ದೊಡ್ಡಬಳ್ಳಾಪುರ: ನೈರುತ್ಯ ರೈಲ್ವೆ ವಲಯದ ದೊಡ್ಡಬಳ್ಳಾಪುರ ತಾಲೂಕು ವಡ್ಡರಹಳ್ಳಿ ರೈಲು ನಿಲ್ದಾಣದಲ್ಲಿ ಪ್ರಧಾನಮಂತ್ರಿ ಗತಿಶಕ್ತಿ ಕಾರ್ಗೋ ಟರ್ಮಿನಲ್‌ಗೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡಿದರು.
ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ, ರೈಲ್ವೆ ನಿಲ್ದಾಣಗಳಲ್ಲಿ ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳು, ಗೂಡ್ಸ್ ಶೆಡ್, ಒನ್ ಸ್ಪೇಷನ್ ಒನ್ ಉತ್ಪನ್ನ ಮಳಿಗೆಗಳು ಮತ್ತು ಇತರ ರೈಲು ಮೂಲಸೌಕರ್ಯ ಯೋಜನೆಗಳಿಗೆ ವರ್ಚುವಲ್ ಮೂಲಕ ಉದ್ಘಾಟನೆ ಮತ್ತು ಶಿಲಾನ್ಯಾಸವನ್ನು ನೆರವೇರಿಸಿದರು.ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಿಂದ ಬಾಲಾಜಿ ಮೂವರ್ಸ್ ಅಂಡ್ ಸೈಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ದೊಡ್ಡಬಳ್ಳಾಪುರದ ಕಸಬಾ ಹೋಬಳಿಯ ವಡ್ಡರಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಕಾರ್ಗೋ ಟರ್ಮಿನಲ್ ಸಿದ್ಧಗೊಂಡಿದೆ.
ಉದ್ಯೋಗ ಸೃಷ್ಟಿಗೆ ಪೂರಕ:ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು ಮಾತನಾಡಿ, ಪಿಎಂ ಗತಿಶಕ್ತಿ ಯೋಜನೆಯಡಿ ಸರಕು ಸಾಗಾಣಿಕೆಗೆ ಅನುಕೂಲವಾಗುವಂತೆ ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ನೂತನ ರೈಲ್ವೆ ಮಾರ್ಗಗಳನ್ನು ನಿರ್ಮಿಸುವ ಯೋಜನೆ ರೂಪಿಸಿದ್ದಾರೆ. ತಾಲೂಕಿಗೆ ಒಂದು ಕಾರ್ಗೋ ಟರ್ಮಿನಲ್ ರೂಪಿಸುವ ಉದ್ದೇಶವಿದ್ದು, ಯೋಜನೆಯಿಂದ ಕಾರ್ಖಾನೆಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. ಬಿಜೆಪಿ ಆಡಳಿತದಲ್ಲಿ ಭಾರತೀಯ ರೈಲ್ವೆ ಗಣನೀಯ ಅಭಿವೃದ್ಧಿ ಕಂಡಿದೆ ಎಂದರು.
12.5 ಕೋಟಿ ರು. ವೆಚ್ಚದಲ್ಲಿ ಟರ್ಮಿನಲ್ ನಿರ್ಮಾಣ:ರೈಲ್ವೆ ಇಲಾಖೆಯ ಬೆಂಗಳೂರು ವಿಭಾಗದ ವ್ಯವಸ್ಥಾಪಕ ಕೃಷ್ಣಾರೆಡ್ಡಿ ಮಾತನಾಡಿ, ಬೆಂಗಳೂರು ವಿಭಾಗದಲ್ಲಿ 2 ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ, 40 ಒಎಸ್ಒಪಿ ಸ್ಟಾಲ್‌ಗಳು, 1 ಗತಿಶಕ್ತಿ ಕಾರ್ಗೋ ಟರ್ಮಿನಲ್, 1 ಗೂಡ್ಸ್ ಶೆಡ್, 01 ವರ್ಕ್ ಶಾಪ್ ಜೊತೆಗೆ 2 ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳ ಚಾಲನೆಗೆ ಹಸಿರು ನಿಶಾನೆ ತೋರಲಾಗಿದೆ. ಮಂಗಳವಾರ ವರ್ಚುವಲ್ ಮೂಲಕ ರಾಷ್ಟ್ರದ ಹಲವು ಭಾಗಗಳಲ್ಲಿ ಹಲವಾರು ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ರಾಷ್ಟ್ರಸಮರ್ಪಣೆ ಕಾರ್ಯವನ್ನು ಪ್ರಧಾನಿ ಮಾಡಿದ್ದಾರೆ ಎಂದರು.
ವಡ್ಡರಹಳ್ಳಿ ನಿಲ್ದಾಣದ ಬಳಿ 12.5 ಕೋಟಿ ರು. ವೆಚ್ಚದಲ್ಲಿ ಖಾಸಗಿ ಕಂಪನಿ ಸಹಯೋಗದಲ್ಲಿ ಕಾರ್ಗೋ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ. ದೇಶದ 100 ಟರ್ಮಿನಲ್ ಗಳಲ್ಲಿ ಇದೂ ಒಂದಾಗಿರುವುದು ಹೆಮ್ಮೆಯ ವಿಷಯವಾಗಿದೆ. ಈ ಟರ್ಮಿನಲ್ ಸ್ಥಳೀಯ ಕೈಗಾರಿಕೆಗಳಿಗೆ ಸ್ಟೀಲ್ ಸಾಗಾಣಿಕೆಗೆ ಅನುಕೂಲವಾಗಲಿದೆ. ಇದರಿಂದ ಈ ಭಾಗದಲ್ಲಿ ಉದ್ಯೋಗಾವಕಾಶಗಳು ರೂಪುಗೊಳ್ಳಲಿದ್ದು. ಮುಂದಿನ ದಿನಗಳಲ್ಲಿ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿಗೊಳ್ಳುತ್ತದೆ ಎಂದರು.ಜೆ.ಎಸ್.ಡಬ್ಲ್ಯೂ ಸ್ಟೀಲ್ ಕಂಪನಿ ಸಹಾಯಕ ಉಪಾಧ್ಯಕ್ಷ ಸಂಜಯ್ ಅನುಮೋಲ್ಕರ್ ಮಾತನಾಡಿ, ಗತಿಶಕ್ತಿ ಯೋಜನೆಯಡಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುವುದರ ಜೊತೆಜೊತೆಗೆ ಅಭಿವೃದ್ಧಿ ಕಾರ್ಯಗಳೂ ಸಾಗಲಿವೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷೆ ಶೋಭಾ ರಾಜಗೋಪಾಲ್, ಸದಸ್ಯರಾದ ರಾಮಚಂದ್ರರೆಡ್ಡಿ, ಮಹಾದೇವ, ನಾಗೇಶ್, ವಿ.ಎನ್ ಸುನಿತಾ, ಜಿ.ಆರ್ ಬಾಲಾಜಿ, ಜಿ.ಆರ್ ರಘು ಮತ್ತಿತರರು ಉಪಸ್ಥಿತರಿದ್ದರು.12ಕೆಡಿಬಿಪಿ1- ದೊಡ್ಡಬಳ್ಳಾಪುರದ ವಡ್ಡರಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಗತಿಶಕ್ತಿ ಕಾರ್ಗೋ ಟರ್ಮಿನಲ್‌ಗೆ ಶಾಸಕ ಧೀರಜ್ ಮುನಿರಾಜು ಚಾಲನೆ ನೀಡಿದರು.