ಮಣ್ಣು, ನೀರಿನ ಸಂರಕ್ಷಣೆಯಿಂದ ಇಳುವರಿ ಹೆಚ್ಚಳ: ಡಾ. ಪಿ.ಎಲ್. ಪಾಟೀಲ

KannadaprabhaNewsNetwork | Published : Dec 12, 2024 12:34 AM

ಸಾರಾಂಶ

ಸಾವಯವ ಗೊಬ್ಬರ ಹಾಕಿ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಹೇಳಿದರು.

ರಾಣಿಬೆನ್ನೂರು: ನಿಸರ್ಗದತ್ತ ಸಂಪನ್ಮೂಲಗಳಾದ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವ ಮುಖಾಂತರ ಇಳುವರಿ ಹೆಚ್ಚಿಸಬಹುದು. ಸಾವಯವ ಗೊಬ್ಬರ ಹಾಕಿ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಹೇಳಿದರು.

ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ಪ್ರಗತಿಪರ ರೈತ ವೀರಪ್ಪ ಕಲ್ಲೇದೇವರ ಜಮೀನಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷಿ ವಿಜ್ಞಾನಿಗಳ ನಡೆ ರೈತರ ಕಡೆ ಹಾಗೂ ತೊಗರಿ ಬೆಳೆಯಲ್ಲಿ ನಾಟಿ ಪದ್ಧತಿ ಮುಂಚೂಣಿ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.

ಬಹು ಬೆಳೆ ಪದ್ಧತಿ, ಸಮಗ್ರ ಕೃಷಿ ಪದ್ಧತಿ ಹಾಗೂ ಮೌಲ್ಯವರ್ಧನೆ ಅಳವಡಿಸಿಕೊಂಡು ರೈತರು ಆದಾಯ ದ್ವಿಗುಣಗೊಳಿಸಕೊಳ್ಳಬೇಕು. ತೊಗರಿ ಬೆಳೆಯು ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಸಾರಜನಕವನ್ನು ಮಣ್ಣಿನಲ್ಲಿ ಸ್ಥಿರೀಕರಿಸುವುದಲ್ಲದೆ, ಕಟಾವಿನ ನಂತರ ಬೇರುಗಳು ಭೂಮಿಯಲ್ಲಿ ಉಳಿಯುವುದರಿಂದ ಹಾಗೂ ಬೆಳವಣಿಗೆಯ ಹಂತದಲ್ಲಿ ಎಲೆಗಳು ಉದುರುವುದರಿಂದ ಸಾವಯವ ಅಂಶ ಹೆಚ್ಚಾಗಿ ಮಣ್ಣಿನ ಭೌತಿಕ, ರಾಸಾಯನಿಕ, ಜೈವಿಕ ಕ್ರಿಯೆಗಳಿಗೆ ಚಾಲನೆ ದೊರೆತು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಹುದು ಎಂದರು.

ಧಾರವಾಡ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಆರ್. ಬಸವರಾಜಪ್ಪ ಮಾತನಾಡಿ, ತೊಗರಿ ಬೆಳೆಯಲ್ಲಿ ಅಂತರ ಬೆಳೆಗಳಾಗಿ 4 ಸಾಲು ಗೋವಿನಜೋಳ ಮತ್ತು 2 ಸಾಲು ತೊಗರಿ ಬೆಳೆಯನ್ನು (4:2) ಅಂತರ ಬೆಳೆಯಾಗಿ ಬೆಳೆಯುವುದು ಲಾಭದಾಯಕ. ಇದರ ಜೊತೆಯಲ್ಲಿ ಸಿರಿಧಾನ್ಯಗಳಾದ ನವಣೆ, ಸಾವಿ, ಬರಗು ಮತ್ತು ರಾಗಿ ಬೆಳೆಗಳನ್ನೂ ಅಂತರ ಬೆಳೆಯಾಗಿ ಬೆಳೆಯುವುದರಿಂದ ಹೆಚ್ಚಿನ ಆದಾಯವನ್ನು ಪಡೆಯಬಹುದು.

ತೊಗರಿ ಬೆಳೆಯ ಬೇಸಾಯ ಕ್ರಮಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಇದನ್ನು ಗೋವಿನಜೋಳಕ್ಕೆ ಪರ್ಯಾಯವಾಗಿ ಬೆಳೆಯುವುದರಿಂದ ಉತ್ತಮ ಇಳುವರಿ ಲಭಿಸುವ ಜೊತೆಗೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಹುದು ಎಂದರು.

ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಜಿ.ಎಸ್. ಮಾತನಾಡಿ, ತೊಗರಿ ಬೆಳೆಯಲ್ಲಿ ಕಂಡುಬರುವ ಕಾಯಿ ಕೊರಕ ಮತ್ತು ಎಲೆ ಮಡಚುವ ಕೀಟಗಳ ನಿರ್ವಹಣೆಗೆ ಪ್ರತಿಯೊಬ್ಬ ರೈತರು ಆರಂಭಿಕವಾಗಿ 2 ಮಿ.ಲೀ. ಪ್ರೊಫೆನೊಫಾಸ್ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ಎರಡನೇ ಸಿಂಪರಣೆಯಾಗಿ ಬೇವಿನ ಎಣ್ಣೆ 5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಅಥವಾ ಬೇವುಜನ್ಯ ಕೀಟನಾಶಕ ಬೆರೆಸಿ ಸಿಂಪರಣೆ ಮಾಡಬೇಕು. ಮೂರು ಹಾಗೂ ನಾಲ್ಕನೇ ಹಂತದ ಕೀಡೆ ಕಂಡು ಬಂದರೆ ಹೊಸ ಕೀಟನಾಶಕಗಳಾದ ರೆಕ್ಲೋರಾಂಟ್ರೀನಿಲಿಪ್ರೋಲ್ ಅಥವಾ ಪ್ಲೊಬೆಂಡಿಯಾಮೈಡ್ ಸಿಂರಪಣೆ ಮಾಡಬೇಕು. ಕಾಯಿ ನೊಣದ ಬಾಧೆಗಾಗಿ ಎಳೆಕಾಯಿಗಳಿದ್ದಾಗ ಕ್ಲೋರಾಂಟ್ರೀನಿಲಿಪ್ರೋಲ್ ಮತ್ತು ಲ್ಯಾಂಬ್ಡಾಸೈಲೋಥ್ರೀನ್ ಸಂಯುಕ್ತ ಕೀಟನಾಶಕವನ್ನು ಸಿಂಪರಣೆ ಮಾಡಬೇಕು ಎಂದರು.

ಹೊಸರಿತ್ತಿ ಗುದ್ದಲಿಸ್ವಾಮಿ ಮಠದ ಶಿವಯೋಗಿಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಪ್ರಗತಿಪರ ರೈತರಾದ ಶಂಭುಲಿಂಗಯ್ಯ ಮಠದ, ಕಲ್ಲಪ್ಪ ಕಲ್ಲೇದೇವರ ಹಾಗೂ ಕೇಂದ್ರದ ಬೇಸಾಯ ಶಾಸ್ತ್ರ ವಿಷಯ ತಜ್ಞೆ ಡಾ. ಸಿದ್ದಗಂಗಮ್ಮ ಕೆ.ಆರ್. ಮಾತನಾಡಿದರು.

ಜಾನುವಾರುಗಳಲ್ಲಿ ಬರುವ ಪ್ರಮುಖ ರೋಗಗಳ ನಿರ್ವಹಣೆ ಬಗ್ಗೆ ಕೇಂದ್ರದ ಪಶು ವಿಜ್ಞಾನಿ ಡಾ. ಮಹೇಶ ಕಡಗಿ, ಹಿಂಗಾರು ಬೆಳೆಗಳಲ್ಲಿ ಪರಿಸರ ಪೂರಕ ರೋಗಗಳ ನಿರ್ವಹಣಾ ಕ್ರಮಗಳ ಕುರಿತು ಸಸ್ಯರೋಗ ವಿಷಯ ತಜ್ಞೆ ಡಾ. ಬಸಮ್ಮ ಹಾದಿಮನಿ, ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯಗಳ ಬಳಕೆ ಬಗ್ಗೆ ಗೃಹ ವಿಜ್ಞಾನ ವಿಷಯ ತಜ್ಞೆ ಡಾ. ಅಕ್ಷತಾ ರಾಮಣ್ಣನವರ ಹಾಗೂ ಕೃಷಿಯಲ್ಲಿ ಮಾಹಿತಿ ತಂತ್ರಜ್ಞಾನದ ಮಹತ್ವ ಹಾಗೂ ಇ-ಮಾರುಕಟ್ಟೆಯ ಬಗ್ಗೆ ಹಿರಿಯತಾಂತ್ರಿಕ ಅಧಿಕಾರಿ ಚಂದ್ರಕಾಂತ ಕೊಟಬಾಗಿ ರೈತರಿಗೆ ಮಾಹಿತಿ ನೀಡಿದರು.

ಗದಿಗಯ್ಯ ಮಠದ, ಮಾಲತೇಶ ಅಂಗಡಿ, ಸುಮಿತ ರೆಡ್ಡಿ ಹಾಗೂ ಬೆಳವಿಗಿ, ಹೊಸರಿತ್ತಿ, ನೆಗಳೂರು ಗ್ರಾಮಗಳ ಸುಮಾರು 100ಕ್ಕೂ ಅಧಿಕ ರೈತರು, ರೈತ ಮಹಿಳೆಯರು, ಕೃಷಿ ಸಖಿಯರು ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದರು.

Share this article