ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನ ಸಹಾಯ ಶೇ.75-90 ಕಡಿತ ಮಾಡಿ, ನೈಜ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅನ್ಯಾಯ ಮಾಡಿದ್ದನ್ನು ವಿರೋಧಿಸಿ, ಟೂಲ್ ಕಿಟ್ ಮತ್ತಿತರೆ ಕಿಟ್‌ಗಳನ್ನು ಬೋಗಸ್ ಕಾರ್ಡ್ ದಾರರಿಗೆ ನೀಡಲು ಮನಸೋಇಚ್ಛೆ ಟೆಂಡರ್ ಕರೆದಿದ್ದು ಖಂಡಿಸಿ ಫೆ.1ರಂದು ಬೆಂಗಳೂರಿನಲ್ಲಿ ಬಹಿರಂಗ ಸಭೆ, ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಆವರಗೆರೆ ಎಚ್.ಜೆ.ಉಮೇಶ, ಅಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಂಘದ ನೇತೃತ್ವದಲ್ಲಿ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಮುಖಂಡರು, ಕಟ್ಟಡ ಕಾರ್ಮಿಕರ ಬಹಿರಂಗ ಸಭೆ, ಪ್ರತಿಭಟನೆ ನಡೆಯಲಿದ್ದು, ರಾಜ್ಯದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಕಾರ್ಮಿಕರು ಭಾಗವಹಿಸುವರು ಎಂದರು.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶೈಕ್ಷಣಿಕ ಧನಸಹಾಯ ಸರ್ಕಾರ ಶೇ.75ರಷ್ಟು ಕಡಿತ ಮಾಡಿದ್ದನ್ನು ಕೈಬಿಟ್ಟು, ಹಿಂದಿನಂತೆ ಮುಂದುವರಿಸಬೇಕು. 2022-23ನೇ ಸಾಲಿನಲ್ಲಿ ಕಡಿತಗೊಳಿಸಿದ ಬಾಕಿ ಹಣವನ್ನು ಜಮಾ ಮಾಡಬೇಕು. 2023-24ನೇ ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಕೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಈಗಾಗಲೇ ಖಾಸಗಿಯವರಿಂದ ಆರೋಗ್ಯ ತಪಾಸಣೆ ಮಾಡಿಸುವ ಕಾರ್ಯ ತಕ್ಷಣ ನಿಲ್ಲಿಸಿ, ಬಿಡುಗಡೆ ಮಾಡಿದ ಹಣ ವಾಪಾಸ್ಸು ಪಡೆಯಬೇಕು. ಆರೋಗ್ಯ ಇಲಾಖೆಯಿಂದಲೇ ಉಚಿತ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ತಾಂತ್ರಿಕ ಸಮಸ್ಯೆ ತಕ್ಷಣ ನಿವಾರಿಸಬೇಕು. ತಾಂತ್ರಿಕ ಸಮಸ್ಯೆ ವೇಳೆ ಅರ್ಜಿ ಸಲ್ಲಿಸಲಾಗದ ಕಾರ್ಮಿಕರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. 1996ರ ಮೂಲ ಕಾಯ್ದೆ ಪ್ರಕಾರ ಸೆಸ್‌ನ್ನು ಕನಿಷ್ಟ ಶೇ.2ಕ್ಕೆ ಹೆಚ್ಚಿಸಬೇಕು. ಈಗಿರುವ ಸೆಸ್ ಸಂಗ್ರಹ ಮಾನದಂಡ ಮತ್ತಷ್ಟು ಬಿಗಿಗೊಳಿಸಬೇಕು. ಕಡಿತಗೊಳಿಸಬಾರದು. ಖಾಸಗಿ ಸೆಸ್ ಕಟ್ಟುನಿಟ್ಟಾಗಿ ಸಂಗ್ರಹಿಸಬೇಕು ಎಂದು ಆವರಗೆರೆ ಎಚ್.ಜಿ.ಉಮೇಶ ತಿಳಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ವಿ.ಲಕ್ಷ್ಮಣ್, ಮುರುಗೇಶ, ಶಿವಕುಮಾರ ಡಿ.ಶೆಟ್ಟರ್, ಸುರೇಶ ಯರಗುಂಟೆ ಇತರರಿದ್ದರು.
6 ರೈಲುಗಳ ಸಂಚಾರ:ರಾಜ್ಯದ ದುಡಿಯುವ ಎಲ್ಲಾ ವರ್ಗದ ಜನರು ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ದಾವಣಗೆರೆಯಿಂದ ಜ.31ರಂದು ಬುಧವಾರ ಸಂಜೆ 7ರಿಂದ ರಾತ್ರಿ 12.30ರವರೆಗೆ ಒಟ್ಟು 6 ರೈಲುಗಳು ಬೆಂಗಳೂರಿಗೆ ತೆರಳುತ್ತವೆ. ಕಾರ್ಮಿಕರು ತಮ್ಮ ಸ್ವಂತ ಖರ್ಚಿನಿಂದ ಹೋರಾಟದಲ್ಲಿ ಭಾಗವಹಿಸಬೇಕೆಂಧು
ಕಾರ್ಮಿಕ ಮುಖಂಡ ಆವರಗೆರೆ ಎಚ್.ಜಿ.ಉಮೇಶ ತಿಳಿಸಿದರು.