ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಅರೆವಾಹಕ ಚಿಪ್‌ಗಳು (ಸೆಮಿಕಂಡಕ್ಟಡ್ ಚಿಪ್) ಅತ್ಯಂತ ಅಗತ್ಯವಾಗಿದ್ದು ಅದನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದು ಇಲ್ಲಿ ತಯಾರಿಸುವುದಕ್ಕಿಂತ ಅಧಿಕವಾಗುತ್ತದೆ. ಪ್ರಸ್ತುತ ಭಾರತ ಸರಕಾರ ಅರೆವಾಹಕ ಚಿಪ್‌ಗಳನ್ನು ತಯಾರಿಸಲು 76 ಸಾವಿರ ಕೋಟಿ ರು. ಹಣವನ್ನು ಮೀಸಲಿಟ್ಟಿದ್ದು ಇದು ಮುಂಬರುವ ದಿನಗಳಲ್ಲಿ ಭಾರತ ತಂತ್ರಜ್ಞಾನದ ಮಹತ್ವದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಬೆಂಗಳೂರಿನ ಡಿಆರ್‌ಡಿಒ ಹಾಗೂ ಸಿತಾರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರವಿ ಎಂ.ಆರ್. ಹೇಳಿದರು.ಕರ್ನಾಟಕ ಸರಕಾರದ ವಿಜನ್ ಗ್ರೂಪ್ ಫಾರ್ ಸೈನ್ಸ್ ಆಂಡ್ ಟೆಕ್ನಾಲಜಿಯ ಅನುದಾನದೊಂದಿಗೆ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗವು ಆಯೋಜಿಸಿದ ‘ಮೆಮ್ಸ್ ಕ್ಯಾರಕ್ಟರೈಸೇಶನ್ ಟೆಕ್ನಿಕ್’ ಎಂಬ ನಾಲ್ಕು ದಿನಗಳ ಉಪನ್ಯಾಸಕರ ಕೌಶಲ್ಯಾಭಿವೃದ್ಧಿ (ಎಫ್‌ಡಿಪಿ) ಕಾರ್ಯಾಗಾರವನ್ನು ಮಿಜಾರಿನ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಡಿಆರ್‌ಡಿಒ ವಿಜ್ಞಾನಿ ಡಾ. ಗೋಪಾಲಕೃಷ್ಣ ಮಾತನಾಡಿ ಇಂತಹ ಕಾರ್ಯಾಗಾರಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿರುವ ಅವಕಾಶಗಳ ಸಾಧ್ಯತೆಗಳನ್ನು ತಿಳಿದುಕೊಳ್ಳಲು ಪೂರಕವಾಗಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ನಿರ್ಮಾಣಕ್ಕಾಗಿ ಶ್ರಮಿಸುತ್ತಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಪೈಪೋಟಿಗಳ ನಡುವೆಯೂ ಉತ್ತಮ ಸಹಯೋಗ ಅಗತ್ಯವಿದೆ. ಇಂತಹ ಸಹಯೋಗದ ಶಿಕ್ಷಣದಿಂದ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಪೂರಕವಾಗಿವೆ. ಜೊತೆಗೆ ಉಪನ್ಯಾಸಕರ ನಡುವೆ ಉತ್ತಮ ಬಾಂಧವ್ಯವಿದ್ದಾಗ ಶೈಕ್ಷಣಿಕ ಬೆಳವಣಿಗೆ ಸಾಧ್ಯ ಎಂದರು.ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫರ್ನಾಂಡಿಸ್, ಡೀನ್ ಡಾ. ರಿರ್ಚಡ್ ಪಿಂಟೊ ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥ ಡಾ. ದತ್ತಾತ್ರೇಯ ಅತಿಥಿಗಳನ್ನು ಪರಿಚಯಿಸಿದರು. ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ. ಗುರುಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಗಣೇಶ್ ಎನ್.ವಿ. ಸ್ವಾಗತಿದರು. ಡಾ.ಡಿ.ವಿ. ಮಂಜುನಾಥ ವಂದಿಸಿದರು. ಉಪನ್ಯಾಸಕಿ ಲಿಪಿ ಮ್ಯಾಥ್ಯೂ ಕಾರ್ಯಕ್ರಮ ನಿರ್ವಹಿಸಿದರು.