ವಿವಿಧ ಬೇಡಿಕೆ ಈಡೇರಿಕೆಗೆ ಗ್ರಾಪಂ ಸದಸ್ಯರ ಒಕ್ಕೂಟದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭ

KannadaprabhaNewsNetwork | Published : Feb 21, 2024 2:02 AM

ಸಾರಾಂಶ

ಕೇರಳ ರಾಜ್ಯದ ಮಾದರಿಯಂತೆ ಗ್ರಾಪಂ ಅಧ್ಯಕ್ಷರಿಗೆ ₹15 ಸಾವಿರ ಹಾಗೂ ಉಪಾಧ್ಯಕ್ಷರಿಗೆ ₹13 ಸಾವಿರ ಸದಸ್ಯರುಗಳಿಗೆ ₹10 ಸಾವಿರ ಗೌರವ ಧನ ಹೆಚ್ಚಿಸಬೇಕು ಹಾಗೂ ಉಚಿತ ಬಸ್ ಪಾಸ್ ಮತ್ತು ಅರೋಗ್ಯ ವಿಮೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಮದ್ದೂರು ತಾಪಂ ವ್ಯವಸ್ಥಾಪಕ ರಾಮಕೃಷ್ಣ ಅವರು ಸರ್ಕಾರದ ಆದೇಶದಂತೆ ಅಮಾನತ್ತಿನಲ್ಲಿದ್ದು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ತಾಪಂ ಕಚೇರಿ ಎದುರು ಗ್ರಾಪಂಗಳ ಸದಸ್ಯರ ಒಕ್ಕೂಟದಿಂದ ಅನಿರ್ದಿಷ್ಟಾವಧಿ ಧರಣಿ ಮಂಗಳವಾರ ಆರಂಭಗೊಂಡಿತು.

ಗ್ರಾಪಂ ಒಕ್ಕೂಟದ ಸದಸ್ಯರು ತಾಪಂ, ಜಿಪಂ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಒಕ್ಕೂಟದ ಅಧ್ಯಕ್ಷ ಜಿ.ಎನ್.ಸತ್ಯ ಮಾತನಾಡಿ, ತಾಪಂ ಇಒ ಅವರ ಕರ್ತವ್ಯ ಲೋಪ, ಅಧಿಕಾರ ದುರುಪಯೋಗ, ಜಿಪಂ ಸಿಇಒ ಅವರ ನಿರ್ಲಕ್ಷ್ಯ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕಗೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ತಾಲೂಕಿನ 42 ಗ್ರಾಪಂಗಳಲ್ಲಿ ಆಡಳಿತಾತ್ಮಕ ಸಮಸ್ಯೆಗಳ ಇತ್ಯರ್ಥಕ್ಕಾಗಿ, ತಾಪಂ ಎದುರು ಮೂರು ಬಾರಿ ಹೋರಾಟಗಳನ್ನು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಗ್ರಾಪಂ ಮಟ್ಟದ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇಒ ಕರ್ತವ್ಯ ಲೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಕಳೆದ ಬಾರಿ ತಾಪಂ ಕಚೇರಿ ಎದುರು ಪ್ರತಿಭಟನೆ ಮಾಡಿದಾಗ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ಕೊಟ್ಟು ಮನವಿ ಆಲಿಸಿ ಸಭೆ ಮಾಡುತ್ತೇವೆ ಎಂದು ಭರವಸೆ ಕೊಟ್ಟ ಕಾರಣ ಹಿಂದೆ ನಡೆದ ಹೋರಾಟವನ್ನು ಹಿಂಪಡೆಯಲಾಗಿತ್ತು ಎಂದರು.

ಸಚಿವರು ಜಿಪಂ ಸಭಾಂಗಣದಲ್ಲಿ ಗ್ರಾಪಂಗೆ ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳನ್ನು ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಅದು ಈಡೇರಿಲ್ಲ. ನಮ್ಮ ಬೇಡಿಕೆ ಈಡೇರುವ ತನಕ ಪ್ರತಿಭಟನೆ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಕೇರಳ ರಾಜ್ಯದ ಮಾದರಿಯಂತೆ ಗ್ರಾಪಂ ಅಧ್ಯಕ್ಷರಿಗೆ ₹15 ಸಾವಿರ ಹಾಗೂ ಉಪಾಧ್ಯಕ್ಷರಿಗೆ ₹13 ಸಾವಿರ ಸದಸ್ಯರುಗಳಿಗೆ ₹10 ಸಾವಿರ ಗೌರವ ಧನ ಹೆಚ್ಚಿಸಬೇಕು ಹಾಗೂ ಉಚಿತ ಬಸ್ ಪಾಸ್ ಮತ್ತು ಅರೋಗ್ಯ ವಿಮೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಮದ್ದೂರು ತಾಪಂ ವ್ಯವಸ್ಥಾಪಕ ರಾಮಕೃಷ್ಣ ಅವರು ಸರ್ಕಾರದ ಆದೇಶದಂತೆ ಅಮಾನತ್ತಿನಲ್ಲಿದ್ದು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಇ.ಕೃಷ್ಣ, ತಾಲೂಕು ಗೌರವಾಧ್ಯಕ್ಷ ಎಸ್.ದಯಾನಂದ, ಉಪಾಧ್ಯಕ್ಷರಾದ ಡಿ.ನಳಿನಿ, ಸಿ.ಶಿವಲಿಂಗಯ್ಯ, ಬ್ಯಾಡರಹಳ್ಳಿ ರಾಮಕೃಷ್ಣ, ಎಂ.ಮಹೇಶ್, ಎಸ್.ಬಿ.ತಮ್ಮೇಗೌಡ, ಸಂಘಟನಾ ಕಾರ್ಯದರ್ಶಿಗಳಾದ ವಿಜಯ್ಎನ್.ಗೌಡ, ಎ.ಜಗದೀಶ್, ಮಾದೇಶ್, ಎಂ.ಚಂದ್ರಶೇಖರ, ಶ್ವೇತಾ, ಖಜಾಂಚಿ ಎಚ್.ಕೆ.ನಂದೀಶ್ ಗೌಡ, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಬಿ.ಬಿ.ಮಂಜುನಾಥ, ನಿರ್ದೇಶಕರಾದ ಎಚ್.ಎಲ್.ದಯಾನಂದ, ಮಹಾಲಕ್ಷ್ಮಿ, ಎಚ್.ಗೋವರ್ಧನ, ಎಸ್.ಕೃಷ್ಣ, ಕೃಷ್ಣ, ಕೆ.ಆರ್.ವೆಂಕಟೇಶ ಇದ್ದರು.

Share this article