ಚನ್ನಪಟ್ಟಣ: ಇಂದು ಭಾರತ ವಿಶ್ವದಲ್ಲೇ 5ನೇ ಬಲಿಷ್ಠ ಆರ್ಥಿಕ ಶಕ್ತಿಯಾಗಿದ್ದು, ಮೂರನೇ ಆರ್ಥಿಕ ಶಕ್ತಿಯಾಗುವತ್ತ ದಾಪುಗಾಲು ಇಟ್ಟಿದೆ. ಇದೇ ವೇಗದಲ್ಲಿ ದೇಶ ಮುಂದುವರಿದರೆ, 2047ರ ಹೊತ್ತಿಗೆ ದೇಶ ವಿಶ್ವದ ನಂಬರ್ ಒನ್ ಆರ್ಥಿಕ ಶಕ್ತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಷನ್ ಡಿಜಿಟಲ್ ಇಂಡಿಯಾ ಅಧ್ಯಕ್ಷ ಹಾಗೂ ಯುಎಸ್‌ಎನ ಗ್ಲೋಬಲ್ ಡಿಜಿಟಲ್ ವಿಶ್ವವಿದ್ಯಾಲಯದ ಕುಲಪತಿ ಹರಿಕೃಷ್ಣ ಮಾರಂ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಶತಮಾನೋತ್ಸವ ಭವನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿದ್ದ ಬಹುಶಾಸ್ತ್ರಿಯ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ "ಸುಸ್ಥಿತ ಭವಿಷ್ಯದ ಕಡೆಗೆ ಶಿಕ್ಷಣದ ಪಾತ್ರ " ಕುರಿತು ವಿಷಯ ಮಂಡಿಸಿದ ಅವರು, ಹಿಂದೆ ದೇಶದ ಜನಸಂಖ್ಯೆಯೇ ದೊಡ್ಡ ಹೊರೆ ಎಂಬಂತ ವಾತಾವರಣವಿತ್ತು. ಆದರೆ ಇಂದು ದೇಶದ ಜನಸಂಖ್ಯಾ ಬಲದ ಕಾರಣಕ್ಕೆ ಹಲವು ಅವಕಾಶಗಳು ನಮಗೆ ದೊರೆಯುತ್ತಿವೆ ಎಂದು ಹೇಳಿದರು.ಎಲ್ಲೆಡೆ ಭಾರತೀಯರ ಸಾಧನೆ:ವಿಶ್ವದ ವಿವಿಧ ದೇಶಗಳಲ್ಲೂ ಭಾರತೀಯರು ತಮ್ಮ ಛಾಪು ಮೂಡಿಸಿದ್ದಾರೆ. ಅಮೆರಿಕಾದಲ್ಲಿ ಇರುವ ವೈದ್ಯರಲ್ಲಿ ಬಹುತೇಕರು ಭಾರತೀಯರು. ಎಂಐಟಿಯಲ್ಲಿ ೨೨ಕ್ಕೂ ಹೆಚ್ಚು ಉಪನ್ಯಾಸಕರು ಭಾರತೀಯರು. ಸುಂದರ್ ಪಿಚ್ಚೆ, ಸತ್ಯ ನಾದೆಲ್ಲಾ ಸೇರಿದಂತೆ ಬಹುತೇಕ ಭಾರತೀಯರು ಇಂದು ವಿಶ್ವದ ದೊಡ್ಡ ಕಂಪನಿಗಳ ಸಿಇಒ ಆಗಿದ್ದಾರೆ. ಭಾರತ ಇಂದು ವಿಶ್ವಗುರುವಾಗಿ ಬದಲಾಗಿದ್ದರೆ ಅದಕ್ಕೆ ಶಿಕ್ಷಣವೇ ಕಾರಣ ಎಂದು ಹೇಳಿದರು.
ಸುರಕ್ಷಿತ ಹೂಡಿಕೆಗಾಗಿ ಬಹುತೇಕ ಕಂಪನಿಗಳು ಇಂದು ಭಾರತದತ್ತ ಮುಖಮಾಡಿವೆ. ಇಂದು ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಗುರುತಿಸಿಕೊಂಡಿದೆ. ವಿಶ್ವದ ದೊಡ್ಡ ಸಾಫ್ಟವೇರ್ ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಮುಖ್ಯ ಕಚೇರಿ ಅಥವಾ ಬ್ರ್ಯಾಂಚ್ ಅನ್ನು ಹೊಂದಿದೆ. ಕೊರೋನಾ ಸಾಂಕ್ರಾಮಿಕದ ಬಳಿಕ ಶಿಕ್ಷಣ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಯಾಗಿದ್ದು, ಮುಂದಿನ ದಿನಗಳಲ್ಲೀ ಡಿಜಿಟಲ್ ಯೂನಿವರ್ಸಿಟಿಗಳು ಬರುವ ಸೂಚನೆ ಇದೆ ಎಂದು ತಿಳಿಸಿದರು.ಇಂಟರ್‌ನೆಟ್ ಇಲ್ಲದೇ ಜೀವನವಿಲ್ಲ:
ಗೂಗಲ್ ಪೇ, ಫೋನ್ ಪೇನಂತ ಆನ್‌ಲೈನ್ ಪೇಮೆಂಟ್ ಪ್ಲಾಟ್‌ಫಾರಂಗಳು ಭಾರತದ ಅವಿಷ್ಕಾರವಾಗಿದೆ. ಇಂದಿಗೂ ಎಷ್ಟೋ ದೇಶಗಳಲ್ಕಿ ಈ ವ್ಯವಸ್ಥೆ ಇಲ್ಲ. ಬ್ಯಾಂಕ್ ವರ್ಗಾವಣೆಗಿಂತ 8 ಪಟ್ಟು ವರ್ಗಾವಣೆ ಆನ್‌ಲೈನಲ್ಲಿ ಆಗುತ್ತಿದೆ. ಒಂದು ನಿಮಿಷ ಇಂಟರ್ ನೆಟ್ ಸೇವೆ ಲಭ್ಯವಿಲ್ಲದಿದ್ದರೆ ಎಷ್ಟೋ ಕೆಲಸ ಕಾರ್ಯಗಳಿಗೆ ದೊಡ್ಡ ಅಡ್ಡಿಯಾಗಿ ಸುಮಾರು ೯೫ ಮಿಲಿಯನ್ ಡಾಲರ್ ನಷ್ಟ ಉಂಟಾಗುತ್ತದೆ. ಬದಲಾವಣೆಗೆ ತಕ್ಕಂತೆ ನಮ್ಮನ್ನು ನಾವು ತೆರೆದುಕೊಳ್ಳಬೇಕು ಎಂದರು.ಯುವಸಮುದಾಯ ದೇಶದ ಶಕ್ತಿ:
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಜಯಕರ ಎಸ್.ಎಂ ಮಾತನಾಡಿ, ವಿಶ್ವಸಂಸ್ಥೆ ಸುಸ್ತಿರ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಬಡತನ, ಆಹಾರ, ಆರೋಗ್ಯ ಕ್ಷೇತ್ರದ ಸುಧಾರಣೆಯ ಉದ್ದೇಶ ಹೊಂದಿದೆ. ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ. ಡಬ್ಲೂಎಚ್‌ಒ ಪ್ರಕಾರ ನಮ್ಮ ದೇಶದಲ್ಲಿ ಸಾವಿರಕ್ಕೆ ಒಬ್ಬರು ವೈದ್ಯರೂ ಇಲ್ಲ. ಆರೋಗ್ಯ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಸುಧಾರಣೆ ಕಾಣಬೇಕಿದೆ. ಎಷ್ಟೋ ಕಡೆ ಆಸ್ಪತ್ರೆ ಇದ್ದರೂ ವೈದ್ಯರ ಕೊರತೆ ಇದೆ. ಇನ್ನು ವೈದ್ಯರಿದ್ದರೆ ಆಸ್ಪತ್ರೆಯಲ್ಲಿ ಸೌಕರ್ಯಗಳು ಇರುವುದಿಲ್ಲ ಎಂದರು.ವಿಶ್ವದ ಶೇ 20ರಷ್ಟು ಯುವ ಸಮುದಾಯ ಭಾರತದಲ್ಲಿ ಇದೆ. ದೇಶದ 4.3 ಕೋಟಿ ಯುವಕರು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಬೇಕಿದೆ. ವಿಜ್ಞಾನ ತಂತ್ರಜ್ಞಾನ ಇಂದು ಆದ್ಯತೆ ಕ್ಷೇತ್ರವಾಗಿದೆ. ಶಿಕ್ಷಣದ ಜತೆಗೆ ಕೌಶಲ್ಯ ವೃದ್ಧಿಗೆ ಆದ್ಯತೆ ನೀಡಬೇಕಿದೆ. ಎಐ, ಕಮ್ಮುನಿಕೇಷನ್, ಕ್ರಿಯೇಟಿವ್ ಥಿಂಕಿಂಗ್ ಕೌಶಲ್ಯವನ್ನು ಯುವ ಸಮುದಾಯ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಶೋಭಾ ಮಾತನಾಡಿ, ವಿಶ್ವದ ಇತರೆ ದೇಶಗಳ ವಿಚಾರಗಳನ್ನು ಅರಿಯಲು ಇಂತಹ ಸಮ್ಮೇಳನ ಸಹಕಾರಿಯಾಗಿದೆ. ಪರಿಸರ ಮಾಲಿನ್ಯದಿಂದ ಜಾಗತಿಕ ತಾಪಮಾನ ಹೆಚ್ಚಳಗೊಂಡಿದ್ದು, ಇದಕ್ಕೆ ನಾವೇ ಕಾರಣರಾಗಿದ್ದೇವೆ. ಇನ್ನಾದರೂ ನಾವು ಎಚ್ಚೆತ್ತುಕೊಂಡು ಪರಿಸರ ಉಳಿಸುವ ಕೆಲಸ ಮಾಡಬೇಕು. ಸಸಿಗಳನ್ನು ನೆಟ್ಟು ಪೋಷಿಸಬೇಕು. ಇದಕ್ಕೆ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಢಾಕಾ ವಿಶ್ವವಿದ್ಯಾಲಯದ ಸೈಕೋಲಾಜಿ ವಿಭಾಗದ ಮುಖ್ಯಸ್ಥ ಡಾ. ಮಹಮ್ಮದ್ ಕಮಾಲುದ್ದೀನ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್, ಡಾ. ಪ್ರೀತಿ, ಇತಿಹಾಸ ವಿಭಾಗದ ಪ್ರೊ. ಡಾ.ಮುಜಾಹಿದ್ ಖಾನ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನಂಜುಂಡ ಇತರರಿದ್ದರು.
ಪೊಟೋ೨೯ಸಿಪಿಟಿ೧:ಚನ್ನಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಮ್ಮೇಳವನ್ನು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ ಶೆಟ್ಟಿ ಹಾಗೂ ಇತರೆ ಗಣ್ಯರು ಉದ್ಘಾಟಿಸಿದರು.