ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯ: ಪರಮೇಶ್‌

KannadaprabhaNewsNetwork | Published : Nov 24, 2023 1:30 AM

ಸಾರಾಂಶ

ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯ: ಪರಮೇಶ್‌ತರೀಕೆರೆ ಪುರಸಭೆ ಸದಸ್ಯರ ಸಾಮಾನ್ಯ ಸಭೆಯಲ್ಲಿ ಭರವಸೆ

ಕನ್ನಡಪ್ರಭ ವಾರ್ತೆ, ತರೀಕೆರೆ.

ಪುರಸಭೆ ಅನುದಾನದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸುಣ್ಣ ಬಣ್ಣ ಇತ್ಯಾದಿ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಪರಮೇಶ್ ಹೇಳಿದರು.

ಪುರಸಭೆ ಕಾರ್ಯಾಲಯದಿಂದ ಗುರುವಾರ ಪುರಸಭಾ ಸಭಾಂಗಣದಲ್ಲಿ ನಡೆದ ಪುರಸಭೆ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ಭರವಸೆ ನೀಡಿದರು.

ಸದಸ್ಯ ಟಿ.ಎಂ.ಭೋಜರಾಜ್ ಮಾತನಾಡಿ ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಇತ್ಯಾದಿ ಮೂಲ ಸೌಲಭ್ಯ ಒದಗಿಸಬೇಕು, ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ, ಕಿಶೋರಿಯರಿಗೆ ಮಕ್ಕಳಿಗೆ ವಿತರಿಸುತ್ತಿರುವ ಪೌಷ್ಠಿಕಾಂಶಗಳು ಉತ್ತಮ ಗುಣಮಟ್ಟದಿಂದ ಕೂಡಿಲ್ಲ, ಗುಣ ಮಟ್ಟದ ಧಾನ್ಯ ವಿತರಿಸಬೇಕು, ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪಟ್ಟಣದಲ್ಲಿ ವಿದ್ಯುತ್ ಹೈಟೆನ್ ಷನ್ ತಂತಿಗಳು ಅನೇಕ ಮನೆಗಳ ಮೇಲೆ ಹಾದುಹೋಗಿದೆ, ಮಳೆಗಾಲದಲ್ಲಿ ಕರೆಂಟು ಶಾಕ್ ಹೊಡೆಯುವ ಸಂಭವವಿರುತ್ತದೆ ವಿದ್ಯುತ್ ಇಲಾಖೆ ಸುರಕ್ಷತೆ ಒದಗಿಸಬೇಕು ಎಂದು ತಿಳಿಸಿದರು.

ಸದಸ್ಯ ಟಿ.ಎಸ್.ಬಸವರಾಜ್ ಮಾತನಾಡಿ ಮಾರಿಗದ್ದಿಗೆ ವೃತ್ತದ ಬಳಿಯ ಅಂಗನವಾಡಿ ಕೇಂದ್ರ ಕಟ್ಟಡದ ಹಂಚುಗಳೆಲ್ಲಾ ಬಿದ್ದು ಹೋಗಿದೆ, ಕೇಂದ್ರದ ಪಕ್ಕದಲ್ಲೇ ಗಿಡಮರಗಳು ಬೆಳೆದಿದೆ, ಅಂಗನವಾಡಿ ಕೇಂದ್ರಕ್ಕೆ ಮೂಲ ಸೌಲಭ್ಯ ಒದಗಿಸಬೇಕು ಎಂದು ತಿಳಿಸಿದರು.

ಪಟ್ಟಣ ವ್ಯಾಪ್ತಿಯ ಅಂಗನವಾಡಿ ಕೇಂದ್ರದ ವಿಚಾರ ಸಭೆಯಲ್ಲಿ ಚರ್ಚಿಸುತ್ತಿರುವಾಗ ಸದಸ್ಯ ಟಿ.ಜಿ.ಅಶೋಕ್ ಕುಮಾರ್ ಮಾತನಾಡಿ ಬ್ರಾಹ್ಮಣರ ಬೀದಿಯಲ್ಲಿ ಅಂಗನವಾಡಿ ಕೇಂದ್ರ ಬಾಡಿಗೆ ನಿವೇಶನದಲ್ಲಿ ನಡೆಯುತ್ತಿದ್ದು, ಅದೇ ಬೀದಿಯಲ್ಲಿ ಪುರಸಭೆ ಖಾಲಿ ನಿವೇಶನವಿದ್ದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಟ್ಟಡ ನಿರ್ಮಿಸಲು ಅನುದಾನ ನೀಡಿದರೆ ಅಂಗನವಾಡಿ ಕೇಂದ್ರಕ್ಕೆ ಶಾಶ್ವತವಾದ ಕಟ್ಟಡ ಒದಗಿಸಿದಂತಾಗುತ್ತದೆ ಎಂದು ಒತ್ತಾಯಿಸಿದರು.

ಅಂಗನವಾಡಿ ಕೇಂದ್ರದಲ್ಲಿ ನಡೆಯುವ ಯಾವುದೇ ಸಭೆ ಸಮಾರಂಭಗಳಿಗೆ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿ ಸಭೆಗೆ ಆಹ್ವಾನಿಸುವುದಿಲ್ಲ, ಪಟ್ಟಣ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಗರ್ಭಿಣಿಯರಿಗೆ, ಕಿಶೋರಿಯರಿಗೆ ಸರ್ಕಾರ ನೀಡುತ್ತಿರುವ ಪೌಷ್ಠಿಕಾಂಶಗಳ ಸಮರ್ಪಕ ವಿತರಣೆಯಾಗುತ್ತಿಲ್ಲ ಎಂದು ಆರೋಪಿಸಿದರು.

ಪುರಸಭೆ ವೀರು ಸರಬರಾಜು ವಿಭಾಗದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ 27 ನೌಕರರನ್ನು ಕಾಯಂ ಗೊಳಿಸುವಂತೆ ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯಬೇಕೆಂದು ಒತ್ತಾಯಿಸಿದರು.

ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ ಮಾತನಾಡಿ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಲಭ್ಯ ಒದಗಿಸಲಾಗುವುದು ಎಂದರು.

ಸದಸ್ಯರಾದ ಟಿ.ದಾದಾಪೀರ್ ಮಾತನಾಡಿ ಸರ್ಕಾರಿ ಶಾಲೆಗಳು ಅನುದಾನದ ಕೊರತೆಯಿಂದ ಅಭಿವೃದ್ದಿಯಲ್ಲಿ ಹಿನ್ನೆಡೆಯನ್ನು ಅನುಭವಿಸುತ್ತಿದೆ. ಶೌಚಾಲಯ ಗುಂಡಿ ಸ್ವಚ್ಛಗೊಳಿಸಲು ಸಕ್ಕಿಂಗ್ ಮಿಷನ್‌ ಗೆ ಶುಲ್ಕ ಭರಿಸಲು ಸಾಧ್ಯವಾಗದೆ ಪುರಸಭೆ ಸರ್ಕಾರಿ ಶಾಲೆ ಗಳಿಗೆ ಉಚಿತವಾಗಿ ಸಕ್ಕಿಂಗ್ ಮಿಷನ್ ಗಳನ್ನು ಒದಗಿಸಬೇಕು ಮತ್ತು ಪುರಸಭೆಯಿಂದ ಕರ್ನಾಟಕ ರಾಜ್ಯ ಸುವರ್ಣ ಸಂಭ್ರಮ ಅಚರಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಯಾವುದಾದರೂ ಒಂದು ಸರ್ಕಾರಿ ಶಾಲೆಯನ್ನು ದತ್ತು ಸ್ವೀಕರಿಸಿ ಕನ್ನಡ ಭಾಷಾ ಉಳಿವಿಗೆ ಕ್ರಮ ವಹಿಸಬೇಕೆಂದು ತಿಳಿಸಿದರು.

ಸದಸ್ಯ ಟಿ.ಜಿ.ಶಶಾಂಕ ಮಾತನಾಡಿ ಪಟ್ಟಣ ವ್ಯಾಪ್ತಿಯಲ್ಲಿ 75ರಷ್ಟು ಭಾಗ ಮನೆಗಳ ಖಾತೆಗಳು ಆಗಿಲ್ಲ, ಇ-ಸ್ವತ್ತು ಸಿಗದೆ ಹೊಸ ಮನೆಗಳನ್ನು ಕಟ್ಟಲು ಪುರಸಭೆ ಅನುಮತಿ ನೀಡುತ್ತಿಲ್ಲ, ಪುರಸಭೆ ಸ್ಥಳೀಯವಾಗಿ ಪ್ರಾಧಿಕಾರ ರಚನೆ ಮಾಡಿ ಮನೆಗಳನ್ನು ಕಟ್ಟಿಕೊಳ್ಳಲು ಅನುಮತಿ ಮಾಡಿ ಕೊಡಬೇಕು ಎಂದು ಹೇಳಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರಪ್ಪ, ಸದಸ್ಯರಾದ ಟಿ.ಎಂ.ರಂಗನಾಥ್, ಟಿ.ಜಿ.ಲೋಕೇಶ್, ಆಶಾ ಅರುಣ್ ಕುಮಾರ್, ಗಿರಿಜಾ ಪ್ರಕಾಶ್ ವರ್ಮ, ಪುರಸಭೆ ಸದಸ್ಯರು ವಿವಿಧ ಚರ್ಚೆಯಲ್ಲಿ ಭಾಗವಹಿಸಿದ್ದರು.

ಪುರಸಭೆ ಉಪಾಧ್ಯಕ್ಷೆ ರಿಹಾನ ಪರ್ವಿನ್, ಪುರಸಭೆ ಸದಸ್ಯರು, ಪರಿಸರ ಅಭಿಯಂತರರಾದ ತಾಹಿರ ತಸ್ನೀಮ್, ವ್ಯವಸ್ಥಾಪಕ

ವಿಜಯಕುಮಾರ್, ಕಂದಾಯಾಧಿಕಾರಿ ಮಂಜುನಾಥ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.23ಕೆಟಿಆರ್.ಕೆ.4ಃ

ತರೀಕೆರೆಯಲ್ಲಿ ಪುರಸಭಾ ಕಾರ್ಯಾಲಯದಿಂದ ಪುರಸಭೆ ಅಧ್ಯಕ್ಷ ಪರಮೇಶ್ ಅಧ್ಯಕ್ಷತೆಯಲ್ಲಿ ಪುರಸಭೆ ಸದಸ್ಯರ ಸಾಮಾನ್ಯ ಸಭೆ ಏರ್ಪಡಿಸ ಲಾಗಿತ್ತು. ಪುರಸಭೆ ಉಪಾಧ್ಯಕ್ಷೆ ರಿಹಾನ ಪರ್ವಿನ್, ಪುರಸಭ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರಪ್ಪ, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಇದ್ದರು.

Share this article