ಹಾಸನ : ಮಳೆಗೆ ಸಂಬಂಧಿಸಿದಂತೆ ಗ್ರಾಮೀಣ ಭಾಗದಲ್ಲಿ ‘ಆಗ ಹೋಗಿ ಕೆಡುಸ್ತು, ಈಗ ಹೂದು (ಮಳೆ ಬಂದು) ಕೆಡುಸ್ತು’ ಎನ್ನುವ ಮಾತಿದೆ. ಅಂದರೆ ಮಳೆ ಬರಬೇಕಾದ ಸಮಯದಲ್ಲಿ ಬಾರದೆ ಕೃಷಿಯನ್ನು ಕೆಡಿಸುತ್ತದೆ. ಕೆಲವೊಮ್ಮೆ ಬೇಡವಾದ ಸಮಯದಲ್ಲಿ ಮಳೆ ಎಡೆಬಿಡದೆ ಸುರಿದು ಕೆಡಿಸುತ್ತದೆ ಎಂದರ್ಥ. ಈ ವರ್ಷವೂ ಕೂಡ ಇದೇ ಆಗಿದೆ. ಸರಿಯಾದ ಸಮಯದಲ್ಲಿ ಬಾರದ ಮುಂಗಾರು ಇದೀಗ ಪ್ರತಿದಿನವೂ ಸುರಿಯುತ್ತಿದೆ. ಪರಿಣಾಮವಾಗಿ ರೈತರು ಭೂಮಿ ಹದಗೊಳಿಸಿಕೊಳ್ಳಲಾಗುತ್ತಿಲ್ಲ. ಇದರಿಂದಾಗಿ ಬಿತ್ತನೆ ಕಾರ್ಯ ಕುಂಠಿತಗೊಂಡಿದೆ.
ಈ ಹಿಂದಿನ ವರ್ಷಗಳಲ್ಲಿ ಮುಂಗಾರು ಆರಂಭದಲ್ಲಿಯೇ ವರ್ಷದ ಮೊದಲಿಗೆ ಬರುವ ರೇವತಿ, ಕೃತಿಕಾ ಮಳೆಗಳು ಭೂಮಿ ಉಳುಮೆ ಮಾಡಿ ಬಿತ್ತನೆಗೆ ಹದಗೊಳಿಸಲು ಬೇಕಾದಷ್ಟು ಮಳೆ ಸುರಿಸುತ್ತಿದ್ದವು. ಈ ಮಳೆಗಳಲ್ಲಿಯೇ ಕೆರೆ ಕಟ್ಟೆಗಳಿಗೆ ಅರ್ಧದಷ್ಟು ನೀರು ತುಂಬುತ್ತಿತ್ತು. ನಂತರ ಹದಗೊಳಿಸಿದ ಭೂಮಿಗೆ ಮೇ ತಿಂಗಳಲ್ಲಿ ಹದ ನೋಡಿ ಮುಸುಕಿನ ಜೋಳ, ಆಲೂಗಡ್ಡೆ, ರಾಗಿ, ಸೂರ್ಯಕಾಂತಿ, ತೊಗರಿ ಸೇರಿದಂತೆ ಮುಂಗಾರು ಹಂಗಾಮಿನ ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಬೀಳಬೇಕಾದ ಮಳೆಗಳು ಬರಲೇ ಇಲ್ಲ. ಇದೀಗ ಮೇ ತಿಂಗಳಿನಲ್ಲಿ ಕಳೆದ ಒಂದು ವಾರದಿಂದ ಜಿಲ್ಲೆಯ ಬಹುತೇಕ ಎಲ್ಲಾ ಭಾಗಗಳಲ್ಲೂ ಉತ್ತಮ ಮಳೆಯಾಗಿದೆ. ಈಗಲೂ ಕೂಡ ಹಾಸನ, ಆಲೂರು, ಬೇಲೂರು, ಚನ್ನರಾಯಪಟ್ಟಣ, ಅರಕಲಗೂಡು, ಹೊಳೆನರಸೀಪುರ ಭಾಗಗಳಲ್ಲಿ ಪ್ರತಿನಿತ್ಯ ಮಳೆ ಸುರಿಯುತ್ತಿದೆ. ಪ್ರತಿನಿತ್ಯವೂ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಬರಗಾಲದಿಂದ ಕಂಗೆಟ್ಟಿದ್ದ ರೈತರಿಗೆ ಒಂದೆಡೆ ಸಂತೋಷವಾಗುತ್ತಿದ್ದರೆ, ಪ್ರಸಕ್ತ ಮುಂಗಾರಿನ ಬಿತ್ತನೆ ಕಾರ್ಯ ಮಾಡಲು ಆಗುತ್ತಿಲ್ಲ ಎನ್ನುವ ನೋವು ಹಾಗೂ ಆತಂಕ ಕೂಡ ಕಾಡುತ್ತಿದೆ.
ರೇವತಿ, ಕೃತಿಕಾ ಮಳೆಗಳಲ್ಲಿ ಭೂಮಿ ಹದಗೊಳಿಸಿ ಭರಣಿ ಮಳೆಗೆ ಬೀಜ ಬಿತ್ತನೆ ಮಾಡುತ್ತಿದ್ದರು. ಆದರೆ, ಇದೀಗ ಅದು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಅಡ್ಡ ಮಳೆಗಳು ಮುಗಿದ ಕೂಡಲೇ ಸೋನೆ ಮಳೆ ಹಿಡಿದರೆ ಈ ವರ್ಷದ ಬೇಸಾಯವನ್ನೇ ಮರೆಯಬೇಕಾಗುತ್ತದೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಜೋಳ, ಆಲೂಗಡ್ಡೆ ಖರೀದಿ:
ಮುಂಗಾರಿನ ಆರಂಭ ತಡವಾದರೂ ಇದೀಗ ಬರುತ್ತಿರುವ ಮಳೆಯನ್ನು ಕಂಡ ರೈತರು ಆಶಾಭಾವನೆಯಿಂದ ಬಿತ್ತನೆಗೆ ಬೇಕಾದ ಮುಸುಕಿನ ಜೋಳ ಹಾಗೂ ಆಲೂಗಡ್ಡೆ ಖರೀದಿ ಮಾಡುತ್ತಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಕ್ವಿಂಟಾಲ್ ಬಿತ್ತನೆ ಆಲೂಗಡ್ಡೆಗೆ 2,500 ರು. ದರ ನಿಗದಿಗೊಳಿಸಿದೆ. ಎಪಿಎಂಸಿ ಆವರಣದಲ್ಲಿ ಬಿತ್ತನೆ ಆಲೂಗಡ್ಡೆ ವ್ಯಾಪಾರವೂ ಶುರುವಾಗಿದೆ. ಆದರೆ, ಪ್ರತಿದಿನ ಮಳೆ ಸುರಿಯುತ್ತಿರುವುದು ರೈತರಿಗೆ ಈಗ ತಲೆನೋವಾಗಿದೆ.
ಕಾಫಿ ಬೆಳೆಗಾರರಿಗೂ ತೊಡಕು:
ಮಾರ್ಚ್ ತಿಂಗಳಲ್ಲಿ ವರ್ಷದ ಮೊದಲ ಮಳೆ ಬರಬೇಕಿತ್ತು. ಮಲೆನಾಡಿನಲ್ಲಿ ಈ ಮಳೆಯನ್ನು ಹೂ ಮಳೆ ಎನ್ನುತ್ತಾರೆ. ಏಕೆಂದರೆ ಈ ಮಳೆ ಬಂದಾಗಲೇ ಕಾಫಿ ಗಿಡಗಳಲ್ಲಿ ಹೂಗಳು ಅರಳುತ್ತವೆ. ಇದಾದ ನಂತರದಲ್ಲಿ ಆಗಾಗ ಮಳೆ ಬರಬೇಕು. ಏಕೆಂದರೆ ಅರಳಿದ ಹೂಗಳು ಈಚುಗಳಾಗಿ ಕಾಯಿಗಳಾಗಲು ಆಗಾಗ ಮಳೆ ಬೇಕು. ಈ ಮಧ್ಯೆ ಬೆಳೆಗಾರರು ಕಾಫಿ ತೋಟಕ್ಕೆ ಏನೆಲ್ಲಾ ಕೆಲಸ ಮಾಡಬೇಕು ಅದನ್ನೆಲ್ಲಾ ಮಾಡಿಕೊಳ್ಳುತ್ತಾರೆ. ಆದರೆ ಪ್ರತಿದಿನ ಮಳೆ ಸುರಿಯುವುದರಿಂದ ಕಾಫಿ ತೋಟಗಳಿಗೆ ಗೊಬ್ಬರ ಹಾಕಲಾಗುತ್ತಿಲ್ಲ. ಹಾಗಾಗಿ ಈ ಎಡೆಬಿಡದೆ ಸುರಿಯುತ್ತಿರುವ ಮಳೆ ಕಾಫಿ ಉತ್ಪಾದನೆ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.