ಎಐ, ತಾಂತ್ರಿಕತೆಯೊಂದಿಗೆ ಭಾಷಾ ಸಂಶೋಧನೆ ಆಗಬೇಕು

KannadaprabhaNewsNetwork |  
Published : Jul 18, 2025, 12:45 AM IST
8 | Kannada Prabha

ಸಾರಾಂಶ

ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪ್ರಾದೇಶಿಕ ಭಾಷೆಗಳಲ್ಲಿ ವಿಜ್ಞಾನ ಪದಗಳ ನಿಘಂಟು ರಚಿಸುವುದು,

ಕನ್ನಡಪ್ರಭ ವಾರ್ತೆ ಮೈಸೂರುಕೃತಕ ಬುದ್ಧಿಮತ್ತೆ (ಎಐ) ಮತ್ತು ನೂತನ ತಾಂತ್ರಿಕತೆಯನ್ನು ಭಾಷಾ ವಿಜ್ಞಾನ ಸಂಶೋಧನೆ ಮತ್ತು ಕಾರ್ಯಗಳಲ್ಲಿ ಅನ್ವಯ ಮಾಡಿಕೊಳ್ಳುವ ಮೂಲಕ ಇಂದಿನ ಅನೇಕ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ತಿರುವನಂತಪುರಂನ ಅಂತಾರಾಷ್ಟ್ರೀಯ ದ್ರಾವಿಡ ಭಾಷಾ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ.ಜಿ.ಕೆ. ಫಣಿಕರ್ ತಿಳಿಸಿದರು.ಭಾರತೀಯ ಭಾಷಾ ಸಂಸ್ಥಾನದಲ್ಲಿ ಗುರುವಾರ ಆಯೋಜಿಸಿದ್ದ 57ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪ್ರಾದೇಶಿಕ ಭಾಷೆಗಳಲ್ಲಿ ವಿಜ್ಞಾನ ಪದಗಳ ನಿಘಂಟು ರಚಿಸುವುದು, ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಲ್ಲಿ ಅಸ್ತಿತ್ವದಲ್ಲಿರುವ ಪ್ರಮಾಣಿತ ಪಠ್ಯ ಪುಸ್ತಕಗಳು ಮತ್ತು ಲೇಖನಗಳನ್ನು ಅನುವಾದಿಸುವುದು, ವಿದೇಶಿ ಭಾಷೆಗಳಿಂದ ಭಾರತೀಯ ಭಾಷೆಗಳಿಗೆ ಭಾಷಾಂತರಾ ಕಾರ್ಯ ಮತ್ತು ಭಾರತೀಯ ಭಾಷೆಗಳಲ್ಲಿಯೇ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಪ್ರಮುಖ ಕೃತಿಗಳ ಸ್ವಯಂಚಾಲಿತ ಅನುವಾದಗಳಿಗೆ ವ್ಯವಸ್ಥೆ ಕಲ್ಪಿಸಿಕೊಳ್ಳಬಹುದು ಎಂದರು.ಇಂತಹ ನವೀನ ಕಾರ್ಯಗಳಿಗೆ ಭಾರತೀಯ ಭಾಷಾ ಸಂಸ್ಥಾನ ಸೂಕ್ತ ಮಾರ್ಗದರ್ಶನ ನೀಡಬೇಕು. ಉನ್ನತ ಶಿಕ್ಷಣಕ್ಕಾಗಿ ಮಾತೃಭಾಷೆಯನ್ನು ಸಜ್ಜುಗೊಳಿಸುವ ಉಪಕ್ರಮ ಅನುಷ್ಠಾನಗೊಳಿಸುವ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾಷಾ ಸಂಸ್ಥಾನವೂ ನಾಯಕತ್ವವನ್ನು ವಹಿಸಿ ಭಾಷಾ ಸಂಶೋಧನೆಗಳಿಗೆ ಸಮರ್ಪಕ ನಿರ್ದೇಶನ ನೀಡಬೇಕು ಎಂದು ಅವರು ಹೇಳಿದರು.ಭಾಷಾ ವಿಜ್ಞಾನದ ವಿಷಯದಲ್ಲಿ ವಿಶಾಲ ದೃಷ್ಟಿಕೋನವೂ ಅತ್ಯಗತ್ಯ. ನಮ್ಮ ದೇಶದ ಪ್ರತಿಯೊಂದು ಭಾಷೆಯನ್ನು ಮೌಲ್ಯೀಕರಿಸಬೇಕು. ಅಲ್ಲದೇ ಪ್ರತಿಯೊಂದು ಭಾಷೆಯನ್ನು ಗೌರವಿಸಬೇಕು ಜೊತೆಗೆ ಅವುಗಳನ್ನು ಮುಂದಿನ ಪೀಳಿಗೆಗಾಗಿ ರಕ್ಷಿಸಬೇಕು. ಇದಕ್ಕಾಗಿ ಒಗ್ಗಟ್ಟು, ಪರಸ್ಪರ ತಿಳುವಳಿಕೆ ಮತ್ತು ಎಲ್ಲರೂ ಒಳಗೊಳ್ಳುವಿಕೆಯ ವಾತಾವರಣ ಸೃಷ್ಟಿಸಿ, ಅಗತ್ಯ ಕಾರ್ಯತಂತ್ರ ರೂಪಿಸುವುದಕ್ಕೆ ಭಾಷಾ ಸಂಸ್ಥಾನ ಪ್ರಮುಖ ಪಾತ್ರವಹಿಸಬೇಕು ಎಂದು ಅವರು ಹೇಳಿದರು.ಭಾಷಾ ಸೂತ್ರವನ್ನು ಅನೇಕರು ಸ್ಪಷ್ಟವಾಗಿ ಗ್ರಹಿಸುವುದಿಲ್ಲ. ದಕ್ಷಿಣ ರಾಜ್ಯಗಳಿಂದ ಮಾತ್ರವಲ್ಲದೇ ಉತ್ತರದ ಅನೇಕ ರಾಜ್ಯಗಳಿಂದಲೂ ಸಂದೇಹ ಉದ್ಭವಿಸುತ್ತವೆ. ಭಾಷೆಯ ವಿಷಯವು ಬಹಳ ಸೂಕ್ಷ್ಮವಾಗಿದ್ದು, ತೀವ್ರ ಕಾಳಜಿಯ ಅಗತ್ಯ. ಭಾಷಾ ಸೂತ್ರದ ಬಗ್ಗೆ ಜನರಲ್ಲಿನ ಅನುಮಾನಗಳನ್ನು ತೆಗೆದುಹಾಕುವುದು ಪ್ರಮುಖ ಆದ್ಯತೆಯಾಗಿದ್ದು, ಇದರೊಂದಿಗೆ ಸಂಕುಚಿತವಾದಿಗಳು, ಅವಕಾಶವಾದಿಗಳಿಂದ ಶೋಷಣೆಗೆ ಒಳಗಾಗುವ ಸಾಧ್ಯತೆಯನ್ನು ತಪ್ಪಿಸುವ ಅಗತ್ಯವೂ ಇದೆ ಎಂದು ಅವರು ತಿಳಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಐಎಲ್ ವಿಶ್ರಾಂತ ನಿರ್ದೇಶಕ ಪ್ರೊ. ಉದಯ ನಾರಾಯಣ ಸಿಂಗ್, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಭಾಷಾ ವಿಜ್ಞಾನ ಸಹಕಾರಿಯಾಗಿದೆ. ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಇನ್ನಿತರ ಕಡೆಗಳಲ್ಲಿ ಒತ್ತಡದಲ್ಲಿ ಕೆಲಸ ಮಾಡುವವರಿಗೆ ಧನಾತ್ಮಕ ಸಂದೇಶ ನೀಡುವ ಧ್ಯೇಯ ವಾಕ್ಯವನ್ನು ಕಾರ್ಪೋರೇಟ್ ಶೈಲಿಯಲ್ಲಿ ರಚಿಸಿ ನೀಡಬೇಕು. ಈ ಮೂಲಕ ಭಾಷಾ ವಿಜ್ಞಾನದ ಆರ್ಥಿಕತೆ ಮಾತ್ತು ಮಾರುಕಟ್ಟೆಯ ಬೆಳವಣಿಗೆ ಹೊಂದಬೇಕು ಎಂದರು.ಸಿಐಐಎಲ್ ಅಧ್ಯಕ್ಷ ಪ್ರೊ. ಶೈಲೇಂದ್ರ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಪುಣೆಯ ಡೆಕ್ಕನ್ ಕಾಲೇಜು ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆ ಕುಲಪತಿ ಪ್ರೊ. ಪ್ರಸಾದ ಜೋಷಿ, ನಿವೃತ್ತ ನಿರ್ದೇಶಕ ಪ್ರೊ. ರಾಜೇಶ್ ಸಚ್ ದೇವ್, ಪ್ರೊ.ಸಿ.ಜಿ. ವೆಂಕಟೇಶ ಮೂರ್ತಿ ಇದ್ದರು.

PREV

Latest Stories

ಧರ್ಮಸ್ಥಳ ಗ್ರಾಮ ಕೇಸ್‌: ಇಬ್ಬರು ಐಪಿಎಸ್‌ಗಳು ಎಸ್‌ಐಟಿಯಿಂದ ಔಟ್‌?
ಡಿಕೆಶಿಗೆ ಅಪಮಾನ ಮಾಡುವುದಕ್ಕೆ ಸಿಎಂ ಸಿದ್ದು ಸಮಾವೇಶ: ಅಶೋಕ
ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ