ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಮೂಡಿಸಿ: ಅಶೋಕ

KannadaprabhaNewsNetwork | Published : Mar 19, 2024 12:46 AM

ಸಾರಾಂಶ

ಯಾದಗಿರಿ ನಗರದ ಮಾಣಿಕೇಶ್ವರಿ ಕಾಲೊನಿಯ ಶ್ರೀರಕ್ಷಾ ವಿದ್ಯಾಮಂದಿರ ಆಂಗ್ಲಮಾಧ್ಯಮ ಶಾಲೆಯಲ್ಲಿ ಮಕ್ಕಳ ಪ್ರತಿಭೋತ್ಸವ ಹಾಗೂ ಸನ್ಮಾನ ಸಮಾರಂಭ ಜರುಗಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಸಮಾಜದಲ್ಲಿ ಶಿಕ್ಷಣಕ್ಕೆ ಅತ್ಯಂತ ಮಹತ್ವ ನೀಡಲಾಗಿದೆ. ಪ್ರಾಥಮಿಕ ಹಂತದಿಂದ ಪ್ರೌಢ, ಕಾಲೇಜು ಶಿಕ್ಷಣದವರಿಗೆ ಮಕ್ಕಳನ್ನು ತಿದ್ದಿ, ತೀಡಿ ಸರಿದಾರಿಗೆ ತರುವಲ್ಲಿ ಶಿಕ್ಷಕರ ಕಾರ್ಯ ಶ್ಲಾಘನೀಯವಾದದ್ದು ಎಂದು ಕಲಬುರಗಿ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿ ಅಶೋಕ ಕೋಟಗೇರಾ ಹೇಳಿದರು.

ನಗರದ ಮಾಣಿಕೇಶ್ವರಿ ಕಾಲೊನಿಯ ಶ್ರೀರಕ್ಷಾ ವಿದ್ಯಾಮಂದಿರ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಮಕ್ಕಳ ಪ್ರತಿಭೋತ್ಸವ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶಿಕ್ಷರು ಮಕ್ಕಳ ಮನೋಸಾಮರ್ಥ್ಯ ಅರಿತು ಪಾಠ ಭೋಧನೆ ಇಂದಿನ ಅವಶ್ಯಕತೆಯಾಗಿದೆ. ಮಕ್ಕಳಲ್ಲಿ ಸಂಸ್ಕಾರ-ಸಂಸ್ಕೃತಿ ಒಡಮೂಡಿಸುವಲ್ಲಿ ಶಿಕ್ಷಕರ ಮತ್ತು ಪಾಲಕರ ಕರ್ತವ್ಯವಾಗಿದೆ ಎಂದರು.

ಬಿ.ಆರ್‌.ಸಿ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿ, ಮಕ್ಕಳಲ್ಲಿನ ಫ್ರತಿಭೆಗಳನ್ನು ಹೊರಹಾಕುವಲ್ಲಿ ಇಂತಹ ಮಕ್ಕಳ ಪ್ರತಿಭೋತ್ಸವಗಳು ಉತ್ತಮ ವೇದಿಕೆ ಕಲ್ಪಸಿವೆ. ಮಕ್ಕಳಿಗೆ ಓದಿನ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಚಟುವಟಿಕೆಗಳು ಏರ್ಪಡಿಸುವುದರಿಂದ, ಅವರಲ್ಲಿ ಉತ್ಸಾಹ ಹೆಚ್ಚುತ್ತದೆ. ಕೃಷ್ಣಮೂರ್ತಿ ಕುಲಕರ್ಣಿಯವರ ಮುಂದಾಳತ್ವದಲ್ಲಿ ಶ್ರೀರಕ್ಷಾ ವಿದ್ಯಾಮಂದಿರವು ನಗರದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ ಎಂದು ಶ್ಲಾಘಿಸಿದರು.

ಶಾಲೆಯ ಮುಖ್ಯಸ್ಥ ಡಾ. ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶ್ರೀಮಾಧವತೀರ್ಥರ ಮಠ ಬುದ್ದಿನ್ನಿಯ ಅರ್ಚಕರಾದ ಶ್ರೀನಿವಾಸ ಆಚಾರ್ಯರು ಮತ್ತು ರಾಮಕೃಷ್ಣ ವಿವೇಕಾನಂದ ಆಶ್ರಮದ ಪಿ. ವೇಣುಗೋಪಾಲ ಅವರು ಕಾರ್ಯಕ್ರಮದ ಆಶೀರ್ವಚನ ನೀಡಿದರು.

ಶರಣಗೌಡ, ಜಾತಿನಿಂದನೆ ತಡೆ ಜಾಗೃತಿ ಸಮಿತಿ ಸದಸ್ಯ ಮರೆಪ್ಪ ಚಟ್ಟೇರಕರ್, ಪ್ರಥಮ ದರ್ಜೆ ಗುತ್ತಿಗೆದಾರ ಶಾಂತಗೌಡ ಪಗಲಾಪುರ, ಪತ್ರಕರ್ತ ಶಂಕ್ರಪ್ಪ ಅರುಣಿ, ಸಿಆರ್‌ಪಿ ಗುಂಡೂರಾವ್ ಕುಲಕರ್ಣಿ, ಶಿಕ್ಷಕ ಗುರುರಾಜ್, ಶರಣಪ್ಪ ಮುಂಡಾಸ, ಬಸವರಾಜ ಹೆಡಗಿಮದ್ರಾ, ಸಂಘಟಕ ಅಜಯ್ ಮಾಸನ್, ದನಂಜಯ್ ಇತರರಿದ್ದರು. ಈ ವೇಳೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ, ಪೋಷಕರಿಗೆ ಮತ್ತು ಹಿರಿಯ ನಾಗರಿಕರಿಗೆ ಸನ್ಮಾನಿಸಲಾಯಿತು. ಸಂಗೀತ ಕಾರ್ಯಕ್ರಮ ಜರುಗಿತು. ಗುರುಪ್ರಸಾದ ವೈದ್ಯ ನಿರೂಪಿಸಿ ವಂದಿಸಿದರು.

Share this article