ಕನ್ನಡಪ್ರಭ ವಾರ್ತೆ, ತುಮಕೂರು ಕೆಲಸದ ಅವಧಿ ಹೆಚ್ಚಳ ಕಾನೂನು ಸಂಹಿತೆಗಳನ್ನು ಹಿಂಪಡೆಯುವುದು, ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ವೇತನ ಹೆಚ್ಚಳ ಸೇರಿದಂತೆ 21 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ಮತ್ತು ಜೆಸಿಟಿಯು ಸೇರಿದಂತೆ 10 ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಮುಷ್ಕರ ನಡೆಸಿದರು. ಸರ್ಕಾರದ ರೈತ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ನಗರದ ಬಿಜಿಎಸ್ ವೃತ್ತದಲ್ಲಿ ಜಮಾಯಿಸಿದ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಬ್ಯಾಂಕ್, ವಿಮೆ, ಅಂಚೆ, ಕೇಂದ್ರ ಸರ್ಕಾರಿ ನೌಕರರ ಸಂಘಟನೆಗಳು ಸೇರಿದಂತೆ ೧೦ಕ್ಕೂ ಅಧಿಕ ವಿವಿಧ ಸಂಘಟನೆಗಳವರು ಘೋಷಣೆಗಳನ್ನು ಕೂಗಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಬಿಜಿಎಸ್ ವೃತ್ತದಿಂದ ಬಿ.ಎಚ್. ರಸ್ತೆ, ಎಂ.ಜಿ. ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದ ರೈತರು ಹಾಗೂ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ಅಶೋಕ ರಸ್ತೆ ಮುಖೇನ ಪ್ರತಿಭಟನಾ ಮೆರವಣಿಗೆಯಲ್ಲಿ ಬಿ.ಎಸ್.ಕಚೇರಿ ಮುಂಭಾಗ ಜಮಾಯಿಸಿ ಸರ್ಕಾರದ ಕಾರ್ಮಿಕ ಹಾಗೂ ರೈತ ವಿರೋಧಿ ನೀತಿ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಅಧ್ಯಕ್ಷ ಸೈಯದ್ ಮುಜೀಬ್, ಸರ್ಕಾರದ ನೀತಿಗಳಿಂದ ಅಸಂಘಟಿತ ವಲಯದ ಕಾರ್ಮಿಕರಿಗೆ ಸೇವಾ ಭದ್ರತೆಯಿಲ್ಲದೆ ಅತಂತ್ರದ ಸ್ಥಿತಿಯಲ್ಲಿದ್ದಾರೆ. ರಾಷ್ಟ್ರದ ಜಿಡಿಪಿಗೆ ಇವರ ಕೊಡುಗೆ ಶೇ. 50 ರಷ್ಟಿದೆ. ಆದರೂ ಇವರ ಬಗ್ಗೆ ಯಾರು ಸಹ ಕಾಳಜಿ ವಹಿಸುತ್ತಿಲ್ಲ. ಈ ಶ್ರಮ್ ಕಾರ್ಡ್ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎನ್ನುವಂತಾಗಿದೆ. ಆದರೆ ಸರ್ಕಾರ ಮಾತ್ರ ಇಎಲ್‌ಐ ಹೆಸರಿನಲ್ಲಿ ಉದ್ಯೋಗ ಸೃಷ್ಟಿಸುವ ಉದ್ದಿಮೆದಾರರಿಗೆ ಪ್ರೋತ್ಸಾಹ ಧನ ನೀಡಲು 2 ಲಕ್ಷ ಕೋಟಿ ರು.ಗಳನ್ನು ಕಾಯ್ದಿರಿಸುವ ಮೂಲಕ ಬಂಡವಾಳಗಾರರನ್ನು ರಕ್ಷಿಸಲು ರೂಪಿಸಿರುವ ಹೊಸ ದಂಧೆಯಾಗಿದೆ ಎಂದು ಆರೋಪಿಸಿದರು. ಗುತ್ತಿಗೆ ಕಾರ್ಮಿಕ ಪದ್ದತಿಯ ಮೂಲಕ ಎಲ್ಲಾ ಪ್ರಮುಖ ಕೆಲಸಗಳನ್ನು ಗುತ್ತಿಗೆ ನೌಕರರನ್ನು ನೇಮಕ ಮಾಡಿ, ಅವರನ್ನು ಅತಂತ್ರ ಸ್ಥಿತಿಯಲ್ಲಿ ಇರಿಸಲಾಗಿದೆ. ಹಾಗಾಗಿ ಗುತ್ತಿಗೆ ನಿಯಂತ್ರಣ ಕಾಯ್ದೆ ಜಾರಿಗೆ ತರಬೇಕೆಂಬುದು ಕಾರ್ಮಿಕ ಸಂಘಟನೆಗಳ ಒಕ್ಕೊರಲ ಒತ್ತಾಯವಾಗಿದೆ. ಇದರೊಂದಿಗೆ ವಿದ್ಯುತ್ ಖಾಸಗೀಕರಣ, ಬಗರ್‌ಹುಕುಂ ಸಾಗುವಳಿ ಮಂಜೂರು, ಕೈಗಾರಿಕೆಗಳಿಗೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ಈ ಮುಷ್ಕರ ನಡೆಸಲಾಗುತ್ತಿದೆ ಎಂದರು. ಜೆಸಿಟಿಯ ಸಂಚಾಲಕ ಕೆಂಬೇಗೌಡ ಮಾತನಾಡಿ, ಆಳುವ ಸರ್ಕಾರಗಳು ರೈತರು ಮತ್ತು ಕಾರ್ಮಿಕರ ಆಗಿಂದಾಗ್ಗೆ ಇಂತಹ ಪ್ರಹಾರಗಳನ್ನು ನಡೆಸುತ್ತಲೇ ಇವೆ. ವಾಜಪೇಯಿ ಸರ್ಕಾರವಿದ್ದಾಗ ಹೇರ್ ಅಂಡ್ ಫೇರ್ ಹೆಸರಿನ ಕಾನೂನಿನ ವಿರುದ್ಧ ನಿರಂತರ ಹೋರಾಟದ ಫಲವಾಗಿ ಕಾಯ್ದೆಯನ್ನು ವಾಪಸ್ ಪಡೆದರು. ಆದರೆ ಈಗ ವೈಜ್ಞಾನಿಕವಾಗಿ ನಿಗದಿ ಮಾಡಿದ್ದ ೮ ಗಂಟೆಗಳ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸಲು ಮುಂದಾಗಿರುವುದು ಸರಿಯಲ್ಲ. ಕೂಡಲೇ ಈ ಯೋಚನೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.1947 ರಲ್ಲಿ ಜಾರಿಗೆ ಬಂದ ಕಾರ್ಮಿಕ ಕಾಯ್ದೆಗಳ ಬದಲಿಗೆ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿ ಬಂಡವಾಳಗಾರರ ಹಿತಕಾಯಲು ಮುಂದಾಗಿದೆ ಎಂದು ದೂರಿದರು.ಸರ್ಕಾರದ ನೀತಿಗಳಿಂದ ರೈತರು ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರ ಭೂಸ್ವಾಧೀನ ಕಾಯ್ದೆ-೨೦೧೩ರ ಅನ್ವಯ ಭೂಮಿ ವಶಪಡಿಸಿಕೊಳ್ಳುವುದನ್ನು ಬಿಟ್ಟು, ಕೆ.ಐ.ಎ.ಡಿ.ಬಿ.ಕಾಯ್ದೆ ಅಡಿಯಲ್ಲಿ ಭೂಮಿ ವಶಪಡಿಸಿಕೊಳ್ಳುವ ಮೂಲಕ ರೈತರನ್ನು ಒಕ್ಕಲೆಬ್ಬಿಸಲು ಹೊರಟಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.ಎಐಯುಟಿಯಸಿಯ ಅಧ್ಯಕ್ಷರಾದ ಮಂಜುಳ ಗೋನಾವರ ಮಾತನಾಡಿ, ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ರಕ್ಷಣೆಗೆ ಸರ್ಕಾರ ಇದುವರೆಗೂ ಸರಿಯಾದ ಕಾನೂನು ರೂಪಿಸಿಲ್ಲ. ಕೆಲಸಕ್ಕೆ ತಕ್ಕ ವೇತನವಿಲ್ಲ. ಸತತ ದುಡಿಮೆಯಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದರ ನಡುವೆಯೂ ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸಕ್ಕೆ ಮುಂದಾಗಿದೆ. ಮಹಿಳಾ ಕಾರ್ಮಿಕರ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಮುಂದುವರೆದಿದೆ ಎಂದು ಕಿಡಿಕಾರಿದರು.ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ರೈತ ಸಂಘದ ಗೋವಿಂದರಾಜು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ಆಶಾ ಕಾರ್ಯಕರ್ತೆಯರು ಹಾಗೂ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.