ಆನೆಗಳ ಸಂಚಾರ ನಿರಂತರ, ಕೆಲವೆಡೆ ಹಲವು ವರ್ಷಗಳಿಂದ ಬೀಡು ಬಿಟ್ಟಿರುವ ಒಂಟಿ ಆನೆಗಳು,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನೆರೆಯ ಸಕಲೇಶಪುರ ತಾಲೂಕಿಗೆ ಹೊಂದಿಕೊಂಡಿರುವ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 32 ಕ್ಕೂ ಹೆಚ್ಚು ಕಾಡಾನೆಗಳು ಬಿಡಾರ ಹೂಡಿವೆ. ಇವುಗಳಲ್ಲಿ ಕೆಲವು ಆನೆಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸುತ್ತಿದ್ದರೆ, ಇನ್ನು ಕೆಲವು ಒಂಟಿ ಆನೆಗಳು ತಮ್ಮ ವಾಸ್ತವ್ಯಕ್ಕೆ ಸೂಕ್ತ ಅಂದರೆ, ಆಹಾರ ಮತ್ತು ನೀರು ಸಿಗುವ ಪ್ರದೇಶಗಳಲ್ಲಿ ಕೆಲವು ವರ್ಷಗಳಿಂದ ಬೀಡು ಬಿಟ್ಟಿವೆ. ಇವುಗಳನ್ನು ಓಡಿಸಲು ಅರಣ್ಯ ಇಲಾಖೆ ಯಾವುದೇ ರೀತಿ ಕ್ರಮ ತೆಗೆದುಕೊಂಡರೂ ಅದಕ್ಕೆ ಕಾಡಾನೆಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ಹಲವು ಬಾರಿ ಸಾಕಾನೆಗಳನ್ನು ಮುಂದಿಟ್ಟು ನಡೆಸಿದ ಪ್ರಯತ್ನ ವಿಫಲವಾಗಿವೆ. ಹೊರಗಿನಿಂದ ಸಾಕಾನೆಗಳು ಬಂದಿರುವುದು ತಿಳಿಯುತ್ತಿದ್ದಂತೆ ಒಂಟಿ ಸಲಗಗಳು ದಟ್ಟ ಕಾಡಿನತ್ತ ಪ್ರಯಾಣ ಬೆಳೆಸುತ್ತಿವೆ. ಕಾರ್ಯಾಚರಣೆ ಸಿಬ್ಬಂದಿ ಕಣ್ಣಿಗೆ ಮಾತ್ರವಲ್ಲ, ದ್ರೋಣ್ ಕ್ಯಾಮರ ಕಣ್ಣಿಗೂ ಕಾಣಿಸಿ ಕೊಳ್ಳುತ್ತಿಲ್ಲ. ಅದ್ದರಿಂದ ಕಾರ್ಯಾಚರಣೆ ಕೈಬಿಡಲಾಗಿದೆ.ಕಾರ್ಯಾಚರಣೆಗೆ ಬ್ರೇಕ್: ಕೂದುವಳ್ಳಿಯ ಹೆಡದಾಳ್ ಗ್ರಾಮದ ಬಳಿ ಬೆಳ್ಳಂಬೆಳಿಗ್ಗೆ ಕೂಲಿ ಕಾರ್ಮಿಕ ಮಹಿಳೆಯನ್ನು ಬಲಿ ತೆಗೆದುಕೊಂಡ ಆನೆ ಹಿಡಿಯಲು ಶಿವಮೊಗ್ಗದ ಸಕ್ರೆಬೈಲು ಹಾಗೂ ನಾಗರಹೊಳೆಯಿಂದ 7 ಸಾಕಾನೆಗಳನ್ನು ಕರೆಸಿಕೊಳ್ಳಲಾಗಿತ್ತು. 7 ಆನೆಗಳ ಗುಂಪಿನಲ್ಲಿ ಹಂತಕ ಕಾಡಾನೆ ಇದ್ದಿದ್ದರೆ ಆ ಗುಂಪಿನಲ್ಲಿರುವ ಭುವನೇಶ್ವರಿ ಆನೆಯ ರೇಡಿಯೋ ಕಾಲರ್ ಸಹಾಯದಿಂದ ಅದರ ಇರುವಿಕೆಯನ್ನು ಪತ್ತೆ ಹಚ್ಚ ಬಹುದಾಗಿತ್ತು. ಆದರೆ, ಅದೇ ವೇಳೆಗೆ ಹೆಣ್ಣಾನೆ ಮರಿಗೆ ಜನ್ಮ ನೀಡಿದ್ದರಿಂದ ಗಂಡಾನೆ ಒಂಟಿ ಸಲಗ ಈ ಗುಂಪಿನಿಂದ ಬೇರ್ಪಟ್ಟಿತ್ತು. ಇದನ್ನು ಪತ್ತೆ ಹಚ್ಚಲು ಸುಮಾರು 12 ದಿನಗಳ ಕಾಲ ನಾಲ್ಕು ತಂಡಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಆದರೆ, ಅದರ ಸುಳಿವು ಪತ್ತೆ ಆಗಿಲ್ಲ. ಅದ್ದರಿಂದ ಅನಿವಾರ್ಯವಾಗಿ ಸಾಕಾನೆಗಳನ್ನು ವಾಪಸ್ ಕಳುಹಿಸಲಾಗಿದೆ. ಆನೆಗಳ ಸಂಚಾರ ಇರುವ ಕಡೆಗಳಲ್ಲಿ ಟ್ರ್ಯಾಕಿಂಗ್ ಕ್ಯಾಮರಾ ಗಳನ್ನು ಮರಗಳಿಗೆ ಅಳವಡಿಸಲಾಗಿದೆ. ಇವುಗಳ ಸಹಾಯದಿಂದ ಆಲ್ದೂರು ವಲಯದಲ್ಲಿ ಆನೆಗಳ ಮೇಲೆ ನಿಗಾ ಇಡಲಾಗಿದೆ. ಚಿಕ್ಕಮಗಳೂರು ನಗರದ ಹೊರ ವಲಯದ ನೆಲ್ಲೂರು ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿದ್ದ ಭುವನೇಶ್ವರಿ ತಂಡ ಮೂಡಿಗೆರೆ ಮಾರ್ಗ ವಾಗಿ ಸಕಲೇಶಪುರಕ್ಕೆ ತೆರಳಿವೆ ಎಂದು ಚಿಕ್ಕಮಗಳೂರು ಡಿಎಫ್‌ಒ ರಮೇಶ್ ಬಾಬು ತಿಳಿಸಿದ್ದಾರೆ.ಎಲ್ಲೆಲ್ಲಿ ಉಪಟಳ ?ಜಿಲ್ಲೆಯ ಇತರೆ ತಾಲೂಕುಗಳಿಗೆ ಹೋಲಿಸಿದರೆ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆನೆಗಳ ಉಪಟಳ ಮಿತಿಮೀರಿದೆ. ಸಕಲೇಶಪುರ ಹಾಗೂ ಮೂಡಿಗೆರೆ ಕ್ಷೇತ್ರಗಳಲ್ಲಿ ನಿರಂತರವಾಗಿ ಕಾಡಾನೆಗಳು ಓಡಾಡುತ್ತಿವೆ. ಸಕಲೇಶಪುರದಿಂದ ಓಡಿಸಿದರೆ, ಮೂಡಿಗೆರೆಗೆ, ಇಲ್ಲಿಂದ ಓಡಿಸಿದರೆ ಅವುಗಳು ಮತ್ತೆ ಸಕಲೇಶಪುರಕ್ಕೆ ಹೋಗುತ್ತಿವೆ. ಹೀಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ನಿರಂತರವಾಗಿ ಓಡಾಡುತ್ತಿವೆ. ಸ್ಥಳದಿಂದ ಓಡಿಸಲು ಪಟಾಕಿ ಸಿಡಿಸಲಾಗುತ್ತಿದೆ. ಪ್ರತಿ ದಿನ ಕಾಡಾನೆಗಳು ಕಠಿಣ ಪರಿಸ್ಥಿತಿ ಎದುರಿಸುತ್ತಿವೆ. ಹಾಗಾಗಿ ಮನುಷ್ಯನ ವಿರುದ್ಧ ತಿರುಗಿ ಬಿದ್ದಿವೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೊಸಕೆರೆ, ಭೈರಾಪುರ, ಗುತ್ತಿ, ದೇವರಮನೆ, ಕೊಗಿಲೆ, ಬಾಳೆಗದ್ದೆ, ಬೈದಳ್ಳಿ, ಗೌಡಳ್ಳಿ, ಕುಂದೂರು, ಹೆಡದಾಳ್, ಸಾರಗೋಡು, ತತ್ಕೋಳ, ಕೆಂಜಿಗೆ, ಮತ್ತಿಕಟ್ಟೆ, ಬಸಣಿ, ಆಲ್ದೂರು, ಕಂಚಿಗಲ್ ದುರ್ಗ, ಬಸ್ತಿ, ಚೆಂಡಗೋಡು, ದೊಡ್ಡಮಾರಗವಳ್ಳಿ ಗ್ರಾಮಗಳಲ್ಲಿ ಕಾಡಾನೆಗಳು ಆಗಾಗ ಜನರ ಕಣ್ಣಿಗೆ ಕಾಣಿಸಿಕೊಳ್ಳುತ್ತಿವೆ. ---- ಬಾಕ್ಸ್ -----ಕ್ರಿಯಾ ಯೋಜನೆ; ಇಂದು ಸಭೆ: ಡಿಸಿ ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸುಮಾರು 32 ಕಾಡಾನೆಗಳಿದ್ದು, ಇವುಗಳ ನಿರಂತರ ಸಂಚಾರದಿಂದ ಪ್ರಾಣ ಹಾನಿ, ಬೆಳೆ ಹಾನಿ ಸಂಭವಿಸುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಶುಕ್ರವಾರ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಬೇಕೆ ಅಥವಾ ಸ್ಥಳಾಂತರ ಮಾಡಲು ಸಾಧ್ಯನಾ, ಈ ಕುರಿತು ಸಿಸಿಎಫ್, ಡಿಎಫ್‌ಒ ಅವರೊಂದಿಗೆ ಚರ್ಚಿಸಿ ಕ್ರಿಯಾ ಯೋಜನೆ ಸಿದ್ದಪಡಿಸಲಾಗುವುದು ಎಂದರು. ಸಕಲೇಶಪುರ ಭಾಗದಿಂದ 32 ಆನೆಗಳು ಬಂದಿವೆ. ಅವುಗಳು ಈಗಾಗಲೇ ಬ್ಯಾರಿಕೇಡ್ ಅಳವಡಿಸಿರುವ ಪ್ರದೇಶ ಬಿಟ್ಟು ಬೇರೆ ಮಾರ್ಗದಲ್ಲಿ ಸಂಚರಿಸುತ್ತಿವೆ. ಹೀಗಾಗಿ ತೊಂದರೆಯಾಗುತ್ತಿದೆ. ಈ ಕುರಿತು ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
23 ಕೆಸಿಕೆಎಂ 1-----------------------25 ಲಕ್ಷ ರು.ಚೆಕ್ ವಿತರಣೆ
ಚಿಕ್ಕಮಗಳೂರು: ಆನೆ ನಿಗ್ರಹ ಕಾರ್ಯಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕಾಡಾನೆ ತುಳಿತಕ್ಕೆ ಬಲಿಯಾದ ಮೂಡಿಗೆರೆ ತಾಲೂಕಿನ ಗೌಡಹಳ್ಳಿ ಗ್ರಾಮದ ಕಾರ್ತಿಕ್ ಅವರ ಕುಟುಂಬಕ್ಕೆ ಗುರುವಾರ 25 ಲಕ್ಷ ರು. ಚೆಕ್ ವಿತರಿಸಲಾಯಿತು. ಸಿಸಿಎಫ್ ಯು.ಪಿ. ಸಿಂಗ್, ಚಿಕ್ಕಮಗಳೂರು ವಿಭಾಗದ ಡಿಎಫ್‌ಒ ರಮೇಶ್‌ಬಾಬು ಹಾಗೂ ಸಿಬ್ಬಂದಿ ಕಾರ್ತಿಕ್ ಮನೆಗೆ ತೆರಳಿ ಪರಿಹಾರ ವಿತರಿಸಿ ಸಾಂತ್ವನ ಹೇಳಿದರು. ಕಾರ್ತಿಕ್ ಕಳೆದ ಒಂದು ವರ್ಷದಿಂದ ಆನೆ ನಿಗ್ರಹ ಕಾರ್ಯಪಡೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬುಧವಾರ ಮಧ್ಯಾಹ್ನದ ವೇಳೆಗೆ ಹೊಸಕೆರೆ ಮತ್ತು ಮೇಕನಗದ್ದೆ ಸುತ್ತಮುತ್ತ ಕಾರ್ಯಾಚರಣೆ ನಡೆಸುವಾಗ ಕಾಡಾನೆ ದಾಳಿ ನಡೆಸಿದ್ದರಿಂದ ಅವರು ಮೃತಪಟ್ಟಿದ್ದರು. ----------------------------