ಕತ್ತಲಲ್ಲಿ ಮುಳುಗಿದ ಇಂಡಿ ಪಟ್ಟಣ!

KannadaprabhaNewsNetwork | Published : Mar 14, 2024 2:10 AM

ಸಾರಾಂಶ

ಇಂಡಿ: ಪಟ್ಟಣದ ಬೀದಿ ದೀಪಗಳು ಕೆಟ್ಟು ನಿಂತಿರುವ ಕಾರಣ ನಾಗರಿಕರು ರಾತ್ರಿ ಜೀವ ಭಯದಲ್ಲೇ ಸಂಚರಿಸುವಂತಾಗಿದೆ. ಪಟ್ಟಣದಲ್ಲಿ ಸುಮಾರು ತಿಂಗಳಿನಿಂದ ಅಗರಖೇಡ ರಸ್ತೆಯಲ್ಲಿ 15, ಸಿಂದಗಿ ರಸ್ತೆಯಲ್ಲಿ 22, ವಿಜಯಪುರ ರಸ್ತೆಯಲ್ಲಿ 24 ಹಾಗೂ ಅಗರಖೇಡ ರಸ್ತೆಯಲ್ಲಿ 8 ಸೇರಿ ಒಟ್ಟು 69 ಬೀದಿ ದೀಪಗಳು ಸುಟ್ಟರೂ ಪುರಸಭೆ ಅವುಗಳಿಗೆ ಬಲ್ಬ್‌ ಹಾಕದೇ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಪಟ್ಟಣದ ಬೀದಿ ದೀಪಗಳು ಕೆಟ್ಟು ನಿಂತಿರುವ ಕಾರಣ ನಾಗರಿಕರು ರಾತ್ರಿ ಜೀವ ಭಯದಲ್ಲೇ ಸಂಚರಿಸುವಂತಾಗಿದೆ. ಪಟ್ಟಣದಲ್ಲಿ ಸುಮಾರು ತಿಂಗಳಿನಿಂದ ಅಗರಖೇಡ ರಸ್ತೆಯಲ್ಲಿ 15, ಸಿಂದಗಿ ರಸ್ತೆಯಲ್ಲಿ 22, ವಿಜಯಪುರ ರಸ್ತೆಯಲ್ಲಿ 24 ಹಾಗೂ ಅಗರಖೇಡ ರಸ್ತೆಯಲ್ಲಿ 8 ಸೇರಿ ಒಟ್ಟು 69 ಬೀದಿ ದೀಪಗಳು ಸುಟ್ಟರೂ ಪುರಸಭೆ ಅವುಗಳಿಗೆ ಬಲ್ಬ್‌ ಹಾಕದೇ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಾತ್ರಿಯಾದರೆ ಸಾಕು ಮುಖ್ಯಬೀದಿಗಳು ಕತ್ತಲೆಯಿಂದ ಅವರಿಸುತ್ತವೆ. ಭಯದಲ್ಲಿ ಸಾರ್ವಜನಿಕರು ಕತ್ತಲೆಯ ರಸ್ತೆಯಿಂದ ಹೋಗಬೇಕಾಗಿದೆ. ಮೊದಲೇ ಪಟ್ಟಣದಲ್ಲಿ ಕಳ್ಳರ ಭಯ ಸಾರ್ವಜನಿಕರನ್ನು ಕಾಡುತ್ತಿದೆ. ಬೀದಿ ದೀಪಗಳ ನಿರ್ವಹಣೆಗಾಗಿ ಬೀದಿ ದೀಪಗಳು ಸುಡುವುದಕ್ಕಿಂತ ಮುಂಚೆಯೇ ಟೆಂಡರ್‌ ಪ್ರಕ್ರಿಯೆ ಮಾಡಬೇಕು. ಬೀದಿದೀಪಗಳು ಪುರಸಭೆಗೆ ಹೇಳಿ ಸುಡುವುದಿಲ್ಲ. ಟೆಂಡರ್‌ ಪ್ರಕ್ರಿಯೆಗೂ ಬೀದಿ ದೀಪಕ್ಕೂ ಹೊಲಿಕೆ ಮಾಡಿದರೆ, ಪಟ್ಟಣದ ಸಾರ್ವಜನಿಕರಿಗೆ ಎಷ್ಟು ತೊಂದರೆಯಾಗುತ್ತದೆ. ಪಟ್ಟಣದ ತುಂಬೆಲ್ಲಾ ಕತ್ತಲೆ ಆವರಿಸುತ್ತದೆ ಎಂಬ ಆಲೋಚನೆ ಅಧಿಕಾರಿಗಳು ಮಾಡಬೇಕು ಎಂಬುದು ಪಟ್ಟಣದ ಸಾರ್ವಜನಿಕರ ಸಲಹೆ ಆಗಿದೆ.

ಗಮನ ಹರಿಸದ ಮುಖ್ಯಾಧಿಕಾರಿ?:

ಇಂಡಿ ಜಿಲ್ಲೆಯಾಗುವ ಕನಸು ಹೊತ್ತು, ನಗರವನ್ನು ಗಾರ್ಡನ್ ಸಿಟಿ ಮಾಡುವ ಆಶಯದೊಂದಿಗೆ ನಗರ ಸೌಂದರ್ಯೀಕರಣಕ್ಕೆ ಮುನ್ನುಡಿ ಬರೆದಿರುವ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕನಸಿಗೆ ಚ್ಯುತಿ ತರುವ ಕೆಲಸ ಪುರಸಭೆಯಿಂದ ನಡೆಯುತ್ತಿದೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿ ಪಟ್ಟಣದ ಸೌಂದರ್ಯಿಕರಣಕ್ಕಾಗಿ ಪಟ್ಟಣದ ಮುಖ್ಯರಸ್ತೆ ಅಗಲೀಕರಣ, ರಸ್ತೆ ವಿಭಜಕ, ಮಧ್ಯದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಿ ನಗರ ಸೌಂದರ್ಯಿಕರಣದಂತೆ ಕಾಣುತ್ತಿತ್ತು. ಇಂದು ಬೀದಿ ದೀಪ ಇಲ್ಲದೆ ಪಟ್ಟಣ ಕತ್ತಲೆಯಲ್ಲಿ ಇರುವಂತಾಗಿದೆ. ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರು ಇಲ್ಲದೇ ಇರುವುದರಿಂದ ಆಡಳಿತಾಧಿಕಾರಿಗಳು ಹಾಗೂ ಪುರಸಭೆ ಮುಖ್ಯಾಧಿಕಾರಿಗಳ ಅಧಿಕಾರದಲ್ಲಿ ಪುರಸಭೆ ಆಡಳಿತ ನಡೆಯುತ್ತಿದೆ. ಆದರೆ, ಮುಖ್ಯಾಧಿಕಾರಿಗಳ ಈ ಬಗ್ಗೆ ತಲೆಕೇಡಿಸಿಕೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈಗಲಾದರೂ ಪುರಸಭೆ ಅಧಿಕಾರಿಗಳು ಟೆಂಡರ್‌ ನೆಪ ಹೇಳುವುದನ್ನು ಬಿಟ್ಟು ತುರ್ತಾಗಿ ಪಟ್ಟಣದ ಮುಖ್ಯರಸ್ತೆ ಸೇರಿದಂತೆ ಒಳ ರಸ್ತೆಗಳ ಬದಿಯಲ್ಲಿ ಬೀದಿ ದೀಪ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂಬುದು ಪಟ್ಟಣದ ನಾಗರಿಕರ ಆಗ್ರಹವಾಗಿದೆ.---ಪುರಸಭೆಯಿಂದ ಅಭಿವೃದ್ಧಿ ಅಪೇಕ್ಷಿಸುವುದು ಕನಸಿನ ಮಾತುರಾತ್ರಿಯಾದರೆ ಪಟ್ಟಣದ ನಾಗರಿಕರು, ವೃದ್ದರು, ಮಹಿಳೆಯರು, ಮಕ್ಕಳು ಹೊರಬರದಂತೆ ಕತ್ತಲು ಆವರಿಸುತ್ತಿದೆ. ರಾತ್ರಿಯಾದರೆ ರಸ್ತೆಯಲ್ಲಿ ತಿರುಗಾಡಲು ಭಯಗೊಳ್ಳುತ್ತಿದ್ದಾರೆ. ಇದನ್ನು ಕಂಡು ಕಾಣದಂತೆ ಪುರಸಭೆ ವರ್ತಿಸುತ್ತಿದೆ. ಪಟ್ಟಣದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳು ಬರುತ್ತಿವೆ. ವಾರ್ಡ್‌ಗಳಲ್ಲಿ ಹೊಸ ಬೀದಿ ದೀಪ ಅಳವಡಿಸುವ ಸಣ್ಣ ಕೆಲಸ ಪುರಸಭೆಯಿಂದ ಆಗುತ್ತಿಲ್ಲ ಎಂದರೆ,ಇನ್ನೂ ಪಟ್ಟಣದ ಅಭಿವೃದ್ಧಿ ಪುರಸಭೆಯಿಂದ ಅಪೇಕ್ಷಿಸುವುದು ಕನಸಿನ ಮಾತು ಎಂದು ಸಾರ್ವಜನಿಕರು ಚರ್ಚಿಸುವಂತಾಗಿದೆ

-----

ಕೋಟ್‌

ಪಟ್ಟಣದ ಮುಖ್ಯರಸ್ತೆಯಲ್ಲಿನ ಬೀದಿ ದೀಪಗಳು ಸುಟ್ಟಿರುವ ಬಗ್ಗೆ ಗಮನಕ್ಕೆ ಬಂದಿದೆ. ಕೂಡಲೇ ಬೀದಿ ದೀಪಗಳ ಅಳವಡಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ಹೇಳಿದ್ದೇನೆ. ಟೆಂಡರ್‌ ಪ್ರಕ್ರಿಯೆ ಮುಗಿಯುವ ಹಂತದಲ್ಲಿದೆ ಎಂದು ಹೇಳಿದ್ದಾರೆ.ಆದರೂ ಮೊದಲು ಬೀದಿ ದೀಪ ಹಾಕಲು ಸೂಚಿಸುತ್ತೇನೆ.-ಅಬೀದ್‌ ಗದ್ಯಾಳ, ಎಸಿ ಹಾಗೂ ಆಡಳಿತಾಧಿಕಾರಿ, ಪುರಸಭೆ ಇಂಡಿ.

Share this article