ಕನ್ನಡಪ್ರಭ ವಾರ್ತೆ ಮಂಡ್ಯ
ಪಿಇಎಸ್ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಪಿಇಎಸ್ ನೆಕ್ಸ್ಟ್ ಆವಿಷ್ಕಾರ ಮತ್ತು ಸಂವರ್ಧನಾ ಕೇಂದ್ರ ಹಾಗೂ ಎಲೆಕ್ಟ್ರಿಕ್ ವಾಹನಗಳ ಉತ್ಕೃಷ್ಟತಾ ಕೇಂದ್ರಗಳ ಉದ್ಘಾಟನಾ ಸಮಾರಂಭ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ಮಾ.೩ರಂದು ಮಧ್ಯಾಹ್ನ ೩ ಗಂಟೆಗೆ ನಡೆಯಲಿದೆ ಎಂದು ಕಾಲೇಜಿನ ಉಪ ಪ್ರಾಂಶುಪಾಲ ಡಾ.ಎಸ್.ವಿನಯ್ ತಿಳಿಸಿದರು.ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ವಹಿಸುವರು. ವಿಶೇಷ ಆಹ್ವಾನಿತರಾಗಿ ಬಿಜಿಎಸ್ ಮತ್ತು ಎಸ್‌ಜಿಬಿ ಸಮೂಹ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ.ಪುಟ್ಟರಾಜು ಮತ್ತು ಪಿಇಎಟಿ ಸಂಸ್ಥೆಯ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಉಪಸ್ಥಿತರಿರುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆವಿಷ್ಕಾರ ಮತ್ತು ಸಂವರ್ಧನಾ ಕೇಂದ್ರ:ಪಿಇಎಸ್ ನೆಕ್ಸ್ಟ್ ಇನ್ನೋವೇಷನ್ ಮತ್ತು ಇನ್‌ಕ್ಯುಬೇಶನ್ ಕೇಂದ್ರವು ಉದ್ಯಮಶೀಲತೆಯನ್ನು ಪೋಷಿಸಲು, ಸಂಶೋಧನೆ ಆಧಾರಿತ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲು, ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆಗೊಳಿಸಲು ರೂಪಿಸಲಾಗಿದೆ. ಕಾಲೇಜಿನ ೯ ಸಾವಿರ ಚದರಡಿ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಈ ಕೇಂದ್ರ ಪ್ರಮುಖ ಸೌಲಭ್ಯಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
೫೦ ಆಸನಗಳ ಇನ್‌ಕ್ಯುಬೇಶನ್ ಸೌಲಭ್ಯವು ವಿದ್ಯಾರ್ಥಿಗಳು ಮತ್ತು ಆಕಾಂಕ್ಷಿ ಉದ್ಯಮಿಗಳಿಗೆ ಅತ್ಯಾಧುನಿಕ ಮೂಲಸೌಕರ್ಯ, ಮಾರ್ಗದರ್ಶನ ಮತ್ತು ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ. ಮೇಕರ್ ಸ್ಪೇಸ್ ಪ್ರಯೋಗಾಲಯಗಳಲ್ಲಿ ವಸ್ತುಗಳನ್ನು ತಯಾರಿಸಿ ಆನಂದಿಸುವವರಿಗೆ, ಉತ್ಪನ್ನಗಳ ಕಾರ್ಯವಿಧಾನದ ಬಗ್ಗೆ ಕುತೂಹಲ ಹೊಂದಿರುವವರಿಗೆ ಅಥವಾ ಪ್ರಯೋಗಾಲಯಗಳಲ್ಲಿ ಹೊಸ ಕೌಶಲ್ಯಗಳನ್ನು ಕಲಿಯಲು ಬಯಸುವವರಿಗೆಂದು ಸ್ಥಾಪಿಸಲಾಗಿದೆ. ಇದು ಇನ್‌ಕ್ಯುಬೇಶನ್ ಕೇಂದ್ರದ ಭಾಗವಾಗಿದೆ ಎಂದು ವಿವರಿಸಿದರು.ಮೇಕರ್ ಸ್ಪಪೇಸ್‌ನಲ್ಲಿ ೩ಡಿ ಪ್ರಿಂಟರ್‌ಗಳು, ಸಿಎನ್‌ಸಿ ಯಂತ್ರಗಳು, ಐಒಟಿ ಕಿಟ್‌ಗಳು, ಫಂಕ್ಷನ್ ಜನರೇಟರ್‌ಗಳು, ಡಿಜಿಟಲ್ ಮಲ್ಟಿ ಮೀಟರ್‌ಗಳು ಹೆಚ್ಚು ನಿಖರವಾದ ಬೆಂಚ್ ಪವರ್ ಸಪ್ಲೈಗಳು, ಸ್ಯಾಲರಿಂಗ್ ಸ್ಟೇಷನ್‌ಗಳು, ವೆಲ್ಡಿಂಗ್ ಕಿಟ್‌ಗಳು ಮತ್ತು ವಿವಿಧ ರೀತಿಯ ಕೈ ಮತ್ತು ಯಂತ್ರೋಪಕರಣಗಳನ್ನು ಒಳಗೊಂಡಂತೆ ವೈವಿಧ್ಯಮಯ ತಯಾರಿಕೆ ಮತ್ತು ಪರೀಕ್ಷಾ ಸಾಮರ್ಥ್ಯಗಳಿವೆ ಎಂದರು.
ಆ್ಯಪಲ್ ಸೆಂಟರ್ ಆಫ್ ಎಕ್ಸಲೆನ್ಸಸ್ ಪಿಇಎಸ್ ನೆಕ್ಸ್ಟ್ ಫೌಂಡೇಷನ್‌ನಲ್ಲಿ ಸ್ಥಾಪಿತವಾಗಿದ್ದು, ಮ್ಯಾಕ್ ಕಂಪ್ಯೂಟರ್‌ಗಳು ಮತ್ತು ಐಒಎಸ್ ಡೆವಲಪ್‌ಮೆಂಟ್ ಮಲ್ಟಿ ಮೀಡಿಯಾ ಡಿಸೈನ್ ಮತ್ತು ಕೋಡಿಂಗ್‌ನಲ್ಲಿ ತರಬೇತಿ ನೀಡುತ್ತದೆ ಎಂದು ತಿಳಿಸಿದರು.ಎಲೆಕ್ಟ್ರಿಕ್ ವಾಹನಗಳ ಉತ್ಕೃಷ್ಟತಾ ಕೇಂದ್ರ:
ಪಿಇಎಸ್‌ಸಿಇಯ ಭವಿಷ್ಯ ಕೇಂದ್ರಿತ ಶಿಕ್ಷಣದ ಬದ್ಧತೆಯನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ನಾವು ಎಲೆಕ್ಟ್ರಿಕ್ ವಾಹನಗಳ ಮೇಲಿನ ಉತ್ಕೃಷ್ಟತಾ ಕೇಂದ್ರವನ್ನೂ ಉದ್ಘಾಟಿಸುತ್ತಿದ್ದೇವೆ. ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ನಿರ್ಮಿತವಾಗಿದ್ದು ೧೪೦೦ ಚದರಡಿ ವಿಸ್ತೀರ್ಣವನ್ನು ಹೊಂದಿದೆ. ವಿದ್ಯಾರ್ಥಿಗಳು, ಉದ್ಯಮ ವೃತ್ತಿಪರರು ಮತ್ತು ಸಾರ್ಟ್‌ಅಪ್‌ಗಳಿಗೆ ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನದಲ್ಲಿ ತರಬೇತಿ ನೀಡಲು ರೂಪಿಸಲಾಗಿದೆ ಎಂದು ನುಡಿದರು.ಈ ಕೇಂದ್ರವು ಇವಿ ಪವರ್ ಟ್ರೇನ್ ಡಿಸೈನ್, ಬ್ಯಾಟರಿ ನಿರ್ವಹಣೆ, ಚಾರ್ಜಿಂಗ್ ಮೂಲಸೌಕರ್ಯ ಮತ್ತು ವಾಹನ ನಿರ್ಣಯದ ಮೇಲೆ ಕೇಂದ್ರೀಕರಿಸುತ್ತದೆ. ಜೊತೆಗೆ ಪ್ರಾಯೋಗಿಕ ಮೂಲ ಮಾದರಿ ತಯಾರಿಕೆ, ಪ್ರಯೋಗಾತ್ಮಕ ಸಿದ್ಧತೆಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ತರಬೇತಿ ಕಾರ್ಯಕ್ರಮಗಳನ್ನು ಒಳಗೊಂಡಿರುವುದಾಗಿ ಹೇಳಿದರು.
ಈ ಎರಡೂ ಉತ್ಕೃಷ್ಟತಾ ಕೇಂದ್ರಗಳು ಆತ್ಮನಿರ್ಭರ ಭಾರತ ಮತ್ತು ಹಸಿರು ಚಲನಶೀಲತೆಯಂತಹ ರಾಷ್ಟ್ರೀಯ ಉಪಕ್ರಮಗಳೊಂದಿಗೆ ಪೂರಕ ಸಂಬಂಧ ಹೊಂದಿವೆ. ತಂತ್ರಜ್ಞಾನ ಪ್ರೇರಿತ ಉದ್ಯಮಶೀಲತೆ ಮತ್ತು ಸಮರ್ಥನೀಯ ಚಲನಶೀಲತೆ ಪರಿಹಾರಗಳಲ್ಲಿ ಮುಂಚೂಣಿಯಲ್ಲಿರಲು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಉದ್ಯಮ ವೃತ್ತಿಪರರಿಗೆ ಸಾಮರ್ಥ್ಯವನ್ನು ನೀಡುತ್ತವೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಪ್ರಾಂಶುಪಾಲ ಡಾ.ಎನ್.ಎಲ್.ಮುರಳಿ ಕೃಷ್ಣ, ಡಾ.ಕೆ.ಎಂ.ಮಹೇಶ್‌ಕುಮಾರ್, ಡಾ.ಕೋದಂಡರಾಮ ಇದ್ದರು.