ಮಾನವೀಯತೆ, ನೈತಿಕ ಮೌಲ್ಯ ಮೈಗೂಡಿಸಿಕೊಳ್ಳಿ: ಜನಾರ್ದನ ಮಂಡಗಾರು

KannadaprabhaNewsNetwork | Published : Jul 8, 2024 12:33 AM

ಸಾರಾಂಶ

ಕನ್ನಡ ಭಾಷೆ ನಮ್ಮ ಮಾತೃಭಾಷೆ, ನಾವು ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಕಸ್ತೂರಿ, ಕನ್ನಡತನವನ್ನು ಎಂದಿಗೂ ಬಿಟ್ಟುಕೊಡಬಾರದು

ಕನ್ನಡಪ್ರಭ ವಾರ್ತೆ, ಶೃಂಗೇರಿ

ಮಾನವೀಯತೆ, ನೈತಿಕ ಮೌಲ್ಯಗಳ ಅಧಃಪತನ ಆಗುತ್ತಿರುವ ಇತ್ತೀಚಿನ ದಿನಗಳಲ್ಲಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಹಾಗೂ ಯಕ್ಷಗಾನ ಕಲಾವಿದ ಜನಾರ್ದನ ಮಂಡಗಾರು ಹೇಳಿದರು.

ತಾಲೂಕಿನ ನೆಮ್ಮಾರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ಆವರಣದಲ್ಲಿ ನಡೆಯುತ್ತಿರುವ ಶೃಂಗೇರಿ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ವೇದಿಕೆ ಕಾರ್ಯಕ್ರಮ ನಿರ್ವಹಣೆ, ವಿಧಾನಗಳ ಪರಿಚಯ ಕುರಿತ ವಿಶೇಷ ಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು.

ಶಿಕ್ಷಣ ಎಂದರೆ ಕೇವಲ ಅಂಕ ಗಳಿಕೆ, ಫಲಿತಾಂಶಗಳಿಗೆ ಮಾನದಂಡ ಆಗಬಾರದು. ಜೀವನದಲ್ಲಿ ಉತ್ತಮ ಸಂಸ್ಕೃತಿ, ಭವಿಷ್ಯ ರೂಪಿಸಿಕೊಳ್ಳಬೇಕು. ಕನ್ನಡ ಭಾಷೆ ನಮ್ಮ ಮಾತೃಭಾಷೆ, ನಾವು ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಕಸ್ತೂರಿ, ಕನ್ನಡತನವನ್ನು ಎಂದಿಗೂ ಬಿಟ್ಟುಕೊಡಬಾರದು. ಅನ್ಯಭಾಷೆಗಳನ್ನೂ ಗೌರವಿಸಬೇಕು ಎಂದರು.

ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಅದರಲ್ಲೂ ಪುಸ್ತಕ ಓದುವ ಹವ್ಯಾಸ ಸಂಸ್ಕ್ರತಿ ಬೆಳೆಸಿಕೊಳ್ಳಬೇಕು. ಒಳ್ಳೆಯ ಪುಸ್ತಕಗಳು, ವಿಚಾರಗಳು ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ. ಮೊಬೈಲ್‌ ಬದಿಗೊತ್ತಿ ಪುಸ್ತಕ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಆಗ ಜ್ಞಾನದಾಹ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಸಭೆ, ಸಮಾರಂಭಗಳಲ್ಲಿ ನಿರೂಪಕನ ಪಾತ್ರ ಮಹತ್ತರವಾಗಿದೆ. ನಿರೂಪಕನಿಗೆ ಭಾಷಾ ಜ್ಞಾನವಿರಬೇಕು. ಅತಿಥಿಗಳನ್ನು ಹೇಗೆ ಸ್ವಾಗತಿಸಬೇಕು, ಅಭಿನಂದನೆ, ಅತಿಥಿಗಳ ಪರಿಚಯ, ಅಧ್ಯಕ್ಷತೆ, ವಂದನಾರ್ಪಣೆ ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ವಿವರಿಸಿದರು.

ಸಾಮಾಜಿಕ ಚಿಂತಕ ನೈಬಿ ಸುಬ್ರಮಣ್ಯ ವೇದಿಕೆ ಕಾರ್ಯಕ್ರಮಗಳ ಕಾರ್ಯ ಚಟುವಟಿಕೆಗಳ ಕುರಿತು ಉಪನ್ಯಾಸ ನೀಡಿದರು. ಚೇತನ್‌ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ರಾಘವೇಂದ್ರ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Share this article