ವಿಶ್ವಕ್ಕೆ ಭಾರತದ ಕೊಡುಗೆ ಅಪಾರ: ಯೋಗೇಂದ್ರ ಯದಲಾಪುರೆ

KannadaprabhaNewsNetwork | Published : Jan 5, 2024 1:45 AM

ಸಾರಾಂಶ

ಬೀದರ್‌ ತಾಲೂಕಿನ ಮಂದಕನಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಿಂದ ಗ್ರಾಮದ ಭವಾನಿ ಮಂದಿರದಲ್ಲಿ 2023-24ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೇಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಬೀದರ್

ಜಗತ್ತಿಗೆ ಶಾಂತಿ, ಸೌಹಾರ್ದತೆ, ನೆಮ್ಮದಿ, ನಡೆ ನುಡಿ, ಶಾಂತಿಯುತವಾಗಿ ಬದುಕುವ ಕಲೆಯನ್ನು ಕಲಿಸಿಕೊಟ್ಟ ದೇಶ ನಮ್ಮದಾಗಿದೆ. ಹೀಗಾಗಿ ಭಾರತ ವಿಶ್ವದಲ್ಲಿಯೆ ವಿಶೇಷವಾದ ಅದ್ಭುತ ದೇಶವಾಗಿದೆ ಎಂದು ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಯೋಗೇಂದ್ರ ಯದಲಾಪುರೆ ಹೇಳಿದರು.

ಅವರು ಬೀದರ್‌ ತಾಲೂಕಿನ ಮಂದಕನಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಿಂದ ಗ್ರಾಮದ ಭವಾನಿ ಮಂದಿರದಲ್ಲಿ ಹಮ್ಮಿಕೊಂಡ 2023-24ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಗುರು ಹಿರಿಯರ ಪರಂಪರೆ, ಸಹೋದರತ್ವ, ಸಮಸ್ತ ಜೀವ ರಾಶಿಗಳಲ್ಲಿ ಎಲ್ಲದರಲ್ಲಿಯು ದಯೆಯಿಂದ ಕಾಣುವ ಜೀವನ ಸಾಗಿಸುವ ವಸುದೈವ ಕುಟುಂಬಕಂ ದಿವ್ಯ ಮಂತ್ರವಾಗಿದೆ ಎಂದರು.

ಭಾರತವು ಎಲ್ಲಾ ಮೌಲ್ಯಗಳನ್ನು ವಿಶ್ವಕ್ಕೆ ಧಾರೆ ಎರೆದಿದೆ. ಸಾಮಾಜಿಕ, ಧಾರ್ಮಿಕ, ಆಧ್ಯತ್ಮಿಕ ರಾಜಕೀಯ. ವೈಜ್ಞಾನಿಕವಾಗಿ ಉತ್ತಮ ಕೊಡುಗೆಗಳು ನೀಡಿದೆ. ವಿಶ್ವದಲ್ಲಿಯೆ ಎಲ್ಲಾ ಕ್ಷೇತ್ರಗಳಲ್ಲಿ ಅಘಾಧ ಸಾಧನೆ ಭಾರತ ಮಾಡಿದೆ. ಇಂದಿನ ಯುವಕರು ಕೆಟ್ಟ ಚಟಗಳಿಗೆ ಬಲಿಯಾಗದೆ ಉತ್ತಮ ಜೀವನ ನಡೆಸಬೇಕೆಂದು ಹೇಳುತ್ತ ಸ್ವಾಭಿಮಾನ, ಸ್ವದೇಶಿ, ಆತ್ಮಾಭಿಮಾನ ಬೆಳೆಸಿಕೊಳ್ಳಬೇಕು. ವಿಧ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಒಳ್ಳೆಯ ನಾಗರಿಕರಾಗಿ ದೇಶ ಸೇವೆ ಮಾಡಬೇಕೇಂದು ಹೇಳಿದರು.

ಸಮಾಜ ಶಾಸ್ತ್ರ ಉಪನ್ಯಾಸಕ ವಿಠ್ಠಲ ಕೆ. ಪಾಂಚಾಳ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಗುರಿ ಇಟ್ಟುಕೊಂಡು ಕಾರ್ಯ ಪ್ರವರ್ತರಾಗಬೇಕು ಮೊಬೈಲ್ ಕಡೆ ಹೆಚ್ಚಿನ ಗಮನ ನೀಡದೆ ಓದಿನ ಕಡಗೆ ಹೆಚ್ಚಿನ ಗಮನ ನೀಡಬೇಕೆಂದ ಅವರು, ಕಷ್ಟ ಪಟ್ಟು ಓದದೆ ಇಷ್ಟ ಪಟ್ಟು ಓದಬೇಕು. ಪ್ರತಿಯೊಬ್ಬರು ದೇಶ ಭಕ್ತಿ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.

ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಕಾರ್ಯಕ್ರಮಾಧಿಕಾರಿ ಸಂತೋಷ ಎಕ್ಕೆಳೆ ವರದಿ ವಾಚನ ಮಾಡಿದರು. ಪ್ರಾಂಶುಪಾಲರಾದ ಚಂದ್ರಕಾಂತ ಗಂಗಶೆಟ್ಟಿ, ಉಪನ್ಯಾಸಕರಾದ ಮೋನಿಕಾ ಸುಹಾಸಿನಿ, ಸಿದ್ದಲಿಂಗಪ್ಪ, ನಾಗಪ್ಪ, ಪ್ರೀತೀಶ, ಬಸವರಾಜ ಅತಿಥಿ ಉಪನ್ಯಾಸಕಿ ಈರಮ್ಮ ಪಾಲ್ಗೊಂಡರು. ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಥಮ, ದ್ವಿತೀಯ ವರ್ಷದ ವಿಧ್ಯಾರ್ಥಿಗಳು ಗ್ರಾಮದ ಗಣ್ಯಮಾನ್ಯರು ಉಪಸ್ಥಿತರಿದ್ದರು.

Share this article