ಜಗತ್ತಿಗೆ ಭಾರತ ಔಷಧಾಲಯ

KannadaprabhaNewsNetwork | Published : May 28, 2024 1:01 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಜಾಗತಿಕ ಮಟ್ಟದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಹೊಂದಿರುವುದಲ್ಲದೇ, ಜಗತ್ತಿಗೆ ಭಾರತ ಔಷಧಾಲಯವಾಗಿದೆ. ವೈದ್ಯಕೀಯ ಮತ್ತು ಆರೋಗ್ಯ ಸೇವೆಯನ್ನು ಹಣಕ್ಕಾಗಿ ಮಾಡದೇ ಉದಾತ್ತ ಭಾವನೆಯಿಂದ ಮಾಡಬೇಕು ಎಂದು ಉಪರಾಷ್ಟ್ರಪತಿ ಜಗದೀಪ ಧನಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಾಗತಿಕ ಮಟ್ಟದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಹೊಂದಿರುವುದಲ್ಲದೇ, ಜಗತ್ತಿಗೆ ಭಾರತ ಔಷಧಾಲಯವಾಗಿದೆ. ವೈದ್ಯಕೀಯ ಮತ್ತು ಆರೋಗ್ಯ ಸೇವೆಯನ್ನು ಹಣಕ್ಕಾಗಿ ಮಾಡದೇ ಉದಾತ್ತ ಭಾವನೆಯಿಂದ ಮಾಡಬೇಕು ಎಂದು ಉಪರಾಷ್ಟ್ರಪತಿ ಜಗದೀಪ ಧನಕರ್ ಹೇಳಿದರು.

ನಗರದ ಕೆಎಲ್ಇ ಸಂಸ್ಥೆಯ ಜೆಎನ್‍ಎಂಸಿ ಆವರಣದಲ್ಲಿರುವ ಕೆಎಲ್‍ಇ ಸೆಂಟಿನರಿ ಕನ್ವೇಷಣ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಡಿದ್ದ ಕೆಎಲ್‍ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್ (ಕಾಹೆರ) 14ನೇ ಘಟಿಕೋತ್ಸವದಲ್ಲಿ‌ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಕೋವಿಡ್‌ನಂತ ಸಂಕಷ್ಟದ ಸಮಯವನ್ನು ಯಶಸ್ವಿಯಾಗಿ ಎದುರಿಸಿದ್ದು, ಆರೋಗ್ಯ ಮತ್ತು ಸಿಬ್ಬಂದಿ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಯುವ ಸಮುದಾಯದ ಶ್ರಮಿಸಬೇಕು. ಎಲ್ಲ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ ಆಗುತ್ತಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ವೈದ್ಯರು ತಂತ್ರಜ್ಞಾನ ಆಧಾರಿತ ಚಿಕಿತ್ಸಾ ಸೌಲಭ್ಯ ಅಳವಡಿಸಿಕೊಳ್ಳಬೇಕು. ನಿಮ್ಮ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿದ್ದು, ಅವುಗಳನ್ನು ಸಮರ್ಥವಾಗಿ ಎದುರಿಸುವ, ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.ಪ್ರಜ್ಞಾವಂತರು ಕೈಕಟ್ಟಿ ಕುಳಿತುಕೊಳ್ಳಬೇಡಿ.‌ ನಿಮ್ಮ ಐಡಿಯಾಗಳನ್ನು, ಸಾಧನೆಗಳನ್ನು ಕಾರ್ಯರೂಪಕ್ಕೆ ತರಲು ನಿರಂತರ ಪ್ರಯತ್ನ‌ಮಾಡಿ ಮತ್ತು ನಿರಂತರ ಅಧ್ಯಯನ ಮಾಡಬೇಕು. ಸಂಶೋಧನೆ ಕ್ಷೇತ್ರದಲ್ಲಿ ಅಭಿವೃದ್ಧಿ, ಬೆಳವಣಿಗೆ ಅವಶ್ಯಕತೆ ಇದೆ. ಮಾನವ ಸಂಪನ್ಮೂಲದ ಸಮರ್ಪಕವಾಗಿ ಬಳಕೆಯಾಗಬೇಕು, ಒಳ್ಳೆಯ ಶಿಕ್ಷಕರ ತಂಡ, ಕಠಿಣ ಕೆಲಸದಿಂದ ಸಾಧನೆ ಸಾಧ್ಯ. ಮೊದಲು ರಾಷ್ಟ್ರೀಯತೆ ಬೆಳಸಿಕೊಳ್ಳುವುದರ ಜತೆಗೆ ಏನೇ ಸಾಧನೆ ಮಾಡಿದರೇ ಅದು ರಾಷ್ಟ್ರೀಯತೆ ಆಗಿರಬೇಕು. ಏಕೆಂದರೆ ಆರೋಗ್ಯ ಕ್ಷೇತ್ರ ಬಹಳ ಪ್ರಮುಖ ಪಾತ್ರ ವಹಿಸುತ್ತಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವರಿಗೆ ಬೇಡಿಕೆ ಹೆಚ್ಚಿದೆ. ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಅಷ್ಟೇ ಸಮಸ್ಯೆ ಎದುರಿಸುತ್ತಿದ್ದೇವೆ. ಆರೋಗ್ಯ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗಗಳಿದ್ದು, ಪರಿಹಾರಗಳನ್ನು ಕಂಡುಹಿಡಿಯುವಂತೆ ತಿಳಿಸಿದರು.ಸಂಶೋಧನೆ ಮತ್ತು ಅಭಿವೃದ್ಧಿ ಯಾವುದೇ ಕ್ಷೇತ್ರದ ಪ್ರಗತಿಗೆ ಬೆನ್ನೆಲುಬು. ಕೈಗಾರಿಕೆಗಳು ತಮ್ಮ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ನಿಧಿಯನ್ನು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಹೂಡಿಕೆ ಮಾಡಬೇಕಾಗುತ್ತದೆ. ಜನರು ಒಂದು ಕಾಲದಲ್ಲಿ ಬಿಲ್‌ಗಳನ್ನು ಪಾವತಿಸಲು ಕೆಲಸದಿಂದ ರಜೆ ತೆಗೆದುಕೊಳ್ಳುತ್ತಿದ್ದರು, ಆದರೆ, ಈಗ ಸ್ಮಾರ್ಟ್‌ಫೋನ್‌ಗಳನ್ನು ಬಳಸಿಕೊಂಡು ಬಿಲ್‌ಗಳನ್ನು ಪಾವತಿಸುತ್ತಿದ್ದಾರೆ ಮತ್ತು ಹೆಚ್ಚಿನ ಸೇವೆಯನ್ನು ಬೆರಳ ತುದಿಯಲ್ಲಿ ಪಡೆಯುತ್ತಿದ್ದಾರೆ. ಈ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಸಾಕಷ್ಟು ಪ್ರಗತಿಯ ಅಗತ್ಯವಿದೆ ಮತ್ತು ಇದನ್ನು ಯುವ ವೃತ್ತಿಪರರು ಸಾಧಿಸಬಹುದು. ಪದವೀಧರರು ತಮ್ಮ ಜ್ಞಾನ, ಸಾಮರ್ಥ್ಯವನ್ನು ಬಳಸಿಕೊಂಡು ದೇಶದಲ್ಲಿರುವ ಕೈಬಿಟ್ಟ ಅವಕಾಶಗಳನ್ನು ಬಳಸಿಕೊಂಡು ಈ ದೇಶವನ್ನು ಅಭಿವೃಧ್ಧಿ ಪಥದತ್ತ ಕೊಂಡೊಯ್ಯಬೇಕು ಎಂದರು.ಸುಮಾರು 5000 ವರ್ಷಗಳ ಹಿಂದೆ ಈ ನೆಲದಲ್ಲಿ ನಾಗರಿಕತೆಯ ಪ್ರಾರಂಭದಿಂದಲೂ ಆರೋಗ್ಯ ಮತ್ತು ಔಷಧಕ್ಕೆ ಹೇಗೆ ಪ್ರಾಮುಖ್ಯತೆ ನೀಡಲಾಯಿತು, ನಮ್ಮ ಮೂಲಭೂತ ಅಂಶಗಳನ್ನು ನಾವು ಹಿಂತಿರುಗಿ ನೋಡುತ್ತೇವೆ. ಆಯುರ್ವೇದದಲ್ಲಿ ಪ್ರತಿಯೊಂದು ರೋಗಕ್ಕೂ ಪರಿಹಾರ, ಚಿಕಿತ್ಸೆಗಳಿದ್ದು, ಇವುಗಳನ್ನು ಕೂಲಂಕುಷವಾಗಿ ಸಂಶೋಧಿಸಿ ಅಧ್ಯಯನ ಮಾಡಬೇಕಿದೆ. ಜಿ-20 ನಲ್ಲಿ ನಮ್ಮ ಧ್ವನಿ ಎಂದಿಗೂ ಕೇಳದ ಸಮಯವಿತ್ತು. ಆದರೆ, ಇಂದು, ಎಲ್ಲ ದೇಶಗಳು ಸುಸ್ಥಿರ ಬೆಳವಣಿಗೆ ಮತ್ತು ಭವಿಷ್ಯಕ್ಕಾಗಿ ಭಾರತದ ಧ್ವನಿಯನ್ನು ಕೇಳಲು ಕಾಯುತ್ತಿವೆ. ಆಫ್ರಿಕನ್ ಯೂನಿಯನ್ ಅನ್ನು ಜಿ-20ನಲ್ಲಿ ಸೇರಿಸಲಾಗಿದೆ. ನಾವು ಜಾಗತಿಕ ಧ್ವನಿಯಾಗಿದ್ದೇವೆ ಎಂದು ತಿಳಿಸಿದರು. ಚಿನ್ನದ ಪದಕ ವಿಜೇತರು ಸೇರಿದಂತೆ ಎಲ್ಲ ಪದವಿ ಪಡೆದ ವಿದ್ಯಾರ್ಥಿಗಳಿಗೆ, ಅವರ ಸಾಧನೆಗಾಗಿ ಸಂಸ್ಥೆಯ ಎಲ್ಲ ಬೋಧಕ ಸಿಬ್ಬಂದಿ, ಆಡಳಿತ ಮಂಡಳಿ ಮತ್ತು ಟ್ರಸ್ಟಿಗಳನ್ನು ಅಭಿನಂದಿಸಿದರು ಮತ್ತು ರಾಷ್ಟ್ರದ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಸೇವೆಯನ್ನು ನಿರಂತರವಾಗಿ ಮುಂದುವರೆಸಬೇಕು ಎಂದು ಹಾರೈಸಿದರು.ಮೊದಲ ಬಾರಿಗೆ ವಿಶ್ವವಿದ್ಯಾನಿಲಯವು ಡಾಕ್ಟರ್ ಆಫ್ ಸೈನ್ಸ್ ಅನ್ನು ಅಮೇರಿಕಾದ ಫಿಲಡೆಲ್ಫಿಯಾದ ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದ ಡಾ.ರಿಚರ್ಡ್ ಜಾಕೋಬ್ ಡರ್ಮನ್ ಅವರಿಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್‌ ನೀಡಿ ಗೌರವಿಸಿದರು. ಡಾ.ರಿಚರ್ಡ್ ಪದವಿ ಸ್ವೀಕರಿಸಿ ಮಾತನಾಡಿ, ಈ ಪದವಿಯನ್ನು ಸ್ವೀಕರಿಸಲು ನಾನು ಸಂತಷವಾಗಿದ್ದೇನೆ. ನಾನು ಈ ಪದವಿಯನ್ನು ನನ್ನ ಮಾರ್ಗದರ್ಶಕರಾಗಿದ್ದ ಡಾ.ಬಿ.ಎಸ್.ಕೋಡ್ಕಣಿ ಅವರಿಗೆ ಅರ್ಪಿಸುತ್ತೇನೆ. ಸಂಶೋಧನೆ, ಅಭಿವೃದ್ಧಿ ಮತ್ತು ಶೈಕ್ಷಣಿಕ ವಿನಿಮಯಕ್ಕಾಗಿ ಕೆಎಲ್‌ಇ ಸಂಸ್ಥೆಗಳೊಂದಿಗಿನ ನಮ್ಮ ಸಹಯೋಗವು 3 ದಶಕ ಯಶಸ್ವಿಯಾಗಿದೆ. ಮ್ಯಾಟರ್ನಲ್ ಹೆಲ್ತ್‌ನಲ್ಲಿ ಕೆಎಲ್‌ಇ ಸಂಸ್ಥೆಯ ಸಂಶೋಧನಾ ಕೇಂದ್ರದ ಕಾರ್ಯ ಅಪಾರವಾಗಿದೆ ಎಂದು ತಿಳಿಸಿದರು.ಈ ಘಟಿಕೋತ್ಸವದಲ್ಲಿ ಒಟ್ಟು 1739 ವೈದ್ಯಕೀಯ ವಿವಿಧ ಕೋರ್ಸ್‌ಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಅದರಲ್ಲಿ 45 ಚಿನ್ನದ ಪದಕ ವಿಜೇತರಿದ್ದಾರೆ. 30 ಪಿಎಚ್‌ಡಿ ಪದವೀಧರರು, 13 ಪೋಸ್ಟ್ ಡಾಕ್ಟರಲ್(ಡಿಎಂ, ಎಂಸಿಎಚ್) 644 ಪೋಸ್ಟ್ ಡಾಕ್ಟರೇಟ್ಸ್, 1023 ಅಂಡರ್ ಗ್ರ್ಯಾಜುಯೆಟ್ಸ್, ಪೋಸ್ಟ್ ಗ್ರ್ಯಾಜುಯೆಟ್ ಡಿಪ್ಲೋಮಾ, 4 ಡಿಪ್ಲೋಮಾ, 5 ಫೆಲೋಶಿಫ್, 11 ಸರ್ಟಿಫೀಕೆಟ್ ಕೋರ್ಸ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಈ ಸಮಾರಂಭದಲ್ಲಿ ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ, ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪ್ರಭಾಕರ ಕೋರೆ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಪತ್ನಿ ಡಾ.ಸುದೇಶ್ ಧನಕರ್, ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರಿಗೆ ಬಸವೇಶ್ವರ ಮೂರ್ತಿಯನ್ನು ಮಾಲಾರ್ಪಣೆ ಮಾಡುವ ಮೂಲಕ ಸನ್ಮಾನಿಸಿದರು. ಕುಲಪತಿ ಡಾ.ಕೋರೆ, ಉಪಕುಲಪತಿ ಡಾ.ನಿತಿನ್ ಗಂಗನೆ, ಪರೀಕ್ಷಾ ನಿಯಂತ್ರಕ ಪ್ರೊ.ಡಾ.ಚಂದ್ರ ಎಸ್.ಮೆಟಗುಡ್, ಕುಲಸಚಿವ ಪ್ರೊ.ಎಂ.ಎಸ್.ಗಣಾಚಾರಿ ಉಪಸ್ಥಿತರಿದ್ದರು.

Share this article