ಬೆಂಗಳೂರು : ಬಾಬುಸಾಬ್‌ಪಾಳ್ಯದಲ್ಲಿ ಏಳು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿತ ಅವಘಡದಲ್ಲಿ ಎಂಟು ಮಂದಿ ಬಡ ಕಾರ್ಮಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಹೊಟ್ಟೆಪಾಡಿಗಾಗಿ ದೂರದೂರುಗಳಿಂದ ಕೆಲಸ ಅರಸಿ ನಗರಕ್ಕೆ ಬಂದಿದ್ದ ಕಾರ್ಮಿಕರು ತಮ್ಮದಲ್ಲದ ತಪ್ಪಿಗೆ ಸಾವಿನ ಶಿಕ್ಷೆ ಅನುಭವಿಸಿದ್ದಾರೆ. ಮೃತ 8 ಮಂದಿ ಕಾರ್ಮಿಕರ ಪೈಕಿ ಬಿಹಾರದ ನಾಲ್ವರು, ನೆರೆಯ ತಮಿಳುನಾಡಿನ ಇಬ್ಬರು, ಆಂಧ್ರಪ್ರದೇಶ ಹಾಗೂ ಉತ್ತರಪ್ರದೇಶದ ತಲಾ ಓರ್ವ ಕಾರ್ಮಿಕರು ಇದ್ದಾರೆ. ಮನೆಗೆ ಆಧಾರವಾಗಿದ್ದ ಸದಸ್ಯರನ್ನು ಕಳೆದುಕೊಂಡಿರುವ ಮೃತರ ಕುಟುಂಬಗಳು ದುಃಖದ ಕಡಲಿನಲ್ಲಿ ಮುಳುಗುವಂತಾಗಿದೆ.
ಮಾಲೀಕನ ದುರಾಸೆಗೆ ಅಮಾಯಕರು ಬಲಿ:
ಕಟ್ಟಡದ ಮಾಲೀಕನ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕರು ಬಲಿಯಾಗಿದ್ದಾರೆ. 4 ಅಂತಸ್ತಿನ ಕಟ್ಟಡಕ್ಕೆ ಅನುಮತಿ ಪಡೆದಿದ್ದ ಮಾಲೀಕ ಮುನಿರಾಜು ರೆಡ್ಡಿ, ದುರಾಸೆಗೆ ಬಿದ್ದು ಅಕ್ರಮವಾಗಿ ಮತ್ತೆ ಮೂರು ಅಂತಸ್ತು ನಿರ್ಮಾಣಕ್ಕೆ ಮುಂದಾಗಿದ್ದ. ಕಟ್ಟಡ ನಿರ್ಮಾಣದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಟೈಲ್ಸ್ ಅಳವಡಿಕೆ, ಪ್ಲಾಸ್ಟಿಂಗ್ ಸೇರಿದಂತೆ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದವು. ಕಳಪೆ ಕಾಮಗಾರಿಯಿಂದ ಇಡೀ ಕಟ್ಟಡ ಕುಸಿದ ಪರಿಣಾಮ ಕೆಲಸದಲ್ಲಿ ಮಗ್ನರಾಗಿದ್ದ ಕಾರ್ಮಿಕರು ಪೈಕಿ 8 ಮಂದಿ ಕಾರ್ಮಿಕರು ಕಟ್ಟಡ ಅವಶೇಷಗಳ ಅಡಿಯಲ್ಲಿ ಸಿಲುಕಿ ಉಸಿರು ಚೆಲ್ಲಿದ್ದಾರೆ.
ಕೂಗಿ ಕರೆದ ರಕ್ಷಣಾ ಸಿಬ್ಬಂದಿ
ಇನ್ನು ಅಗ್ನಿಶಾಮಕ ಸಿಬ್ಬಂದಿ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸಿಬ್ಬಂದಿ ಮಂಗಳವಾರ ಸಂಜೆಯಿಂದಲೂ ಅವಘಡದ ಸ್ಥಳದಲ್ಲಿ ಕಾರ್ಮಿಕರ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಮುರಿದು ಬಿದ್ದಿರುವ ಕಟ್ಟಡಗಳ ಅವಶೇಷಗಳನ್ನು ಜೆಸಿಬಿ ಮತ್ತು ಗ್ಯಾಸ್ ಕಟರ್ ಸಹಾಯದಿಂದ ಕತ್ತರಿಸಿ ಕಾರ್ಮಿಕರ ರಕ್ಷಣೆಯಲ್ಲಿ ತೊಡಗಿದ್ದಾರೆ. ಕಟ್ಟಡಗಳ ಅವಶೇಷಗಳ ನಡುವೆ ನಾಪತ್ತೆಯಾಗಿರುವ ಕಾರ್ಮಿಕರು ಬದುಕುಳಿದಿರುವ ಆಶಾಭಾವನೆಯಲ್ಲಿ ರಕ್ಷಣಾ ಸಿಬ್ಬಂದಿ ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ‘ನಾವು ರಕ್ಷಣಾ ಸಿಬ್ಬಂದಿ. ನಿಮ್ಮನ್ನು ರಕ್ಷಿಸಲು ಬಂದಿದ್ದೇವೆ. ನಮ್ಮ ದನಿ ಕೇಳುತ್ತಿದೆಯೇ’ ಎಂದು ಜೋರಾಗಿ ಕೂಗುವ ದೃಶ್ಯಗಳು ಘಟನಾ ಸ್ಥಳದಲ್ಲಿ ಕಾಣ ಸಿಕ್ಕಿತು.