- ಎಸಿ ನೇತೃತ್ವದ ಅಧಿಕಾರಿಗಳ ತಂಡದಿಂದ ಸ್ಥಳ ಪರಿಶೀಲನೆ । ಕ್ಯಾಂಟೀನ್ ಆರಂಭಿಸಿದರೆ ಕೋರ್ಟ್ ಮೊರೆ: ಸ್ಥಳೀಯರ ಎಚ್ಚರಿಕೆ- - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮುಖ್ಯಾಧಿಕಾರಿ ನೇತೃತ್ವದಲ್ಲಿ ಜಿಬಿಎಂ ಶಾಲೆ ಕಟ್ಟಡ ತೆರವುಗೊಳಿಸಲಾಗಿದೆ. ಎಸ್‌ಡಿಎಂಸಿ ಹಾಗೂ ನಾಗರೀಕರ ವಿರೋಧದ ಮೇರೆಗೆ ಕಟ್ಟಡ ತೆರವು ಕಾಮಗಾರಿಯನ್ನು ಅರ್ಧಕ್ಕೇ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಇಂದಿರಾ ಕ್ಯಾಂಟಿನ್ ಆರಂಭಿಸುವ ಸರ್ಕಾರದ ಉದ್ದೇಶ ನನೆಗುದಿಗೆ ಬಿದ್ದಿತ್ತು. ಸೋಮವಾರ ಬೆಳಗ್ಗೆ ಎಸಿ ದುರ್ಗಾಶ್ರೀ, ತಹಸೀಲ್ದಾರ್ ಗುರುಬಸವರಾಜ್ ಮತ್ತಿತರೆ ಅಧಿಕಾರಿಗಳ ತಂಡ ಶಿಥಿಲ ಶಾಲಾ ಕಟ್ಟಡ ತೆರವುಗೊಳಿಸಿದ ಜಾಗವನ್ನು ಪರಿಶೀಲಿಸಿ, ಪುರಸಭೆ ಸಭಾಂಗಣದಲ್ಲಿ ನಾಗರೀಕರಿಂದ ಸಲಹೆ, ಸೂಚನೆ ಪಡೆಯಿತು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ ಮಾತನಾಡಿ, ಶೈಕ್ಷಣಿಕ ಉದ್ದೇಶಕ್ಕಾಗಿ ದಾನಿಗಳು ನಿವೇಶನವನ್ನು ದಾನ ಮಾಡಿದ್ದಾರೆ. ಶೈಕ್ಷಣಿಕ ಉದ್ದೇಶಕ್ಕೆ ಕಟ್ಟಡದ ಜಾಗ ಬಳಸಿದರೆ ನಮ್ಮ ವಿರೋಧವಿಲ್ಲ. ಅದೇ ಸ್ಥಳದಲ್ಲಿ ಸರ್ಕಾರಿ ಡಿಗ್ರಿ ಕಾಲೇಜು ಆರಂಭಿಸಬೇಕು. ಇಂದಿರಾ ಕ್ಯಾಂಟೀನ್ ಆರಂಭಿಸಲು ಅಷ್ಟು ಆಸಕ್ತಿ ಇದ್ದರೆ ಯಾವುದಾದರೂ ಸರ್ಕಾರಿ ನಿವೇಶನದಲ್ಲಿ ಆರಂಭಿಸಿ ಎಂದು ಸಲಹೆ ನೀಡಿದರು.ನಾಗರೀಕರಾದ ಸುರೇಶ್ ಶಾಸ್ತ್ರಿ ಮಾತನಾಡಿ, ಶತಮಾನ ಕಂಡಿರುವ ಈ ಶಾಲೆಗೆ ಶೈಕ್ಷಣಿಕ ಉದ್ದೇಶಕ್ಕಾಗಿಯೇ ದಾನಿಗಳು ಜಾಗವನ್ನು ಬಿಟ್ಟುಕೊಟ್ಟಿದ್ದರು. ಆದರೆ, ಈಗ ಅವರ ಆಶಯವನ್ನು ಗಾಳಿಗೆ ತೂರಿ, ಇಂದಿರಾ ಕ್ಯಾಂಟೀನ್ ಆರಂಭಿಸಲು ಹೊರಟಿದ್ದಾರೆ. ಈ ನಿರ್ಧಾರದಿಂದ ಜಿಲ್ಲಾಡಳಿತ ಹಿಂದೆ ಸರಿಯದಿದ್ದರೆ ಸೂಕ್ತ ದಾಖಲಾತಿಗಳೊಂದಿಗೆ ನ್ಯಾಯಾಲಯಕ್ಕೆ ಮೊರೆ ಹೋಗಲು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಎಸ್‌ಡಿಎಂಸಿ ಮುಖಂಡರಾದ ಅಜೇಯ ನಾಯ್ಕ ಮತ್ತು ಬಿ.ಬಸವರಾಜ್ ಮಾತನಾಡಿ, ತೆರವು ಮಾಡಿದ ಶಾಲಾ ಕಟ್ಟಡದ ಪಕ್ಕದಲ್ಲಿಯೇ ಮದ್ಯದ ಅಂಗಡಿ ಇದೆ. ಇಂತಹ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದರೆ ಕುಡುಕರ ಹಾವಳಿಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆ ಎಂದರು.
ತಹಸೀಲ್ದಾರ್ ಗುರುಬಸವರಾಜ್ ಮಾತನಾಡಿ, ಸ್ಥಳೀಯ ಆಡಳಿತದಿಂದ ಈ ತಪ್ಪು ನಡೆದಿದೆ. ದೊಡ್ಡ ವಿವಾದ ಮಾಡದೇ ಎಲ್ಲರೂ ಆಡಳಿತ ವರ್ಗಕ್ಕೆ ಶಾಂತಿಯಿಂದ ಸಹಕರಿಸಿ, ಕಾನೂನು ಸುವ್ಯವಸ್ಥೆ ಕಾಪಾಡಿ ಎಂದು ಮನವಿ ಮಾಡಿದರು.
- - - -೧ಎಂಬಿಆರ್೧: