ಎಐ ದೈನಂದಿನ ಜೀವನದ ಭಾಗವಾಗಿದೆ । ಜಾಲತಾಣಗಳಿಂದ ಮನುಷ್ಯ ಸಂಬಂಧಗಳು ಸಡಿಲ
ಕನ್ನಡಪ್ರಭ ವಾರ್ತೆ ಶಿವಮೊಗ್ಗಮಾಧ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ ವ್ಯಾಪಕವಾಗಿದ್ದು, ಇದು ಅನಿವಾರ್ಯವೂ ಹೌದು. ಬದಲಾದ ಸನ್ನಿವೇಶದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಕೌಶಲ್ಯ ಅಭಿವೃದ್ಧಿಪಡಿಸಿಕೊಂಡು ಸವಾಲುಗಳನ್ನು ಎದುರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಜೊತೆಗೆ ಕೃತಕ ಬುದ್ಧಿಮತ್ತೆಯಂತಹ (ಎಐ) ಆವಿಷ್ಕಾರಗಳು ನಮಗೆ ಎದುರಾಳಿಯಾಗದಂತೆ ಅದನ್ನು ಪಳಗಿಸಿಟ್ಟುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹಿರಿಯ ಪತ್ರಕರ್ತ, ಲೇಖಕ ಜೋಗಿ (ಗಿರೀಶ್ ರಾವ್ ಹತ್ವಾರ್) ಪ್ರತಿಪಾದಿಸಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿ, ತಂತ್ರಜ್ಞಾನದಲ್ಲಿ ಏನೇ ಬದಲಾವಣೆ ಆದರೂ ಅದು ಜನಜೀವನದ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ. ಸುದ್ದಿ ಮಾಧ್ಯಮವೂ ಇದಕ್ಕೆ ಹೊರತಲ್ಲ. ತಂತ್ರಜ್ಞಾನದ ನೆರವಿನಿಂದಲೇ ಇದು ಕೂಡ ಬೆಳೆಯುತ್ತ ಬಂದಿದೆ. ಒಂದು ರೀತಿಯಲ್ಲಿ ಮಾಧ್ಯಮಗಳನ್ನು ಅಚ್ಚರಿಯ ರೀತಿಯಲ್ಲಿ ಬೆಳೆಸಿದ ಹೆಗ್ಗಳಿಕೆ ತಂತ್ರಜ್ಞಾನದ್ದು. ಈವರೆಗೆ ಯಾವ ತಂತ್ರಜ್ಞಾನವೇ ಮೇಲು ಎಂದುಕೊಂಡಿದ್ದೆವೋ ಅದಕ್ಕಿಂತ ಹೊಸದು ಸೇರ್ಪಡೆಯಾಗುತ್ತಲೇ ಇದೆ ಎಂದರು.ಇಂದು ಸುದ್ದಿ ಮಾಧ್ಯಮಗಳು ತಮ್ಮ ಓದುಗರನ್ನು ಮತ್ತು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾದ ಎಲ್ಲ ತಂತ್ರಜ್ಞಾನಗಳನ್ನು ಬಳಸಲು ಹರಸಾಹಸಪಟ್ಟಿವೆ. ಪತ್ರಿಕೆಗಳು ಮುದ್ರಣವಾಗುವುದಕ್ಕೂ ಮುನ್ನವೇ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳನ್ನು ಮೊಬೈಲ್‌ನಲ್ಲೇ ನೋಡುವ ಸನ್ನಿವೇಶ ಸೃಷ್ಟಿಯಾಗಿದೆ. ತಂತ್ರಜ್ಞಾನ ಮನುಷ್ಯನಿಂದಲೇ ಸೃಷ್ಟಿಯಾಗಿದ್ದರೂ ತಾನೂ ಸೃಷ್ಟಿಸಿದ ತಂತ್ರಜ್ಞಾನಗಳಿಂದಲೇ ಮನುಷ್ಯ ನಾಶವಾಗಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣಮುಂದಿವೆ ಎಂದರು.
ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸಿ) ಎಂಬುದು ಮನುಷ್ಯನ ದೈನ್ಯಂದಿನ ಭಾಗವಾಗಿ ವೇಗವಾಗಿ ಬೆಳೆಯುತ್ತಿದ್ದು, ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು. ಈಗಿನ ತಂತ್ರಜ್ಞಾನ ಸಾಮಾಜಿಕ ಜಾಲತಾಣಗಳ ಮೂಲಕ ಸಾಗುತ್ತಿದ್ದು, ಕೌಟುಂಬಿಕ ಮತ್ತು ಮನುಷ್ಯ ಸಂಬಂಧಗಳನ್ನೇ ಸಡಿಲಗೊಳಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.ಈಗಾಗಲೇ ಬರೆಯುವವರು ತಮ್ಮ ಮೊನಚನ್ನು ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಯುವ ಜನಾಂಗಕ್ಕೆ ಪ್ರಭಾವಿತರು ಇಲ್ಲವಾಗುತ್ತಿದೆ. ನಾವು ತುಂಬ ಗೊಂದಲದಲ್ಲಿದ್ದೇವೆ. ಬರೆಯುವುದನ್ನು ಮರೆತು ಮಾತನಾಡ ತೊಡಗಿದ್ದೇವೆ. ಮೌಖಿಕವೇ ವಿಜೃಂಭಿಸುತ್ತಿದೆ. ಇದು ಪತ್ರಿಕೋದ್ಯಮಕ್ಕೂ ತನ್ನ ಕಬಂಧ ಬಾಹುವನ್ನು ಚಾಚಿಕೊಂಡಿದೆ ಎಂದು ತಿಳಿಸಿದರು.
ಯೂಟ್ಯೂಬ್‌ನಂತಹ ಚಾನಲ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳು ಪತ್ರಿಕೋದ್ಯಮಕ್ಕೆ ಸವಾಲಾಗಿ ಪರಿಗಣಿಸಿದೆ. ಇದು ಶಕ್ತಿಯೂ ಹೌದು, ಭಯವೂ ಹೌದು. ಪತ್ರಕರ್ತರ ವಿವೇಚನೆಯನ್ನೇ ಪ್ರಶ್ನಿಸುವ ಅಥವಾ ಮರೆತುಬಿಡುವ ಪ್ರಶ್ನೆಯಾಗಿ ಇಂದು ಬೆಳೆಯುತ್ತಿದೆ. ಮನುಷ್ಯರ ಕ್ರಿಯಾಶೀಲತೆಯನ್ನು ಅಡವಿಟ್ಟಂತಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಪತ್ರಿಕೆಗಳನ್ನು ಓದುವುದೇ ಕಡಿಮೆಯಾಗುತ್ತಿದೆ. ನಾವು ಬಳಕೆಯ ಆನಂದವನ್ನು ಕಳೆದುಕೊಳ್ಳ ತೊಡಗಿದ್ದೇವೆ. ಓದುವ ಹಸಿವು ಕೂಡ ಇಲ್ಲವಾಗಿದೆ. ಸಾಹಿತ್ಯವು ಕೂಡ ದೂರತಳ್ಪಟ್ಟಿದೆ. ಕ್ರೈಮ್, ರಾಜಕಾರಣ ವಿಜೃಂಭಿಸುತ್ತಿದೆ. ಸಿನಿಮಾ ಕ್ಷೇತ್ರವು ಕೂಡ ಹಾಗೆಯೇ ಆಗಿದೆ. ಒಂದು ಕೌಟುಂಬಿಕ ಸಿನಿಮಾಗಳು ಇಂದು ಬರುತ್ತಿಲ್ಲ ಎಂದರು.
ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಮಾತನಾಡಿ, ಜೋಗಿಯವರು ಬರೆಯುವವರೆಗೆ ಸ್ಫೂರ್ತಿಯಾಗಿದ್ದಾರೆ.ಅವರನ್ನು ನಾವು ಅಕ್ಷರ ಸರಸ್ವತಿ ಎಂದು ಕರೆಯುತ್ತಿದ್ದೇವೆ ಎಂದರು.ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿ, ಗಿರೀಶ್ ಉಮ್ರಾಯಿ, ಹುಲಿಮನೆ ತಿಮ್ಮಪ್ಪ, ಶಿ.ಜು.ಪಾಶ ಸೇರಿದಂತೆ ಹಲವರು ಹಾಜರಿದ್ದರು.