ಕನ್ನಡಪ್ರಭ ವಾರ್ತೆ ದೂರಮೈಸೂರು ತಾಲೂಕಿನ ಜಯಪುರ ಹೋಬಳಿಯ ದೂರ ಗ್ರಾಮದ ಪೂರ್ವ ಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಮಹಾದ್ವಾರ, ಗಣೇಶ, ಸುಬ್ರಹ್ಮಣ್ಯ, ನವಗ್ರಹ ದೇವಸ್ಥಾನ, ಶ್ರೀಮೂಗಪ್ಪ ಸ್ವಾಮಿಗಳ ಗದ್ದುಗೆ ಹಾಗೂ ಶಿವ ಭವನದ ಉದ್ಘಾಟನಾ ಸಮಾರಂಭ ಸೋಮವಾರ ನೆರವೇರಿತು.ಮಹಾದ್ವಾರದ ಉದ್ಘಾಟನೆ ಹಾಗೂ ಶ್ರೀ ಶಿವರಾತ್ರೀಶ್ವರರ ಭಾವಚಿತ್ರವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅನಾವರಣಗೊಳಿಸಿದರು. ವಿವಿಧ ದೇವಸ್ಥಾನಗಳ ಉದ್ಘಾಟನೆ ಹಾಗೂ ಶ್ರೀ ಶಿವಕುಮಾರ ಸ್ವಾಮಿಗಳ ಭಾವಚಿತ್ರವನ್ನು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅನಾವರಣಗೊಳಿಸಿದರು. ಶಿವ ಭವನ ಉದ್ಘಾಟನೆ ಹಾಗೂ ಶ್ರೀ ಗುರುಮಲ್ಲೇಶ್ವರರ ಭಾವಚಿತ್ರವನ್ನು ಶ್ರೀ ಗುರುಮಲ್ಲೇಶ್ವರ ತ್ರಿವಿಧ ದಾಸೋಹ ಮಠದ ಶ್ರೀ ಮಹಾಂತ ಸ್ವಾಮೀಜಿ ಅನಾವರಣಗೊಳಿಸಿದರು.ನಂತರ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಧಾರ್ಮಿಕ ಸಭೆಯನ್ನು ಶ್ರೀ ಸಿದ್ದಲಿಂಗ ಸ್ವಾಮೀಜಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಬಳಿಕ ಮಾತನಾಡಿ, ಎಷ್ಟೇ ದೂರದಲ್ಲಿದ್ದರು ಮನಸ್ಸಿಗೆ ಹತ್ತಿರವಾಗಿದ್ದರೆ ಅದು ದೂರವಾಗುದಿಲ್ಲ ಅಂತಹ ಮನಸ್ಸಿಗೆ ತುಂಬಾ ಹತ್ತಿರವಾದ ಹಾಗೂ ಭಕ್ತಿ, ಶ್ರದ್ಧೆ ನಿಷ್ಠೆ, ಕಾಯಕಕ್ಕೆ ಹೆಸರಾದ ಊರು ಈ ದೂರ ಗ್ರಾಮ. 2009ಕ್ಕಿಂತ ಹಿಂದೆ ಶಿಥಿಲಾವಸ್ಥೆಯಲ್ಲಿದ್ದ ಶಂಭುಲಿಂಗೇಶ್ವರ ದೇವಸ್ಥಾನವನ್ನು ವಕೀಲ ಡಿ.ಬಿ. ರಾಜಶೇಖರ ಮೂರ್ತಿ ಪುನರ್ ನಿರ್ಮಾಣ ಮಾಡಿ ಜೀರ್ಣೋದ್ಧಾರ ಮಾಡಿದ್ದರು. ಈಗ ಶಂಭುಲಿಂಗೇಶ್ವರ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಮಹಾದ್ವಾರ, ವಿವಿಧ ದೇವಾಲಯಗಳು ಹಾಗೂ ಶಿವಭವನ ಅತ್ಯುತ್ತಮವಾಗಿ ನಿರ್ಮಾಣಗೊಂಡಿದೆ.ದೇವರು ಕಲ್ಲು, ಮಣ್ಣು, ಕಟ್ಟಿಗೆಯಲ್ಲಿಲ್ಲ. ಆದರೆ ದೇವರು ನಾವು ನೋಡುವ ಭಾವನೆಯಲ್ಲಿದ್ದಾನೆ. ಹೆಸರೇನೆ ಇದ್ದರೂ ಭಾವನೆಯಲ್ಲಿ ದೇವರಿದ್ದಾನೆ ಎಷ್ಟೇ ಕಷ್ಟ ಬಂದರೂ ಭಕ್ತಿಯನ್ನು ಬಿಡಬಾರದು ಎಂಬ ನಂಬಿಕೆ ನಮ್ಮ ಭಾರತ ಸಂಸ್ಕೃತಿಯಲ್ಲಿದೆ. ಗ್ರಾಮಸ್ಥರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿ ಗ್ರಾಮದ ಅಭಿವೃದ್ಧಿಗೆ ಪಾತ್ರರಾಗಬೇಕು ಎಂದು ಅವರು ಹೇಳಿದರು.ನಂತರ ಮಾತನಾಡಿದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮನೆಯಲ್ಲಿ ಎಷ್ಟೇ ಕಷ್ಟ, ದುಃಖ ದುಮ್ಮಾನಗಳು ಇದ್ದರೂ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ಅದೆಲ್ಲಾ ದೂರವಾಗುತ್ತವೆ. ಅಂತಹ ಒಂದು ಉತ್ತಮ ವಾತಾವರಣ ಕೆರೆ ಸಮೀಪವಿರುವ ಈ ದೇವಸ್ಥಾನದಲ್ಲಿದೆ. ಭಾರತ ಧಾರ್ಮಿಕವಾಗಿ ಶ್ರೀಮಂತವಾದ ದೇಶ 21ನೇ ಶತಮಾನದಲ್ಲಿಯೂ ಇಡೀ ಜಗತ್ತು ಭಾರತದ ಕಡೆ ನೋಡಲು ಆಧ್ಯಾತ್ಮಿಕ ಶಕ್ತಿ ಘನೀಭವಿಸಿರುವುದೇ ಕಾರಣ ಎಂದರು.ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಕೀಲ ದೂರ ಡಿ.ಬಿ. ರಾಜಶೇಖರ್ ಮೂರ್ತಿ, ಯು.ಎಸ್. ಶೇಖರ್, ಎಂ. ಪ್ರದೀಪ್ ಕುಮಾರ್, ಕೆ.ವಿ. ಮಲ್ಲೇಶ್, ಕೆ.ಎನ್. ರವಿಶಂಕರ್, ಬಿ.ಎಸ್. ಪ್ರಶಾಂತ್, ಕೆ.ಎಚ್. ಕಿರಣ್ ಕುಮಾರ್, ಎಸ್. ಎಂ. ಶಿವಪ್ರಕಾಶ್, ಎ.ಸಿ. ಜಗದೀಶ್, ತ್ರಿಶೂಲಧರ ಹಾಗೂ ಶಂಭುಲಿಂಗೇಶ್ವರ ದೇವಸ್ಥಾನ ಸಮಿತಿ ಸದಸ್ಯರಾದ ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಡಿ.ಬಿ. ನಾಗರಾಜು ನಿವೃತ್ತ ಇನ್‌ಸ್ಪೆಕ್ಟರ್‌ಡಿ.ಎಂ. ಮಲ್ಲೇಶ್ ಅವರನ್ನು ಸನ್ಮಾನಿಸಲಾಯಿತು.ಶ್ರೀ ಮಹಾಂತ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ಈ ಸಂದರ್ಭದಲ್ಲಿ ಕುಂದೂರು ಮಠದ ಶ್ರೀ ಡಾ. ಶರತ್ ಚಂದ್ರ ಸ್ವಾಮೀಜಿ, ಹುಲ್ಲಹಳ್ಳಿ ವಿರಕ್ತಮಠದ ಶ್ರೀ ಇಮ್ಮಡಿ ಚನ್ನಮಲ್ಲದೇಶಿಕೇಂದ್ರ ಸ್ವಾಮೀಜಿ, ಕುದೇರು ಮಠದ ಗುರುಶಾಂತ ಸ್ವಾಮೀಜಿ, ಬರಡನಪುರ ಶ್ರೀ ಮಹಾಂತೇಶ್ವರ ಮಠದ ಶ್ರೀ ಪರಶಿವಮೂರ್ತಿ ಸ್ವಾಮೀಜಿ, ಡಾ. ಷಡಕ್ಷರಿ ಸ್ವಾಮೀಜಿ, ಹಂಚಿಪುರ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಬಿಡಗಲು ಮಠದ ಶ್ರೀ ಮಹದೇವ ಸ್ವಾಮೀಜಿ, ಗ್ರಾಪಂ ಅಧ್ಯಕ್ಷ ಎಂ. ನಂಜುಂಡಸ್ವಾಮಿ, ದೇವಸ್ಥಾನ ಸಮಿತಿ ಸದಸ್ಯರು, ಮುಖಂಡರು, ಗ್ರಾಮಸ್ಥರು ಇದ್ದರು.ನಂತರ ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.