ನಾರಾಯಣ ಹೆಗಡೆ
ಹಾವೇರಿ: ಜಿಲ್ಲೆಯಲ್ಲಿ ನಿರಂತರವಾಗಿ ಬೀಳುತ್ತಿರುವ ಮಳೆ ಒಂದೆಡೆ ರೈತರ ಸಂತಸಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ಹಲವು ಸಮಸ್ಯೆಗಳನ್ನು ಎದುರಿಸುವಂತೆ ಮಾಡಿದೆ. ಮೆಕ್ಕೆಜೋಳ ಬೆಳೆಯಲ್ಲಿ ಮುಳ್ಳು ಸಜ್ಜೆ ಕಳೆಯಿಂದ ಕಂಗೆಟ್ಟಿರುವ ರೈತರು ಈಗ ಯೂರಿಯಾ ಗೊಬ್ಬರ ಸಿಗದೇ ಪರದಾಡುತ್ತಿದ್ದಾರೆ.ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಶೇ. 90ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಆದರೆ, ಬೆಳೆದಿರುವ ಫಸಲಿಗೆ ಮೇಲು ಗೊಬ್ಬರವಾಗಿ ಹಾಕಲು ಯೂರಿಯಾ ಅಗತ್ಯವಿದ್ದು, ಸಮರ್ಪಕ ಗೊಬ್ಬರ ಇಲ್ಲದೇ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಿರಂತರವಾಗಿ ಹಿಡಿದಿದ್ದ ಮಳೆಗೆ ಸಿಲುಕಿದ್ದ ಮೆಕ್ಕೆಜೋಳ ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದೆ. ಈಗ ಮಳೆ ಬಿಡುವು ನೀಡಿದ್ದು, ಮೆಕ್ಕೆಜೋಳಕ್ಕೆ ಯೂರಿಯಾ ಗೊಬ್ಬರ ಹಾಕಲು ರೈತರು ಮುಂದಾಗಿದ್ದಾರೆ.
ಆದರೆ, ರೈತರ ಬೇಡಿಕೆಗೆ ತಕ್ಕಷ್ಟು ಯೂರಿಯಾ ಸಿಗುತ್ತಿಲ್ಲ ಎಂಬ ದೂರು ರೈತರದ್ದಾಗಿದೆ. ಸಾಕಷ್ಟು ಯೂರಿಯಾ ಗೊಬ್ಬರ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ, ಸೊಸೈಟಿಗಳಲ್ಲಿ ಯೂರಿಯಾ ಮಾತ್ರ ಸಿಗುತ್ತಿಲ್ಲ. ಕೆಲ ಭಾಗದಲ್ಲಿ ಕೃತಕ ಅಭಾವವೂ ಸೃಷ್ಟಿಯಾಗಿದ್ದು, ಹೀಗಾಗಿ ಯೂರಿಯಾ ಗೊಬ್ಬರಕ್ಕಾಗಿ ರೈತರು ಮುಗಿ ಬೀಳುವಂತಾಗಿದೆ. ಜಿಲ್ಲೆಯ ವಿವಿಧೆಡೆ ರೈತರು ಸೊಸೈಟಿಗಳ ಎದುರು ಗೊಬ್ಬರಕ್ಕಾಗಿ ಪರದಾಡುತ್ತಿರುವುದು, ಪ್ರತಿಭಟನೆ ನಡೆಸುತ್ತಿರುವುದು ಮುಂದುವರಿದಿದೆ.2 ಚೀಲದ ಬದಲು 4 ಚೀಲ ಬಳಕೆ: ಸುಮಾರು ಎರಡು ತಿಂಗಳ ಮೆಕ್ಕೆಜೋಳ ಫಸಲಿಗೆ ಮೇಲುಗೊಬ್ಬರವಾಗಿ ಎಕರೆಗೆ 2 ಚೀಲ ಯೂರಿಯಾ ಹಾಕಿದರೆ ಸಾಕಾಗುತ್ತದೆ. ಆದರೆ, ಮಳೆ ಹಿಡಿದಿರುವ ಪರಿಣಾಮ 2 ಚೀಲದ ಬದಲಾಗಿ 4ರಿಂದ 5 ಚೀಲ ಹಾಕುತ್ತಿರುವುದು ಯೂರಿಯಾ ಗೊಬ್ಬರದ ಅಭಾವಕ್ಕೆ ಕಾರಣವಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಅಲ್ಲದೇ ಮುಂದೆ ಗೊಬ್ಬರ ಕೊರತೆಯಾದರೆ ಎಂಬ ಕಾರಣಕ್ಕೆ ಒಂದೇ ಕುಟುಂಬದವರು ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಖರೀದಿಸುತ್ತಿರುವುದೂ ಬೇಡಿಕೆ ಹೆಚ್ಚಲು ಕಾರಣ ಎಂದು ಅಧಿಕಾರಿಗಳು ಹೇಳುತ್ತಾರೆ. ಜಿಲ್ಲೆಯ ಬಿತ್ತನೆ ಕ್ಷೇತ್ರಕ್ಕೆ ಅನುಗುಣವಾಗಿ ಜುಲೈ ಅಂತ್ಯಕ್ಕೆ 40 ಸಾವಿರ ಟನ್ ಯೂರಿಯಾ ಗೊಬ್ಬರದ ಬೇಡಿಕೆ ಇದೆ. ಆದರೆ, ಜಿಲ್ಲೆಗೆ ಈಗಾಗಲೇ 55 ಸಾವಿರ ಟನ್ ಗೊಬ್ಬರ ಪೂರೈಕೆಯಾಗಿದ್ದು, 48 ಸಾವಿರ ಟನ್ ರೈತರಿಗೆ ವಿತರಿಸಲಾಗಿದೆ. ಇನ್ನೂ 7 ಸಾವಿರ ಟನ್ ದಾಸ್ತಾನಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ. ಆದರೆ, ರೈತರ ಬೇಡಿಕೆಗೆ ತಕ್ಕಷ್ಟು ಎಲ್ಲೂ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಕೃಷಿ ಇಲಾಖೆ ಸುಳ್ಳು ಅಂಕಿ- ಅಂಶ ನೀಡುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.ಮೆಕ್ಕೆಜೋಳದ್ದೇ ಸಿಂಹಪಾಲು: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ 3.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ ಶೇ. 90ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದರಲ್ಲಿ 2,06,338 ಹೆಕ್ಟೇರ್ ಮೆಕ್ಕೆಜೋಳ, 6,490 ಹೆಕ್ಟೇರ್ ಶೇಂಗಾ, 7,081 ಹೆಕ್ಟೇರ್ ಹತ್ತಿ, 6,125 ಹೆಕ್ಟೇರ್ ಸೋಯಾಬಿನ್, 4,333 ಹೆಕ್ಟೇರ್ ಭತ್ತ ಸೇರಿದಂತೆ 1,35,672 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯ, 640 ಹೆಕ್ಟೇರ್ ದ್ವಿದಳ ಧಾನ್ಯ, 12,628 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು, 9,502 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ವರ್ಷದಿಂದ ವರ್ಷಕ್ಕೆ ಮೆಕ್ಕೆಜೋಳ ಬೆಳೆಯುವ ಪ್ರದೇಶ ಹೆಚ್ಚುತ್ತಿದೆ. ಈ ಬಾರಿಯೂ ಮೆಕ್ಕೆಜೋಳವನ್ನು ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಅಲ್ಲದೇ ಏಕಬೆಳೆ ಪದ್ಧತಿಗೆ ರೈತರು ಜೋತುಬೀಳುತ್ತಿದ್ದಾರೆ. ಜಿಲ್ಲೆಯಲ್ಲಿ ಹತ್ತಿ ಬಿತ್ತನೆಗೆ ರೈತರು ಹಿಂದೇಟು ಹಾಕುತ್ತಿದ್ದರಿಂದ ಹತ್ತಿ ಕ್ಷೇತ್ರ ಕುಂಠಿತಗೊಳ್ಳುತ್ತಿದ್ದು, ಅದನ್ನು ಮೆಕ್ಕೆಜೋಳ ಆವರಿಸಿಕೊಂಡಿದೆ. ಮೆಕ್ಕೆಜೋಳಕ್ಕೆ ಹೆಚ್ಚು ಯೂರಿಯಾ ಬಳಕೆ ಮಾಡುತ್ತಿರುವ ಪರಿಣಾಮ ಯೂರಿಯಾ ಕೊರತೆ ಎದುರಿಸುವಂತಾಗಿದೆ. ರೈತರಿಗೆ ಕಂಟಕವಾದ ಮುಳ್ಳಸಜ್ಜೆ ಕಳೆ: ಜಿಟಿ ಜಿಟಿ ಮಳೆಗೆ ಬೆಳೆಗಿಂತ ಕಳೆ ಹೆಚ್ಚಾಗಿದೆ. ಆದರೆ, ಮುಳ್ಳು ಸಜ್ಜೆ ಕಳೆ ರೈತರಿಗೆ ಹೊಸ ತಲೆನೋವು ತಂದಿದೆ. ಮೆಕ್ಕೆಜೋಳದಷ್ಟೇ ಎತ್ತರವಾಗಿ ಮುಳ್ಳು ಸಜ್ಜೆ ಕಳೆ ಬೆಳೆದಿದೆ. ಈ ಮುಳ್ಳು ಸಜ್ಜೆ ಯಾವುದೇ ಕಳನಾಶಕ ಸಿಂಪಡಿಸಿದರೂ ಸಾಯುತ್ತಿಲ್ಲ, ಇದರ ನಿವಾರಣೆ ರೈತರು ಪರದಾಡುವಂತಾಗಿದೆ.ಬಳಕೆ ಕಡಿಮೆ ಮಾಡಬೇಕು: ಜಿಲ್ಲೆಯಲ್ಲಿ ಈಗಾಗಲೇ ಶೇ. 90ರಷ್ಟು ಬಿತ್ತನೆಯಾಗಿದೆ. ನಮ್ಮ ಬೇಡಿಕೆಗೂ ಹೆಚ್ಚು ಯೂರಿಯಾ ಗೊಬ್ಬರ ಪೂರೈಕೆಯಾಗಿದೆ. ಈಗಾಗಲೇ 55433 ಟನ್ ಗೊಬ್ಬರ ಬಂದಿದೆ. ನಮ್ಮಲ್ಲಿ ಇನ್ನೂ 7 ಸಾವಿರ ಟನ್ ಗೊಬ್ಬರ ದಾಸ್ತಾನಿದೆ. ಇನ್ನೂ ಯೂರಿಯಾ ಗೊಬ್ಬರ ಪೂರೈಕೆಯಾಗುತ್ತಿದೆ. ಆದರೆ, ರೈತರು ಬೆಳೆಗೆ ಅವಶ್ಯಕತೆಗಿಂತಲೂ ಹೆಚ್ಚು ಯೂರಿಯಾ ಬಳಕೆ ಮಾಡುತ್ತಿರುವುದು ಸರಿಯಲ್ಲ. ಹೆಚ್ಚು ಯೂರಿಯಾ ಬಳಕೆ ಮಾಡಿದರೆ ಮಣ್ಣಿನ ಫಲವತ್ತತೆ ಕಡಿಮೆ ಆಗುತ್ತೆ. ಹೀಗಾಗಿ ರೈತರು ಯೂರಿಯಾ ಬಳಕೆ ಕಡಿಮೆ ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಡಾ. ಮಲ್ಲಿಕಾರ್ಜುನ ಕೆ. ತಿಳಿಸಿದರು.