ಕೆಆರ್ ಎಸ್ ನೀರಿಗೆ ಪ್ರಭಾವಿಗಳ ಕನ್ನ

KannadaprabhaNewsNetwork |  
Published : Mar 02, 2024, 01:47 AM IST
1ಕೆಎಂಎನ್ ಡಿ25,26,27,28 | Kannada Prabha

ಸಾರಾಂಶ

ಪ್ರಭಾವಿ ವ್ಯಕ್ತಿಗಳು ತಮ್ಮ ಫಾರ್ಮ್ ಹೌಸ್‌ಗೆ ಡ್ಯಾಂನಿಂದಲೇ ಕಳ್ಳತನದ ಮೂಲಕ ನೀರು ಪೂರೈಸಿಕೊಳ್ಳುತ್ತಿದ್ದು, ಕನ್ನಂಬಾಡಿ ಅಣೆಕಟ್ಟೆಯ ಹಿನ್ನೀರಿಗೆ ಹೊಂದಿಕೊಂಡಂತಿರುವ ಎರಡು ಫಾರ್ಮ್ ಹೌಸ್ ನ ನೀರು ಸರಬರಾಜಿಗೆ ಸುಮಾರು 200 ರಿಂದ 300 ಮೀಟರ್ ಪೈಪ್ ಅಳವಡಿಸಿಕೊಂಡು ನೀರಿಗೆ ಕನ್ನ ಹಾಕಿರುವ ಸಂಗತಿ ಬಯಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಬರಗಾಲದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಮಂಡ್ಯ-ಮೈಸೂರು ಭಾಗದ ಜನತೆಗೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿರುವ ಬೆನ್ನಲ್ಲೇ ಪ್ರಭಾವಿ ವ್ಯಕ್ತಿಯೊಬ್ಬ ಅಕ್ರಮವಾಗಿ ಕೆಆರ್ ಎಸ್ ಅಣೆಕಟ್ಟೆಗೆ ಕನ್ನ ಹಾಕಿ ಮೋಟಾರ್ ಅಳವಡಿಸಿಕೊಂಡು ಫಾರ್ಮ್ ಹೌಸ್‌ಗೆ ನೀರು ಸರಬರಾಜು ಮಾಡಿಕೊಳ್ಳುತ್ತಿದ್ದ ಘಟನೆ ತಾಲೂಕಿನ ಕೆಆರ್‌ಎಸ್ ಕನ್ನಂಬಾಡಿ ಅಣೆಕಟ್ಟೆ ಹಿನ್ನೀರಿನ ಬಳಿ ತಡವಾಗಿ ಬೆಳಕಿಗೆ ಬಂದಿದೆ.

ಪ್ರಭಾವಿ ವ್ಯಕ್ತಿಗಳು ತಮ್ಮ ಫಾರ್ಮ್ ಹೌಸ್‌ಗೆ ಡ್ಯಾಂನಿಂದಲೇ ಕಳ್ಳತನದ ಮೂಲಕ ನೀರು ಪೂರೈಸಿಕೊಳ್ಳುತ್ತಿದ್ದು, ಕನ್ನಂಬಾಡಿ ಅಣೆಕಟ್ಟೆಯ ಹಿನ್ನೀರಿಗೆ ಹೊಂದಿಕೊಂಡಂತಿರುವ ಎರಡು ಫಾರ್ಮ್ ಹೌಸ್ ನ ನೀರು ಸರಬರಾಜಿಗೆ ಸುಮಾರು 200 ರಿಂದ 300 ಮೀಟರ್ ಪೈಪ್ ಅಳವಡಿಸಿಕೊಂಡು ನೀರಿಗೆ ಕನ್ನ ಹಾಕಿರುವ ಸಂಗತಿ ಬಯಲಾಗಿದೆ.

ಅಣೆಕಟ್ಟೆ ಭದ್ರತಾ ಪಡೆ ಸಿಬ್ಬಂದಿ ಕಣ್ತಪ್ಪಿಸಿ ಅಕ್ರಮ ನಡೆಸಲಾಗಿದ್ದು, ಮಳೆ ಕಡಿಮೆಯಾಗಿ ಕೆಆರ್ ಎಸ್ ಅಣೆಕಟ್ಟೆ ಈ ಬಾರಿ ತುಂಬಿಲ್ಲ. ಇದರ ನಡುವೆ ನಾಲೆಗಳಿಗೆ ನೀರು ಹರಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ಎಲ್ಲೆಡೆ ಕುಡಿಯುವ ನೀರಿಗೂ ತೊಂದರೆಯಾಗುತ್ತಿದೆ.

ಇಷ್ಟು ಸಮಸ್ಯೆಗಳು ಎದುರಾಗಿದ್ದರೂ ಕದ್ದು ಮುಚ್ಚಿ ಫಾರ್ಮ್ ಹೌಸ್‌ಗೆ ಪ್ರಭಾವಿಗಳು ನೀರು ಪೂರೈಸಿಕೊಂಡಿರುವುದಕ್ಕೆ ಸ್ಥಳೀಯರು ಕಿಡಿಕಾರಿದ್ದಾರೆ. ಅಕ್ರಮವಾಗಿ ಮೋಟಾರ್ ಅಳವಡಿಸಿಕೊಂಡು ಭತ್ತ ಸೇರಿದಂತೆ ವಿವಿಧ ಬೆಳೆ ಬೆಳೆದಿರುವ ಪ್ರಭಾವಿಗಳಿಗೆ ಅಧಿಕಾರಿಗಳ ಕುಮ್ಮಕ್ಕು ಇರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

ಈ ಬಗ್ಗೆ ಸ್ಥಳೀಯರು ಸಾಕಷ್ಟು ಸಲ ಮಾಹಿತಿ ನೀಡಿದರೂ ಅಧಿಕಾರಿಗಳು ಕ್ರಮ ಜರುಗಿಸಲಿಲ್ಲ ಎಂಬ ಅರೋಪಗಳು ಕೇಳಿ ಬರುತ್ತಿವೆ. ಫಾರ್ಮ್ ಹೌಸ್‌ನ ಮಾಲೀಕರ ಪ್ರಭಾವಕ್ಕೆ ಮಣಿದು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಕ್ರಮವಾಗಿ ಮೋಟಾರ್ ಅಳವಡಿಸಿರುವ ಸುದ್ಧಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಅಕ್ರಮವಾಗಿ ಅಳವಡಿಸಿದ್ದ ಮೋಟಾರು ಹಾಗೂ ಪೈಪ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

124.80 ಅಡಿ ಸಾಮರ್ಥ್ಯದ ಕೆಆರ್ ಎಸ್ ಜಲಾಶಯದಲ್ಲಿ ಸದ್ಯ 90.06 ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಅಣೆಕಟ್ಟೆಯಲ್ಲಿ 11 ಟಿಎಂಸಿ ನೀರು ಮಾತ್ರ ಬಳಕೆ ಮಾಡಬಹುದಾಗಿದೆ. ಉಳಿದ 5 ಟಿಎಂಸಿ ಡೆಡ್ ಸ್ಟೋರೇಜ್ ಆಗಿದ್ದು ಈ ನೀರನ್ನು ಬಳಕೆ ಮಾಡಲು ಸಾಧ್ಯವಿಲ್ಲ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ