-ರೈತ ಸಂಘ, ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಬೆಂಗಳೂರಿನ ವಿಧಾನ ಸೌಧದೆದುರು ಧರಣಿ
---ಕನ್ನಡಪ್ರಭ ವಾರ್ತೆ ರಾಯಚೂರು
ಕೃಷಿ ಭೂಮಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ವಹಿಸಿಕೊಡುವುದನ್ನು ನಿಲ್ಲಿಸಬೇಕು ಅದೇ ರೀತಿ ಬಲವಂತದ ಭೂ ಸ್ವಾಧೀನ ಹಾಗೂ ಮೋಸದ ಭೂಬೆಲೆ ನಿಗದಿಸಿ ವಂಚಿಸುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ (ಎಐಎಡಬ್ಲ್ಯೂಯು) ರಾಜ್ಯ ಸಮಿತಿ ನೇತೃತ್ವದಲ್ಲಿ ಬರುವ ಫೆ.10 ರಂದು ಬೆಂಗಳೂರಿನ ವಿಧಾನ ಸೌಧದೆದುರು 10,000 ರೈತರು ಹಾಗು ಕೂಲಿಕಾರರಿಂದ ಅನಿರ್ಧಿಷ್ಟ ಧರಣಿವನ್ನು ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಕೆಪಿಆರ್‌ಎಸ್ ರಾಜ್ಯ ಉಪಾಧ್ಯಕ್ಷ ಯು.ಬಸವರಾಜ ತಿಳಿಸಿದರು.ಸ್ಥಳೀಯ ಪತ್ರಿಕಾ ಭವನದಲ್ಲಿ ಸೋಮವಾರ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶ ಮತ್ತು ರಾಜ್ಯದಲ್ಲಿ ಅಷ್ಟೇ ಸರ್ಕಾರಗಳು ಬಂದು ಹೋದರು ಸಹ ಕೃಷಿಕರು, ಕಾರ್ಮಿಕರು, ಬಡವರು ಭೂಮಿಗಾಗಿ ಪರಿತಪಿಸುತ್ತಿದ್ದು, ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳೇ ಕಾರಣವಾಗಿವೆ ಎಂದು ಆರೋಪಿಸಿದರು.
ಬಗರ್ ಹುಕುಂ ಹಾಗೂ ಅರಣ್ಯ ಭೂಮಿ ಸಾಗುವಳಿ ನಿರತ ಬಡವರನ್ನು ಒಕ್ಕಲೆಬ್ಬಿಸುವುದನ್ನು ನಿಲ್ಲಿಸಿ ತಕ್ಷಣವೆ ಹಕ್ಕುಪತ್ರ ನೀಡಲು ಅಗತ್ಯ ಕ್ರಮವಹಿಸಬೇಕು. ಕೃಷಿ ಭೂಮಿಗಾಗಿ ಹಾತೊರೆಯುತ್ತಿರುವ ಭೂ ವಂಚಿತ ದಲಿತರು ಹಾಗೂ ದೇವದಾಸಿ ತಾಯಂದಿರು ಮತ್ತು ಮಸಣ ಕಾರ್ಮಿಕರಿಗೆ ತಲಾ ಐದು ಎಕರೆ ನೀರಾವರಿ ಕೃಷಿ ಭೂಮಿಯನ್ನು ಹಾಗು ನಿವೇಶನ ರಹಿತರಿಗೆ ನಿವೇಶನ ಸಹಿತ ವಸತಿಯನ್ನು ಉಚಿತವಾಗಿ ಒದಗಿಸಬೇಕು ಎಂಬ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಈ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಜಂಟಿ ಪತ್ರಿಕಾಗೋಷ್ಠಿಯಲ್ಲಿ ಎಐಎಡಬ್ಲ್ಯೂಯು ಜಿಲ್ಲಾಧ್ಯಕ್ಷ ಕರಿಯಪ್ಪ ಹಚ್ಚೊಳ್ಳಿ, ಕೆಪಿಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ಉಪಾಧ್ಯಕ್ಷ ಕೆ.ಜಿ.ವೀರೇಶ ಇದ್ದರು.
--------------------13ಕೆಪಿಆರ್‌ಸಿಆರ್ 02 : ಯು.ಬಸವರಾಜ