ಕನ್ನಡಪ್ರಭ ವಾರ್ತೆ ಕಾರ್ಕಳ
ಜನಪದ ಚಿಂತನೆಗಳೇ ಮುಂದೆ ವೇದಗಳಾದುವು. ಋಷಿಮುನಿಗಳು ಭಾರತಾದ್ಯಂತ ಸಂಚರಿಸುತ್ತಾ ಜನಪದ ಚಿಂತನೆಗಳನ್ನು ಸಂಗ್ರಹಿಸಿ ಸೋಸಿ ವೇದಗಳನ್ನಾಗಿ ಮಾಡಿರಬೇಕು. ಭಾರತದ ಪ್ರತಿ ಚಿಂತನೆಯ ಹಿಂದೆ ಆಳವಾಗಿ ಜನಪದದ ಮೂಲರೂಪ ಇದ್ದೇ ಇರುತ್ತದೆ ಎಂದು ಶಿವಮೊಗ್ಗದ ಚಿಂತಕ, ನ್ಯಾಯವಾದಿ ಎಂ.ಆರ್. ಸತ್ಯನಾರಾಯಣ ಹೇಳಿದರು.ಅವರು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಉಡುಪಿಯ ಕನಕದಾಸ ಅಧ್ಯಯನ ಸಂಶೋಧನಾ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲದ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಹಾಗೂ ಶ್ರೀ ಭುವನೇಂದ್ರ ಕಾಲೇಜು ಆಶ್ರಯದಲ್ಲಿ ‘ರಾಷ್ಟ್ರೀಯ ಚಿಂತನೆ- ಕನಕ ವೈಚಾರಿಕತೆಯ ಸೊಬಗು’ ಎಂಬ ವಿಚಾರದ ಮೇಲೆ ಜರುಗಿದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ನುಡಿಗಳೊಂದಿಗೆ, ‘ಜನಪದ ಚಿಂತನೆಯಲ್ಲಿ ಕನಕದಾಸರು’ ಎಂಬ ವಿಷಯದ ಮೇಲೆ ಮಾತನಾಡಿದರು.
ಕನಕದಾಸರು ಕೂಡ ಹಾಗೆಯೇ. ಅವರೊಂದು ಸೋಪಜ್ಞತೆಯ ಚೌಕಟ್ಟು. ಅವರ ಕೀರ್ತನೆಗಳಿರಬಹುದು, ಕಾವ್ಯಗಳಿರಬಹುದು ಜನಪದಾಂಶಗಳಿಂದ ತುಂಬಿ ಶೋತೃಗಳ ಮೈಮನ ತುಂಬಿಕೊಂಡುವು. ಸತ್ಯ, ಧರ್ಮ, ನ್ಯಾಯಯುತ ನಿರ್ಮಲ ರಾಷ್ಟ್ರವನ್ನು ಜನಪದರು ಕಲ್ಪಿಸಿದಂತೆ ಕನಕದಾಸರು ತಮ್ಮ ಕಾಣ್ಕೆಯಿಂದ ಗಮನಿಸಿ ಕೃತಿಗಳಲ್ಲಿ ಪೋಣಿಸಿ ಸಮಾಜಕ್ಕೆ ಸಶಕ್ತತನವನ್ನು ತುಂಬುವ ಕೆಲಸವನ್ನು ಮಾಡಿದರು. ಅವರನ್ನು ಹಿಂದುಳಿದವರ ಪ್ರತಿನಿಧಿ ಎಂಬುದಕ್ಕಿಂತ ನಿಜ ಭಾರತದ ಕನಸುಗಾರ ಎಂಬುದಾಗಿ ಕಲ್ಪಿಸಿಕೊಳ್ಳಬೇಕು ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ.ಮಂಜುನಾಥ್ ಎ. ಕೋಟ್ಯಾನ್ ಮಾತನಾಡಿ, ಕನಕನ ಕುರಿತ ಚಿಂತನೆಗಳು ಇಂದಿನ ಸಮಾಜವನ್ನು ಅರ್ಥಮಾಡಿಕೊಳ್ಳುವಲ್ಲಿ ವಿದ್ಯಾರ್ಥಿಗಳಿಗೆ ಬಹು ಸಹಕಾರಿ ಎಂದರು.
ಸಮಾರಂಭದಲ್ಲಿ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿಗಳಾದ ಡಾ.ಬಿ.ಜಗದೀಶ್ ಶೆಟ್ಟಿ ಹಾಗೂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರೂ, ಕಾರ್ಯಕ್ರಮ ಸಂಯೋಜಕರೂ ಆದ ಡಾ. ಅರುಣಕುಮಾರ್ ಎಸ್.ಆರ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕಾಯರ್ದರ್ಶಿ ಶ್ರೀನಿಧಿ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಶ್ವೇತಾ ವಂದಿಸಿದರು. ವಿದ್ಯಾರ್ಥಿ ಗಣೇಶ್ ಬಿ.ಸಿ. ಕಾರ್ಯಕ್ರಮ ನಿರೂಪಿಸಿದರು.ದಿನಪೂರ್ತಿ ನಡೆದ ವಿಚಾರಸಂಕಿರಣದ ಮೊದಲ ಗೋಷ್ಠಿಯಲ್ಲಿ ‘ಕನಕ ಕೀರ್ತನೆ - ದೇಸೀ ಚಿಂತನೆಯ ವೈಶಿಷ್ಟ್ಯ’ ಎಂಬ ವಿಚಾರವಾಗಿ ಕಾಸರಗೋಡಿನ ಡಾ.ರಾಧಾಕೃಷ್ಣ ಬೆಳ್ಳೂರು ಹಾಗೂ ಎರಡನೆಯ ಗೋಷ್ಠಿಯಲ್ಲಿ ‘ಕನಕದಾಸರು ಮತ್ತು ಇತರ ದಾಸಪರಂಪರೆ’ ಕುರಿತು ರಾಮಕುಂಜದ ಗಣರಾಜ ಕುಂಬ್ಳೆ ಮಾತನಾಡಿದರು. ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಕ್ಕೊಳಪಟ್ಟ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು. ಗೋಷ್ಠಿಪತಿಗಳಾಗಿ ಡಾ. ಅರುಣ ಕುಮಾರ್ ಎಸ್.ಆರ್. ಹಾಗೂ ಡಾ.ಮಂಜುನಾಥ್ ಭಟ್ ಭಾಗವಹಿಸಿದ್ದರು.