹೋಗುವ ಬಸ್ಸುಗಳ ಸಂಖ್ಯೆಯೂ ಹೆಚ್ಚಾಗಿದ್ದು, ಅದಕ್ಕೆ ಪೂರಕವಾಗಿ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ನಾವು ಅಧಿಕಾರಕ್ಕೆಬಂದ 15 ದಿನದಲ್ಲೇ ಶಕ್ತಿ ಯೋಜನೆ ಜಾರಿಗೆ ತಂದೆವು. ಆದರೆ, ಶಕ್ತಿಯಿಂದ ಮುಂದಿನ ದಿನಗಳಲ್ಲಿ ನಿಗಮದ ಬಸ್ಸುಗಳಿಗೆ ಇಂಧನಕ್ಕೂ ಹಣ ಇಲ್ಲದಂತಾಗುತ್ತದೆಂಬ ಭಾವನೆ ನಿವಾರಣೆ ಮಾಡಿ, ನಿಗಮವನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ. ಶಕ್ತಿ ಬಂದಾಗಿನಿಂದ ರಾಜ್ಯದಲ್ಲಿ 160 ಕೋಟಿಗಿಂತಲೂ ಹೆಚ್ಚು ಮಹಿಳೆಯರು ಪ್ರಯಾಣಿಸಿದ್ದಾರೆ. ವಿವಿಧ ನಿಗಮಗಳಿಗೆ ಸುಮಾರು 5800 ಹೊಸ ಬಸ್ಸು ಖರೀದಿಸಲಾಗುತ್ತಿದ್ದು, ಈಗಾಗಲೇ ಅರ್ಧಕ್ಕೂ ಹೆಚ್ಚು ಹೊಸ ಬಸ್ಸು ಬಂದಿವೆ. ಉಳಿದ ಅರ್ಧದಷ್ಟು ಬಸ್ಸುಗಳು ಬರಬೇಕಿದೆ ಎಂದು ಅವರು ಹೇಳಿದರು.
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಇದೇ ಕೆಎಸ್ಸಾರ್ಟಿಸಿ ನಿಲ್ದಾಣದಲ್ಲಿ ಹಿಂದೆ ಸ್ವಚ್ಛತೆ ಟೆಂಡರ್ ಪಡೆದು, 2 ದಶಕ ಕಾಲ ನಾನು ನಿರ್ವಹಣೆ ಮಾಡಿದ್ದೇನೆ. ಮಳೆ ಬಂದಂರೆ ಇಡೀ ನಿಲ್ದಾಣ ಜಲಾವೃತವಾಗುತ್ತಿತ್ತು. ಈಗ ಎತ್ತರದಲ್ಲಿ ನಿಲ್ದಾಣ ನಿರ್ಮಿಸಲಾಗಿದೆ. ಈ ನಿಲ್ದಾಣ ಉದ್ಘಾಟನೆಯಲ್ಲಿ ಶಾಸಕನಾಗಿ ಭಾಗಿಯಾಗಿದ್ದು ಧನ್ಯತೆ ಎನಿಸುತ್ತಿದೆ ಎಂದರು.
ಸಾರಿಗೆ ಸಚಿವರಾಗಿ ರಾಮಲಿಂಗಾರೆಡ್ಡಿ ಕ್ರಾಂತಿಕಾರಕ ಬದಲಾವಣೆ ತಂದವರು. ನೂರಾರು ಬಸ್ಸುಗಳನ್ನು ನೀಡಿ, ಇಡೀ ದೇಶದಲ್ಲೇ ಅಗ್ರಗಣ್ಯ ಸಾರಿಗೆ ಸಂಸ್ಥೆ ಯೆಂಬ ಹೆಗ್ಗಳಿಗೆ ಕರ್ನಾಟಕಕ್ಕೆ ಸಿಕ್ಕಿದ್ದರೆ ಅದಕ್ಕೆ ರಾಮಲಿಂಗಾರೆಡ್ಡಿ ಪರಿಶ್ರಮ ಇದೆ. ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯನ್ನು ಅಧಿಕಾರಕ್ಕೆ ಬಂದ 15 ದಿನಕ್ಕೆ ಮೊದಲ ಗ್ಯಾರಂಟಿ ಯೋಜನೆಯಾಗಿ ಜಾರಿಗೊಳಿಸಿದ್ದು ರಾಮಲಿಂಗಾರೆಡ್ಡಿಯವರು. ಮಾಯಕೊಂಡದಲ್ಲೂ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣಕ್ಕೆ 10 ಕೋಟಿ ನೀಡಿದ್ದು, ಕಾಮಗಾರಿ ಸಾಗಿದೆ ಎಂದು ಅವರು ತಿಳಿಸಿದರು.ಹಳೆ ಬಸ್ಸು ನಿಲ್ದಾಣ ಹಾಳುಗೆಡವಿದ ಬಿಜೆಪಿ: ಎಸ್.ಎಸ್.ಮಲ್ಲಿಕಾರ್ಜುನ ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಕ್ಕೆ ರೂಪಿಸಲಾದ ಮಾನದಂಡದಲ್ಲಿ ದೇಶದಲ್ಲೇ ದಾವಣಗೆರೆ 9ನೇ ಸ್ಥಾನದಲ್ಲಿದ್ದು, ಹಿಂದೆ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ, ಬೇತೂರು ರಸ್ತೆ ಬಸ್ಸು ನಿಲ್ದಾಣ, ಹಳೆ ಬಸ್ಸು ನಿಲ್ದಾಣಕ್ಕೆ ಒಪ್ಪಿಗೆ ನೀಡಿದ್ದು, ಹಳೆ ಬಸ್ಸು ನಿಲ್ದಾಣವನ್ನು ತರಾತುರಿಯಲ್ಲಿ ಉದ್ಘಾಟಿಸಿದ ಬಿಜೆಪಿಯವರು ಹಾಳು ಗೆಡವಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕಿಡಿಕಾರಿದ್ದಾರೆ.ನಗರದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ ಕೆಎಸ್ಸಾರ್ಟಿಸಿ ಮುಖ್ಯ ಬಸ್ಸು ನಿಲ್ದಾಣ, ಬೇತೂರು ರಸ್ತೆಯ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಲೋಕಾರ್ಪಣೆ ಸಮಾರಂಭ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ ಸುಮಾರು 120 ಕೋಟಿ ರು. ವೆಚ್ಚದಲ್ಲಿ ಅತ್ಯಾಧುನಿಕವಾಗಿ ನಿರ್ಮಾಣವಾಗಿದ್ದು, ಇದೊಂದು ವ್ಯವಸ್ಥಿತ ನಿಲ್ದಾಣವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ನಗರ, ಗ್ರಾಮೀಣ ಭಾಗಕ್ಕೆ ಬಸ್ಸುಗಳ ಸೇವೆಯನ್ನು ವಿಸ್ತರಿಸಲಾಗುವುದು. ಹೊಸ ಮಾರ್ಗಕ್ಕೂ ಜನರ ಬೇಡಿಕೆಗೆ ಸ್ಪಂದಿಸಿ, ಬಸ್ಸು ಸೇವೆ ಒದಗಿಸಲಾಗುವುದು ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಭರವಸೆ ನೀಡಿದರು.
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೂ ಕಾಂಗ್ರೆಸ್ ಪಕ್ಷ ಸೂಕ್ತ, ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಯಜಮಾನರಾದ ನಮ್ಮ ಪಕ್ಷದ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರು ಯಾರಿಗೆ ಹೇಳುತ್ತಾರೋ, ಅವರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗುವುದು. 2ನೇ ಪಟ್ಟಿಯಲ್ಲಿ ದಾವಣಗೆರೆ ಅಭ್ಯರ್ಥಿ ಘೋಷಣೆ ಆಗಲಿದೆ ಎಂದು ಅವರು ತಿಳಿಸಿದರು.
ಸದ್ಯಕ್ಕೆ ಯಾವುದೇ ಗೊಂದಲ ಇಲ್ಲ, ಆಕಾಂಕ್ಷಿಗಳು ಹೆಚ್ಚಾಗಿ ಇರದಂತಹ ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ರಾಜ್ಯದ 7 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ತಮ್ಮ ಪುತ್ರಿ ಸ್ಪರ್ಧೆ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಪಕ್ಷದ ಯಾರಿಗೆ ಟಿಕೆಟ್ ನೀಡುತ್ತದೋ, ಅಂತಹವರನ್ನು ಗೆಲ್ಲಿಸುವುದಷ್ಟೇ ನಮ್ಮ ಕೆಲಸ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ನೀರಿನ ಮಿತ ಬಳಕೆಗೆ ಸಚಿವ ರೆಡ್ಡಿ ಕರೆ
ಬೆಂಗಳೂರು ಮಹಾ ನಗರದಲ್ಲಿ ನೀರಿನ ಸಮಸ್ಯೆ ಉಲ್ಭಣಿಸುತ್ತಿರುವುದು ನಿಜ. ಕಾರು ಇತರೆ ವಾಹನಗಳನ್ನು ತೊಳೆಯದಂತೆ ಸೂಚನೆ ಸಹ ನೀಡಲಾಗಿದೆ. ನೀರು ಬಳಕೆ ಮಿತವಾಗಿರಲೆಂದು ಮನವಿ ಸಹ ಮಾಡಲಾಗಿದೆ. ಒಂದೋ ಎರಡೋ ದೊಡ್ಡ ಮಳೆಗಳಾದರೆ ಅಂತರ್ಜಲ ವೃದ್ಧಿಯಾಗಿ, ನೀರಿನ ಸಮಸ್ಯೆ ನಿವಾರಣೆ ಯಾಗುತ್ತದೆ. ಸದ್ಯಕ್ಕೆ ಜನರೂ ಸಹ ನೀರಿನ ಮಿತ ಬಳಕೆಗೆ ಗಮನ ಹರಿಸಬೇಕು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.