ಮೌಢ್ಯ, ಭ್ರಷ್ಚಾಚಾರ ಹೊತ್ತು ಭಾರತ ವಿಕಸಿತವಾಗಲು ಸಾಧ್ಯವಿಲ್ಲ: ಮಲ್ಲಿಕಾರ್ಜುನಪ್ಪ

KannadaprabhaNewsNetwork | Published : Feb 29, 2024 2:01 AM

ಸಾರಾಂಶ

ಚಿತ್ರದುರ್ಗ ಸೈನ್ಸ್ ಫೌಂಡೇಷನ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಸಹಯೋಗದೊಂದಿಗೆ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಡೆಯಿತು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಬಡತನ, ನಿರುದ್ಯೋಗ, ಮೌಢ್ಯ ಮತ್ತು ಬ್ರಹ್ಮಾಂಡ ಭ್ರಷ್ಟಾಚಾರ ಹೊತ್ತು ಭಾರತ ಎಂದಿಗೂ ವಿಕಸಿತವಾಗಲು ಸಾಧ್ಯವಿಲ್ಲ ಎಂದು ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಹೇಳಿದರು.

ಚಿತ್ರದುರ್ಗ ಸೈನ್ಸ್ ಫೌಂಡೇಷನ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಸಹಯೋಗದೊಂದಿಗೆ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ವಿಕಸಿತ ಭಾರತಕ್ಕಾಗಿ ದೇಸೀಯ ತಂತ್ರಜ್ಞಾನ ವಿಷಯ ಕುರಿತು ಮಾತನಾಡಿದ ಅವರು, ನಮ್ಮ ಸರ್ವಾಂಗೀಣ ಅಭಿವೃದ್ದಿ ಸಂವಿಧಾನ ಆಶ್ರಯವಾಗಿರಬೇಕು. ಬಂಡವಾಳ ಮತ್ತು ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆ ಸಾಧಿಸಬೇಕಾದರೆ ಬುದ್ದ, ಬಸವ, ಗಾಂಧಿ, ಅಂಬೇಡ್ಕರ್ ಚಿಂತನೆಗಳನ್ನು ತಾತ್ವಿಕ ಅಡಿಪಾಯವಾಗಿಟ್ಟುಕೊಳ್ಳಬೇಕು. ಮತ ಧರ್ಮಗಳ ಬೇಲಿಯನ್ನು ಕಿತ್ತು ಹಾಕಿ ಸಾವಿರಾರು ವರ್ಷಗಳಿಂದ ಅನ್ವೇಷಿಸಿಕೊಂಡು ಬಂದಿರುವ ದೇಸೀಯ ತಂತ್ರಜ್ಞಾನವನ್ನು ಆಧುನಿಕ ಸಂಶೋಧನಾ ವಿಧಾನಗಳ ಮೂಲಕ ನಾವಿನ್ಯಗೊಳಿಸಬೇಕೆಂದು ಹೇಳಿದರು.

ಕೃಷಿ, ಕೈಗಾರಿಕೆ, ಮೂಲ ಸೌಲಭ್ಯ, ನೀರಾವರಿ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಎಲ್ಲಿ ದೊಡ್ಡ ಪ್ರಮಾಣದ ಉತ್ಪಾದನೆ ಮತ್ತು ವಿತರಣೆಗಳು ಅನಿವಾರ್ಯವೋ ಅವುಗಳನ್ನು ಹೊರತುಪಡಿಸಿ ಉಳಿದ ಸಂದರ್ಭಗಳಲ್ಲಿ ದೇಸಿ ತಂತ್ರಜ್ಞಾನ ಬಳಸುವುದರಿಂದ ವ್ಯಕ್ತಿ, ಸಂಸ್ಥೆ ಮತ್ತು ದೇಶ ಸಾಲದ ಹೊರೆಯಿಂದ ಹಾಗೂ ಅನಪೇಕ್ಷಿತ ಅವಲಂಬನೆಯಿಂದ ಹೊರಬರಬಹುದು ಎಂದರು.

ಚಿತ್ರದುರ್ಗ ಸೈನ್ಸ್ ಫೌಂಡೇಷನ್ ನಿರ್ದೇಶಕ ಪ್ರೊ. ಈ. ರುದ್ರಮುನಿ ಮಾತನಾಡಿ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಕೊರತೆ ಶಿಕ್ಷಕರಲ್ಲಿ ಎದ್ದು ಕಾಣುತ್ತಿದೆ. ಶಿಕ್ಷಕರು ಮಕ್ಕಳಿಗೆ ವಿಜ್ಞಾನ ಸರಿಯಾಗಿ ಬೋಧಿಸಬೇಕು. ವೈಜ್ಞಾನಿಕ ಮನೋಭಾವನೆ, ಆಸಕ್ತಿ, ಚಿಂತನೆಯನ್ನು ಮಕ್ಕಳಲ್ಲಿ ಮೂಡಿಸಬೇಕಿದೆ. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ಕೇವಲ ಪರೀಕ್ಷಾ ದೃಷ್ಟಿಯಿಂದ ಓದುವುದಕ್ಕಿಂತಲೂ ಮಿಗಿಲಾಗಿ ಪರೀಕ್ಷೆಯನ್ನು ಮೀರಿ ಕಲಿಯುವುದು ಬಹಳಷ್ಟಿದೆ. ಚಿಕ್ಕಂದಿನಲ್ಲಿಯೇ ಮಕ್ಕಳಿಗೆ ಭದ್ರವಾದ ಬುನಾದಿ ಹಾಕಬೇಕಿದೆ. ಶಿಕ್ಷಕರ ಮೇಲೆ ಮಹತ್ತರ ಜವಾಬ್ದಾರಿಯಿದೆ. ಅದರಿಂದ ವಂಚಿತರಾದರೆ ದೇಶಕ್ಕೆ ದ್ರೋಹ ಮಾಡಿದಂತಾಗುತ್ತದೆ ಎಂದು ತಿಳಿಸಿದರು.

ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕಿ ಸುಜಾತ ಮಾತನಾಡಿ ಪ್ರಕೃತಿಯ ವಿರುದ್ಧವಾಗಿ ಹೋಗುವ ಬದಲು ಪ್ರಕೃತಿ ನಮಗೆ ನೀಡಿರುವ ಸಂಪತ್ತನ್ನು ಹಾಳು ಮಾಡದೆ ಉಳಿಸಿಕೊಳ್ಳಬೇಕಾಗಿದೆ. ಪ್ರಶಿಕ್ಷಣಾರ್ಥಿಗಳು ವೈಜ್ಞಾನಿಕ ಮನೋಭಾವನೆ ಮೈಗೂಡಿಸಿಕೊಳ್ಳಬೇಕು. ಮಕ್ಕಳ ಮನಸ್ಸಿಗೆ ನಾಟುವ ರೀತಿಯಲ್ಲಿ ಪರಿಣಾಮಕಾರಿ ಬೋಧನೆ ಮುಖ್ಯ. ವಿಜ್ಞಾನ ಎಂದರೆ ಒಂದು ಡಿಸೈನ್. ಮಿಂಚು, ಗುಡುಗಿನಲ್ಲಿ ಒಂದು ರೀತಿಯ ಆಕರ್ಷಣೆಯಿದೆ. ಕವಿ ಹೃದಯ, ವಿಜ್ಞಾನದ ಹೃದಯ ಎರಡು ಒಂದೆ ಎಂದು ನುಡಿದರು.

ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ ಮಾತನಾಡಿ ಬೆಳಕಿನ ಚದುರತೆ ಕುರಿತು ಸರ್ ಸಿ.ವಿ.ರಾಮನ್‍ರವರು 1928 ರಲ್ಲಿ ಅನೇಕ ಸಂಶೋಧನೆಗಳನ್ನು ನಡೆಸಿ ಪ್ರಬಂಧ ಮಂಡಿಸಿದರು. ಆದರೆ ಅವರಿಗೆ 1930ರಲ್ಲಿ ನೊಬೆಲ್ ಪ್ರಶಸ್ತಿ ಸಿಕ್ಕಿತು. ಅಲ್ಲಿಂದ ಇಲ್ಲಿಯತನಕ ಯಾರು ಮತ್ತೆ ಪ್ರಶಸ್ತಿ ಪಡೆಯಲು ಆಗಿಲ್ಲ ಎಂದರು.

ಪ್ರವಾಚಕ ಜಿ.ಆರ್. ತಿಪ್ಪೇಶಪ್ಪ, ರಾಜಣ್ಣ ವೇದಿಕೆಯಲ್ಲಿದ್ದರು. ಪ್ರಶಿಕ್ಷಣಾರ್ಥಿ ಹೇಮಲತ ಪ್ರಾರ್ಥಿಸಿದರು. ಗೌತಮಿ ಸ್ವಾಗತಿಸಿದರು. ಭಾರತಿ ನಿರೂಪಿಸಿದರು.

Share this article