ಸುಸ್ಥಿರ ಅಭಿವೃದ್ಧಿ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರೊ.ಭೀಮರಾಯ ಮೇತ್ರಿಕನ್ನಡಪ್ರಭ ವಾರ್ತೆ ತುಮಕೂರು
2028ರ ವೇಳೆಗೆ 5 ಟ್ರಿಲಿಯನ್ ಆರ್ಥಿಕತೆಯನ್ನು ಭಾರತ ತಲುಪುವ ಮೂಲಕ ಚೀನಾದಿಂದ ಜಾಗತಿಕ ನಾಯಕತ್ವವನ್ನು ತನ್ನದಾಗಿಸಿಕೊಳ್ಳುವತ್ತ ದಾಪುಗಾಲಿಡುತ್ತಿದೆ. ಇಡೀ ಜಗತ್ತು ಭಾರತದತ್ತ ಭರವಸೆಯಿಂದ ನೋಡುತ್ತಿದೆ ಎಂದು ನಾಗಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ನಿರ್ದೇಶಕ ಪ್ರೊ.ಭೀಮರಾಯ ಮೇತ್ರಿ ಸಂತಸ ವ್ಯಕ್ತಪಡಿಸಿದರು.ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಾಣಿಜ್ಯಶಾಸ್ತ್ರಅಧ್ಯಯನ ಮತ್ತು ಸಂಶೋಧನ ವಿಭಾಗವು ಬುಧವಾರ ಆಯೋಜಿಸಿದ್ದ ‘ಸುಸ್ಥಿರ ಅಭಿವೃದ್ಧಿಗಾಗಿ ಜಾಗತಿಕ ಆವಿಷ್ಕಾರಗಳು: ಅವಕಾಶಗಳು ಮತ್ತು ಸವಾಲುಗಳು’ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
ಜನನ ಪ್ರಮಾಣ ಹಾಗೂ ಯುವಕರ ಸಂಖ್ಯೆ ಕಡಿಮೆ ಇರುವ ದೇಶಗಳಾದ ಕೆನಡಾ, ಅಮೇರಿಕ, ಇಂಗ್ಲೆಂಡ್, ಯುರೋಪ್‌ಗಳಲ್ಲಿ ಜಾಗತಿಕ ಪುನರ್‌ರಚನೆಯಾಗುತ್ತಿದೆ. ವಲಸೆ ಪ್ರಮಾಣ ಹೆಚ್ಚುತ್ತಿದೆ. ಭಾರತದ ಆರ್ಥಿಕತೆಯ ಅಭಿವೃದ್ಧಿಯನ್ನು ನೋಡಿದ ಚೀನಾ ಒಂದು ಮಗುವಿನ ನೀತಿಯನ್ನು ಹಿಂಪಡೆದಿದೆ. ಭಾರತದಲ್ಲಿ ಯುವಶಕ್ತಿಯ ಪ್ರಮಾಣ ಶೇ.65 ರಷ್ಟಿದೆ ಎಂದು ತಿಳಿಸಿದರು.1980ರಿಂದ 85ರ ವರೆಗೂ ಉತ್ತಮ ಆರ್ಥಿಕತೆಯ ದೇಶವಾಗಿದ್ದ ಜಪಾನ್‌ಅನ್ನು 21ನೆಯ ಶತಮಾನದ ಆರಂಭದಲ್ಲಿ ಸಿಂಗಾಪುರ್ ಹಿಂದಿಕ್ಕಿತು. ನಂತರದ ಬೆಳವಣಿಗೆಯಲ್ಲಿ ಪ್ರಪಂಚದ ಸಿಮೆಂಟ್ ಉತ್ಪಾದನೆಯ ಶೇ.50ರಷ್ಟು, ಶೇ.35ರಷ್ಟು ಉಕ್ಕನ್ನು ಬಳಸಿ ಮೂಲಸೌರ್ಕಗಳನ್ನು ಅಭಿವೃದ್ಧಿ ಪಡಿಸಿದ ಚೀನಾ ಎಲ್ಲರನ್ನೂ ಹಿಂದಿಕ್ಕಿ ಸೂಪರ್ ಎಕಾನಮಿಯ ದೇಶಗಳಲ್ಲಿ ಅಗ್ರಸ್ಥಾನಕ್ಕೇರಿತು ಎಂದು ತಿಳಿಸಿದರು.
ಕಂಫರ್ಟ್ ವಲಯದಿಂದ ಆಚೆ ಬರಲು ಸಾಧ್ಯವಾಗದೆ ಇತಿಹಾಸ ಪೂರ್ವದಲ್ಲಿ ದೇಶದ ಪ್ರಗತಿ ಕುಂಟಿತವಾಯಿತು. 1.4 ಬಿಲಿಯನ್ ಸಮೂಹವನ್ನು ಮಾನವ ಸಂಪನ್ಮೂಲವನ್ನಾಗಿ ಬಳಸಿಕೊಳ್ಳುವ ಸಮಯ ಇದಾಗಿದೆ. ದೇಶದ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಸಂಶೋಧನೆ, ಆವಿಷ್ಕಾರಗಳಲ್ಲಿ ಭಾಗಿಯಾಗಬೇಕು. ಶೇ.1.5 ರಷ್ಟು ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡಿದ್ದೇವೆ. ಮರುಬಳಕೆಯ ನೀತಿಜಾರಿಯಾದರೆ ಪರಿಸರ ನಾಶವಾಗುವುದಿಲ್ಲ ಎಂದರು.ಜರ್ಮನಿ, ಜಪಾನ್ ದೇಶಗಳನ್ನು ಆರ್ಥಿಕತೆಯಲ್ಲಿ ಹಿಂದಿಕ್ಕಿರುವ ಭಾರತ ಬಹು ಶಿಸ್ತೀಯ ಸಂಶೋಧನೆಗಳಿಗಾಗಿ 50 ಕೋಟಿ ಹಣವನ್ನು ಮೀಸಲಿಟ್ಟಿದೆ. ಇದರಿಂದಾಗಿ ಸಂಶೋಧನೆಗಳ ಮೇಲೆ ಹೆಚ್ಚು ಒತ್ತುಕೊಟ್ಟು ದೇಶದ ಅಭಿವೃದ್ಧಿಗೆ ನೆರವಾಗುವಲ್ಲಿ ಸಮಾಜ ಮುಂದಾಗಬೇಕು. ಸೌರ ಬೆಳಕನ್ನು ಬಳಸಿಕೊಂಡು ಚಲಿಸುವ ವಾಹನಗಳ ಉತ್ಪಾದನೆಯಾಗುತ್ತಿದೆ. ಇಂಧನ, ಬ್ಯಾಟರಿ ಬಳಕೆಯ ವಾಹನಗಳು ಕೆಲವೇ ವರ್ಷಗಳಲ್ಲಿ ಇಲ್ಲವಾಗುತ್ತವೆ ಎಂದು ತಿಳಿಸಿದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಸಂಶೋಧನೆ-ಅಭಿವೃದ್ಧಿಯಾಧಾರಿತ ಶಿಕ್ಷಣ, ಉದ್ಯೋಗದ ನೀತಿ ಭಾರತದಲ್ಲಿ ಜಾರಿಯಾಗಬೇಕು. ಗ್ರಾಹಕ ಕೂಡ ಉತ್ಪಾದನೆಯ ಕಾರ್ಯವನ್ನು ಆರಂಭಿಸಬೇಕು. ಉದ್ಯೋಗ ಹುಡುಕುವ ಬದಲು ಉದ್ಯೋಗ ಒದಗಿಸುವ ಯುವಸಮೂಹ ಬೇಕು. ನಮ್ಮನ್ನುಅಭಿವೃದ್ಧಿ ಮಾಡಿಕೊಂಡರಷ್ಟೇ ಬದುಕಲು ಸಾಧ್ಯ ಎಂದು ತಿಳಿಸಿದರು.ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಕೃತಕ ಬುದ್ಧಿಮತ್ತೆಯ ಪ್ರಪಂಚವಾಗಿದೆ. ಸೌರಶಕ್ತಿ ಬಳಕೆ ಇಂದಿನ ಅಗತ್ಯವಾಗಿದೆ. 3ಡಿ ಮನೆ, ಕಟ್ಟಡ ನಿರ್ಮಾಣದತ್ತ ದೇಶಗಳು ಮುಂದಾಗುತ್ತಿವೆ. ಸಾವಯವ ರಾಜ್ಯವಾದ ಸಿಕ್ಕಿಂ ಭಾರತಕ್ಕೆ ಮಾದರಿಯಾಯಿತು. ಸಿದ್ಧರ ಬೆಟ್ಟದಲ್ಲಿ ಸಿಗುವ ಸಸ್ಯಗಳಿಂದ ಸೋಂಕು ತಡೆಯಬಹುದು, ಕ್ಯಾನ್ಸರ್‌ಚಿಕಿತ್ಸೆಗಾಗಿ ಬಳಸಬಹುದು. ಪರಿಸರ ನಮಗೆಲ್ಲವನ್ನೂ ಕೊಡುವಾಗ ಅದಕ್ಕೆ ಹಾನಿ ಮಾಡಬಾರದು ಎಂದರು.‘ಸುಸ್ಥಿರ ಅಭಿವೃದ್ಧಿಗಾಗಿಜಾಗತಿಕ ಆವಿಷ್ಕಾರಗಳು’, ‘ಸುಸ್ಥಿರ ಅಭಿವೃದ್ಧಿಗಾಗಿ ವ್ಯಾಪಾರದಲ್ಲಿ ಆವಿಷ್ಕಾರಗಳು’ಕುರಿತು ಪ್ರೊ. ಬಿ. ಶೇಖರ್, ಪ್ರೊ. ಪಿ. ಪರಮಶಿವಯ್ಯ, ಪ್ರೊ.ಜಿ. ಸುದರ್ಶನರೆಡ್ಡಿ, ಡಾ. ಬಿ. ಕೆ.ಸುರೇಶ್, ಡಾ.ಎಸ್. ದೇವರಾಜಪ್ಪ, ಡಾ.ಎಸ್. ಮಧು-ಇವರ ಸಂಪಾದಕತ್ವದ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಸಮ್ಮೇಳನದ ಸಂಚಾಲಕ ಡಾ. ಬಿ. ಕೆ.ಸುರೇಶ್, ಸಂಘಟನಾ ಕಾರ್ಯದರ್ಶಿ ಡಾ.ಎಸ್. ದೇವರಾಜಪ್ಪ, ರಾಣಿಚೆನ್ನಮ್ಮ ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ವೈ.ಕಾಂಬ್ಳೆ, ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ಬಿ. ಶೇಖರ್, ಪ್ರೊ. ಪಿ. ಪರಮಶಿವಯ್ಯ, ಪ್ರೊ.ಜಿ. ಸುದರ್ಶನರೆಡ್ಡಿ ಉಪಸ್ಥಿತರಿದ್ದರು.