ಭಾರತೀಯ ಸಂಸ್ಕೃತಿ ಶ್ರೇಷ್ಠ ಚಿಂತನೆಗಳ ಆಗರ

KannadaprabhaNewsNetwork | Published : Sep 13, 2024 1:33 AM

ಸಾರಾಂಶ

ಭಾರತೀಯ ಸಂಸ್ಕೃತಿ ಶ್ರೇಷ್ಠ ಚಿಂತನೆಗಳ ಆಗರ

ಕನ್ನಡಪ್ರಭ ವಾರ್ತೆ ತುಮಕೂರು ವೈಯಕ್ತಿಕ ಅನುಭವಗಳನ್ನು ವಿಶ್ಲೇಷಿಸುವುದೇ ಭಾರತೀಯ ಸಂಸ್ಕೃತಿಯ ಧ್ಯೇಯ ಎಂದು ಗದಗ - ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದ ಸರಸ್ವತಿ ಅಭಿಪ್ರಾಯಪಟ್ಟರು.ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಿದ್ದ ಸ್ವಾಮಿ ವೀರೇಶಾನಂದ ಸರಸ್ವತಿರವರ ವಿವೇಕಧಾರಾ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.ಬುದ್ಧಿ ಮತ್ತು ಭಾವನೆಗಳ ಸಂಗಮವಾದ ಧರ್ಮದ ಚಿಂತನೆಗಳು ನಮಗೆ ಸಮಗ್ರ ದೃಷ್ಟಿಯನ್ನಿತ್ತು ಸಮಷ್ಟಿಯನ್ನುಯೋಗ್ಯವಾಗಿ ಅರಿಯಲು ಅನುವು ಮಾಡಿಕೊಡುತ್ತದೆ ಎಂದರು.ಪಾಶ್ಚಿಮಾತ್ಯ ಜಗತ್ತು ಇಂದು ಎಲ್ಲಾ ಭೌತಿಕ ಸಂಪತ್ತುಗಳ ನಡುವೆಯೂ ವ್ಯಕ್ತಿಯಲ್ಲಿ ಖಿನ್ನತೆಯ ಮನೋಭಾವವನ್ನು ಬೆಳೆಸಿದೆ. ಹಾಗಾಗಿ ಇದರಿಂದ ಅಂತರವನ್ನು ಕಾಪಾಡಿಕೊಂಡು ಶ್ರೇಷ್ಠ ಚಿಂತನೆಗಳ ಆಗರವಾದ ನಮ್ಮ ಭಾರತೀಯ ಸಂಸ್ಕೃತಿ ಪರಂಪರೆಯ ಸತ್ವಯುತ ವಿಚಾರಗಳ ಕಡೆ ಗಮನ ಹರಿಸುವುದು ಅತ್ಯಗತ್ಯವಾಗಿದೆ ಎಂದರು. ಜಗತ್ತಿನಲ್ಲಿ ಇಪ್ಪತ್ತೊಂದು ವರ್ಷಗಳ ಅವಧಿಯಲ್ಲಿ ಅರವತ್ಮೂರು ಯುದ್ಧಗಳನ್ನು ಗೆದ್ದ ಚಕ್ರವರ್ತಿ ನೆಪೋಲಿಯನ್‌ ಅಂತಿಮವಾಗಿ ಖಡ್ಗಶಕ್ತಿಗಿಂತ ಆತ್ಮಶಕ್ತಿಯು ಬಲಿಷ್ಠ ಹಾಗೂ ಶ್ರೇಯಸ್ಕರ ಎಂದು ನುಡಿದು ಬದುಕಿನದ್ದಕ್ಕೂತಾನು ನಡೆಸಿದ ಬದುಕನ್ನು ಮೂರ್ಖನ ಜೀವನ ಎಂದೇ ಘೋಷಿಸಿಕೊಂಡ ಭೌತಿಕ ಜಗತ್ತನ್ನು ಗೆದ್ದವನಿಗಿಂತ ಭಾವ ಜಗತ್ತಿನ ಒಡೆಯನೇ ಸರ್ವಶಕ್ತ, ಎಂದು ತಿಳಿಸಿದರು.

ಕ್ಷಣಿಕವಾದ ಜೀವನವನ್ನು ಮತ್ತು ಅಶಾಶ್ವತವಾದ ಸುಖ ಭೋಗಗಳನ್ನು ಮೆಟ್ಟಿ ನಿಸ್ವಾರ್ಥ ಬದುಕಿನತ್ತ ಸಾಗಿದಾಗಷ್ಟೇ ಜೀವನಕ್ಕೆ ವಿಸ್ತೃತ ಆಯಾಮವು ದೊರಕುತ್ತದೆ. ಆಗಷ್ಟೇ ವ್ಯಕ್ತಿಯು ತಾನೂ ಉತ್ತಮನಾಗಿ ಜಗತ್ತಿಗೂ ಉತ್ತಮವಾದುದನ್ನೇ ನೀಡಬಲ್ಲವನಾಗುತ್ತಾನೆ. ಅಂತಹ ಬದುಕಿನಲ್ಲಿ ಸಾರ್ಥಕತೆ, ಸುಖ, ತೃಪ್ತಿ ಮತ್ತು ಸಮಾಧಾನಗಳು ಮೇಳೈಸಿ ಆತ್ಮೋದ್ಧಾರವನ್ನು ಹೊಂದುವುದಲ್ಲದೇ ಜಗತ್ತಿನ ಉದ್ಧಾರಕ್ಕೂ ಕೊಡುಗೆ ನೀಡಬಹುದಾಗಿದೆ ಎಂದರು. ಉಪನಿಷತ್ತುಗಳ ಸಾರವಾದ ಈ ಸಂದೇಶವನ್ನೇ ಸ್ವಾಮಿ ವಿವೇಕಾನಂದರು ಆಧುನಿಕ ಭಾಷೆಯಲ್ಲಿ ನಮಗೆ ಅನುಗ್ರಹಿಸಿದ್ದಾರೆ. ಸ್ವಾಮಿ ವಿವೇಕಾನಂದರ ಬೋಧನೆಯ ವಿವಿಧ ಆಯಾಮಗಳನ್ನು ವಿಶಿಷ್ಠ ಶೀರ್ಷಿಕೆಗಳ ಮೂಲಕ ರಚಿಸಿ ಸಮಾಜದಲ್ಲಿ ಸದ್ಭಾವನೆಯನ್ನು ಜಾಗೃತಗೊಳಿಸುವ ಪವಿತ್ರಕಾರ್ಯಗೈದ ಸ್ವಾಮಿ ವೀರೇಶಾನಂದ ಸರಸ್ವತೀರವರ ಪರಿಶ್ರಮವು ಸ್ತುತ್ಯರ್ಹ ಎಂದರು.‘ವಿವೇಕಧಾರಾ’ ಕೃತಿಯ ಕುರಿತು ಮಾತನಾಡಿದ ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ್ರವರು, ಈ ಕೃತಿಯಲ್ಲಿ ಯುವಪೀಳಿಗೆಯನ್ನು ಧನಾತ್ಮಕವಾಗಿ ಪ್ರಚೋದಿಸುವ ಉನ್ನತ ಆಲೋಚನೆಗಳನ್ನು ವಿವೇಕಾನಂದರ ಚಿಂತನೆಯ ಬೆಳಕಿನಲ್ಲಿ ವಿಶ್ಲೇಷಿಸುವುದರ ಮೂಲಕ ಪೂಜ್ಯ ಸ್ವಾಮೀಜೀರವರು ಮಹದುಪಕಾರ ಮಾಡಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ಕೃತಿಯ ಕುರಿತು ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಬಿ.ಜಿ.ಲಲಿತಮ್ಮ ಮಾತನಾಡಿದರು. ಕೃತಿ ಲೋಕಾರ್ಪಣೆಗೆ ಮುಂಗಡವಾಗಿಯೇ ಸುಮಾರು ಹನ್ನೊಂದು ಸಾವಿರ ಪ್ರತಿಗಳು ಕಾಯ್ದಿರಿಸಲಾಗಿದ್ದದ್ದು ವಿಶೇಷವಾದ ಸಂಗತಿಯಾಗಿತ್ತು. ವೀರೇಶಾನಂದ ಸರಸ್ವತೀರವರು ಮಾತನಾಡಿ ಸಮಾಜದ ಬದಲಾವಣೆಯಲ್ಲಿ ಲೇಖಕನ ಪಾತ್ರ ಹಿರಿದು. ಉತ್ತಮ ಪುಸ್ತಕಗಳು ಸದಾ ಓದುಗರ ಸಂಖ್ಯೆಯನ್ನು ಹೆಚ್ಚಿಸುತ್ತವೆ.ಪ್ರಸಕ್ತ ಕಾಲದ ವಾಸ್ತವ ಸಂಗತಿಗಳ ಸೂಕ್ಷ್ಮತೆಯನ್ನು ಗ್ರಹಿಸುವ ಮೂಲಕ ಪರಂಪರೆಯ ಶ್ರೇಷ್ಠತೆಯನ್ನು ಅರಿಯುವ ಅಗತ್ಯತೆ ಇದೆ ಎಂದರು.ಕಾರ್ಯ್ಕ್ರಮದಲ್ಲಿ ನಾಡೋಜ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ, ಲಲಿತಾ ಶಾಸ್ತ್ರಿ, ಡಾ. ಬಾಬು ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ರಾಣೇಬೆನ್ನೂರಿನ ಸ್ವಾಮಿ ಪ್ರಕಾಶಾನಂದಜೀ, ಚಿತ್ರದುರ್ಗದ ಸ್ವಾಮಿ ಬ್ರಹ್ಮನಿಷ್ಠಾನಂದಜೀ, ಬೆಂಗಳೂರಿನಸ್ವಾಮಿ ಅಭಯಾನಂದಜೀ, ತುಮಕೂರಿನ ಸ್ವಾಮಿ ಧೀರಾನಂದಜೀ ಉಪಸ್ಥಿತರಿದ್ದರು.ತುಮಕೂರಿನ ಮಾಜಿ ಸಂಸದ ಬಸವರಾಜು, ಪತ್ರಕರ್ತ ನಾಗಣ್ಣ, ಸಮಾಜ ಸೇವಕ ಎಚ್.ಜಿ.ಚಂದ್ರಶೇಖರ್, ರಮೇಶ್‌ಬಾಬು ಹಾಗೂ ಸಾಹಿತ್ಯ ಕ್ಷೇತ್ರದ ಶ್ರೇಷ್ಠ ಸಾಧಕ ಪ್ರೊ.ಪದ್ಮಪ್ರಸಾದ್, ಬಾ.ಹ. ರಮಾಕುಮಾರಿ, ಮುರಳಿಕೃಷ್ಣಯ್ಯ, ಡಾ.ಚಿತ್ರಲಿಂಗಯ್ಯ ಮೊದಲಾದವರು ಭಾಗವಹಿಸಿದ್ದರು. ರಾಜ್ಯದ ವಿವಿದೆಡೆಗಳಿಂದ ಸುಮಾರು ಐದುನೂರು ಭಕ್ತರು, ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪರಮಾನಂದಜೀ ಸ್ವಾಗತಿಸಿ, ಶ್ರೀನಿಧಿ ವಂದಿಸಿದರು.ಪ್ರೊ. ರಮ್ಯಾ ಕಲ್ಲೂರು ನಿರೂಪಿಸಿದರು.

Share this article