ಫಲಪುಷ್ಪ ಪ್ರದರ್ಶನದಿಂದ ಹೊಸ ವಿಚಾರದ ಬಗ್ಗೆ ಮಾಹಿತಿ: ಡಾ. ಜಿ. ಪರಮೇಶ್ವರ

KannadaprabhaNewsNetwork |  
Published : Jan 28, 2024, 01:15 AM IST
ವಿಚಾರ ಸಂಕಿರಣದಲ್ಲಿ ಪರಮೇಶ್ವರ್‌ | Kannada Prabha

ಸಾರಾಂಶ

ಫಲಪುಷ್ಪ ಪ್ರದರ್ಶನ ಮಾಡುವುದರಿಂದ ತೋಟಗಾರಿಕೆ ಕುರಿತು ಆಸಕ್ತಿದಾಯಕ ವಿಚಾರಗಳನ್ನು ತಿಳಿದುಕೊಳ್ಳಲು ಮಕ್ಕಳಿಗೆ ಸಹಾಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಫಲಪುಷ್ಪ ಪ್ರದರ್ಶನ ಮಾಡುವುದರಿಂದ ತೋಟಗಾರಿಕೆ ಕುರಿತು ಆಸಕ್ತಿದಾಯಕ ವಿಚಾರಗಳನ್ನು ತಿಳಿದುಕೊಳ್ಳಲು ಮಕ್ಕಳಿಗೆ ಸಹಾಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದರು.

ಇಲ್ಲಿನ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ನಡೆದ 2023-24ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಗಳಲ್ಲಿ ತೆಂಗು ಮತ್ತು ಅಡಿಕೆ ಬೆಳೆಗಳ ಸಮಗ್ರ ಬೇಸಾಯ ಪದ್ದತಿಗಳ ಕುರಿತು ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಮತ್ತು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಹಾಗೂ ತೋಟಗಾರಿಕಾ ಇಲಾಖೆಯ ವಿವಿಧ ಸವಲತ್ತುಗಳ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.

ಅನೇಕ ಫಲಪುಷ್ಪ, ಸಸ್ಯಗಳನ್ನು ನಾವು ನೋಡಿರುತ್ತೇವೆ. ಆದರೆ, ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ನಮಗೆ ಇರುವುದಿಲ್ಲ. ಫಲಪುಷ್ಪ ಪ್ರದರ್ಶನ ಆಯೋಜಿಸುವುದರಿಂದ ತೋಟಗಾರಿಕೆ ಬೆಳೆಗಳ ಬಗ್ಗೆ ಆಸಕ್ತಿಯುಳ್ಳ ರೈತರಿಗೆ ಮಾಹಿತಿ ನೀಡಬಹುದು ಎಂದು ತಿಳಿಸಿದರು.

ಪ್ರದರ್ಶನದಲ್ಲಿ ‘ಮಿಂಟ್’ ಎಂಬ ಎಲೆಯನ್ನು ಸೇವಿಸಿದೆ. ಅದು ಬಾಯಿಯನ್ನು ಶುಭ್ರಗೊಳಿಸುತ್ತದೆ. ಮಿಂಟ್ ಎಲೆಯು ಆರೋಗ್ಯಕ್ಕೂ ಒಳ್ಳೆಯದು ಎಂಬುದು ಗೊತ್ತಾಯಿತು. ಮನೆಯಲ್ಲಿ ಕುಂಡಗಳಲ್ಲಿ ಬೆಳೆಯಬಹುದು. ಇಂತಹ ಹಲವು ಸಸ್ಯಗಳಿದ್ದು, ನಮಗೆ ಮಾಹಿತಿ ಇರುವುದಿಲ್ಲ. ಫಲಪುಷ್ಪ ಪ್ರದರ್ಶನದಲ್ಲಿ ವಿಶ್ಲೇಷಿಸುವುದರಿಂದ ಗೊತ್ತಾಗುತ್ತದೆ ಎಂದರು.

ಪ್ರಪಂಚದ ಬೇರೆ ಎಲ್ಲ ಕಡೆ ನಮ್ಮ ದೇಶದ ಹಣ್ಣುಗಳು ಸಿಗುತ್ತಿವೆ. ಇತ್ತೀಚೆಗೆ ವಿದೇಶಿ ಹಣ್ಣು ಡ್ರಾಗನ್ ಫ್ರೂಟ್‌ನ್ನು ರಾಜ್ಯದಲ್ಲಿ ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ಮಾರುಕಟ್ಟೆಯಲ್ಲಿ ಬೇಡಿಕೆಯು ಇದೆ. ಇಂತಹ ಮಾಹಿತಿ ವಿನಿಮಯಕ್ಕೆ ಪ್ರದರ್ಶನಗಳು ಅನುಕೂಲವಾಗಲಿವೆ ಎಂದು ಹೇಳಿದರು.

ಅಲಂಕಾರಕ್ಕೆ ಬಳಸುವ ಬಾಡಿ ಹೋಗದ ಹೂವುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ. ನಮ್ಮ ರೈತರಿಗೆ ಇಂತಹ ಹೂಗಳ ಬಗ್ಗೆ ತಿಳಿದಿರುವುದಿಲ್ಲ. ಈ ಬಗ್ಗೆ ಅವರಿಗೂ ಗೊತ್ತಾದರೆ ಬೆಳೆಯಲು ಮುಂದಾಗುತ್ತಾರೆ ಎಂದರು.

ರಾಜ್ಯದಲ್ಲಿ ತೋಟಗಾರಿಕೆ ಬೆಳೆಗಳಿಗೆ ಬೇಕಾದ ವಾತಾವರಣ ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ಹೀಗಾಗಿ, ಕಾಫಿ, ಮಾವು, ಕಿತ್ತಳೆ, ತೆಂಗು ಸೇರಿದಂತೆ ವಿವಿಧ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಅನುಕೂಲಕರ ವಾತಾವರಣವನ್ನು ತಿಳಿದು ತೋಟಗಾರಿಕಾ ಚಟುವಟಿಕೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಫಲಪುಷ್ಪ ಪ್ರದರ್ಶನಕ್ಕೆ ನಿನ್ನೆ ಆಗಮಿಸಬೇಕಿತ್ತು. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಜಭವನದಲ್ಲಿ ನಿನ್ನೆ ಸಂಜೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ರಾಜ್ಯಪಾಲರು ಆಹ್ವಾನಿಸಿದ್ದರಿಂದ ಆಗಮಿಸಲು ಸಾಧ್ಯವಾಗಲಿಲ್ಲ. ಬೆಂಗಳೂರಲ್ಲಿ ಬಸವೇಶ್ವರರ ಆದರ್ಶಗಳನ್ನು ತಿಳಿಸುವ ನಿಟ್ಟಿನಲ್ಲಿ ಫಲಪುಷ್ಪ ಪ್ರದರ್ಶನ ಮಾಡಲಾಗಿದೆ. ಅದೇ ರೀತಿ ಜಿಲ್ಲಾ ಮಟ್ಟದಲ್ಲಿಯೂ ನಡೆಯಬೇಕು ಎಂದರು.

ಇದಕ್ಕೂ ಮುನ್ನ ಫಲಪುಷ್ಪ ಪ್ರದರ್ಶನ ಹಾಗೂ ವಿವಿಧ ಇಲಾಖೆಗಳಿಂದ ತೆರೆಯಲಾಗಿರುವ ಮಳಿಗೆಗಳನ್ನು ಸಚಿವರು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ. ಸಿಇಒ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ತೋಟಗಾರಿಕೆ ಉಪನಿರ್ದೇಶಕಿ ಶಾರದಮ್ಮ, ಪಾಲಿಕೆ ಸದಸ್ಯರಾದ ಜೆ. ಕುಮಾರ್, ನಯಾಜ್ ಅಹಮದ್, ತೋಟಗಾರಿಕಾ ಸಂಘದ ಕಾಮರಾಜು, ನವೀನ್, ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.Quote

ಸಸ್ಯ, ಕೀಟಗಳ ಬಗ್ಗೆ ತಿಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಹೆಚ್ಚು ಆಸಕ್ತಿ ಇರುತ್ತದೆ. ಇಂತಹ ಪ್ರದರ್ಶನ ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸುವುದರಿಂದ ಜ್ಞಾನಾರ್ಜನೆಗೆ ಸಹಾಯವಾಗುತ್ತದೆ. ಫಲಪುಷ್ಪ, ಗಿಡಮರಗಳು ನಿಸರ್ಗದ ಆಭರಣಗಳು. ಇದನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದೆ.

ಡಾ.ಜಿ. ಪರಮೇಶ್ವರ್‌ ಗೃಹಸಚಿವರು

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌