- ಜಿಲ್ಲಾಡಳಿತ ನೇತೃತ್ವದಲ್ಲಿ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಡಾ. ಬಿ.ಆರ್. ಅಂಬೇಡ್ಕರ್ ಹಾಕಿಕೊಟ್ಟ ಸಂವಿಧಾನವೆಂಬ ಭದ್ರ ಬುನಾದಿಯಡಿ ಭಾರತ ವಿಶ್ವದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಯಶಸ್ಸು ಕಂಡಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 133ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.ಅಂಬೇಡ್ಕರ್ ಚಿಕ್ಕ ವಯಸ್ಸಿನಿಂದಲೇ ಸಾಕಷ್ಟು ಕಷ್ಟ, ಅಸ್ಪೃಶ್ಯತೆ ಎದುರಿಸಿದ್ದಾರೆ. ಎಂತಹ ಕಷ್ಟಗಳು ಬಂದರೂ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಸಮಾಜದಲ್ಲಿರುವ ಸಂಘರ್ಷಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ. ಭಾರತ ರತ್ನವಾಗಿ ಬೆಳೆದ ಈ ಆದರ್ಶ ಪುರುಷನನ್ನು ಎಲ್ಲರೂ ಸ್ಮರಿಸುವ ದಿನ ಇದಾಗಿದೆ ಎಂದರು.
ಅಂಬೇಡ್ಕರ್ ನ್ಯೂಯಾರ್ಕ್ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಪದವಿ ಪಡೆದು, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪದವಿ ಪಡೆದರು. ಕೊಲಂಬಿಯಾ ವಿವಿ ಅಧ್ಯಯನ ವರದಿ ಅನ್ವಯ ಇಲ್ಲಿ ಅಭ್ಯಾಸ ಮಾಡಿದಂತಹ ವಿದ್ಯಾರ್ಥಿಗಳಲ್ಲಿ ಇಡೀ ವಿಶ್ವದಲ್ಲಿ ಹೆಚ್ಚು ಪ್ರಭಾವವುಂಟು ಮಾಡಿದವರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರಥಮ ಆದ್ಯತೆಗೆ ಬರುತ್ತಾರೆ ಎಂದು ತಿಳಿಸಿದ ಅವರು, ಡಾ.ಬಾಬಾ ಸಾಹೇಬರು ಹಾಕಿಕೊಟ್ಟಂತಹ ಆದರ್ಶಗಳು, ತತ್ವಗಳು, ಸಿದ್ಧಾಂತಗಳು, ಸಕಾರಾತ್ಮಕ ಪರಿಣಾಮವನ್ನು ಉಂಟು ಮಾಡಿವೆ ಎಂದರು.ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಅಂಬೇಡ್ಕರ್ ಜೀವನ ನಮಗೆ ಆದರ್ಶ, ಸ್ಫೂರ್ತಿ. ಎಷ್ಟೇ ಕೊರತೆಗಳು ಇದ್ದರೂ ಉನ್ನತವಾದ ಶಿಕ್ಷಣಗಳನ್ನು ಪಡೆದರು. ಸಮಾಜದಲ್ಲಿನ ಪಿಡುಗುಗಳು, ಲೋಪದೋಷಗಳ ವಿರುದ್ಧ ಸಾಕಷ್ಟು ಹೋರಾಡಿ ಜನರನ್ನು ಸಂಘಟಿತರನ್ನಾಗಿ ಮಾಡಿದರು. ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿ ಸಂವಿಧಾನ ಶಿಲ್ಪಿಯಾಗಿ ಎಲ್ಲ ಪಿಡುಗುಗಳನ್ನು ಹೊಡೆದು ಹಾಕಿದವರು ಎಂದು ವಿವರಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಶಿಕ್ಷಣಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಿ.ರಂಗಸ್ವಾಮಿ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ.ಸಂತೋಷ್, ತಹಶೀಲ್ದಾರ ಸಿ.ಅಶ್ವಥ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಯೋಜನಾ ನಿರ್ದೇಶಕ ಮಹಾಂತೇಶ್ ಇನ್ನಿತರರು ಭಾಗವಹಿಸಿದ್ದರು.
- - -ಕೋಟ್ ಮೇ 7ರಂದು ಲೋಕಸಭಾ ಚುನಾವಣೆ ಮತದಾನ ನಡೆಯುತ್ತಿದೆ, ಡಾ.ಅಂಬೇಡ್ಕರ್ ಪರಿಶ್ರಮಕ್ಕೆ ಸಾಕಾರವಾಗಿ 18 ವರ್ಷ ತುಂಬಿದ ಪ್ರತಿಯೊಬ್ಬರು ಅಂದು ಮತಗಟ್ಟೆಗೆ ಬಂದು ಮುಕ್ತ, ನ್ಯಾಯಸಮ್ಮತವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಸಾರ್ಥಕತೆ ಮೆರೆಯೋಣ
ಡಾ. ಎಂ.ವಿ. ವೆಂಕಟೇಶ್, ಜಿಲ್ಲಾಧಿಕಾರಿ- - -
-14ಕೆಡಿವಿಜಿ35ಃ:ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಉದ್ಘಾಟಿಸಿದರು.
-14ಕೆಡಿವಿಜಿ36ಃ:ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಇತರೆ ಗಣ್ಯರು ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.